ಕರಾವಳಿ

ಮಂಡಿ ನೋವಿಗೆ ಆಯುರ್ವೇದ ಚಿಕಿತ್ಸೆ ಕೊಡುವುದಾಗಿ ನಂಬಿಸಿ ಲಕ್ಷಲಕ್ಷ ಮೋಸ!

Pinterest LinkedIn Tumblr

ಕುಂದಾಪುರ: ಮಂಡಿ ನೋವಿಗೆ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ನಾಲ್ಕೂವರೆ ಲಕ್ಷ ಪಡೆದು ಮೋಸ ಮಾಡಿದ ಘಟನೆ ಕುಂದಾಪುರದಲ್ಲಿ ನಡೆದಿದ್ದು ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿತರಾದ ಬಾಲಾಜಿ, ಸೀತಾರಾಮ, ವಿಕಾಸ್ ಮತ್ತು ಅನಿಲ್ ಪವಾರ್ ಎಂಬವರು ಮಂಡಿ ನೋವಿನ ಎಣ್ಣೆಯನ್ನು ಕೊಡುವುದಾಗಿ ನಂಬಿಸಿ ನಂಬಿಕೆ ದ್ರೋಹ ಮತ್ತು ಮೋಸ ಮಾಡಿದ್ದಾರೆಂದು ಕುಂದಾಪುರದ ದೀಪಾ ಎಂ ಶೆಣೈ ಅವರು ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ವಿವರ: ಮೋಸಕ್ಕೊಳಗಾದ ಮಹಿಳೆಯ ಪತಿ ಮೋಹನ್ ಯು ಶೆಣೈಯವರಿಗೆ ವಿಪರೀತ ಮಂಡಿ ನೋವು ಇದ್ದು, ಡಿ.31ರಂದು ಮದ್ಯಾಹ್ನ ಮಂಡಿ ನೋವಿಗೆ ಔಷಧಿ ಕೊಡುವುದಾಗಿ ತಿಳಿಸಿದ ಬಾಲಾಜಿ ಎಂಬ ಹುಡುಗನನ್ನು ಕುಂದಾಪುರ ಕಸಬಾ ಗ್ರಾಮದ ಈಸ್ಟ್ ಬ್ಲಾಕ್ ರಸ್ತೆಯಲ್ಲಿರುವ ಮಹಿಳೆಯ ಮನೆಗೆ ಕರೆದುಕೊಂಡು ಬಂದಿದ್ದು, ಆತ ದೀಪಾ ಎಂ ಶೆಣೈ ಮತ್ತು ಅವರ ಗಂಡನನ್ನು ನಂಬಿಸಿ ಮಂಡಿ ನೋವಿಗೆ ಔಷಧಿ ಕೊಡುವುದಾಗಿ ತಿಳಿಸಿ ತನ್ನ ಅಣ್ಣನೆಂದು ಹೇಳಿದ ಸೀತಾರಾಮ ಎಂಬ ವ್ಯಕ್ತಿಗೆ ದೀಪಾ ಅವರ ದೂರವಾಣಿ ನಂಬ್ರವನ್ನು ಕೊಟ್ಟಿದ್ದು, ಜ.2 ರಂದು ಸೀತಾರಾಮನು ದೀಪಾ ಅವರ ಮನೆಗೆ ಬಂದು ಮಂಡಿ ನೋವಿಗೆ ಔಷಧಿ ಕೊಡುವುದಾಗಿ ತಿಳಿಸಿ ಬಳಿಕ ಅವರನ್ನು ಮತ್ತು ಅವರ ಗಂಡನನ್ನು ಮನೆ ಸಮೀಪದಲ್ಲಿರುವ ಅಥರ್ವ ಆಯುರ್ವೇದ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಅಲ್ಲಿದ್ದ ವಿಕಾಸ್ ಮತ್ತು ಸೀತಾರಾಮ ಇವರು ಸೇರಿ ಮಂಡಿ ನೋವಿನ ಎಣ್ಣೆಯನ್ನು ಕೊಟ್ಟು ಮಂಡಿ ನೋವನ್ನು ಸಂಪೂರ್ಣ ಗುಣ ಮಾಡುವುದಾಗಿ ನಂಬಿಸಿ ದೂರುದಾರರಿಂದ 9 ಸಾವಿರ ನಗದು ಹಣ ಮತ್ತು ರೂಪಾಯಿ 4,54,000 ಮೊತ್ತದ ಚೆಕನ್ನು ಪಡೆದುಕೊಂಡಿದ್ದು, ಚೆಕ್‌ನ ಹಣವು ಅನಿಲ್ ಪವಾರ್ ಎಂಬವರ ಹೆಸರಿನ ಅಕೌಂಟಿಗೆ ಜಮಾ ಆಗಿದೆ. ಬಳಿಕ ಅಥರ್ವ ಆಯುರ್ವೇದ ಕ್ಲಿನಿಕ್‌ ಬಂದ್ ಆಗಿದ್ದು, ತಾವು ಮೋಸ ಹೋಗಿರುವುದು ತಿಳಿದಿದೆ.

ಈ ಬಗ್ಗೆ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.