ಆರೋಗ್ಯ

ಬೇಸಿಗೆ ಕಾಲದಲ್ಲೂ ನಿಮಗೆ ಚಳಿಯಾಗುತ್ತದೆಯೇ, ಇದಕ್ಕೆ ಕಾರಣ ಬಲ್ಲಿರಾ..?

Pinterest LinkedIn Tumblr

ಚಳಿಗಾಲದಲ್ಲಿ ಹೊರಗಡೆ ತಿರುಗಾಡುವಾಗ ಚಳಿಯಾಗುವುದು ಸಹಜ.ಆದರೆ ತಂಪು ವಾತಾವರಣವಿಲ್ಲದಿದ್ದಾಗಲೂ ಚಳಿಯಿಂದ ನಡುಗುತ್ತಿದ್ದರೆ ಅದಕ್ಕೆ ಗಂಭೀರ ಕಾರಣಗಳಿರಬಹುದು. ಆಹಾರದಲ್ಲಿ ಕ್ಯಾಲರಿಗಳ ಪ್ರಮಾಣದಲ್ಲಿ ಇಳಿಕೆ,ವಯಸ್ಸಾಗುವಿಕೆ ಮತ್ತು ಹೈಪೊಥೈರಾಯ್ಡಿಸಂ ಇತ್ಯಾದಿಗಳು ಅತಿಯಾದ ಚಳಿಯ ಅನುಭವವಾಗಲು ಕೆಲವು ಸಾಮಾನ್ಯ ಕಾರಣಗಳಾಗಿವೆ. ಚಳಿಗಾಲವಿರಲಿ,ಮಳೆಗಾಲವಿರಲಿ ಅಥವಾ ಬೇಸಿಗೆಕಾಲವಿರಲಿ,ನಿಮ್ಮ ಚಳಿಯನ್ನು ಹೆಚ್ಚಿಸಬಲ್ಲ ಐದು ಕಾರಣಗಳಿಲ್ಲಿವೆ.

ಹೈಪೊಥೈರಾಯ್ಡಿಸಂ
ಥೈರಾಯ್ಡ್ ಗ್ರಂಥಿಯು ಶರೀರದ ಚಯಾಪಚಯಕ್ಕೆ ಅಗತ್ಯವಾಗಿರುವ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ. ಈ ಗ್ರಂಥಿಯು ಶರೀರಕ್ಕೆ ಅಗತ್ಯವಾದಷ್ಟು ಹಾರ್ಮೋನ್‌ಗಳನ್ನು ಉತ್ಪಾದಿಸಲು ಅಸಮರ್ಥವಾದಾಗ ಆ ಸ್ಥಿತಿಯನ್ನು ಹೈಪೊಥೈರಾಯ್ಡಿಸಂ ಎಂದು ಕರೆಯಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಶರೀರದ ಚಯಾಪಚಯ ಪ್ರಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ಚಳಿಯ ಅನುಭವವನ್ನುಂಟು ಮಾಡುತ್ತದೆ. ಆಯಾಸ,ಅನುದ್ದೇಶಿತ ದೇಹತೂಕ ಇಳಿಕೆ ಇವು ಹೈಪೊಥೈರಾಯ್ಡಿಸಮ್‌ನ ಇತರ ಲಕ್ಷಣಗಳಲ್ಲಿ ಸೇರಿವೆ. ಕುಟುಂಬದಲ್ಲಿ ಥೈರಾಯ್ಡ್ ಸಮಸ್ಯೆಯ ಇತಿಹಾಸವಿದ್ದರೆ ಅಂತಹ ವ್ಯಕ್ತಿಯು ನಿಯಮಿತವಾಗಿ ಥೈರಾಯ್ಡ್ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು.

ರಕ್ತಹೀನತೆ
ನಿಮ್ಮ ಶರೀರವು ಸಾಮಾನ್ಯಕ್ಕಿಂತ ಕಡಿಮೆ ಕೆಂಪು ರಕ್ತಕಣಗಳನ್ನು ಉತ್ಪಾದಿಸುತ್ತಿದ್ದರೆ ಅದು ಅನಿಮಿಯಾ ಅಥವಾ ರಕ್ತಹೀನತೆ ಸಮಸ್ಯೆಯಾಗಿರಬಹುದು ಮತ್ತು ಇದಕ್ಕೆ ಶರೀರಕ್ಕೆ ಆಮ್ಲಜನಕದ ಕೊರತೆ ಕಾರಣವಾಗಿರುತ್ತದೆ. ನಮ್ಮ ಕೈಕಾಲುಗಳು ರಕ್ತ ಪರಿಚಲನೆಯೊಂದಿಗೆ ನೇರವಾದ ಸಂಬಂಧವನ್ನು ಹೊಂದಿರುತ್ತವೆ ಮತ್ತು ಇದು ನಮಗೆ ಚಳಿಯಾಗುವಂತೆ ಮಾಡುತ್ತದೆ. ನಿಶ್ಶಕ್ತಿ,ಆಯಾಸ,ಅನಿಯಮಿತ ಹೃದಯಬಡಿತ, ಎದೆನೋವು ಇತ್ಯಾದಿಗಳು ರಕ್ತಹೀನತೆಯ ಇತರ ಲಕ್ಷಣಗಳಲ್ಲಿ ಸೇರಿವೆ.

ನಿದ್ರೆಯ ಕೊರತೆ
ನಮಗೆ ಸಾಕಷ್ಟು ನಿದ್ರೆ ದೊರೆಯದಿದ್ದಾಗ ನಮ್ಮ ಸಿಕಾರ್ಡಿಯನ್ ರಿದಂ ಅಥವಾ ಮರುಕಳಿಸುವ ಲಯಕ್ಕೆ ವ್ಯತ್ಯಯವುಂಟಾಗುತ್ತದೆ. ನಮ್ಮ ಶರೀರವು 24 ಗಂಟೆಗಳ ಅವಧಿಯ ಹಗಲು-ರಾತ್ರಿ ಚಕ್ರಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ನಾವು ಗಾಢನಿದ್ರೆಯಲ್ಲಿರುವಾಗ ಶರೀರದ ಉಷ್ಣತೆಯು ಕಡಿಮೆಯಾಗುತ್ತದೆ. ನಮಗೆ ನಿದ್ರೆಯ ಕೊರತೆಯುಂಟಾದಾಗ ನಮ್ಮ ಸುತ್ತಲಿನ ವಾತಾವರಣವೂ ಪ್ರತಿಕೂಲವಾಗಿ ಚಳಿಯ ಅನುಭವವಾಗುತ್ತದೆ. ಇದನ್ನು ನಿವಾರಿಸಲು ಕನಿಷ್ಠ ಏಳು ಗಂಟೆಗಳ ನಿದ್ರೆಯು ಅಗತ್ಯವಾಗಿದೆ. ಅಲ್ಲದೆ ಸುದೀರ್ಘ ಅವಧಿಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

ದೇಹತೂಕದಲ್ಲಿ ಕುಸಿತ
ಶರೀರದಲ್ಲಿಯ ಕೊಬ್ಬು ಮತ್ತು ಶರೀರದ ಉಷ್ಣತೆಯ ನಡುವೆ ನೇರವಾದ ಸಂಬಂಧವಿದೆ. ಶರೀರವು ಉಷ್ಣತೆಯನ್ನು ಕಾಯ್ದುಕೊಳ್ಳಲು ಕೊಬ್ಬನ್ನು ಬಳಸಿಕೊಳ್ಳುತ್ತದೆ. ನಮ್ಮ ಶರೀರದ ದೇಹತೂಕವು ಕಡಿಮೆಯಾಗಿದ್ದರೆ ಹೆಚ್ಚಿನ ಚಳಿ ಅಥವಾ ಹೆಚ್ಚಿನ ನಡುಕದ ಅನುಭವಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಚಳಿಗಾಲಕ್ಕೆ ಸೂಕ್ತವಾದ ಆಹಾರವನ್ನು ಸೇವಿಸಬೇಕಾಗುತ್ತದೆ. ಅಲ್ಲದೆ ಚಳಿಗಾಲದಲ್ಲಿ ಆಹಾರಕ್ಕೆ ಸ್ವಲ್ಪ ಹೆಚ್ಚು ಮಸಾಲೆಯಯನ್ನು ಸೇರಿಸುವುದರಿಂದ ಚಳಿಯ ವಿರುದ್ಧ ಶರೀರದ ನಿರೋಧಕ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಅಲ್ಲದೆ ತೂಕ ನಷ್ಟವು ಕಡಿಮೆ ಕ್ಯಾಲರಿಗಳ ಸೇವನೆಗೆ ಸಂಬಂಧಿಸಿದ್ದರೆ ಅದು ನಿಧಾನ ಚಯಾಪಚಯಕ್ಕೆ ಕಾರಣವಾಗಬಹುದು. ನೀವು ದೇಹತೂಕವನ್ನು ಇಳಿಸಿಕೊಳ್ಳಲು ಅಗತ್ಯ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರೆ ಚಳಿಗಾಲದಲ್ಲಿ ಕ್ಯಾಲರಿ ಸೇವನೆಯನ್ನು ಕ್ರಮೇಣ ಕಡಿಮೆಗೊಳಿಸಿ.

ರೇನಾಡ್ಸ್ ಕಾಯಿಲೆ
ರೇನಾಡ್ಸ್ ಡಿಸೀಸ್ ಅಪರೂಪದ ರಕ್ತನಾಳ ಕಾಯಿಲೆಯಾಗಿದ್ದು,ಇದು ತಾಪಮಾನ ಕುಸಿದಾಗ ರಕ್ತನಾಳಗಳು ಸಂಕುಚಿತಗೊಳ್ಳಲು ಕಾರಣವಾಗುತ್ತದೆ ಮತ್ತು ಎಂದಿಗಿಂತ ಹೆಚ್ಚಿನ ಚಳಿಯನ್ನುಂಟು ಮಾಡುತ್ತದೆ. ನಿರ್ದಿಷ್ಟ ಭಾಗದಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೇ ವ್ಯಕ್ತಿಯ ಪಾದಗಳು ಮತ್ತು ತೋಳುಗಳು ನೀಲಿ ಬಣ್ಣಕ್ಕೆ ತಿರುಗಬಹುದು ಅಥವಾ ಮರಗಟ್ಟಬಹುದು. ಹವಾಮಾನ ಮಾತ್ರವಲ್ಲ,ಒತ್ತಡವೂ ಈ ಸ್ಥಿತಿಗೆ ಕಾರಣವಾಗಬಲ್ಲದು. ಬೆಚ್ಚಗಿನ ಉಡುಪು,ರೂಮ್ ಹೀಟರ್‌ನ ಬಳಕೆಯಂತಹ ಜೀವನಶೈಲಿ ಬದಲಾವಣೆಗಳು ಈ ಸಮಸ್ಯೆಗೆ ಚಿಕಿತ್ಸೆ ನೀಡುತ್ತವೆ.

Comments are closed.