ಆರೋಗ್ಯ

ಬಾಯಿ ಯಾವಾಗಲೂ ಒಣಗಿದಂತೆ ಇರುತ್ತದೆಯೇ?

Pinterest LinkedIn Tumblr

ಜೊಲ್ಲು ಗ್ರಂಥಿಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಬಾಯಿ ಒಣಗುತ್ತದೆ. ಈ ಸ್ಥಿತಿಯನ್ನು ವೈದ್ಯಕೀಯವಾಗಿ ‘ಝೆರೊಸ್ಟೋಮಿಯಾ ‘ಎಂದು ಕರೆಯಲಾಗುತ್ತದೆ. ನೀವು ಕೆಲವು ಲಕ್ಷಣಗಳನ್ನು ಗಮನಿಸಿದರೆ ಬಾಯಿ ಒಣಗುವ ಸಮಸ್ಯೆಗೆ ತುತ್ತಾಗಿದ್ದೀರಿ ಎಂದು ನಿರ್ಧರಿಸ ಬಹುದು. ಈ ಲಕ್ಷಣಗಳು ಇತರ ಕಾಯಿಲೆಗಳಿದ್ದಾಗಲೂ ಕಾಣಿಸಿಕೊಳ್ಳುತ್ತವೆ,ಆದರೆ ಇಂತಹ ಒಂದಕ್ಕಿಂತ ಹೆಚ್ಚು ಲಕ್ಷಣಗಳಿದ್ದರೆ ಅದು ಒಣಬಾಯಿ ಆಗಿರಬಹುದು.

ಬಾಯಿ ಒಣಗಿದ ಸತತ ಅನುಭವ,ದಪ್ಪ ಜೊಲ್ಲು ಉಂಟಾಗುವುದು,ಆಹಾರ ಅಗಿಯುವಾಗ ಮತ್ತು ನುಂಗುವಾಗ ಕಿರಿಕಿರಿ,ಗಂಟಲು ಕೆರೆತ,ದಂತಕ್ಷಯ ಮತ್ತು ದಂತ ಸಂಬಂಧಿತ ಸಮಸ್ಯೆಗಳು,ಕರ್ಕಶ ಧ್ವನಿ ಇವು ಒಣಬಾಯಿ ಸಮಸ್ಯೆಯ ಲಕ್ಷಣಗಳಾಗಿವೆ. ಕೆಟ್ಟ ಉಸಿರು ಕೂಡ ಒಣಬಾಯಿಯ ಲಕ್ಷಣವಾಗಿದ್ದು,ಜೊಲ್ಲಿನ ಕೊರತೆಯಿಂದಾಗಿ ಆಹಾರ ಕಣಗಳು ದೀರ್ಘ ಕಾಲ ಬಾಯಿಯಲ್ಲಿ ಉಳಿದುಕೊಳ್ಳುವುದು ಇದಕ್ಕೆ ಕಾರಣವಾಗುತ್ತದೆ.

ಬಾಯಿ ಒಣಗುವುದಕ್ಕೆ ವಿವಿಧ ಕಾರಣಗಳಿವೆ. ಆದರೆ ಜೊಲ್ಲು ಗ್ರಂಥಿಯಿಂದ ಜೊಲ್ಲು ಉತ್ಪಾದನೆಯಾಗದಿರುವುದು ಮೂಲಕಾರಣವಾಗಿದೆ. ಒಣಬಾಯಿ ಈ ಕೆಳಗಿನ ಕಾರಣಗಳಿಂದಲೂ ಉಂಟಾಗುತ್ತದೆ…

ಔಷಧಿಗಳ ಸೇವನೆ
ಹಲವಾರು ಔಷಧಿಗಳು,ವಿಶೇಷವಾಗಿ ಖಿನ್ನತೆ,ಆತಂಕ ಮತ್ತು ಅಧಿಕ ರಕ್ತದೊತ್ತಡ ಪ್ರಕರಣಗಳಲ್ಲಿ ಸೇವಿಸುವ ಔಷಧಿಗಳು ಹಲವಾರು ಅಡ್ಡಪರಿಣಾಮಗಳನ್ನು ಹೊಂದಿರುತ್ತವೆ. ಈ ಪ್ರಕರಣಗಳಲ್ಲಿ ಬಳಸಲಾಗುವ ಔಷಧಿಗಳು ಹೆಚ್ಚಾಗಿ ಆಯಂಟಿಹಿಸ್ಟಮೈನ್‌ಗಳು,ನೋವು ನಿವಾರಕಗಳು ಅಥವಾ ಸ್ನಾಯುನೋವು ನಿವಾರಕಗಳಾಗಿರುತ್ತವೆ. ಈ ಔಷಧಿಗಳ ಅಡ್ಡಪರಿಣಾಮಗಳು ಜೊಲ್ಲುಗ್ರಂಥಿಗಳ ಅಸಮರ್ಪಕ ಕಾರ್ಯನಿರ್ವಹಣೆಗೆ ಕಾರಣಗಳಲ್ಲಿ ಸೇರಿವೆ.

ವೃದ್ಧಾಪ್ಯ ಮತ್ತು ಆಹಾರ ಕ್ರಮ
ಜನರಿಗೆ ತಾವು ವೃದ್ಧಾಪ್ಯದತ್ತ ಸಾಗುತ್ತಿದ್ದೇವೆ ಎನ್ನುವುದು ಗೊತ್ತಿದ್ದರೂ ಸಾಮಾನ್ಯವಾಗಿ ಎಂದಿನ ಆಹಾರಕ್ರಮಕ್ಕೇ ಅಂಟಿಕೊಂಡಿರುತ್ತಾರೆ. ಹಳೆಯ ಆಹಾರ ಪದ್ಧತಿಯನ್ನೇ ಅನುಸರಿಸುವುದರಿಂದ ಶರೀರಕ್ಕೆ ಅಗತ್ಯವಾಗಿರುವ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಲಭಿಸುವುದಿಲ್ಲ ಮತ್ತು ಇದರಿಂದ ಜೊಲ್ಲು ಗ್ರಂಥಿ ಸೇರಿದಂತೆ ವಿವಿಧ ಗ್ರಂಥಿಗಳ ಕಾರ್ಯಕ್ಕೆ ವ್ಯತ್ಯಯವುಂಟಾಗುತ್ತದೆ.

ಕಿಮೊಥೆರಪಿ
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧಿಗಳು ಜೊಲ್ಲಿನ ಪ್ರಮಾಣ ಮತ್ತು ಸ್ವರೂಪದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತವೆ. ಅಲ್ಲದೆ ಕಿಮೊಥೆರಪಿ ಹಲವಾರು ಅಡ್ಡಪರಿಣಾಮಗಳನ್ನು ಹೊಂದಿದ್ದು,ಒಣಬಾಯಿ ಇವುಗಳಲ್ಲೊಂದಾಗಿದೆ.

ನ್ಯೂರಲ್ ರಿಫ್ಲೆಕ್ಸ್ ಅಥವಾ ನರ ಪ್ರತಿವರ್ತನ
ಮಾನವ ಶರೀರದ ಹೆಚ್ಚಿನ ಕಾರ್ಯಗಳು ಮಿದುಳಿನ ನಿಯಂತ್ರಣದಲ್ಲಿವೆ. ಜೊಲ್ಲು ಗ್ರಂಥಿಯ ಕಾರ್ಯಕ್ಕೆ ಸಂಬಂಧಿಸಿದ ನರಗಳಿಗೆ ಯಾವುದೇ ಹಾನಿಯು ಜೊಲ್ಲಿನ ಪ್ರಮಾಣ ಮತ್ತು ಸ್ವರೂಪದಲ್ಲಿ ಬದಲಾವಣೆಯನ್ನುಂಟು ಮಾಡುತ್ತದೆ. ಅಲ್ಲದೆ ಒಣಬಾಯಿಯು ಹಲವಾರು ರೋಗಗಳ ಲಕ್ಷಣವೂ ಆಗಿದೆ. ಅಲ್ಜೀಮರ್ಸ್ ಕಾಯಿಲೆ,ಎಚ್‌ಐವಿ/ಏಡ್ಸ್ ಇಂತಹ ರೋಗಗಳಲ್ಲಿ ಸೇರಿವೆ.

ಒಣಬಾಯಿಯ ನಿವಾರಣೆ
ಕೆಲವು ಸರಳ ಕ್ರಮಗಳ ಮೂಲಕ ಬಾಯಿ ಒಣಗುವುದನ್ನು ತಡೆಯಬಹುದು. ಯಥೇಚ್ಛ ನೀರಿನ ಸೇವನೆ ಇವುಗಳಲ್ಲೊಂದು. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯುವುದರಿಂದ ಶರೀರ ಮತ್ತು ಬಾಯಿ ಜಲೀಕರಣಗೊಳ್ಳುತ್ತವೆ. ಅನಗತ್ಯವಾದ ಔಷಧಿಗಳನ್ನು ಸೇವಿಸುವ ಗೋಜಿಗೆ ಹೋಗಬೇಡಿ. ಅಧಿಕ ಪ್ರಮಾಣದಲ್ಲಿ ಕೆಫೀನ್ ಮತ್ತು ನಿಕೋಟಿನ್ ಇರುವ ಪಾನೀಯಗಳು ಶರೀರದ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಹೀಗಾಗಿ ಒಣಬಾಯಿ ಸಮಸ್ಯೆಯಿರುವವರು ಇಂತಹ ಪಾನೀಯಗಳ ಸೇವನೆಗೆ ಕಡಿವಾಣ ಹಾಕುವುದು ಒಳ್ಳೆಯದು.

ಸಕ್ಕರೆರಹಿತ ಗಮ್‌ಗಳನ್ನು ಅಗಿಯುವುದು ಒಣಬಾಯಿ ಸಮಸ್ಯೆಯನ್ನು ತಗ್ಗಿಸಲು ನೆರವಾಗುತ್ತದೆ. ಅದರಲ್ಲಿರುವ ಝೈಲಿಟಾಲ್ ಜೊಲ್ಲು ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಇವುಗಳ ಜೊತೆಗೆ ಬಾಯಿಯ ಕಾಳಜಿ ಎಲ್ಲಕ್ಕಿಂತ ಮುಖ್ಯವಾಗಿದೆ. ಬಾಯಿ ಸ್ವಚ್ಛಗೊಳಿಸಲು ವೌತ್ ವಾಷ್ ಬಳಸುತ್ತೀರಾದರೆ ಅದು ಮದ್ಯಸಾರರಹಿತವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಹಲವಾರು ಗಿಡಮೂಲಿಕೆ ಮತ್ತು ಸಾವಯವ ಉತ್ಪನ್ನಗಳು ಬಾಯಿ ಕುಹರವನ್ನು ಜಲೀಕರಿಸುವ ಮೂಲಕ ಒಣಬಾಯಿ ಸಮಸ್ಯೆಯನ್ನು ಶಮನಿಸಲು ನೆರವಾಗುತ್ತದೆ.

ಜೊಲ್ಲಿಗೆ ಬದಲಿಯಾಗಿ ಕಾರ್ಯ ನಿರ್ವಹಿಸುವ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳನ್ನು ಅಲ್ಪಾವಧಿಗೆ ಬಳಸಬಹುದು,ಆದರೆ ದೀರ್ಘಕಾಲೀನ ಬಳಕೆ ಸೂಕ್ತವಲ್ಲ.

Comments are closed.