ಕುಂದಾಪುರ: ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಬೇಕು ಹೊರತು ಯಾವುದೇ ಕೆಟ್ಟ ಕಾರ್ಯಕ್ಕೆ ಉಪಯೋಗಿಸಿದರೆ ಅಪಾಯ ಖಚಿತ. ಈ ಬಗ್ಗೆ ಯುವಜನಾಂಗ ಎಚ್ಚರಿಕೆಯಿಂದ ಇರಬೇಕು ಎಂದು ಫಾರ್ಚೂನ್ ಗ್ರೂಫ್ಸ್ ಆಫ್ ಹೋಟೆಲ್ ಆಡಳಿತ ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ವಕ್ವಾಡಿ ಫ್ರೆಂಡ್ಸ್ ಯುವಕ ಮಂಡಲ (ರಿ.) ವಕ್ವಾಡಿ ಆಶ್ರಯದಲ್ಲಿ ಫಾರ್ಚೂನ್ ಗ್ರೂಫ್ಸ್ ಆಫ್ ಹೋಟೇಲ್ ದುಬೈ ಮತ್ತು ಪ್ರಸಾದ್ ನೇತ್ರಾಲಯ ಉಡುಪಿಯವರ ಸಹಕಾರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ವರ್ಲ್ಡ್ ಕುಂದಾಪುರಿಯನ್ ಫೇಸ್ ಬುಕ್ ಪೇಜ್ ಸಹಯೋಗದಲ್ಲಿ ಬುಧವಾರದಂದು ವಕ್ವಾಡಿಯ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಊರಿನ ಜನರು ಸ್ಪಂದಿಸಿದರೆ ಅಲ್ಲಿನ ಅಭಿವೃದ್ಧಿಗೆ ನಮ್ಮಿಂದಲೂ ಸ್ಪಂದನೆ ಸಾಧ್ಯ. ಕಣ್ಣು ದೇಹದ ಮುಖ್ಯ ಅಂಗವಾಗಿದ್ದು ವಕ್ವಾಡಿಯಂತಹ ಕುಗ್ರಾಮದಲ್ಲಿ ಜನರ ಅನುಕೂಲಕ್ಕಾಗಿ ಈ ತಪಾಸಣೆ ಶಿಬಿರ ನಡೆಸಲಾಗುತ್ತಿದೆ. ಉಚಿತ ತಪಾಸಣೆ, ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಅಗತ್ಯ ಬಿದ್ದಲ್ಲಿ ಕನ್ನಡಕವನ್ನು ಉಚಿತವಾಗಿ ನೀಡುವ ಬಗ್ಗೆ ಪ್ರಸಾದ್ ನೇತ್ರಾಲಯದ ಡಾ. ಕೃಷ್ಣಪ್ರಸಾದ್ ಅವರು ಹೇಳಿದ್ದು ಇದಕ್ಕೆ ತಾನೂ ಕೂಡ ಸಹಕಾರ ನೀಡುವುದಾಗಿಯೂ ತಿಳಿಸಿದರು.
ಜಿ.ಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಮಾತನಾಡಿ, ಊರಿನ ಯಾವುದೇ ಸಮಸ್ಯೆಗಳಿಗೆ ಸ್ಪಂಧಿಸುವ ಯುವಕ ಮಂಡಲ ಹಾಗೂ ಸಂಘ ಸಂಸ್ಥೆಗಳಿದ್ದರೆ ಅದು ಆ ಗ್ರಾಮದ ದೊಡ್ಡ ಆಸ್ತಿ. ಯುವ ಸಮುದಾಯವು ಯುವ ಸಂಪತ್ತಾಗಿದ್ದು ಅವರು ಜವಬ್ದಾರಿಯನ್ನು ಸಮರ್ಥವಾಗಿ ನಿಬಾಯಿಸುತ್ತಾರೆ. ಯುವಶಕ್ತಿ ಒಗ್ಗೂಡಿದರೆ ದೇಶದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ. ಜನರ ಸಂಕಷ್ಟಕ್ಕೆ ತುಡಿಯುವ ವಕ್ವಾಡಿ ಫ್ರೆಂಡ್ಸ್ ಅಂತಹ ಯುವಕ ಮಂಡಲ ಈ ನಿಟ್ಟಿನಲ್ಲಿ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಉಡುಪಿ ಪ್ರಸಾದ್ ನೇತ್ರಾಲಯದ ಚೇರ್ಮೆನ್ ಡಾ. ಕೃಷ್ಣಪ್ರಸಾದ್ ಕೆ. ಮಾತನಾಡಿ, ತಾಲೂಕಿನ ಅತೀ ಚಿಕ್ಕ ಗ್ರಾಮವಾದ ವಕ್ವಾಡಿಯನ್ನು ದೇಶಾದ್ಯಂತ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು ವಕ್ವಾಡಿ ಪ್ರವೀಣ್ ಶೆಟ್ಟಿಯಂತಹ ದಾನಿಗಳು. ಇನ್ನೊಬ್ಬರಿಗೆ ನೀಡಿದ ಕೊಡುಗೆಯನ್ನು ಮರಳಿ ಪಡೆಯುವ ಆಸೆಯಿಲ್ಲದೇ ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಊರಿನ ಹಿತಕ್ಕಾಗಿ ದುಡಿಯುವ ಮನಸ್ಸು ಬೆಳೆಸಿಕೊಳ್ಳಬೇಕು. ಎಲ್ಲಾ ಶಾಲೆ ಮಕ್ಕಳು ಶಾಲೆಗೆ ದಾಖಲಾಗುವ ಮೊದಲೇ ಕಣ್ಣಿನ ಪರೀಕ್ಷೆ ನಡೆಸಬೇಕೆಂಬ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಂಡಿದೆ. ಕಣ್ಣಿನ ರಕ್ಷಣೆಗೆ ಜನರು ತುಂಬಾ ಆಧ್ಯತೆ ನೀಡಬೇಕು. ಇಂತಹ ಗ್ರಾಮಾಂತರ ಪ್ರದೇಶದಲ್ಲಿ ಶಿಬಿರ ನಡೆಸುವುದರಿಂದ ಅದೆಷ್ಟೋ ಮಂದಿ ಬಡವರಿಗೆ ಅನುಕೂಲವಾಗುತ್ತದೆ ಎಂದರು.
ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಳಾವರ ಗ್ರಾ.ಪಂ ಅಧ್ಯಕ್ಷ ಸುಖಾನಂದ ಹೆಗ್ಡೆ, ಪ್ರಸಾದ್ ನೇತ್ರಾಲಯದ ವೈದ್ಯ ಡಾ. ಧನಂಜಯ್, ವಕ್ವಾಡಿ ಸರಕಾರಿ ಫ್ರೌಢಶಾಲೆಯ ಮುಖ್ಯೋಪಧ್ಯಾಯಿನಿ ಭಾರತಿ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಭೇಟಿ ನೀಡಿದರು.
ಸುನೀಲ್ ಶೆಟ್ಟಿ ಪ್ರಾರ್ಥಿಸಿದರು. ವಕ್ವಾಡಿ ಫ್ರೆಂಡ್ಸ್ ಯುವಕಮಂಡಲದ ಅಧ್ಯಕ್ಷ ಗಿರೀಶ್ ಆಚಾರ್ ಸ್ವಾಗತಿಸಿದರು. ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.