ಆರೋಗ್ಯ

ಕೋಟೇಶ್ವರಕ್ಕೆ ಶಿಪ್ಟ್ ಆಯ್ತು ಕುಂದಾಪುರದಲ್ಲಿ ನಡೆಯಬೇಕಿದ್ದ ನಿತ್ಯಬಳಕೆ ವಸ್ತುಗಳ ವ್ಯಾಪಾರ!

Pinterest LinkedIn Tumblr

ಕುಂದಾಪುರ: ದೇಶಾದ್ಯಾಂತ ಘೋಷಣೆಯಾಗಿರುವ ಲಾಕ್‌ಡೌನ್‌ ಕಾರಣದಿಂದಾಗಿ ಕಳೆದ ಕೆಲವು ದಿನಗಳಿಂದ ಬಂದ್‌ ಆಗಿರುವ ಕುಂದಾಪುರದ ವಾರದ ಸಂತೆಯ ಬದಲಿ ವ್ಯವಸ್ಥೆಯಾಗಿ ಶನಿವಾರ ಇಲ್ಲಿಗೆ ಸಮೀಪದ ಕೋಟೇಶ್ವರದ ಕಾಳಾವರ ವರದರಾಜ್‌ ಶೆಟ್ಟಿ ಸರ್ಕಾರಿ ಪದವಿ ಕಾಲೇಜಿನ ವಠಾರದಲ್ಲಿ ತರಕಾರಿ ಹಾಗೂ ಇತರ ವಸ್ತುಗಳ ರಖಂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜಿಲ್ಲೆಯಲ್ಲಿನ ದೊಡ್ಡ ವಾರದ ಸಂತೆ ಎನ್ನುವ ಹೆಗ್ಗಳಿಕೆ ಹೊಂದಿದ್ದ ಇಲ್ಲಿನ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಡೆಯುತ್ತಿದ್ದ ವಾರದ ಸಂತೆ ಕೊರೊನಾ ಕಾರಣದಿಂದ ಬಂದ್‌ ಆಗಿತ್ತು. ಬ್ರಹ್ಮಾವರ, ಬೈಂದೂರು, ಕುಂದಾಪುರ, ಭಟ್ಕಳ ತಾಲ್ಲೂಕುಗಳ ಜನರಿಗೆ ಪ್ರಮುಖ ವ್ಯವಹಾರ ಕೇಂದ್ರವಾಗಿದ್ದ ಸಂತೆ ಬಂದ್‌ ಆಗಿದ್ದರಿಂದ ಕುಂದಾಪುರ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ತರಕಾರಿ ಹಾಗೂ ಇತರ ಅಗತ್ಯ ವಸ್ತುಗಳ ಖರೀದಿಗೆ ಸಮಸ್ಯೆಯುಂಟಾಗಿತ್ತು. ಗ್ರಾಮೀಣ ಭಾಗದ ಚಿಲ್ಲರೆ ವ್ಯಾಪಾರಸ್ಥರಿಗೆ ಅಗತ್ಯ ಸಾಮಾನುಗಳು ದೊರಕದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.

ಕಳೆದ ಶನಿವಾರದಂದು ಗ್ರಾಮೀಣ ಭಾಗದ ರಖಂ ವ್ಯಾಪಾರಸ್ಥರಿಗೆ ಅನೂಕೂಲ ಕಲ್ಪಿಸುವ ಉದ್ದೇಶದಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ರಖಂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದರೂ, ಚಿಲ್ಲರೆ ಖರೀದಿದಾರರ ಪ್ರವೇಶದಿಂದಾಗಿ ಒಂದಷ್ಟು ಗೊಂದಲಗಳು ಉಂಟಾಗಿತ್ತು. ಎಪಿಎಂಸಿ ಒಳ ಪ್ರವೇಶಕ್ಕೆ ಅವಕಾಶ ದೊರಕದೆ ಇದ್ದುದರಿಂದಾಗಿ ಜನರು ರಸ್ತೆ ಬದಿಯಲ್ಲಿನ ಮಾರಾಟಗಾರರಿಂದ ತರಕಾರಿ, ಹಣ್ಣು ಹಾಗೂ ಇತರ ವಸ್ತುಗಳನ್ನು ಖರೀದಿಸಿದ್ದರು.

ಶುಕ್ರವಾರ ಅಪೌಚಾರಿಕ ಸಭೆ ನಡೆಸಿದ್ದ ಕಂದಾಯ, ಪೊಲೀಸ್‌ ಹಾಗೂ ಎಪಿಎಂಸಿ ಅಧಿಕಾರಿಗಳು ಚಿಲ್ಲರೆ ಖರೀದಿಗೆ ಬರುವ ಜನರನ್ನು ನಿಯಂತ್ರಿಸಿ ರಖಂ ಖರೀದಿಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಶನಿವಾರ ವಾರದ ಸಂತೆಗೆ ಬದಲಿಯಾಗಿ 10 ಕೆ.ಜಿ ಗಿಂತ ಮೇಲ್ಪಟ್ಟು ಖರೀದಿಸುವ ಖರೀದಿಗಾರರಿಗೆ ಕೋಟೇಶ್ವರದ ಸರ್ಕಾರಿ ಪದವಿ ಕಾಲೇಜಿನಲ್ಲಿ ತರಕಾರಿ, ಹಣ್ಣು ಹಾಗೂ ಕೆಲವು ಅಗತ್ಯ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿನ ಮಾರಾಟ ವ್ಯವಸ್ಥೆಯ ಮಾಹಿತಿ ಪಡೆದುಕೊಂಡು ಚಿಲ್ಲರೆ ಖರೀದಿಗಾಗಿ ಬಂದವರಿಗೆ ತಿಳುವಳಿಕೆ ನೀಡಿ ವಾಪಾಸು ಕಳುಹಿಸಲಾಯಿತು. ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆದ ಮಾರಾಟ ನಡೆಯಿತು.

ಕೋಟೇಶ್ವರದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿರುವ ಬಗ್ಗೆ ಸರಿಯಾದ ಮಾಹಿತಿ ದೊರಕದೆ ಇದ್ದುದರಿಂದಾಗಿ ಗ್ರಾಮೀಣ ಭಾಗದಿಂದ ಬಂದಿದ್ದ ವ್ಯಾಪಾರಸ್ಥರು ಎಪಿಎಂಸಿ ಗೆ ಬಂದು ನಂತರ ಕೋಟೇಶ್ವರದ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

Comments are closed.