ಕುಂದಾಪುರ: ಬೆಳಗಾಂನಿಂದ ಎ.30 ರಂದು ಟೆಂಪೋ ವಾಹನದಲ್ಲಿ ಬೈಂದೂರಿಗೆ ಬಂದಿದ್ದ ವ್ಯಕ್ತಿಯೊಬ್ಬನ ಮೊಬೈಲಿನ ಆ್ಯಪ್ ಗೆ ಇಂದು ಬೆಳಿಗ್ಗೆ ಬಂದ ‘ಕೊರೋನಾ ಪಾಸಿಟಿವ್’ ಎಂಬ ಸಂದೇಶ ಕಂಡು ಆತಂಕಕ್ಕೊಳಗಾದ ವ್ಯಕ್ತಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದು ಸದ್ಯ ಆತನ ಕೋವಿಡ್ ತಪಾಸಣೆಗೆ ಕುಂದಾಪುರ ಐಸೋಲೇಶನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ಜನರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾಮ್ ನಲ್ಲಿ ಕೆಲಸಮಾಡಿಕೊಂಡಿದ್ದ ಈ ವ್ಯಕ್ತಿ ಅಲ್ಲಿಯೇ ಕೊರೊನೊ ಪರೀಕ್ಷೆ ಮಾಡಿದ್ದ.ಅಲ್ಲಿನ ಆರೋಗ್ಯ ಇಲಾಖೆಯವರು ವರದಿ ಬಂದ ಬಳಿಕ ತೆರಳಬೇಕು ಅಲ್ಲಿಯವರೆಗೆ ಕ್ವಾರೆಂಟೈನ್ ಮಾಡುವಂತೆ ಸೂಚಿಸಿದ್ದರು. ಆತನ ಮೊದಲ ವರದಿ ನೆಗೆಟಿವ್ ಬಂದಿತ್ತು ಎನ್ನಲಾಗಿದೆ. ಆದರೆ ಆತ ಸುಮಾರು 10 ಮಂದಿ ಜೊತೆಗೆ KA 22 C 1280 ನೋಂದಣಿಯ ಟೆಂಪೋ ಟ್ರಾವೆಲ್ಲರ್ ಮೂಲಕ ಬೈಂದೂರಿಗೆ ಬಂದಿದ್ದ. ಶನಿವಾರ ಆತನ ಆ್ಯಪ್ ಗೆ ಕೋವಿಡ್ ಪಾಸಿಟಿವ್ ಎಂಬ ಸಂದೇಶ ಬಂದಿದ್ದು ಬೆದರಿದ ಆತ ಬೈಂದೂರು ಆಸ್ಪತ್ರೆಗೆ ತೆರಳಿ ಅಲ್ಲಿ ವಿಚಾರ ತಿಳಿಸಿದ್ದಾನೆ. ಕೂಡಲೇ ಆತನನ್ನು ತಪಾಸಣೆಗೆ ಐಸೋಲೇಶನ್ ಸೆಂಟರಿಗೆ ರವಾನಿಸಲಾಗಿದೆ. ಆತನ ಗಂಟಲು ದ್ರವ, ಮೂಗು ದ್ರವ ಪರೀಕ್ಷೆ ನಡೆಸಲಾಗಿದ್ದು ವರದಿ ನಿರೀಕ್ಷೆ ಮಾಡಲಾಗುತ್ತಿದೆ.
ಆತನ ಜೊತೆಗೆ ಬಂದ ಉಳಿದವರ ಪತ್ತೆ ಕಾರ್ಯ, ಟ್ರಾವೆಲ್ ಹಿಸ್ಟರಿ ಪತ್ತೆಗೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ.
Comments are closed.