ಆರೋಗ್ಯ

ಮುಂಜಾನೆ ಖಾಲಿ ಹೊಟ್ಟೆಗೆ ಬೆಡ್ ಟೀ ….ಆರೋಗ್ಯಕ್ಕೆ ಹಿತಕರವೇ?

Pinterest LinkedIn Tumblr

ಭಾರತದ ಅತ್ಯಂತ ಜನಪ್ರಿಯ ಪೇಯವೆಂದರೆ ಟೀ ಅಥವಾ ಚಹಾ. ಬೆಳಗ್ಗಿನ ಪ್ರಥಮ ಆಹಾರವಾಗಿ ಪ್ರಾರಂಭಿಸಿ ದಿನದ ಕಟ್ಟಕಡೆಯ ಆಹಾರವಾಗಿ ಸೇವಿಸಲ್ಪಡುತ್ತಾ ಬಂದಿರುವ ಪೇಯವೇ ಚಹಾ. ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ. ಆದರೆ ಚಹಾ ಕುಡಿಯುವವರಲ್ಲಿ ಹೆಚ್ಚಿನವರು ದಿನದ ಪ್ರಥಮ ಆಹಾರವಾಗಿ ಒಂದು ಟೀ ಸೇವಿಸುತ್ತಾರೆ. ಕೆಲವರಂತೂ ಹಾಸಿಗೆಯಿಂದ ಏಳುವ ಮುನ್ನವೇ ಬೆಡ್ ಟೀ ಎಂದು ಕುಡಿಯುತ್ತಾರೆ.

ಆದರೆ ಇದು ಆರೋಗ್ಯಕರವೇ? ತಜ್ಞರಲ್ಲಿ ಈ ಪ್ರಶ್ನೆಯನ್ನು ಕೇಳಿದರೆ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದು ಅತ್ಯಂತ ಅನಾರೋಗ್ಯಕರ ಅಭ್ಯಾಸ ಎಂಬ ಉತ್ತರ ಸಿಗುತ್ತದೆ.ಹಾಗಾದರೆ ಟೀ ಯಾವಾಗ ಕುಡಿಯಬೇಕು ಎಂಬ ಪ್ರಶ್ನೆಗೆ ತಜ್ಞರು ಬೆಳಗ್ಗಿನ ಉಪಾಹಾರದ ಬಳಿಕ ಸೇವಿಸುವುದು ಉತ್ತಮ ಎಂಬ ಉತ್ತರ ನೀಡುತ್ತಾರೆ. ಆದರೆ ಟೀ ಸೇವನೆಯ ಪ್ರಮಾಣ ಇಡಿಯ ದಿನದಲ್ಲಿ ಮಿತವಾಗಿರುವುದೂ ಅಗತ್ಯ. ಏಕೆಂದರೆ ಹೆಚ್ಚಿನ ಟೀ ಸೇವನೆ ಆರೋಗ್ಯಕ್ಕೆ ಹಾನಿಕರ. ವಿಶೇಷವಾಗಿ ಹೊಟ್ಟೆ ಮತ್ತು ಕರುಳುಗಳ ಒಳಭಾಗದ ಪದರವನ್ನು ಟೀಯಲ್ಲಿರುವ ರಾಸಾಯನಿಕಗಳು ಘಾಸಿಗೊಳಿಸುತ್ತವೆ. ಅದರಲ್ಲೂ ಹಾಲಿಲ್ಲದ ಚಹಾ ಸೇವನೆ ಇನ್ನಷ್ಟು ಹಾನಿಕರ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಎಷ್ಟು ಮಾರಕವಾಗಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ ಮುಂದೆ ಓದಿ…

ಟೀ ಕುಡಿಯುವುದರಿಂದ ವಾಕರಿಕೆ ಬರುತ್ತದೆಯೇ?
ಟೀ ಕ್ಷಾರೀಯವೂ ಆಗಿದೆ ಕೊಂಚ ಆಮ್ಲೀಯವೂ ಆಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜೀರ್ಣರಸಗಳ ಪ್ರಭಾವ ಏರುಪೇರಾಗುತ್ತದೆ. ಈ ಏರುಪೇರು ವಾಕರಿಕೆ ಬರಿಸುತ್ತದೆ.

ಕಪ್ಪು ಟೀ ಸುರಕ್ಷಿತವೇ?
ಕಪ್ಪು ಟೀ ಎಂದರೆ ಹೆಚ್ಚು ಕುದಿಸದ ಮತ್ತು ಹಾಲು ಸೇರಿಸದ ಟೀ. ಇದು ತೂಕ ಇಳಿಸಲು ಉತ್ತಮವಾದರೂ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಮೂಲಕ ಆಮ್ಲೀಯತೆ ಹೆಚ್ಚುತ್ತದೆ, ಇದರಿಂದ ಹೊಟ್ಟೆಯ ಜೀರ್ಣರಸಗಳೂ ಪ್ರಭಾವಕ್ಕೊಳಗಾಗಿ ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆ ತುಂಬಿರುವ ಹುಸಿಭಾವನೆಯನ್ನು ಮೂಡಿಸುತ್ತದೆ.

ಹಾಲು ಸೇರಿಸಿದ ಟೀ ಕುಡಿದರೆ ಆಗುವ ಅಡ್ಡಪರಿಣಾಮಗಳೇನು?
ಭಾರತದಲ್ಲಿ ಟೀ ಕುಡಿಯುವ ತೊಂಭತ್ತು ಶೇಖಡಾ ಜನರಲ್ಲಿ ಎಂಭತ್ತೊಂಭತ್ತು ಶೇಖಡಾ ಜನರು ಹಾಲು ಸೇರಿಸಿದ ಟೀ ಕುಡಿಯುತ್ತಾರೆ. ಆದರೆ ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್ ಕುಡಿದರೆ ಇದು ಅನಗತ್ಯ ಕೊಬ್ಬು, ಆಮ್ಲೀಯತೆ ಮತ್ತು ಟಿನ್ನಿಟಸ್ (tinnitus) ಅಥವಾ ಕಿವಿಗಳಲ್ಲಿ ಗುಂಯ್ಗುಡುವ ತೊಂದರೆಯನ್ನು ತಂದಿಡುತ್ತದೆ.

ಅದರಲ್ಲೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಸುಸ್ತಾದ ಭಾವನೆ, ಹೊಟ್ಟೆಯುಬ್ಬರಿಕೆ, ಜೀರ್ಣರಸಗಳು ಪ್ರಭಾವ ಕಳೆದುಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗಬಹುದು.

ಸ್ಟ್ರಾಂಗ್ ಟೀ ಕುಡಿದರೆ ಯಾವ ದುಷ್ಪರಿಣಾಮಗಳಾಗುತ್ತವೆ?
ಹೆಚ್ಚಿನ ರುಚಿ ಪಡೆಯಲು ಎರಡು ವಿಧಾನಗಳಿವೆ. ಮೊದಲನೆಯದು ಟೀಪುಡಿಯನ್ನು ಹೆಚ್ಚು ಸಮಯದವರೆಗೆ ಕುದಿಸುವುದು. ಎರಡನೆಯದು ಹೆಚ್ಚಿನ ಪ್ರಮಾಣದ ಟೀ ಪುಡಿಹಾಕಿ ಕೊಂಚ ಸಮಯದ ವರೆಗೆ ಕುದಿಸುವುದು. ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದಾದರೆ ಎರಡೂ ವಿಧಾನಗಳು ಮಾರಕವಾಗಿವೆ. ಅದರಲ್ಲೂ ಹಾಲಿಲ್ಲದ ಸ್ಟ್ರಾಂಗ್ ಟೀ ಕುಡಿಯುವುದರ ಮೂಲಕ ಜೀರ್ಣವ್ಯವಸ್ಥೆ ಹಾಳಾಗುತ್ತದೆ.

ಏಕೆಂದರೆ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಆಮ್ಲಗಳು ಜೀರ್ಣರಸಗಳ ರಚನೆಯನ್ನು ಬದಲಿಸಿಬಿಡುತ್ತವೆ. ಇದು ಅಲ್ಸರ್, ಹುಳಿತೇಗು, ಹೊಟ್ಟೆಯುರಿ, ಎದೆಯುರಿ ಮೊದಲಾದವುಗಳಿಗೆ ನೇರವಾಗಿ ಕಾರಣವಾಗುತ್ತದೆ. ಸ್ಟ್ರಾಂಗ್ ಟೀ ಬೇಕೆಂದರೆ ಎರಡನೆಯ ವಿಧಾನವೇ ಸೂಕ್ತ. ಮೊದಲ ವಿಧಾನದಲ್ಲಿ ಹೆಚ್ಚು ಕುದಿಸಿದ ಟೀಯಲ್ಲಿ ಅಗತ್ಯ ಪೋಷಕಾಂಶಗಳು ಹೆಚ್ಚು ಬಿಸಿಯಾಗಿ ಕ್ಷಮತೆಯನ್ನು ಕಳೆದುಕೊಂಡಿರುವುದು ಮಾತ್ರವಲ್ಲ, ವಿಪರೀತವೂ ಆಗಿರುತ್ತದೆ.

ನಾಲ್ಕೈದು ಬಗೆಯ ಟೀಪುಡಿ ಬೆರೆಸಿದರೆ ಏನಾಗುತ್ತದೆ
ಫ್ಯಾಕ್ಟರಿಯಲ್ಲಿ ತ್ಯಾಜ್ಯವಾಗಿ ಹೋಗಬಹುದಾದ, ಆದರೆ ಕೊಂಚ ಟೀ ಅಂಶವಿರುವ ಪುಡಿಯನ್ನು ಅಲ್ಪ ಪ್ರಮಾಣದಲ್ಲಿ ಟೀಪುಡಿಯಲ್ಲಿ ಬೆರೆಸಿ ಲಾಭ ಮಾಡಿಕೊಳ್ಳಲಾಗುತ್ತದೆ. ಅಗ್ಗದ ಟೀಪುಡಿಯನ್ನು ದುಬಾರಿ ಟೀಪುಡಿಯೊಂದಿಗೂ ಬೆರೆಸಿ ಮಾರಾಟ ಮಾಡುತ್ತಾರೆ.

ಆದರೆ ಪ್ರತಿಷ್ಠಿತ ಸಂಸ್ಥೆಗಳು ನುರಿತ ಚಹಾ ರುಚಿ ನೋಡುವವರ ಮೂಲಕ (professional tea tasters) ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಎರಡು ಅಥವಾ ಹೆಚ್ಚು ಪುಡಿಗಳನ್ನು ಬೆರೆಸಿ ಪರೀಕ್ಷಿಸಿ ಸುರಕ್ಷಿತ ಎಂದು ಖಚಿತಪಡಿಸಿದ ಮೇಲೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಇದಕ್ಕೆ blend ಎಂದು ಕರೆಯುತ್ತಾರೆ.

ಈ ಬ್ಲೆಂಡ್ ಟೀಪುಡಿ ಕುಡಿಯುವುದು ಸುರಕ್ಷಿತವೇ ಹೊರತು ನಾವಾಗಿ ನಮ್ಮ ಮನಸ್ಸಿಗೆ ಬಂದಂತೆ ಎರಡು ಅಥವಾ ಹೆಚ್ಚಿನ ಟೀಪುಡಿಗಳನ್ನು ಸೇರಿಸಿ ಕುಡಿಯುವುದು ಆರೋಗ್ಯಕ್ಕೆ ಮಾರಕ ಹಾಗೂ ಇದು ಪಾನಮತ್ತನಾಗಿರುವ ಅನುಭವವನ್ನೂ ನೀಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಥ್ರೀಮಿಕ್ಸ್, ಸೆವೆನ್ ಮಿಕ್ಸ್ ಎಲ್ಲವೂ ವ್ಯಾಪಾರದ ತಂತ್ರಗಳೇ ಹೊರತು ಆರೋಗ್ಯಕರವಲ್ಲ.

ಟೀ ಮತ್ತು ಬಿಸ್ಕತ್
ಭಾರತದಲ್ಲಿ ಅತಿ ಸಾಮಾನ್ಯವಾದ ಧಿಡೀರ್ ತಿಂಡಿ ಎಂದರೆ ಟೀ ಮತ್ತು ಬಿಸ್ಕತ್. ಟೀ ಮತ್ತು ಬಿಸ್ಕತ್ ತಿನ್ನುವುದು ಉತ್ತಮ ಅಭ್ಯಾಸ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಬಿಸ್ಕತ್ ಬದಲಿಗೆ ಟೋಸ್ಟ್, ರಸ್ಕ್ ಮೊದಲಾದವುಗಳನ್ನೂ ಸೇವಿಸಬಹುದು. ಇವುಗಳಲ್ಲಿರುವ ಹಿಟ್ಟಿನ ಅಂಶ ಟೀ ಯಲ್ಲಿರುವ ಆಮ್ಲೀಯತೆಯನ್ನು ಹೀರಿಕೊಳ್ಳುವ ಕಾರಣ ಜೀರ್ಣರಸಗಳು ಹೆಚ್ಚು ಪ್ರಭಾವಕ್ಕೊಳಗಾಗುವುದಿಲ್ಲ. ಟೀ ಒಟ್ಟಿಗೆ ಸಿಹಿ ಅಥವಾ ಉಪ್ಪಿನ ಅಂಶವಿರುವ ತಿಂಡಿಗಳನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಸೋಡಿಯಂ ಅಂಶವನ್ನು ಪಡೆದುಕೊಂಡು ಹೊಟ್ಟೆಯ ಮತ್ತು ಕರುಳಿನ ಹುಣ್ಣು (ಅಲ್ಸರ್) ನಿಂದ ಪಾರಾಗಬಹುದು

ಟೀ ಕುಡಿಯುವುದರಲ್ಲಿ ಅತಿಕೆಟ್ಟ ಅಭ್ಯಾಸ ಯಾವುದು
ಟೀ ಯಲ್ಲಿ ಕೆಫೀನ್ ಜೊತೆಗೇ ಟ್ಯಾನಿನ್ ಎಂಬ ಅಂಶವೂ ಇದೆ. ಇದು ಸ್ಟ್ರಾಂಗ್ ಟೀ ಯಲ್ಲಿ ಹೆಚ್ಚು ಪ್ರಮಾಣದಲ್ಲಿರುತ್ತದೆ. ಇದು ಕಬ್ಬಿಣದೊಂದಿಗೆ ಪ್ರತಿಕ್ರಿಯೆ ಹೊಂದುವ ಮೂಲಕ ಆಹಾರದಲ್ಲಿರುವ ಕಬ್ಬಿಣ ರಕ್ತಕ್ಕೆ ದೊರಕದಂತೆ ಮಾಡುತ್ತದೆ. ಆದ್ದರಿಂದ ಆಹಾರ ಸೇವನೆಯ ಬಳಿಕ ಟೀ ಕುಡಿಯುವುದು ಕೆಟ್ಟ ಅಭ್ಯಾಸವಾಗಿದೆ.

Comments are closed.