ಆರೋಗ್ಯ

ಆರೋಗ್ಯವಂತ-ಬುದ್ಧಿವಂತ ಮಕ್ಕಳು ನಿಮ್ಮದಾಗಬೇಕಿದ್ದರೆ ಈ ಆಹಾರವನ್ನೇ ಕೊಡಿ….!

Pinterest LinkedIn Tumblr

ಇಂದಿನ ಕಾಂಪಿಟೇಟಿವ್ ವಲ್ರ್ಡ್‍ನಲ್ಲಿ ಮಕ್ಕಳು ಎಷ್ಟು ಬುದ್ಧಿವಂತರಾಗಿದ್ರೂ ಕಡಿಮೇನೆ. ಮಿದುಳಿನ ಆರೋಗ್ಯಕ್ಕೆ ಬೂಸ್ಟ್ ಒದಗಿಸುವ ಆಹಾರಗಳನ್ನು ನೀಡುವ ಮೂಲಕ ಮಕ್ಕಳನ್ನು ಸ್ಮಾರ್ಟರ್, ಶಾರ್ಪರ್ ಆಗಿ ಬೆಳೆಸಲು ಸಾಧ್ಯವಿದೆ.

ಮಕ್ಕಳು ಬುದ್ಧಿವಂತರಾಗಬೇಕು ಎಂಬ ಬಯಕೆ ಹೆತ್ತವರಲ್ಲಿರುವುದು ಸಹಜ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಬುದ್ಧಿವಂತರಾಗಿದ್ದರೆ ಮಾತ್ರ ಭವಿಷ್ಯ ಸುಭದ್ರವಾಗಿರುತ್ತದೆ ಎಂಬ ಭಾವನೆ ಬಲವಾಗಿ ಬೇರೂರಿದೆ.

ಇನ್ನು ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಯ ಬುದ್ಧಿಮತ್ತೆಯನ್ನು ಅಂಕಗಳ ಆಧಾರದಲ್ಲೇ ಅಳೆಯಲಾಗುತ್ತಿದೆ. ಹಾಗಾಗಿ ಮಕ್ಕಳು ಉತ್ತಮ ಸ್ಮರಣಶಕ್ತಿ ಹೊಂದಿದ್ದರಷ್ಟೇ ಉಳಿಗಾಲ ಎಂಬಂತಹ ಪರಿಸ್ಥಿತಿಯಿದೆ. ಮಗುವಿನ ಸ್ಮರಣಶಕ್ತಿ ರೂಪುಗೊಳ್ಳುವಲ್ಲಿ ಅನೇಕ ಅಂಶಗಳು ಪರಿಣಾಮ ಬೀರುತ್ತವೆ. ಅವುಗಳಲ್ಲಿ ಮಗು ಸೇವಿಸುವ ಆಹಾರ ಕೂಡ ಒಂದು. ಕೆಲವೊಂದು ಆಹಾರ ಪದಾರ್ಥಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಜೊತೆಗೆ ನೆನಪಿನಶಕ್ತಿ = ಹೆಚ್ಚಿಸುತ್ತವೆ. ಸುಲಭವಾಗಿ ಕೈಗೆ ಸಿಗುವ, ನಮ್ಮ ಸುತ್ತಮುತ್ತ ಲಿರುವ ಅಂಥ ಕೆಲವು ಆಹಾರಗಳು ಯಾವುವು ಎಂದು ನೋಡೋಣ ಬನ್ನಿ.

ಒಂದೆಲಗ:
ಒಂದೇ ಎಲೆಯನ್ನು ಹೊಂದಿರುವ ಈ ಪುಟ್ಟ ಗಿಡ ಮಲೆನಾಡು, ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಜೌಗು ಪ್ರದೇಶದಲ್ಲಿ ಸೊಂಪಾಗಿ ಬೆಳೆಯುವ ಈ ಸಸ್ಯ ಸ್ಮರಣಶಕ್ತಿ ಹೆಚ್ಚಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತದೆ. ಒಂದೆಲಗದ ನಿಯಮಿತ ಸೇವನೆಯಿಂದ ಏಕಾಗ್ರತೆ ಹೆಚ್ಚುವ ಜೊತೆಗೆ ಕಲಿಕಾ ಸಾಮಥ್ರ್ಯ ಹಾಗೂ ಸ್ಮರಣಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಭಾರತದಲ್ಲಿ ಪುರಾತನ ಕಾಲದಿಂದಲೂ ಇದೆ. ಭಾರತೀಯ ವೈದ್ಯಶಾಸ್ತ್ರದಲ್ಲಿ ಒಂದೆಲಗಕ್ಕೆ ಮಹತ್ವದ ಸ್ಥಾನವಿದೆ ಕೂಡ. ಸೆಂಟ್ರಲ್ ಡ್ರಗ್ ಇನ್ಸ್‍ಟಿಟ್ಯೂಟ್ ವಿಜ್ಞಾನಿಗಳು ಕೂಡ ಒಂದೆಲಗ ಜ್ಞಾಪಕಶಕ್ತಿ ಹೆಚ್ಚಿಸುವ ಗುಣ ಹೊಂದಿರುವುದನ್ನು ದೃಢಪಡಿಸಿದ್ದಾರೆ.

ಒಂದೆಲಗದಲ್ಲಿ ಬೆಕೊಸೈಡ್ ಎ ಹಾಗೂ ಬಿ ಎಂಬ ಕೆಮಿಕಲ್‍ಗಳಿದ್ದು, ಇವು ಮಿದುಳಿನಲ್ಲಿ ಜ್ಞಾಪಕಶಕ್ತಿಗೆ ಸಂಬಂಧಿಸಿದ ಜೀವಕೋಶಗಳ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತವೆ. ಆ ಮೂಲಕ ಮಾಹಿತಿಯನ್ನು ಬೃಹತ್ ಪ್ರಮಾಣದಲ್ಲಿ, ದೀರ್ಘಕಾಲದ ತನಕ ಸಂಗ್ರಹಿಸಿಡಲು ಮಿದುಳಿಗೆ ನೆರವು ನೀಡುತ್ತವೆ. ಆಯುರ್ವೇದ ಶಾಸ್ತ್ರದ ಪ್ರಕಾರ ತೊದಲು ಮಾತನಾಡುವ ಮಕ್ಕಳಿಗೆ 10-15 ದಿನಗಳ ಕಾಲ ನಿರಂತರವಾಗಿ ಒಂದೆಲಗ ಎಲೆಯ ರಸ ಕುಡಿಸಿದರೆ ಅವರು ಸ್ಪಷ್ಟವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ.

ಅಗಸೆಬೀಜ:
ಇದರಲ್ಲಿ ಮೆಗ್ನೆಷಿಯಂ, ಒಮೆಗಾ -3 ಫ್ಯಾಟಿ ಆಸಿಡ್ಸ್ ಹಾಗೂ ವಿಟಮಿನ್ ಬಿ ಯಥೇಚ್ಛವಾಗಿವೆ. ಇವು ಸ್ಮರಣಶಕ್ತಿ ಹೆಚ್ಚಳಕ್ಕೆ ನೆರವು ನೀಡುತ್ತವೆ. ಅಗಸೆಬೀಜವನ್ನು ಧಾನ್ಯಗಳೊಂದಿಗೆ ಮಿಕ್ಸ್ ಮಾಡಿ ಸೇವಿಸುವುದರಿಂದ ದೇಹಕ್ಕೆ ಅದನ್ನು ಸುಲಭವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.

ಕುಂಬಳಕಾಯಿ ಬೀಜ:
ಕುಂಬಳಕಾಯಿಯಿಂದ ವಿವಿಧ ಖಾದ್ಯ ತಯಾರಿಸುವ ನಾವು, ಬಹುತೇಕ ಸಂದರ್ಭಗಳಲ್ಲಿ ಅದರ ಬೀಜವನ್ನು ನಿರ್ಲಕ್ಷಿಸುತ್ತೇವೆ. ಆದರೆ, ಕುಂಬಳಕಾಯಿ ಬೀಜ ಮಿದುಳಿಗೆ ಅತ್ಯುತ್ತಮ ಆಹಾರ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಫ್ರೀ ರೇಡಿಕಲ್ಸ್‍ನಿಂದ ಮಿದುಳಿಗೆ ಹಾನಿಯಾಗದಂತೆ ತಡೆಯುತ್ತದೆ.

ಕುಂಬಳಕಾಯಿ ಬೀಜದಲ್ಲಿ ಐರನ್, ಝಿಂಕ್, ಮೆಗ್ನೆಷಿಯಂ ಹಾಗೂ ಕಾಪರ್ ಹೇರಳವಾಗಿದ್ದು, ಮಿದುಳಿನ ಅನೇಕ ಕಾರ್ಯಗಳನ್ನು ಪ್ರಚೋದಿಸಲು ಕಾರಣವಾಗಿವೆ. ಮೆಗ್ನೆಷಿಯಂ ಸ್ಮರಣಶಕ್ತಿಯನ್ನು ಬೂಸ್ಟ್ ಮಾಡುವ ಜೊತೆಗೆ ಕಲಿಕೆಗೆ ನೆರವು ನೀಡುತ್ತದೆ.

ವಾಲ್‍ನಟ್:
ಮಿದುಳಿನ ಆರೋಗ್ಯಕ್ಕೆ ಒಣಹಣ್ಣುಗಳಲ್ಲೇ ಅತ್ಯಂತ ಯೋಗ್ಯವಾದದ್ದು ವಾಲ್‍ನಟ್. ಇದರಲ್ಲಿ ಡಿಎಚ್‍ಎ ಎಂಬ ಒಮೆಗಾ-3 ಫ್ಯಾಟಿ ಆಸಿಡ್ ದೊಡ್ಡ ಪ್ರಮಾಣದಲ್ಲಿ ಲಭ್ಯವಿದೆ. ಕಾಲು ಕಪ್ ವಾಲ್‍ನಟ್‍ನಲ್ಲಿ ಪ್ರತಿದಿನ ದೇಹಕ್ಕೆ ಅಗತ್ಯವಿರುವ ಶೇ.100 ಡಿಎಚ್‍ಎ ಲಭಿಸುತ್ತದೆ.

ಬಸಲೆ ಸೊಪ್ಪು:
ಈ ಸೊಪ್ಪಿನಲ್ಲಿ ವಿಟಮಿನ್ಸ್, ಮಿನರಲ್ಸ್ ಹಾಗೂ ಆಂಟಿಆಕ್ಸಿಡೆಂಟ್‍ಗಳು ಹೇರಳವಾಗಿವೆ. ಮಿದುಳಿನ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ವಿಟಮಿನ್ ಬಿ, ಐರನ್, ಝಿಂಕ್, ಮೆಗ್ನೆಷಿಯಂ ಹಾಗೂ ಕಾಪರ್ ಬಸಲೆಯಲ್ಲಿವೆ.

ಮೀನು:
ಮೀನು ತಿನ್ನುವವರ ತಲೆ ಚುರುಕು ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತಿನ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಮೀನಿನಲ್ಲಿ ಡಿಎಚ್‍ಎ ಒಮೆಗಾ-3 ಫ್ಯಾಟಿ ಆಸಿಡ್ ಹೇರಳವಾಗಿದ್ದು, ಮಿದುಳಿನ ದಕ್ಷ ಕಾರ್ಯನಿರ್ವಹಣೆಗೆ ಇದು ನೆರವು ನೀಡುತ್ತದೆ. ನಿಯಮಿತವಾಗಿ ಮೀನು ತಿನ್ನುವುದರಿಂದ ಸ್ಮರಣಶಕ್ತಿ ಹೆಚ್ಚುತ್ತದೆ.

ಮೊಟ್ಟೆ:
ಇದೊಂದು ಕಂಪ್ಲೀಟ್ ಫುಡ್. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೋಷಕಾಂಶಗಳು ಮೊಟ್ಟೆಯಲ್ಲಿ ಅಡಗಿವೆ. ವಿಟಮಿನ್ ಬಿ6, ಬಿ12, ಫೋಲೇಟ್ ಹಾಗೂ ಕೊಲೈನ್ ಸೇರಿದಂತೆ ಮಿದುಳಿನ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಇದು ಒಳಗೊಂಡಿದೆ.

ಕಡಲೆ ಕಾಯಿ:
ಇದರಲ್ಲಿರುವ ವಿಟಮಿನ್ಸ್, ಮಿನರಲ್ಸ್ ಆಂಟಿ ಆಕ್ಸಿಡೆಂಟ್ ಹಾಗೂ ಸಸ್ಯಜನ್ಯ ಪ್ರೋಟೀನ್ ಮಿದುಳಿನ ಆರೋಗ್ಯಕ್ಕೆ ಉತ್ತಮವಾಗಿವೆ. ಇವು ಮಿದುಳಿಗೆ ರಕ್ತ ಸಂಚಾರವನ್ನು ಉತ್ತಮಪಡಿಸುತ್ತವೆ. ಜೊತೆಗೆ ಸ್ಮರಣಶಕ್ತಿಯನ್ನು ಕೂಡ ಹೆಚ್ಚಿಸುತ್ತವೆ.

ಬೆಣ್ಣೆಹಣ್ಣು:
ಇದರಲ್ಲಿರುವ ಕೊಬ್ಬಿನಾಂಶವು ಮಿದುಳಿಗೆ ರಕ್ತಸಂಚಾರವನ್ನು ಉತ್ತಮಪಡಿಸುತ್ತದೆ. ಈ ಮೂಲಕ ಮಿದುಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವು ನೀಡುತ್ತದೆ. ಮಿದುಳಿಗೆ ರಕ್ತ ಸಂಚಾರ ಉತ್ತಮಗೊಂಡಾಗ ಅದರ ಕಾರ್ಯನಿರ್ವಹಣೆಯೂ ಹೆಚ್ಚುತ್ತದೆ. ಆಗ ಸಹಜವಾಗಿ ಸ್ಮರಣಶಕ್ತಿ ಹೆಚ್ಚುತ್ತದೆ.

Comments are closed.