ಆರೋಗ್ಯ

ಹುಬ್ಬುಗಳ ಸುತ್ತ ನೋವಿನ ಸೆಳೆತಕ್ಕೆ ಮುಖ್ಯ ಕಾರಣಗಳು..!

Pinterest LinkedIn Tumblr

ಇದು ಸಾಮಾನ್ಯವಾಗಿ ಕಡೆಗಣಿಸಬಹುದಾದ ನೋವಲ್ಲ. ಇದು ಇತರ ಅನಾರೋಗ್ಯ ಸಮಸ್ಯೆಯನ್ನು ಸೂಚಿಸಬಹುದು. ಹಲವಾರು ಕಾರಣಗಳಿಂದ ಹುಬ್ಬುಗಳ ಕೆಳಗೆ ನೋವಾಗುತ್ತದೆ ಮತ್ತು ಕೆಲವೊಮ್ಮೆ ಈ ನೋವು ಅಸಹನೀಯವೂ ಆಗಿರುತ್ತದೆ. ನಾವು ಹೆಚ್ಚಾಗಿ ಈ ನೋವಿಗೆ ಯಾವುದೇ ಚಿಕಿತ್ಸೆ ಪಡೆಯದೆ ಕಡೆಗಣಿಸುತ್ತೇವೆ. ಕ್ಲಸ್ಟರ್ ತಲೆನೋವು ಅಥವಾ ತಲೆಯ ಒಂದು ಭಾಗದಲ್ಲಿ ನೋವು ಹುಬ್ಬುಗಳ ಸುತ್ತ ನೋವಿಗೆ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ದಿನಕ್ಕೆ ಹಲವಾರು ಬಾರಿ ಬಾಧಿಸುವ ತೀವ್ರವಾದ ತಲೆನೋವು ಹುಬ್ಬುನೋವಿನ ವೈಶಿಷ್ಟವಾಗಿದೆ. ಈ ನೋವು ವಾರಗಳ ಅಥವಾ ತಿಂಗಳುಗಳ ಕಾಲ ಪದೇ ಪದೇ ಕಾಡುತ್ತಿರಬಹುದು. ಹುಬ್ಬುನೋವಿಗೆ ಕೆಲವು ಕಾರಣಗಳು ಇಲ್ಲಿವೆ.

ಕ್ಲಸ್ಟರ್ ತಲೆನೋವು
ಕ್ಲಸ್ಟರ್ ತಲೆನೋವು ಅಥವಾ ಭಾಗಶಃ ತಲೆನೋವು ಮಹಿಳೆಯರಿಗಿಂತ ಪುರುಷರನ್ನು ಹೆಚ್ಚಾಗಿ ಕಾಡುತ್ತದೆ. ಕ್ಲಸ್ಟರ್ ತಲೆನೋವಿಗೆ ಹಲವಾರು ಕಾರಣಗಳಿರಬಹುದು. ಹಿಸ್ಟಾಮೈನ್ ಮತ್ತು ಸೆರೊಟೋನಿನ್‌ನ ಅಸಮರ್ಪಕ ನಿಯಂತ್ರಣವೂ ಇಂತಹ ತಲೆನೋವಿಗೆ ಕಾರಣವಾಗುತ್ತದೆ. ಮದ್ಯಪಾನ,ಪ್ರಖರ ಬೆಳಕು,ಶ್ರಮದ ಕೆಲಸ,ಉಷ್ಣತೆ,ಸಿಗರೇಟ್ ಸೇವನೆ ಮತ್ತು ಔಷಧಿಗಳ ಅಡ್ಡ ಪರಿಣಾಮ ಇವು ಕ್ಲಸ್ಟರ್ ತಲೆನೋವಿಗೆ ಪ್ರಮುಖ ಕಾರಣಗಳೆಂದು ಗುರುತಿಸಲಾಗಿದೆ. ಈ ತಲೆನೋವು ಕ್ರಮೇಣ ತೀವ್ರಗೊಳ್ಳುತ್ತದೆ. ನೋವಿಗೆ ಕಾರಣವನ್ನು ತಿಳಿದುಕೊಂಡರೆ ಸೂಕ್ತ ಚಿಕಿತ್ಸೆಯನ್ನು ನೀಡಲು ನೆರವಾಗುತ್ತದೆ. ಇದರೊಂದಿಗೆ ಪ್ರತಿದಿನ ಸಂಜೆಯ ವೇಳೆ ಕಣ್ಣಿನ ಹುಬ್ಬಗಳಿಗೆ ಮಸಾಜ್ ಮಾಡಿಕೊಳ್ಳಬಹುದು.

ಒತ್ತಡದ ತಲೆನೋವು
ಒತ್ತಡ ಅಥವಾ ಉದ್ವೇಗದ ತಲೆನೋವು ಸಾಮಾನ್ಯವಾಗಿ ಕಣ್ಣುಗಳ ಸುತ್ತ ಕಾಣಿಸಿಕೊಳ್ಳುತ್ತದೆ. ಈ ಬಗೆಯ ತಲೆನೋವಿಗೆ ನಿಖರ ಕಾರಣ ಗೊತ್ತಾಗಿಲ್ಲ. ನಿದ್ರೆಯ ಕೊರತೆ,ಫ್ಲು ಅಥವಾ ಶೀತವುಂಟಾಗುವುದು ಇದಕ್ಕೆ ಸಂಭಾವ್ಯ ಕಾರಣಗಳಾಗಿವೆ. ಇಂತಹ ನೋವು ಉಂಟು ಮಾಡುವ ಒತ್ತಡದಿಂದಾಗಿ ಹಣೆಯು ಕ್ರಮೇಣ ಭಾರವಾಗುತ್ತದೆ,ಬಳಿಕ ಕಣ್ಣುಗುಡ್ಡೆಗಳು ಭಾರವೆನಿಸುತ್ತವೆ ಮತ್ತು ಹುಬ್ಬುಗಳ ಕೆಳಗೆ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಪ್ರಕರಣದಲ್ಲಿ ನೆತ್ತಿಯನ್ನು ಮಸಾಜ್ ಮಾಡಿಕೊಳ್ಳುವುದರಿಂದ ನೋವು ಶಮನಗೊಳ್ಳುತ್ತದೆ.

ಕಣ್ಣಿನ ಸೋಂಕು
ಕಣ್ಣಿನಲ್ಲಿ ಅಥವಾ ಕಣ್ಣಿನ ಸುತ್ತ ಸೋಂಕು ಉಂಟಾಗಿದ್ದರೆ ಅದು ಹುಬ್ಬುಗಳ ನೋವಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಸೈನಸ್‌ನಿಂದಾಗಿ ಯಾವುದೇ ವಿಧದ ಸೋಂಕು ಮುಖದ ಮೂಳೆಗಳಿಗೆ,ಬಾಯಿ ಮತ್ತು ಮೂಗಿಗೆ,ಕಣ್ಣುಗಳ ಸುತ್ತ ಹರಡಬಹುದು ಮತ್ತು ಹುಬ್ಬುಗಳ ಕೆಳಗೆ ತೀವ್ರವಾದ ನೋವಿರಬಹುದು. ಹೀಗಾಗಿ ನಮ್ಮ ಕಣ್ಣುಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ.ಜೊತೆಗೆ ಯಾವುದೇ ಸೋಂಕಿನ ಬಗ್ಗೆ ಎಚ್ಚರಿಕೆಯಿರಬೇಕು. ತಲೆಗೂದಲಿನಲ್ಲಿ ಯಾವುದಾದರೂ ಸೋಂಕು ಉಂಟಾದರೆ ಅದಕ್ಕೆ ತಕ್ಷಣ ಚಿಕಿತ್ಸೆ ಪಡೆಯಬೇಕು,ಇಲ್ಲದಿದ್ದರೆ ಅದು ಹುಬ್ಬುಗಳು ನೋಯಲು ಕಾರಣವಾಗುತ್ತದೆ.

ಗ್ಲಾಕೋಮಾ
ಕಣ್ಣುಗಳಲ್ಲಿಯ ಒತ್ತಡ ಹೆಚ್ಚಾಗಿ ಉಂಟಾಗುವ ಗ್ಲಾಕೋಮಾ ಹುಬ್ಬುಗಳ ಕೆಳಗೆ ನೋವನ್ನುಂಟು ಮಾಡುತ್ತದೆ. ಕಾಲಕ್ರಮೇಣ ಒತ್ತಡ ತೀವ್ರಗೊಂಡು ಆಪ್ಟಿಕ್ ನರವನ್ನು ನಾಶಗೊಳಿಸುತ್ತದೆ ಮತ್ತು ವ್ಯಕ್ತಿಯು ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ. ಗ್ಲಾಕೋಮಾಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.

ಸೆಳೆತಗಳು
ಹುಬ್ಬುಗಳಲ್ಲಿ ಅಥವಾ ಕಣ್ಣುಗುಡ್ಡೆಗಳಲ್ಲಿ ಸೆಳೆತಗಳು ನೋವಿಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಇಂತಹ ಸೆಳೆತಗಳು ಕೆಲವು ದಿನ ಗಳವರೆಗೆ ಕಾಡಿ,ಬಳಿಕ ನಿಲ್ಲುತ್ತವೆ. ನಿದ್ರೆಯ ಕೊರತೆ ಅಥವಾ ಅನಿಯಮಿತ ನಿದ್ರೆ ಹೆಚ್ಚಾಗಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಕಣ್ಣುಗಳ ಸಮೀಪ ರಕ್ತಸಂಚಾರದಲ್ಲಿ ಸಮಸ್ಯೆ ಮತ್ತು ಕಣ್ಣುಗಳ ನರವೈಜ್ಞಾನಿಕ ಸಮಸ್ಯೆಗಳು ಇದಕ್ಕೆ ಕಾರಣವಾಗಿವೆ. ತಲೆಯಿಂದ ಕಣ್ಣುಗಳಿಗೆ ಸಾಗುವ ಟೆಂಪರರಿ ಆರ್ಟರಿಯು ಉರಿಯೂತವನ್ನುಂಟು ಮಾಡುತ್ತದೆ

Comments are closed.