ಆರೋಗ್ಯ

ಬೇಸಿಗೆ ಕಾಲದಲ್ಲಿ ಬೆವರುಸಾಲೆ ಎದ್ದಾಗ ಈ ಎಲೆಯನ್ನು ಉಜ್ಜಿ, ವ್ಯತ್ಯಾಸ ಕಾಣಿರಿ….!

Pinterest LinkedIn Tumblr

ಮನೆ ಅಂಗಳದ ಹೂಗಿಡಗಳ ಮಧ್ಯೆ ಅಗಲ ಎಲೆಯ ಹಚ್ಚ ಹಸುರಿನಿಂದ ಬೆಳೆಯುವ ಗಿಡ ಸಂಬಾರ ಬಳ್ಳಿ ಅಥವಾ ಸಾಂಬ್ರಾಣಿ ಅಥವಾ ದೊಡ್ಡ ಪತ್ರೆ ಗಿಡ. ಸಾಂಬ್ರಾಣಿ ಪರಿಮಳದಿಂದ ಕೂಡಿದ್ದು, ರಸಭರಿತ ದಪ್ಪ ಎಲೆಗಳುಳ್ಳ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ.

ಕಫ‌, ಕೆಮ್ಮು, ಶೀತದಿಂದ ಬಳಲುವ ಚಿಕ್ಕ ಮಕ್ಕಳಿಗೆ ನಾಲ್ಕಾರು ಸಾಂಬ್ರಾಣಿ ಎಲೆಗಳನ್ನು ಕೆಂಡದಲ್ಲಿ ಬಾಡಿಸಿ ರಸ ಹಿಂಡಿ ಜೇನು ಬೆರೆಸಿ ಕುಡಿಸಿದರೆ ಆರಾಮ ಸಿಗುತ್ತದೆ. ಇದರ ಸೊಪ್ಪಿನ ಹೊಗೆಯನ್ನು ಕೆಲವು ಸೆಕೆಂಡುಗಳ ಕಾಲ ಮಕ್ಕಳಿಗೆ ನೀಡುವುದರಿಂದ ಶೀತ ಕಡಿಮೆಯಾಗುತ್ತದೆ. ಶೀತದಿಂದ ಮೂಗು ಕಟ್ಟುತ್ತಿದ್ದರೆ 1- 2 ಹನಿ ರಸವನ್ನು ಮೂಗಿಗೆ ಹಾಕಿದರೆ ಸಾಕು. ಎಲೆಗಳನ್ನು ಅರೆದು ಹಣೆಗೆ ಲೇಪಿಸುವುದರಿಂದ ತಲೆನೋವು ಗುಣವಾಗುತ್ತದೆ.

ಸೌಂದರ್ಯ ವೃದ್ಧಿ ಮುಖ, ಮೈಯಲ್ಲಿ ತುರಿಕೆ ಕಜ್ಜಿ ಅಥವಾ ಬೆವರುಸಾಲೆ ಎದ್ದಾಗ ಆ ಜಾಗಕ್ಕೆ ಸಾಂಬ್ರಾಣಿ ಎಲೆಗಳನ್ನು ಹಸಿಯಾಗಿಯೇ ಚೆನ್ನಾಗಿ ಉಜ್ಜಬೇಕು. ಇದರಿಂದ ಕೇವಲ ಐದು- ಹತ್ತು ನಿಮಿಷಗಳಲ್ಲಿ ದಡಿಕೆಗಳು ಮಾಯವಾಗುತ್ತವೆ.

ಬೇಕಿದ್ದರೆ ಮತ್ತೆರಡು ಬಾರಿ ಉಜ್ಜಬಹುದು. ಪತ್ರೆಯ ರಸವನ್ನು ಮೊಸರಿನಲ್ಲಿ ಬೆರೆಸಿ ದೇಹಕ್ಕೆ ಲೇಪಿಸುವುದರಿಂದ ಚರ್ಮವು ಮೃದುವಾಗಿ ಕಾಂತಿಯುಕ್ತವಾಗುತ್ತದೆ. ಇದರಿಂದ ಹಲವು ವಿಧದ ಚರ್ಮವ್ಯಾಧಿಗಳು ಗುಣಮುಖವಾಗುತ್ತವೆ ಎನ್ನುತ್ತಾರೆ ಸೌಂದರ್ಯ ತಜ್ಞರು.

ಇದರ ಎಲೆಗಳಿಂದ ತಯಾರಿಸುವ ಸೂಪ್‌ ಬಾಣಂತಿಯರಿಗೆ ಎದೆಹಾಲಿನ ಕೊರತೆ ನೀಗುತ್ತದೆ. ಋತುಸ್ರಾವದ ಸಮಸ್ಯೆಗಳು, ಸ್ತ್ರೀ, ಪುರುಷರ ಬಂಜೆತನದ ನಿವಾರಣೆಯಲ್ಲೂ ಇದರ ಪತ್ರೆಗಳು ಪರಿಣಾಮಕಾರಿಯಾಗಿದೆ. ಚೇಳಿನ ಕಡಿ ತಕ್ಕೂ ಇದರ ರಸ ದಿವ್ಯ ಔಷಧವಾಗಿದೆ. ಕಿವಿನೋವಿಗೆ ಎಲೆಗಳ ರಸವನ್ನು ಬಿಸಿ ಮಾಡಿ ಕಿವಿಗೆ ಹಾಕಬೇಕು. ಇದರಿಂದ ಕಿವಿ ನೋವು ಕಡಿಮೆಯಾಗುತ್ತದೆ.

ಅಡುಗೆ ಮನೆಯಲ್ಲೂ ಸ್ಥಾನ ಜೀರ್ಣಕಾರಕ ಗುಣ ಹೊಂದಿರುವ ಸಾಂಬ್ರಾಣಿ ಅಡುಗೆಯಲ್ಲೂ ಬಳಸಬಹುದು. ಎಲೆಗಳನ್ನು ಬಿಡಿಸಿ/ ಬೇಯಿಸಿ ತೆಂಗಿನ ಹೂವಿನೊಂದಿಗೆ ಅರೆದು, ಮಜ್ಜಿಗೆ ಸೇರಿಸಿ ತಂಬುಳಿಯಾಗಿ ಉಪಯೋಗಿಸಬಹುದು. ಅಲ್ಲದೆ ಈರುಳ್ಳಿಯೊಂದಿಗೆ ಸಣ್ಣಗೆ ಕೊಚ್ಚಿ ಸಲಾಡ್‌ ಮಾಡ ಬಹುದು. ಇದು ಬೇಸಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ.

ನಾರಿನ ಅಂಶ, ಜೀವಸತ್ವ ಹಾಗೂ ಕಬ್ಬಿಣಾಂಶಗಳ ಆಗರವಾಗಿರುವ ಸಾಂಬ್ರಾಣಿ ಸೊಪ್ಪನ್ನು ಹಾಗೆಯೇ ಜಗಿದು ತಿನ್ನಬಹುದು. ಗ್ರೀನ್‌ ಟೀ ತಯಾರಿಯಲ್ಲಿ ಇದ ರ ಸೊಪ್ಪನ್ನು ಬಳಸಿದರೆ ಚಹಾಕ್ಕೆ ವಿಶಿಷ್ಟ ಸ್ವಾದ ಬರುತ್ತದೆ. ಸಾಂಬ್ರಾಣಿ ಎಣ್ಣೆ ಸಾಂಬ್ರಾಣಿ ಎಣ್ಣೆಯು ಮಾನಸಿಕ ಉದ್ವೇಗವನ್ನು ನಿಯಂತ್ರಿಸುತ್ತದೆ.

ನರವ್ಯೂಹದ ಬಿಗಿತವನ್ನು ಕಡಿಮೆ ಮಾಡುತ್ತದೆ. ಗ್ಯಾಸ್‌ಟ್ರಿಕ್‌ನಿಂದ ಮುಕ್ತಿ ನೀಡಿ ಜೀರ್ಣಕ್ರಿಯೆ ಸುಗಮವಾಗುವಂತೆ ಮಾಡುತ್ತದೆ. ರೋಗ ನಿರೋಧಕದಂತೆ ಕೆಲಸ ಮಾಡುವ ಇದರಲ್ಲಿ ಬೆನ್ಫೋಯೇಟ್‌, ಬೆನಾಯಿಕ್‌ ಆಮ್ಲ ಮತ್ತು ಬೆನಲ್‌ ಡಿಹೈಡ್ರೇಟ್‌ ಇದ್ದು, ಇದು ಫ‌ಂಗಸ್‌ ಮತ್ತು ಬ್ಯಾಕ್ಟ್ರೀರಿಯಾ ನಿರೋಧಕದಂತೆ ಕೆಲಸ ಮಾಡುತ್ತದೆ. ಗಾಯಕ್ಕೆ ಸಾಂಬ್ರಾಣಿ ಎಣ್ಣೆಯನ್ನು ಹಚ್ಚಿದರೆ ಸೋಂಕು
ಬೇಗನೆ ನಿವಾರಣೆಯಾಗುತ್ತದೆ.

ಸಾಂಬ್ರಾಣಿ ಎಲೆಗಳು ಔಷಧೀಯ ಗುಣಗಳನ್ನು ಮಾತ್ರ ವಲ್ಲ ಅಪಾರ ಪೋಷಕಾಂಶಗಳನ್ನು ಹೊಂದಿವೆ. ಪ್ರೋಟಿನ್‌, ದೇಹಕ್ಕೆ ಬೇಕಾಗುವ ಪ್ರಮುಖ ಜೀವಸತ್ವಗಳು, ಕಬ್ಬಿಣ, ತಾಮ್ರ ಮುಂತಾದ ಖನಿಜಗಳು, ಸೋಡಿಯಂ, ಮೆಗ್ನೇಷಿಯಂ, ನಾರು, ಸತು ಹೀಗೆ ಅನೇಕ ಪೋಷಕಾಂಶಗಳಿಂದ ಕೂಡಿದ ಕಾರಣ ನಿತ್ಯ ಆಹಾರದ ಜತೆಗೆ ಇದನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

Comments are closed.