ಆರೋಗ್ಯ

ಕೊರೋನಾ ನಿಯಂತ್ರಣಕ್ಕೆ ಕಂಟೈನ್‍ಮೆಂಟ್ ಪ್ಲಾನ್ ಸಿದ್ದ- ಜಿಲ್ಲಾಧಿಕಾರಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 3 ಕೋರೊನಾ ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ ಒಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಡೆಗೊಂಡಿದ್ದಾರೆ, ಇನ್ನಿಬ್ಬರು ಸಹ ಅರೋಗ್ಯದಿಂದಿದ್ದು, ಅವರ ವೈದ್ಯಕೀಯ ವರದಿ ನಿರೀಕ್ಷೆಯಲ್ಲಿದೆ , ಈ ಮೂರು ಪ್ರಕರಣಗಳು ಜಿಲ್ಲೆಯ ಹೊರಗಿನಿಂದ ಬಂದ ಪ್ರಕರಣಗಳಾಗಿದ್ದು, ಜಿಲ್ಲೆಯ ಒಳಗೆ ಯಾವುದೇ ಕೊರೋನಾ ಪ್ರಕರಣ ಕಂಡು ಬರುವ ಸಾದ್ಯತೆಗಳು ಇಲ್ಲವಾಗಿದ್ದು, ಅಕಸ್ಮಾತ್ ಕಂಡು ಬಂದಲ್ಲಿ , ಅದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕಂಟೈನ್‍ಮೆಂಟ್ ಪ್ಲಾನ್ ಸಿದ್ದಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಅವರು ಭಾನುವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಜಿಲ್ಲ್ಲೆಯ ಕಂಟೈನ್‍ಮೆಂಟ್ ಪ್ಲಾನ್ ರಚನೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಹೊರ ಜಿಲ್ಲೆಗಳಿಂದ ಬರುವ ವಾಹನಗಳು ಮತ್ತು ಪ್ರಯಾಣಿಕರನ್ನು ನಿರ್ಬಂದಿಸಲಾಗಿದ್ದು, ಹೊರ ಜಿಲ್ಲೆಗಳಿಂದ ಕೊರೋನಾ ಕಾಣಿಸಿಕೊಳ್ಳುವ ಭೀತಿ ಇಲ್ಲ ಆದರೆ ಒಂದು ವೇಳೆ ಜಿಲ್ಲೆಯಲ್ಲಿ ಸ್ಥಳೀಯವಾಗಿ ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ, ಪ್ರಕರಣ ಕಂಡು ಬಂದ ಸ್ಥಳದ 3 ಕಿಮೀ ವ್ಯಾಪ್ತಿಯಲ್ಲಿ ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಗೆ ಹಾಗೂ ನಂತರದ 2 ಕಿಮೀ ವ್ಯಾಪ್ತಿಯಲ್ಲಿ ಬಫರ್ ಝೋನ್ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಕಂಟೈನ್‍ಮೆಂಟ್ ಝೋನ್ ನಿರ್ಮಾಣ ಮಾಡಿದಲ್ಲಿ, ಆ ಸ್ಥಳದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಅಗತ್ಯ ಸಿಬ್ಬಂದಿಯ ನಿಯೋಜನೆ ಮತ್ತು ಅವರು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು , ವೈದ್ಯಕೀಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ವಿವರಿಸಿದರು.

ಕೇವಲ 2 ಗಂಟೆಗಳಲ್ಲಿ ಕಂಟೈನ್‍ಮೆಂಟ್ ಝೋನ್ ನಿರ್ಮಾಣ ಮಾಡಲು ಮತ್ತು ನಂತರದ 4 ಗಂಟೆಗಳ ಅವಧಿಯಲ್ಲಿ ವೈದ್ಯಕೀಯ , ಅಗತ್ಯ ವಸ್ತುಗಳ ಸೇವೆ, ಕಂಟ್ರೋಲ್ ರೂಂ ಸೇರಿದಂತೆ ಎಲ್ಲಾ ಅಗತ್ಯತೆಗಳನ್ನು ಆ ಪ್ರದೇಶದಲ್ಲಿ ಒದಗಿಸಲು ಯೋಜನೆ ಸಿದ್ದಪಡಿಸಿದ್ದು, ಇದಕ್ಕೆ ಅಗತ್ಯವಾದ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವಂತೆ ಹಾಗೂ ಸೇವೆಗೆ ಲಭ್ಯವಾಗಲು ಸದಾ ಸಿದ್ದವಾಗಿರುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲಾ ಕೊರೋನಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಕಂಟೈನ್‍ಮೆಂಟ್ ಪ್ಲಾನ್ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಎಲ್ಲಾ ತಹಸೀಲ್ದಾರ್ ಗಳು ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.