ಆರೋಗ್ಯ

ಏಕಾದಶಿ-ಶಿವರಾತ್ರಿ-ನವರಾತ್ರಿ ಉಪವಾಸದ ದಿನ ಅಕ್ಕಿ ಬೆಳೆಗೆ ಮಾತ್ರ ದೋಷವೇ ? ತಿಳಿದುಕೊಳ್ಳಿ

Pinterest LinkedIn Tumblr

ಎಷ್ಟೋ ಜನ ನಂದು ಇವತ್ತು ಉಪವಾಸ ಕಣ್ರೀ ಅಂದ್ಕೊಂಡು ಚಪಾತಿ ಪೂರಿ,ಸಿಹಿ ತಿನ್ನೋದನ್ನ ನೋಡ್ತಾನೆ ಇರ್ತೀವಿ.. ಅಕ್ಕಿ ಬೆಳೆಗೆ ಮಾತ್ರ ದೋಷ ಕಣ್ರೀ ಮಿಕ್ಕಿದನ್ನೆಲ್ಲ ತಿನ್ನಬಹುದು ಅಂತ ಉಪವಾಸದ ದಿನಾನೂ ಹೊಟ್ಟೆಗೆ ರೆಸ್ಟ್ ಕೊಡದೆ ಮೇಲಿಂದ ಮೇಲೆ ತಿನ್ನೋವುದರ ಮೊದ್ಲು ಈ ಲೇಖನ ಓದಿ…

ಉಪವಾಸದ ಬಗ್ಗೆ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದ್ದು ಹಾಗೂ ಅದನ್ನ ಕಟ್ಟುನಿಟ್ಟಲ್ಲಿ ಪಾಲಿಸಬೇಕು ಅಂತ ಹೇಳಿದ್ದು ಆತ್ಮ ಮತ್ತು ದೇಹ ಶುದ್ದಿಗೆ ಹೊರತು ದೇವರನ್ನ ಮೆಚ್ಚಿಸೋದಕ್ಕಲ್ಲ.ಯಾಕಂದ್ರೆ ಆರೋಗ್ಯಕರ ಶರೀರ ಮತ್ತು ಮನಸ್ಸು ಯಾವಾಗ್ಲೂ ದೇವರ ವಾಸಸ್ಥಾನವಾಗಿರುತ್ತೆ. ಅದನ್ನ ಕ್ಲೀನ್ ಮಾಡ್ಲಿಕ್ಕೆ ಅಂತಾನೆ ನಮ್ಮ ಹಿರಿಯರು ಉಪವಾಸ ಅನ್ನೋ ಟೂಲ್ ಕಂಡು ಹಿಡಿದಿದ್ದು..

ಏಕಾದಶಿ/ ಪ್ರದೋಷ/ ಸಂಕಷ್ಟ ಚತುರ್ದಶಿ/ ಶಿವರಾತ್ರಿ / ನವರಾತ್ರಿ ಗಳಲ್ಲಿ ಮಾಡುವ ಉಪವಾಸದಿಂದ ದೇವರು ಒಲಿಯುತ್ತಾನೆಂಬ ನಂಬಿಕೆ ಅನಾದಿ ಕಾಲದಿಂದಲೂ ಬಂದಿದೆ. ಬರಿ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಎಲ್ಲಾ ಜಾತಿ ಧರ್ಮಗಳು ಸಹ ಉಪವಾಸ ದೈವತ್ವಕ್ಕೆ ದಾರಿ ಎಂಬುವ ತತ್ವವನ್ನು ಪ್ರತಿಪಾದಿಸುತ್ತವೆ. ಹಾಗಾದರೆ ನಿಜವಾಗಿಯೂ ಹೀಗೆ ಉಪವಾಸ ಮಾಡಿದ್ದಲ್ಲಿ ದೇವರು ಒಲಿಯುತ್ತಾನಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸರ್ವೇ ರೋಗ ಮಲಂ ವಶಃ| ಲಂಘನಮ್ ಪರಮೌಷಧಮ್ ಎಂಬ ಯುಕ್ತಿಯಂತೆ ದೇಹದಲ್ಲಿ ಅಧಿಕ ಕಲ್ಮಶಗಳು ಸೇರಿ ಅವುಗಳು ರೋಗವನ್ನು ಹುಟ್ಟುಹಾಕುತ್ತದೆ.. ಈ ಅಧಿಕ ಅನವಶ್ಯಕ ರೋಗಕಾರಕ ಕಲ್ಮಶಗಳನ್ನು ದೇಹದಿಂದ ಹೊರಹಾಕಲು ಉಪವಾಸವೇ ಮುಖ್ಯ ಔಷಧವೆಂದು ಹೇಳಲ್ಪಡುತ್ತದೆ.

ದಿನದಲ್ಲಿ ಅತಿ ಹೆಚ್ಚು ಬಾರಿ ನಾವು ತಿನ್ನುತ್ತಲೇ ಇರುತ್ತೇವೆ. ಇದರಿಂದ ಜೀರ್ಣವ್ಯೂಹಕ್ಕೆ ಸರಿಯಾದ ವಿಶ್ರಾಂತಿ ಲಭಿಸದೆ ಅವುಗಳ ಕಾರ್ಯದಕ್ಷತೆ ಕುಂಠಿತವಾಗಿ ಹೊಟ್ಟೆಯುಬ್ಬರ, ಅಸಿಡಿಟಿ, ಮಲಬದ್ಧತೆಯಂತಹ ಅನೇಕ ಖಾಯಿಲೆಗಳು ಹುಟ್ಟಿಕೊಳ್ಳುತ್ತವೆ. ರಾತ್ರಿ ಲೇಟ್ ಆಗಿ ಊಟ ಮಾಡುವುದರ ಪರಿಣಾಮವಾಗಿ ದೇಹದಲ್ಲಿ ಬೆರೆತ ಕಲ್ಮಶಗಳು ಸರಿಯಾಗಿ ವಿಸರ್ಜನೆಯಾಗದೆ ದಿನ ದಿನಕ್ಕೆ ಬಡ್ಡಿ ಬೆಳೆದಂತೆ, ಶರೀರದಲ್ಲಿ ಕೆಟ್ಟ ಪದಾರ್ಥ ಬೆಳೆಯುತ್ತ ದೇಹದಿಂದ ವಿಸರ್ಜಿಸಲ್ಪಡುವ ಮಲ ,ಮೂತ್ರ, ಬೆವರು ಇತ್ಯಾದಿಗಳು ದುರ್ವಾಸನೆಯಿಂದ ಕೂಡಿರುತ್ತದೆ. ಇದರ ಪರಿಣಾಮವಾಗಿ ಒಳಗೆ ಉಳಿದ ಈ ಟಾಕ್ಸಿನ್ಸ್ ಗಳು ದೇಹದಲ್ಲಿ ವಿಷವನ್ನು ಉತ್ಪತ್ತಿ ಮಾಡುತ್ತಾ ಶರೀರವನ್ನು ಕಲುಷಿತವನ್ನಾಗಿ ಮಾಡುತ್ತದೆ. ಕ್ರಮೇಣ ಈ ಟಾಕ್ಸಿನ್ಸ್ ಗಳು ದೇಹದ ಯಾವುದೇ ಭಾಗಗಲ್ಲಿ ಸೇರಿ ಆ ಭಾಗದ ಕಾರ್ಯಕ್ಷಮತೆಯನ್ನು ಕ್ಷೀಣಿಸಿ ರೋಗಕ್ಕೆ ದಾಸರನ್ನಾಗಿ ಮಾಡುತ್ತದೆ.

ಪ್ರತಿದಿನ ಊಟಗಳ ಮದ್ಯ ಸಾಕಷ್ಟು ಅಂತರವಿಡಲಾಗದಿದ್ದರೂ ವಾರಕ್ಕೊಮೆಯೆಯಾದರು ಕೇವಲ ಹಣ್ಣು ಮತ್ತು ಹಣ್ಣಿನ ರಸಗಳನ್ನು ಸೇವಿಸಿ ಉಪವಾಸ ಆಚರಿಸುವುದರಿಂದ ಹೊಟ್ಟೆಗೆ ಮತ್ತು ದೇಹದ ಜೀವಕೋಶಗಳಿಗೆ ವಿಶ್ರಾಂತಿ ಲಭಿಸಿ ದೇಹವೂ ತನ್ನನ್ನು ತಾನೇ ರಿಪೇರ್ ಮಾಡಿಕೊಳ್ಳಲು ಸಹಾಯವಾಗುತ್ತದೆ. ಉಪವಾಸವೆಂದರೆ ೨೪ ಗಂಟೆಗಳ ಕಾಲ ಶರೀರ ಮಾಡಿಕೊಂಡ ವಿಸರ್ಜನಾ ಕ್ರಿಯೆ. ಅದಕ್ಕಾಗಿಯೇ ಉಪವಾಸ ವೃಥಕ್ಕಿಂತ ಬೇರೆ ತಪಸ್ಸು ಇಲ್ಲ ಎಂದಿದ್ದಾರೆ ನಮ್ಮ ಪೂರ್ವಜರು.

ಉಪವಾಸ ಮಾಡೋದು ಎಷ್ಟು ಮುಖ್ಯನೋ ಅದನ್ನ ಶುರು ಮತ್ತು ಅಂತ್ಯ ಮಾಡೋದು ಅಷ್ಟೇ ಮುಖ್ಯ. ಒಂದು ದಿನ ಉಪವಾಸ ಇದ್ದು ಮರುದಿನ ಸಡನ್ ಆಗಿ ಹೊಟ್ಟೆ ಬಿರಿಯೋ ಹಾಗೆ ತಿಂದ್ರೆ ಅರೋಗ್ಯ ಕ್ಷೀಣಿಸುತ್ತೆ ಹೊರತು ವೃದ್ದಿಯಾಗೋಲ್ಲ. ಹೇಗೆ ಮಾಡಬೇಕು ಅಂತ ತಿಳ್ಕೊಳಕ್ಕೆ ಯಾವದಾದ್ರು ಪ್ರಕೃತಿ ಚಿಕಿತ್ಸಕರ ಮೊರೆ ಹೋಗಿ. ಅವರು ಹೇಳಿದ ಕ್ರಮವನ್ನು ತಪ್ಪದೆ ಪಾಲಿಸಿದ್ದಲ್ಲಿ ಉತ್ತಮ ಆರೋಗ್ಯ್ ನಿಮ್ಮದಾಗುವಲ್ಲಿ ಸಂಶಯವೇ ಇಲ್ಲ.

ಇನ್ಮೇಲಾದ್ರೂ ‘ಆಚೆ ಮನೆಯ ಸುಬ್ಬಮ್ಮನ’ ಹಾಡಿನಂತೆ ಉಪವಾಸ ಆಚರಿಸದೇ ಕ್ರಮವಾಗಿ ಸರಿಯಾಗಿ ಲಘು ಪದಾರ್ಥಗಳನ್ನು ಸೇವಿಸುತ್ತಾ ಆಚರಿಸಿದ್ದಲ್ಲಿ ನಿಮ್ಮ ದೇಹವೂ ಆತ್ಮವೂ ಶುದ್ದಿಯಾಗುವುದರಲ್ಲಿ ಸಂಶಯವೇ ಇಲ್ಲ. ಆತ್ಮವೂ ಸಂಪ್ರೀತನಾದರೆ ಪರಮಾತ್ಮನು ಒಲಿಯುವನು ಕಣ್ರೀ…

Comments are closed.