ಆರೋಗ್ಯ

ಕೋವಿಡ್ ಲಾಕ್‌ಡೌನ್‌: ಸಾವಿರಾರು ಮಂದಿಗೆ ಕಿಟ್ ವಿತರಿಸಿದ ಯುಬಿ‌ಎಸ್ ಚಾರಿಟೇಬಲ್ ಟ್ರಸ್ಟ್

Pinterest LinkedIn Tumblr

ಕುಂದಾಪುರ: ಬೈಂದೂರು ಬಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಯುಬಿ‌ಎಸ್ ಚಾರಿಟೇಬಲ್ ಟ್ರಸ್ಟ್ ಧಾರವಾಡ ಇವರ ವತಿಯಿಂದ ಆಶಾ ಕಾರ್ಯಕರ್ತರು ಹಾಗೂ ಬೈಂದೂರು ಸುತ್ತಲಿನ ಗ್ರಾಮಗಳ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

ಬೈಂದೂರು ಪೊಲೀಸ್ ಠಾಣಾಧಿಕಾರಿ ಸಂಗೀತಾ ಅವರು ಬೈಂದೂರು ಭಾಗದ ಆಶಾ ಕಾರ್ಯಕರ್ತರಿಗೆ ಕಿಟ್ ಹಾಗೂ ಸ್ಯಾನಿಟೈಸರ್ ವಿತರಿಸಿ ಮಾತನಾಡಿ ದಾನಿಗಳ ಉದಾರ ಸಹಕಾರದಿಂದ ಇಂತಹ ಸಂದಿಗ್ಧ ಸಂದರ್ಭದಲ್ಲಿ ಜನರಿಗೆ ಸಹಕಾರ ದೊರೆಯುವಂತಾಗಿದೆ. ಲಾಕ್‌ಡೌನ್‌ನಂತಹ ಸಂದರ್ಭದಲ್ಲಿ ಜನರ ಅಗತ್ಯ ಅರಿತು ನೆರವು ನೀಡುವುದು ಮೆಚ್ಚುವಂತಹ ಕಾರ್ಯ ಎಂದರು.

ಈ ಸಂದರ್ಭ ಯುಬಿ‌ಎಸ್ ಚಾರಿಟೇಬಲ್ ಟ್ರಸ್ಟ್ ಧಾರವಾಡ ಇದರ ಟ್ರಸ್ಟೀ ಪ್ರಶಾಂತ್ ಶೆಟ್ಟಿ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ಕರ್ನಾಟಕ ಬ್ಯಾಂಕ್ ಬೈಂದೂರು ಶಾಖಾ ಪ್ರಬಂಧಕ ಪರಮೇಶ್ವರ ಪೂಜಾರಿ, ಬಾಡಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಾಲಯ್ಯ ಶೇರುಗಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಬಾಡ, ಎಸ್‌ಡಿ‌ಎಂಸಿ ಅಧ್ಯಕ್ಷ ಉಮೇಶ್ ಸೇರಿದಂತೆ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಇದ್ದರು.

ಈ ಸಂದರ್ಭ ಬೈಂದೂರು ಭಾಗದ ಆಶಾ ಕಾರ್ಯಕರ್ತರು ಹಾಗೂ ಬೈಂದೂರು, ಬಾಡಾ, ಬಿಯಾರ, ಕಳವಾಡಿ, ವಿದ್ಯಾನಗರ, ಯೋಜನಾನಗರ, ಬಂಕೇಶ್ವರ, ತೊಡೆಮಕ್ಕಿ ಹಾಗೂ ಸೂರ್ಕುಂದ ಭಾಗದ ಅರ್ಹ ಫಲಾನುಭವಿಗಳಿಗೆ 1000 ಕಿಟ್ ವಿತರಿಸಲು ಯೋಜಿಸಲಾಗಿತ್ತು. ಕಿಟ್‌ನಲ್ಲಿ ಅಕ್ಕಿ, ಗೋದಿಹಿಟ್ಟು, ಉಪ್ಪು, ಚಹಾಪುಡಿ, ಸಕ್ಕರೆ, ಅವಲಕ್ಕಿ, ಬೆಲ್ಲ, ರಾಗಿಹಿಟ್ಟು, ಸೋಪು, ಅಡುಗೆ ಎಣ್ಣೆಯನ್ನು ಸೇರಿಸಲಾಗಿತ್ತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಬಾಡ ಸ್ವಾಗತಿಸಿದರು. ಸುಕುಮಾರ ಶೆಟ್ಟಿ ಸೂರ್ಕುಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Comments are closed.