ಆರೋಗ್ಯ

ಕೊರೋನಾ‌ ಎಫೆಕ್ಟ್- ಜಿಲ್ಲೆಯಲ್ಲಿ ರಕ್ತದ ಅಭಾವ: ಗಂಗೊಳ್ಳಿಯಲ್ಲಿ ‘ರಕ್ತದಾನ’ ಮಾಡಿದ ಯುವಪಡೆ

Pinterest LinkedIn Tumblr

ಕುಂದಾಪುರ: ವಿಶ್ವವೇ ಕೋವಿಡ್-19 ಕೊರೋನಾ ವೈರಸ್ ಕಪಿಮುಷ್ಟಿಯಲ್ಲಿ ಸಿಕ್ಕು ನಲುಗುತ್ತಿದ್ದು ಹಲವರು ನಿರಾಶ್ರಿತರಾಗಿದ್ದಾರೆ. ಅಂತಹ ನಿರಾಶ್ರಿತ ಮಂದಿಗೆ ಅನ್ನದಾನ, ನಿತ್ಯಬಳಕೆ ವಸ್ತುಗಳ ಸಹಾಯ, ಆರ್ಥಿಕ ಸಹಾಯ ಮಾಡುತ್ತಿದ್ದು ಕೊರೋನಾ ಭೀತಿಯ ಹಿನ್ನೆಲೆ ರಕ್ತ ಸಂಗ್ರಹಣೆಯಲ್ಲೂ ಇಳಿಮುಖವಾಗಿದೆ. ಈ ಸಂದರ್ಭ ದಾನ ದಾನಗಳಲ್ಲಿ ಶ್ರೇಷ್ಟವಾದ ರಕ್ತದಾನವನ್ನು ಹಮ್ಮಿಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಗಂಗೊಳ್ಳಿಯ ರಕ್ತದಾನಿಗಳ ಸಂಘವು ಸಮಾಜಸೇವೆಗೆ ಮುಂದಾಗಿದ್ದು ಈ ಮೂಲಕ ಜಿಲ್ಲೆಯಲ್ಲಿ ಮಾದರಿಯಾಗಿದೆ. 

ಗಂಗೊಳ್ಳಿ ಪಿಎಸ್ಐ ರಕ್ತದಾನ….
ಜಿಲ್ಲೆಯ ರಕ್ತನಿಧಿ ಕೇಂದ್ರದಲ್ಲಿ ಇನ್ನೆರಡು ದಿನಗಳಲ್ಲಿ ಸಂಗ್ರಹವಾದ ರಕ್ತ ಕಡಿಮೆಯಾಗಿ ರಕ್ತದ ಅಭಾವ ಸೃಷ್ಟಿಯಾಗಲಿದೆ. ಇದನ್ನು ನೀಗಿಸಲು ಗಂಗೊಳ್ಳಿಯ ಕರಾವಳಿ ಸ್ವಯಂ ಪ್ರೇರಿತ ರಕ್ತದಾನಿಗಳ‌ ಸಂಘದಿಂದ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ‌ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 50ಕ್ಕೂ ಅಧಿಕ ಮಂದಿಯಿಂದ ರಕ್ತದಾನ ನಡೆದಿದ್ದು ಅಂದಾಜು 50 ಯುನಿಟ್ ರಕ್ತ ಸಂಗ್ರಹವಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಭೀಮಾಶಂಕರ್ ರಕ್ತದಾನ ಮಾಡಿದರು.

ಕೊರೋನಾ ಜಾಗೃತಿಯೊಂದಿಗೆ ರಕ್ತದಾನ….
ಕೊರೋನಾ ವೈರಸ್ ಭೀತಿ ಹಿನ್ನೆಲೆ ಜಿಲ್ಲಾಡಳಿತದ ನಿರ್ದೇಶನದಂತೆ ರಕ್ತದಾನಿಗಳಿಗೆ ಕೋವಿಡ್-19 ತಪಾಸಣೆ, ಮಾಸ್ಕ್ ಧರಿಸುವ ಮೂಲಕ ಮುಂಜಾಗೃತಾ ಕ್ರಮ ಅನುಸರಿಸಿ ರಕ್ತ ದಾನ ಆಯೋಜನೆ ಮಾಡಲಾಗಿತ್ತು. ನೋಂದಾವಣೆ, ತಪಾಸಣೆ, ರಕ್ತದಾನ ಸಂದರ್ಭವೂ ಅಂತರ ಕಾಯ್ದುಕೊಂಡು ಜನಜಾಗೃತಿ ಮೂಡಿಸಲಾಯಿತು. ಗಂಗೊಳ್ಳಿಯ ಜಹೀರ್ ಮಾಸ್ಕ್ ಪೂರೈಸಿದ್ದರು.

ರಕ್ತದಾನಿಗಳ ಸಂಘದ ಸಂಸ್ಥಾಪಕ ದಿವಾಕರ ಖಾರ್ವಿ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ, ಬೈಂದೂರು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ರಕ್ತನಿಧಿ ಉಡುಪಿಯ ಮುಖ್ಯಸ್ಥೆ ಡಾ. ವೀಣಾ, ಗಂಗೊಳ್ಳಿ ಗ್ರಾ.ಪಂ ಸದಸ್ಯ ರಾಘವೇಂದ್ರ ಪೈ ಮೊದಲಾದವರು ಉಪಸ್ಥಿತರಿದ್ದರು.

ರಕ್ತದಾನಕ್ಕೆ ಸೈ ಎಂದ ಯುವ ಪಡೆ..!
ಇನ್ನು 2002 ರಲ್ಲಿ ಪ್ರಾರಂಭವಾದ ಕರಾವಳಿ ಸ್ವಯಂ ಪ್ರೇರಿತ ರಕ್ತದಾನಿಗಳ‌ ಸಂಘದಿಂದ ಪ್ರತಿ ಬಾರಿ ರಕ್ತದಾನ ನಡೆಯುತ್ತಿದ್ದು 2010 ಜೂನ್ ನಲ್ಲಿ ಆಗಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಗಂಗೊಳ್ಳಿಗೆ ರಕ್ತದಾನಿಗಳ ಗ್ರಾಮ ಎಂದು ಘೋಷಣೆ ಮಾಡಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.