ಆರೋಗ್ಯ

ನಮ್ಮೆಲ್ಲರ ಜ್ಞಾಪಕ ಶಕ್ತಿ ಹೆಚ್ಚಿಸುವ ತ್ರಿಸೂತ್ರಗಳು

Pinterest LinkedIn Tumblr

ಕಲಿಕೆಯು 20% ಕೇಳುವುದರ ಮೂಲಕ, 30% ನೋಡುವುದರ ಮೂಲಕ, 50% ನೋಡುವ ಮತ್ತು ಕೇಳುವುದರ ಮೂಲಕ, 90% ನೋಡಿದ ಮತ್ತು ಕೇಳಿದ ವಿಷಯಗಳನ್ನು ಸ್ವತಹ ಮಾಡುವುದರ ಮೂಲಕ ಮತ್ತು 10% ಸಂವಾದ ನಡೆಸುವುದರ ಮೂಲಕ ನಮ್ಮ ಮೆದುಳು ಗ್ರಹಿಸುತ್ತದೆ ಮತ್ತು ಸಂಗ್ರಹಿಸಿಡುತ್ತದೆ. ನಮ್ಮ ಮೆದುಳು ಜಗದ ಅಚ್ಚರಿಗಳಲ್ಲೊಂದು ಕೇವಲ ಒಂದು ಹಿಡಿಗಿಂತ ಸ್ವಲ್ಪವೇ ದೊಡ್ಡದಿದ್ದರೂ ಅದು ಸುಮಾರು 10ಬಿಲಿಯನ್ನಷ್ಟು ನರಕೋಶಗಳನ್ನು ತುಂಬಿಕೊಂಡಿದೆ ಪ್ರತಿ ನರಕೋಶಗಳು 25ಸಾವಿರದಷ್ಟು ಕೊಂಡಿಗಳನ್ನು(ತಂತುಗಳನ್ನು) ಮಾಡುವ ಸಾಮಥ್ರ್ಯ ಹೊಂದಿದೆ ಇವುಗಳ ಮುಖಾಂತರ ಮೆದುಳು ಊಹಿಸಲಾರದಷ್ಟು ವಿದ್ಯುತ್ ಸಂದೇಶಗಳನ್ನು ದೇಹದ ಇತರೆ ಭಾಗಗಳಿಗೆ ರವಾನಿಸುತ್ತದೆ. ಈ ಮೆದುಳಿನ ಕೆಲಸ ಮಾಹಿತಿಯನ್ನು ಸಂಗ್ರಹಿಸಿಡುವುದು, ಬೇಕಾದಾಗ ಅದನ್ನು ಉಪಯೋಗಿಸುವುದು(ನೆನಪಿನಕ್ರಿಯೆ), ಬೇಡದ್ದನ್ನು-ಬೆಕಾದ್ದನ್ನು ತೆಗೆದುಹಾಕುವುದು(ಮರೆಯುವಿಕೆ). ಸಂಗ್ರಹಿಸಿದ ವಿಷಯಗಳ ನೆನಪಿನ ಕ್ರಿಯೆಯಲ್ಲಿ ಧೀರ್ಘಕಾಲಿಕ ನೆನಪು (long term memory), ಅಲ್ಪಕಾಲಿಕ ನೆನಪು (Short term memory), ಪ್ರಜ್ಞಾಪೂರ್ವಕ ನೆನಪು (Declarative memory), ಅಪ್ರಜ್ಞಾಪೂರ್ವಕ ನೆನಪುಗಳೆಂದು (Non-declarative memory) ವಿಜ್ಞಾನಿಗಳು ವಿಭಾಗಿಸಿದ್ದಾರೆ.

ಮೆದುಳಿನ ಬೆಳವಣಿಗೆ ಮಕ್ಕಳಲ್ಲಿ ವೇಗವಾಗಿರುತ್ತದೆ ಮಗುವಿಗೆ 2ವರ್ಷ ತುಂಬುವುದರೊಳಗೆ ವಯಸ್ಕರ ಮೆದುಳಿನ ತೂಕದ ಶೇಕಡ 75ರಷ್ಟು ತಲುಪುಬಿಡುತ್ತದೆ ಮತ್ತು ನೆನಪಿನ ಪ್ರಕ್ರಿಯೆಗೆ ಸಂಬಂಧಿಸಿದ ನರತಂತುಗಳು ರೂಪುಗಳ್ಳಲಾರಂಬಿಸುತ್ತವೆ. ಮಕ್ಕಳಿಗೆ 12ವರ್ಷಗಳಾಗುವ ವೇಳೆಗೆ ನೆನಪಿಡುವ, ಮರೆಯುವ, ಮನನಮಾಡಿಕೊಳ್ಳುವ ಕ್ರಮಗಳನ್ನು ತಮ್ಮದೇ ಆದ ಶೈಲಿಯಲ್ಲಿ ರೂಢಿಸಿಕೊಳ್ಳಲು ಪ್ರಾರಂಬಿಸುತ್ತಾರೆ ಈ ಕ್ರಿಯೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಹಾಗಾಗಿಯೇ ಒಬ್ಬ ವ್ಯಕ್ತಿಯ ನೆನಪಿನ ಸಾಮಥ್ರ್ಯ ಶಿಕ್ಷಕರು ಮತ್ತು ಪೋಷಕರು ಕೈಗೊಳ್ಳುವ ಕ್ರಮಗಳ ಮೇಲೆ ಅವಲಂಬಿತವಾಗಿರುತ್ತದೆ. ಜ್ಞಾಪಕ ಶಕ್ತಿ ಅನ್ನುವುದು ಪರಿಸರ ಸಂಬಂಧಿತ ಚಟುವಟಿಕೆಗಳ ಭಾಗವಾಗಿಯೇ ಬರುವುದು ಅನುವಂಶೀಯತೆ ಮತ್ತು ಅಭಿಜಾತ ಕುಲದ ಆಸ್ತಿಯಾಗಿ ಪೀಳಿಗೆಯಾಂತರವಾಗಿ ಬರುವ ಪ್ರಮಾಣ ನಗಣ್ಯ ಅದು ಕೇವಲ 5ಶೇಕಡಕ್ಕಿಂತಲೂ ಕಡಿಮೆ.

ಕಲಿಕೆ ಗ್ರಹಿಕೆಯ ಮೂಲಕ ಮತ್ತು ಅದನ್ನು ತಿದ್ದುಮೂಲಕವೇ ಸ್ವಯಾರ್ಜಿತಗೊಳ್ಳುವುದು ಹಾಗಾಗಿ ಶಾಲಾಕಲಿಕೆ ವೈಜ್ಞಾನಿಕ ಮಾದರಿಯಲ್ಲಿರಬೇಕು. ಈ ಹಿನ್ನಲೆಯಲ್ಲೇ ಶಿಕ್ಷಣ ತಜ್ಞರು ವಯೋಮಾನಕ್ಕನುಗುಣವಾಗಿ ಮತ್ತು ಆ ವಯೋಮಾನದ ಗ್ರಹಣ ಸಾಮಥ್ರ್ಯಕ್ಕನುಗುಣವಾಗಿ ಪಠ್ಯಗಳನ್ನು ಪೋಣಿಸಿರುತ್ತಾರೆ ಮತ್ತು ಶಿಕ್ಷಕರು ಲೆಸನ್ ಪ್ಲಾನ್ ಮಾಡಿಕೊಂಡಿರುತ್ತಾರೆ. ಬೋಧನಾ ವಿಧಾನವನ್ನೂ ಗ್ರಹಿಕೆಯ ಹಿನ್ನಲೆಯಲ್ಲೇ ರೂಢಿಸಿಕೊಂಡಿರಬೇಕು ರೂಢಿಸಿಕೊಂಡಿರುತ್ತಾರೆ ಕೂಡ. ಉದಾಹರಣೆಗೆ 40 ರಿಂದ 60 ನಿಮಿಷಗಳ ಪಾಠದ ಅವಧಿಯಲ್ಲಿ ಮೊದಲ 10% ಮೋಟಿವೇಷನ್ (ಪ್ರೇರೇಪಣೆ) ಇದು ಕಲಿಕೆಯಲ್ಲಿ ವಿದ್ಯಾರ್ಥಿಯನ್ನು ಮಗ್ನನ್ನಾಗಿಸುತ್ತದೆ, ಗುರು-ಶಿಷ್ಯರ ನಡುವೆ ಬಂಧನವನ್ನೇರ್ಪಡಿಸುತ್ತದೆ ಕಲಿಕಾ ಪ್ರಕ್ರಿಯೆಯಲ್ಲಿ ಇದೊಂದು ಮಹತ್ತರ ಹೆಜ್ಜೆ ಈ ಹಾದಿ ಜ್ಞಾಪಕಶಕ್ತಿಯ ಬಲವರ್ಧನೆಗೆ ಟಾನಿಕ್ಕಿನಂತೆ ಕಾರ್ಯನಿರ್ವಹಿಸುತ್ತದೆ ನಂತರದ 60% ಪಠ್ಯ ಪ್ರಸ್ತಾಪನೆ(ಪ್ರೆಸಂಟೇಶನ್) ಇದು ಹೃದಯ ಸಂವೇದಿಯಾಗಿರಬೇಕು, ಕಲಾತ್ಮಕ ಮತ್ತು ವಸ್ತುನಿಷ್ಠ ಪ್ರಸ್ತಾಪ ಜ್ಞಾಪಕ ಶಕ್ತಿಯನ್ನು ಇನ್ನಷ್ಟು ಉದ್ದೀಪಿಸುತ್ತದೆ ಮೂರನೇ ಹಂತದ 20% ಅನ್ವಯಿಕತೆ(ಅಪ್ಲಿಕೇಶನ್) ಮಕ್ಕಳಲ್ಲಿ ಮರುಪ್ರಶ್ನೆಗಳನ್ನು ಎಬ್ಬಿಸುವ ಮೂಲಕ ಅಥವ ಸಂವಾದಿಸುವ ಮೂಲಕ ಪ್ರಸ್ತಾಪಿಸಿದ ವಿಷಯಗಳನ್ನು ಮಕ್ಕಳಲ್ಲೇ ಗುನುಗಿಸುವ ಪ್ರಕ್ರಿಯೆ ಕೊನೆಯ 10% ಪರೀಕ್ಷೆ ಮತ್ತು ಪೂರಕ ಮಾಹಿತಿ ನೀಡುವುದು ಮಕ್ಕಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನೆನಪಿನ ಶಕ್ತಿ ಬೆಳೆಸಲು ಕಾರಣವಾಗುತ್ತದೆ.

ಇನ್ನು ಮಕ್ಕಳು ಶಾಲೆಯಲ್ಲಿ ಪಾಠ ಆಲಿಸುವ ಕ್ರಮವೂ ಕೂಡ ನೆನಪಿನ ಶಕ್ತಿಯ ವೃದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ ಸಹಜವಾಗಿ ಪಾಠದ ಅವಧಿಯಲ್ಲಿ ಪ್ರತಿ ಹತ್ತು ನಿಮಷಕ್ಕೊಂದು ನಿಮಿಷ ವಿರಾಮ ನೀಡುತ್ತಾರೆ ಏಕೆ ಗೊತ್ತೆ? ಪಠ್ಯ ಪ್ರಸ್ತಾವನೆ ಬಹಳ ಮುಖ್ಯ ಘಟ್ಟ ಆ ಸಂದರ್ಬದಲ್ಲಿ ಮಕ್ಕಳ ಮೆದುಳು ಹೆಚ್ಚು ಕೇಂದ್ರಿಕೃತವಾಗಿರಬೇಕು. ಮೆದುಳಿನ ನಿಷ್ಠಾವಂತ ಸೇವಕರು ಕಣ್ಣು ಮತ್ತು ಕಿವಿ ಇವೆರೆಡೂ ಆ ಸಂದರ್ಬದಲ್ಲಿ ಹೆಚ್ಚು ಕೇಂದ್ರಿಕರಿಸಿರಬೇಕು ಕಣ್ಣು ಮತ್ತು ಕಿವಿ ಕೇಳುವ ಮತ್ತು ನೋಡುವ ಪ್ರಕ್ರಿಯೆಯಲ್ಲಿ ಪ್ರಸ್ತಾಪಿತ ಅಂಶವನ್ನು ಸಮಗ್ರವಾಗಿ ಗ್ರಹಿಸಿ ಮೆದುಳಿಗೆ ರವಾನಿಸುತ್ತದೆ ಇದನ್ನು ಇನ್‍ಪುಟ್ ಪ್ರೋಸೆಸ್(ಮಾಹಿತಿ ಗ್ರಹಿಕೆ) ಎನ್ನುತ್ತಾರೆ ಕಣ್ಣು ಕಿವಿ ಈ ಚಟುವಟಿಕೆಯನ್ನು ಮಾಡುತ್ತದೆ ಮೆದುಳಿನ ಮಹಾಮಸ್ತಿಷ್ಕ(Cerebral cortex) ಇವೆರಡೂ ಮಾಡಿದ ಗ್ರಹಿಕೆಯನ್ನು ಒಂದುಗೂಡಿಸುವ ಕ್ರಿಯೆ ನಡೆಸುತ್ತದೆ ಇದಕ್ಕೆ ಇನ್ಟೆಗ್ರೇಷನ್ ಪ್ರೋಸೆಸ್ ಎನ್ನುತ್ತಾರೆ. ಈ ಸಂದರ್ಬದಲ್ಲಿ ಮೆದುಳು ಜಾಗೃತಗೊಂಡಿರಬೇಕು. ಕಣ್ಣು ಮತ್ತು ಕಿವಿಯ ಏಕಾಗ್ರತೆ ಮತ್ತು ಸಾಂದರ್ಬಿಕ ಚಲನೆ ಮೆದುಳನ್ನು ಜಾಗೃತಸ್ಥಿತಿಯಲ್ಲಿಡುತ್ತದೆ. ಸುಮಾರು 8ರಿಂದ9 ನಿಮಿಷಗಳವರೆಗ ಮೆದುಳು ಸತತವಾಗಿ ಈ ಚಟುವಟಿಕೆ ನಡೆಸಬಲ್ಲದು ಎರಡನೆ ಹಂತದ ಚಟುವಟಿಕೆ ನಡೆಸಲು ಮೆದುಳಿಗೆ ಕನಿಷ್ಠ 1ನಿಮಿಷದ ವಿರಾಮ ಅಗತ್ಯವಾಗಿ ಬೇಕು.

ಮೆದುಳಿನ ಶತ್ರುಗಳು ನಿದ್ರೆ, ನಿದ್ರೆಯ ಸ್ನೇಹಿತರು ಆಸರೆಗೊಂಡ ಬೆನ್ನುಹುರಿ ಮತ್ತು ಕತ್ತಿನ ನರಗಳು ಹಾಗಾಗಿ ಮುಖ್ಯ ಪಾಠ ಮಾಡುವಾಗ ಬೆನ್ನು ಲಂಬವಾಗಿ ನೆಟ್ಟಗಿರಬೇಕು ಹಿಂಬದಿಗೆ ಒರಗಿ ಬೆನ್ನಿಗೆ ಆಸರೆ ಕೊಡಬಾರದು ಮತ್ತು ಗದ್ದಕ್ಕೆ ಕೈಕೊಟ್ಟು ಡೆಸ್ಕಿಗೆ ಕೈಊರಬಾರದು ಇದು ಮೆದುಳು ಮತ್ತು ಕಣ್ಣಿನ ಸಂಬಂಧ ಕಡಿದುಹಾಕಿ ಮೆದುಳನ್ನು ನಿದ್ರಾದೇವಿಯ ವಶಕ್ಕೆ ನೀಡುತ್ತದೆ, ಮೆದುಳು ನಿದ್ರೆಯ ವಶವಾದಾಗ ಗ್ರಹಿಕೆ ಎಲ್ಲಿಂದ? ಗ್ರಹಿಕೆಯೆ ಇಲ್ಲದ ಮೇಲೆ ಜ್ಞಾಪಕ ಶಕ್ತಿ ಎಲ್ಲಿಂದ?

ಮಧ್ಯಾಹ್ನ ಊಟವಾದ ನಂತರ ಪಾಠ ಮಾಡುವುದು ಒಂದು ಸವಾಲೆ ಹಾಗೆ ಮಕ್ಕಳಿಗೂ ಕೂಡ ನಿದ್ರೆ ತಡೆಹಿಡಿದು ಪಾಠಕೇಳುವುದೂ ಕೂಡ ಮಹಾಸಾಹಸವೇ. ಊಟದ ನಂತರದ ಮಧ್ಯಾಹ್ನದ ಪಾಠ ಗಂಭೀರವಾಗಿರದೆ ಪ್ರಾಯೋಗಿಕ ಅಥವಾ ಸಂವಾದ ಶೈಲಿಯಲ್ಲಿದ್ದರೆ ಉತ್ತಮ. ಪಾಠ ಮಾಡುವ ಶಿಕ್ಷಕರ ದೇಹಭಾಷೆ(Body language) ಹೆಚ್ಚು ಕ್ರಿಯಾಶೀಲವಾಗಿದ್ದು ಕಲಾತ್ಮಕವಾಗಿದ್ದರೆ ನಿದ್ರೆ ಸುಳಿಯದು. ಹಾಗಾಗಿ ಶಿಕ್ಷಣದಲ್ಲಿ ಕಲೆ ಎನ್ನುವುದು ಬೇಸರ ತರಿಸದ ಬೋಧನೆಯ ವಿಧಾನ ಇದು ಜ್ಞಾಪಕ ಶಕ್ತಿ ಹೆಚ್ಚಿಸದೆ?

ಮನಶಾಸ್ತ್ರಜ್ಞರು/ಶಿಕ್ಷಣತಜ್ಞರ ಅಭಿಪ್ರಾಯದಂತೆ ಪ್ರತಿ 1ಗಂಟೆಯ ಪಾಠ ಕೇಳಿದ ಕಲಿಕೆ 30-40ನಿಮಿಷ ಮಾತ್ರ ಅದರ 80-90% ಮನದಲ್ಲಿರುತ್ತದೆ ಪ್ರತಿ 1ಗಂಟೆಯ ಸವೆತದಲ್ಲಿ ಅದರ 10ರಷ್ಟು ಮರೆಯುತ್ತಾ ಹೋಗುತ್ತದೆ 48 ಗಂಟೆಯ ನಂತರ ಅದು ನೆನಪಿನಲ್ಲಿ ಉಳಿಯುವುದು ಕಷ್ಠ ಅಸ್ಪಸ್ಠವಾಗಿ ಆಗಾಗ ನೆನಪಿಗೆ ಬರಬಲ್ಲದು. ಹಾಗಾಗಿ ನಿತ್ಯ ಓದುವ ಹವ್ಯಾಸ ರೂಢಿಸಕೊಳ್ಳಲೇ ಬೇಕು ಅದು ದಿನಕ್ಕೆ 2 ಗಂಟೆಯಾದರೆ ಬೇಕಾದಷ್ಟಾಯಿತು. ದುರಂತ ಎಂದರೆ ಭಾರತದಲ್ಲಿ ಓದುವುದು ಪರೀಕ್ಷಾ ವೇಳೆಯಲ್ಲಿ ಅದೂ ಕೂಡ ಅವೈಜ್ಞಾನಿಕವಾಗಿ.

ಪ್ರತಿ ದಿನ 2ಗಂಟೆಯ ತಮ್ಮ ದೇಹ ಮತ್ತು ಮಾನಸಿಕ ಪ್ರಕೃತಿಗೆ ಅನುಗುಣವಾಗಿ ವೇಳಾಪಟ್ಟಿ ನಿಗಧಿಪಡಿಸಿಕೊಂಡು 45ನಿಮಿಷಕ್ಕೊಮ್ಮೆ 10 ನಿಮಿಷದ ವಿರಾಮದಂತೆ ಉಪಾಧ್ಯಾಯರು ಪಾಠಮಾಡುವ ಶೈಲಿಯಲ್ಲಿ ಅಂದಿನ ಪಾಠಗಳನ್ನೇ ಓದಬೇಕು ಮತ್ತು ಮಲಗುವ ಮುನ್ನ, ಪ್ರಯಾಣಿಸುವಾಗ ಅದನ್ನು ಮನದಲ್ಲಿಯೇ ಪುನರ್ಮನನ ಮಾಡಿದರೆ ಶಾಲೆಯಲ್ಲಿ ಮಾಡಿದ ಪಾಠ ಶೇಕಡ 65ರಿಂದ 85ರ ತನಕ ನೆನಪಿನಲ್ಲಿ ಉಳಿಯುತ್ತದೆ ಎಂದು ಕೂಡ ಸಂಶೋಧನೆ ಹೇಳಿದೆ ಮಾತ್ರವಲ್ಲ ಇದು ವಿಜ್ಞಾನ ಕೂಡ.

ಓದು ಶಾಲಾ ದಿನಗಳಲ್ಲಿ, ಆದರೆ ಪರೀಕ್ಷಾ ದಿನಗಳಲ್ಲಿ ಓದು ಮಾಡಲೇಬಾರದು ಏಕೆಂದರೆ (ಓದು ಜ್ಞಾನಾರ್ಜನೆಗೆ ಪರೀಕ್ಷೆ ಅಂಕಗಳಿಸಲು)ಪರೀಕ್ಷೆಯಲ್ಲಿ ಕೆಲವೇ ಪ್ರಶ್ನೆಗಳಿಗೆ ನಿಗಧಿತ ಉತ್ತರ ನೀಡಬೇಕಿರುತ್ತದೆ ಹಾಗಾಗಿ ಕಳೆದ 10 ವರ್ಷಗಳ ಪ್ರಶ್ನೆ ಪತ್ರಿಕೆ ಅಥವ ಪರೀಕ್ಷಾ ಪೂರಕ ಗುರುತಿಸಿಕೊಂಡ ಅಂಶಗಳನ್ನು ಗ್ಲಾನ್ಸ್ ಮಾಡಿದರೆ ಸಾಕು ಇದು ನೀವು ನಿರಂತರ ಒದುತ್ತಿದ್ದರೆ ಮಾತ್ರ ಅದಿಲ್ಲದಿದ್ದರೆ ನಿಮ್ಮ ಉರುಹಚ್ಚುವ ಪ್ರಕ್ರಿಯೆ ಪರೀಕ್ಷೆಯ ವಾತಾವರಣದ ಬಿರುಗಾಳಿಯೊಳಗೆ ನೆನಪಿಗೆ ಬಾರದೇ ಇರುವ ಸಂಭವವೇ ಹೆಚ್ಚು.

ಪರೀಕ್ಷಾ ಸಮಯದಲ್ಲಿ ನಾವು ಸಹಜವಾಗಿ ಮಾಡುವ ಇನ್ನೊಂದು ಘೋರ ಪ್ರಮಾದ ಅವಿಶ್ರಾಂತ ಓದು ಅದು ಎಂತಹದ್ದು ಉರು ಹಚ್ಚುವ ಲಿಂಕ್ ಇಲ್ಲದ ಗೈಡ್, ಅದರ ವಾಕ್ಯಗಳು ಮನನವಾಗದೇ ಹೋಗುವಾಗ ಗಾಬರಿ, ಭಯ ಜೊತೆಯಲ್ಲೇ ಮೂಡಿಸಿಕೊಳ್ಳುತ್ತದೆ. ಹಾಗಾಗಿ ಪರೀಕ್ಷಾ ವೇಳೆಯಲ್ಲಿ ವಿಶ್ರಾಂತಿ ಬಹಳ ಮುಖ್ಯ ಏಕೆಂದರೆ ಈ ವೇಳೆಯಲ್ಲಿ ನಮ್ಮ ಮೆದುಳು ಹೆಚ್ಚು ಕೆಲಸಗಾರನಾಗಿರುತ್ತದೆ ಅದಕ್ಕೆ ತ್ರಾಸವಾಗುತ್ತದೆ ಎಂಬುದನ್ನು ಮರೆತೇ ಬಿಡುತ್ತೇವೆ ಅದು ನಮ್ಮ ಎಲ್ಲ ಶ್ರಮನ್ನೂ ಮರೆಸಿಯೇ ಬಿಡುತ್ತದೆ ಹಾಗಾಗಿ ಪರೀಕ್ಷಾ ಸಮಯ ಗ್ಲಾನ್ಸಿನ ಹಾಗೂ ವಿರಾಮದ ಸಮಯ ಮಿಕ್ಕ ಶಾಲಾದಿನ ಸಮ ಸಮವಾಗಿ ಓದುವ ಮತ್ತು ಆಟವಾಡುವ ಸಮಯ.

ಜ್ಞಾಪಕ ಶಕ್ತಿ ವೃದ್ಧಿಸಲು ಯಾವ ಟಾನಿಕ್ಕೂ ಇಲ್ಲ, ಯಾವ ದೇವರೂ ಇಲ್ಲ, ಸರಸ್ವತಿ ಪೂಜೆ ಮಾನಸಿಕ ನೆಮ್ಮದಿಗೇ ಮಾತ್ರ ಪರೀಕ್ಷೆ ಬರೆಯಲಲ್ಲ.

ಜ್ಞಾಪಕ ಶಕ್ತಿ ಹೆಚ್ಚಿಸುವ, ಬೇಗ ಅಂತರ್ಗತಗಳಿಸಿಕೊಳ್ಳಲು ಮತ್ತು ಹೆಚ್ಚು ಕಾಲ ನೆನಪಿನಲ್ಲಿ ಇಟ್ಟುಕೊಳ್ಳಲು ತ್ರಿಸೂತ್ರ ಕಡ್ಡಾಯ.

1. ಸಮರ್ಪಕ ನಿದ್ರೆ ಅಥವ ವಿಶ್ರಾಂತಿ: ನಮ್ಮೆಲರ ಜ್ಞಾನದ ಭಂಡಾರ ಮೆದುಳು ಅಲ್ಲಲ್ಲಿ ಓದಿ ಸಿಕ್ಕಿಸಿಕೊಂಡ ಜ್ಞಾನಗಳನ್ನೆಲ್ಲ ಕ್ರಮಾನುಗತವಾಗಿ ಜೋಡಿಸುವುದು. ಅದು ವಿಶ್ರಾಂತ ಸ್ಥಿತಿಯಲ್ಲಿ ಹಾಗಾಗಿ ಮೆದುಳು ಹೆಚ್ಚು ವಿಶ್ರಾಂತಿ ಪಡೆಯಲೇ ಬೇಕು ಅದು ಇಡೀ ದೇಹವನ್ನು ಮತ್ತು ಮನಸನ್ನು ಸಮಸ್ಥಿತಿಯಲ್ಲಿ ಇಡಬಲ್ಲದು ಅದು ಬಹಳ ಮುಖ್ಯ ವ್ಯಕ್ತಿತ್ವ ವಿಕಸನಕ್ಕೆ.

ಹೊಸ ಅಧ್ಯಯನಗಳು ಹೇಳಿದೆ ನಿದ್ರೆ ನೆನಪಿನ ಶಕ್ತಿಗೆ ಒಂದು ಟಾನಿಕ್ಕು ಎಂದು ಅಂದರೆ ನಿದ್ರೆಯಲ್ಲಿ ಮೆದುಳು ಮಾಹಿತಿಯನ್ನು ಹಿಪ್ಪೋಕ್ಯಾಂಪಸ್‍ಗೆ ವರ್ಗಾಯಿಸಿ ಧೀರ್ಘಕಾಲ ಸಂಗ್ರಹಣೆಗೆ ದಾರಿಮಾಡಿಕೊಡುತ್ತದೆ ಜೊತೆಗೆ ನೆನಪಿನ ಒಂದುಗೂಡಿಸುವಿಕೆ ಕೂಡ ಮಾಡುತ್ತದೆ ಹಾಗೂ ಆತಂಕ ಮತ್ತು ಒತ್ತಡಗಳನ್ನು ದೂರಮಾಡುತ್ತದೆ ಹಾಗಾಗಿ ಕಲಿಕಾ ವೇಳೆಯಲ್ಲಿ ಕನಿಷ್ಠ 8ಗಂಟೆ ನಿದ್ರೆ ಮಾಡಲೇಬೇಕು. ಎಚ್ಚರ! ಅತಿ ನಿದ್ರೆ ಮೆಮೋರಿಪಾಯಿಸನ್ ಆಗುತ್ತದೆ ನಿದ್ರೆ 12 ರಿಂದ 20 ವರ್ಷ ಒಳಪಟ್ಟ ಮಕ್ಕಳಲ್ಲಿ ಗರಿಷ್ಠ 9ಗಂಟೆ ದಾಟಬಾರದು.

2. ಸಮತೂಕದ ಆಹಾರ ಸೇವನೆ: ಸಹಜವಾಗಿ ಹೊಟ್ಟೆ ತುಂಬಾ ಊಟ ಮಾಡಿದರೆ ನಿದ್ರೆ ಹತ್ತುವುದೆಂದು ಊಟವೇ ಮಾಡದೆ ಬರೀ ಟೀ ಕುಡಿದು ಹಗಲಿರುಳು ಓದಿ ಪರೀಕ್ಷಾ ಕೇಂದ್ರದಲ್ಲಿ ನಿದ್ದೆ ಮಾಡಿರುವ ಭೂಪರ ದಂಡೇ ಇದೆ. ನೀವು ರೆಸ್ಟ್ ಕೊಡಿ-ಬಿಡಿ ಮೆದುಳು ಅದಕ್ಕೆ ಬೇಕಾದ ರೆಸ್ಟ್ ತೆಗೆದುಕೊಳ್ಳುವುದು ಗ್ಯಾರಂಟಿ ಹೆಚ್ಚಿನ ಸಂದರ್ಬದಲ್ಲಿ ಯವಾಗ ಅದು ನಿಜವಾಗಿಯೂ ಕೆಲಸಮಾಡಬೇಕೂ ಆಗ ಅದು ರೆಸ್ಟ್ ತೆಗೆದುಕೊಂಡೇ ಬಿಡುತ್ತದೆ ನೀವು ಪರೀಕ್ಷೆಯನ್ನು ಪಾಸ್(PAUSE) ಮಾಡಲೇ ಬೇಕಾಗುತ್ತದೆ. ನೀರಿಗಿಂತ ಒಳ್ಳೆ ಆಹಾರ ಇಲ್ಲ ಗರಿಷ್ಠ ನೀರನ್ನು ಕುಡಿಯಿರಿ ಉತ್ತಮ ಶಕ್ತಿಯುತ ಆಹಾರವನ್ನು ಕ್ರಮಬದ್ಧವಾಗಿ ಸೇವಿಸಿ. ವಿಶೇಷವಾಗಂತು ಪರೀಕ್ಷಾ ವೇಳೆಯಲ್ಲಿ ಚೆನ್ನಾಗಿಯೇ ತಿನ್ನಬೇಕು ಏಕೆಂದರೆ ನೆನಪಿನ ಶಕ್ತಿಗೆ ನಿಜ ವಿಟಮಿನ್ ಇರುವುದು ಆಹಾರದಲ್ಲಿ. ದೇವರ ಹರಕೆಯಲ್ಲಲ್ಲ.

3. ಸಮಗ್ರ ವ್ಯಾಯಾಮ: ಸಹಜವಾಗಿ ಪರೀಕ್ಷಾ ವೇಳೆ ನಾವು ಆಟ ಆಡುವುದೇ ಇಲ್ಲ. ಬರೀ ಓದು ಓದು ಓದು ಮೆದುಳು ರೋಗ್ರಸ್ತವಾಗುವಂತಹ ಓದು. ಆಟ ಎಂದರೆ ದೇಹ ದಂಡನೆ ಇದು ತಿಂದ ಆಹಾರವನ್ನು ಬಿರುಸು ಪಚನಗೊಳಿಸುವ ಆಮೂಲಕ ಉತ್ತಮ ನಿದ್ರೆ ಬರಿಸುವ ಕ್ರಿಯೆ. ನೆನಪಿನ ಶಕ್ತಿಗೆ ಈ ಹಿಂದೆ ಮಹಾಮಸ್ತಿಷ್ಕ ಮಾತ್ರ ಎಂದಿತ್ತು ಆದರೆ ಇತ್ತೀಚಿನ ಸಂಶೋಧನೆಗಳು ಹುಗಿದ ನೆನಪನ್ನು ಹೊರತೆಗೆಯಲು ಅನುಮಸ್ತಿಷ್ಕ ಅಂದರೆ ಸಣ್ನಮೆದುಳು ಅತಿಮುಖ್ಯ ಎಂಬುದು ದೃಢಪಟ್ಟಿದೆ ಈ ಅನುಮಸ್ತಿಷ್ಕ ಸ್ನಾಯುಗಳ ಸಮತೋಲನಕ್ಕೆ ಎಡೆಮಾಡಿಕೊಡುತ್ತದೆ ಹಾಗಾಗಿ ನಿಯಮಿತ ವ್ಯಾಯಾಮ ಅನುಮಸ್ತಿಷ್ಕದ ನರಕೋಶಗಳನ್ನು ವೃದ್ಧಿಸಿ ನೆನಪಿನ ಸಾಮಥ್ರ್ಯವನ್ನು ಹೆಚ್ಚುಮಾಡಬಲ್ಲದು ಹಾಗಾಗಿ ಈ ಮೂರರಿಂದ ದೂರವಿದ್ದು ಪರೀಕ್ಷಾ ಭಯ ತುಂಬಿ ಓದುವ ಎಷ್ಟೇ ಓದು ಪ್ರಯೋಜನಕ್ಕೆ ಖಂಡಿತ ಬಾರದು. ಹಾಗಾಗಿ ನಿತ್ಯ ನಿಗಧಿತ ಓದು, ಸಮಗ್ರ ನಿದ್ರೆ-ಆಹಾರ-ವ್ಯಾಯಾಮ ಮತ್ತು ಪರೀಕ್ಷೆಯ ಗೆಳೆತನ ಹೆಚ್ಚು ಅಂಕಗಳಿಸುವ ಸೂತ್ರ ಮಾತ್ರವಲ್ಲ ಜ್ಞಾನದ ಒಡೆಯ ಕೂಡ.

ನೆನಪಿನ ಶಕ್ತಿ ಹೆಚ್ಚಿಸಲು ಶಾಲಾಕಲಿಕೆಯ ಜೊತೆ ಪಠ್ಯಪೂರಕ ಚಟುವಟಿಕೆಗಳು ವಿಶೇಷವಾಗಿ ಸಾಹಿತಿಕ ಮತ್ತು ಪ್ರಾಯೋಗಿಕ ಸಂವಾದ ಚಟುವಟಿಕೆಗಳು ಹೆಚ್ಚು ಗಟ್ಟಿತನ ತಂದುಕೊಡುತ್ತವೆ ಹಾಗಾಗಿ ಶಿಕ್ಷಕರು ಪಾಠದ ಕೊನೆಯಲ್ಲಿ ಪಾಠಪೂರಕ ಪುಸ್ತಕ ಪರಿಚಯ ಮಾಡಿಕೊಡಬೇಕು ಮತ್ತು ಅವುಗಳಲ್ಲಿ ತೊಡಗಿಸಿಕೊಡಲು ಪ್ರೇರೇಪಿಸಬೇಕು. ಮನಶಾಸ್ತ್ರಜ್ಞೆ ಡಾ.ಕೆ.ಎಸ್.ಪವಿತ್ರ ಹೇಳುತ್ತಾರೆ ಬೇರಾವುದೇ ಚಟುವಟಿಕೆ ಇಲ್ಲದೆ ಮತ್ತೆ ಮತ್ತೆ ಓದುವುದಷ್ಟೇ ಇದ್ದಾಗ ಅದು ಬೇಸರಕ್ಕೆ ತಿರುಗಿ ಏಕತಾನತೆಯಿಂದ ಎಷ್ಟು ಓದಿದರೂ ಮರೆಯುವುದೇ ಆದೀತು ಹಾಗಾಗಿ ಟೂ ಮಚ್ ಈಸ್ ಟೂ ಬ್ಯಾಡ್ ಅಂತಾರಲ್ಲ ಹಾಗೆ ಮೆದುಳಿಗೂ ಬೇಸರ ಬಂದು ಜಡ್ಡಾದೀತು. ಪರೀಕ್ಷಾ ಸಂದರ್ಬದಲ್ಲಿ ಏಕವ್ಯಕ್ತಿ ಕಲಿಕೆಗಿಂತ ಗುಂಪು ಕಲಿಕೆ ಹೆಚ್ಚಿನ ಸಮರ್ಪಕತೆ ಕೊಡಬಲ್ಲದು.

ನೆನಪಿನ ಶತ್ರುಗಳು ಯಾರು:
1. ಆತಂಕ-ಖಿನ್ನತೆಗಳು ಇವೆರೆಡೂ ಉದ್ಭವಿಸುವುದು ಮುಂದೇನು ಎನ್ನುವ ಅನಗತ್ಯ ಭಯದೊಂದಿಗೆ ಆತಂಕಕ್ಕೊಳಗಾದಾಗ ಸುಲಭವಾದ ಸಂಗತಿಗಳನ್ನು ಮರೆಯಬಹುದು ಭಾವನಾತ್ಮಕ ಖಿನ್ನತೆ ಮೆದುಳಿನ ನರತಂತುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ ಇದು ಅನಗತ್ಯ ಭಯಕ್ಕೆ ಎಡೆ ಮಾಡಿಕೊಡುತ್ತವೆ.
2. ವಿನಾಕಾರಣ ಭಯ(Anxiety neurosis) ಮತ್ತು ಅತಿಭಯ(Phobia) ಇವು ಮೆದುಳನ್ನು ದೇಹದ ಇತರೆ ಅಂಗಗಳಿಗೆ ಕಮಾಂಡ್ ನೀಡುವ ಸಾಮರ್ಥ್ಯವನ್ನು ಕುಂಟಿತಗೊಳಿಸುತ್ತವೆ ಆಗ ಮನದೊಳಗೆ ಇಲ್ಲ ಸಲ್ಲದ ಪರಿಕಲ್ಪನೆಗಳು ಮನೆ ಮಾಡಲು ದಾರಿ ಮಾಡಿಕೊಡುತ್ತವೆ.
3. ಉದಾಸೀನತೆ ಮತ್ತು ಕೋಪ ಇವೆರೆಡು ನಮ್ಮ ಗ್ರಹಣ ಶಕ್ತಿಯನ್ನು ಕುಂಟಿತಗೊಳಿಸುತ್ತವೆ ಹಾಗಗಿಯೇ ಅಲ್ಲವೆ ಕೋಪಗೊಂಡಾಗ ಜನ ಹೇಳುವುದು ಕೋಪದಲ್ಲಿ ಯಾವುದೂ ಜ್ಞಾಪಕ್ಕೆ ಬರಲಿಲ್ಲ ಎಂದು. ಉದಾಸೀನ ಮಾಡಿಬಿಟ್ಟೆ ಅದಕ್ಕೆ ನೆನಪಿಗೆ ಬರಲಿಲ್ಲ ಎಂದೂ ಕೂಡ ಬಹಳಷ್ಟು ಜನ ಹೇಳುವುದನ್ನು ಕೇಳಿದ್ದೇವೆ.

ನೆನಪಿನ ಶಕ್ತಿಯನ್ನು ಮಕ್ಕಳಲ್ಲಿ ಹೆಚ್ಚಿಸುವುದು ಕೇವಲ ಓದಿನ ದೃಷ್ಠಿಯಿಂದ ಮಾತ್ರವಲ್ಲ ಜೀವನದ ಧೃಷ್ಠಿಯಿಂದಲೂ ಅಗತ್ಯವೇ ಹಾಗಾಗಿ ಮೇಲಿನ ಈ ಮೂರು ಜೋಡಿ ಶಬ್ಧಗಳು ಜೀವನದ ಧನಾತ್ಮಕ ಬೆಳವಣಿಗೆಯ ಧೃಷ್ಠಿಯಿಂದಲೂ ಅಪಾಯವೆ ಹಾಗಾಗಿ ಸಾಮಾಜಿಕ ಚಿಂತನೆಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಈ ತ್ರಿಶತ್ರುಗಳನ್ನು ದೂರೀಕರಿಸಬಹುದು ಮತ್ತು ನೆಪಿನ ಶಕ್ತಿ ವೃದ್ಧಿಯ ಚಟುವಟಿಕೆಗೂ ಸಹಕಾರಿಯಾಗುತ್ತದೆ. ಮೆದುಳಿನಲ್ಲಿ ನೆನಪು ಕಲಿಕೆಗೆ ಬೇಕಾಗುವ ಕೊಲಿನರ್ಜಿಕ್(ಮೆದುಳಿನಲ್ಲಿರುವ ಜ್ಞಾಪಕ ನರಗಳನ್ನು ಸಕ್ರಿಯಗೊಳಿಸುವ ರಾಸಾಯನಿಕ ಕ್ರಿಯೆ) ಚಟುವಟಿಕೆಯನ್ನು ಆನಂದ, ಆಹ್ಲಾದ ಮತ್ತು ಲಾಫ್ಟರ್‍ಥೆರಪಿ ನೀಡುತ್ತವೆ.

ಒಮೇಗಾ-3 ಫ್ಯಾಟ್ಟಿ ಆಸಿಡ್ ಎಂಬ ರಸಾಯನಿಕಗಳಿರುವ ಮೀನು ಕೂಡ ಜ್ಞಾಪಕ ಶಕ್ತಿ ವೃದ್ಧಿಗೆ ಸಹಕಾರಿಯಾಗಿವೆ ಎನ್ನುತ್ತದೆ ಸಂಶೋಧನೆಯೊಂದು. ಮಾನಸಿಕ ಪ್ರಚೋದನೆ, ಸಾಮಾಜಿಕ ಬೆರೆಯುವಿಕೆ, ಸರಿಯಾದ ಆಹಾರ ಕ್ರಮಬದ್ಧತೆ, ಸಮರ್ಪಕ ನೀರು ಸೇವನೆ ಮತ್ತು ಅಗತ್ಯ ವಿಶ್ರಾಂತಿ ಹಾಗೂ ಸಮ ಮಿತಿಯ ವ್ಯಾಯಾಮ/ಆಟ ನೆನಪಿನ ಶತ್ರುಗಳನ್ನು ಓಡಿಸಲು ಸಹಾಯಕ. ಐಸ್‍ಕ್ರೀಂ ಮತ್ತು ಫಾಸ್ಟುಫುಡ್ ಹಣ್ಣು-ತರಕಾರಿಯನ್ನು ತಿನ್ನಿಸದು ಹಾಗಾಗಿ ಈ ಫಾಸ್ಟ್ ಫುಡ್ ಕೂಡ ನೆನಪಿನ ಶತ್ರುಗಳೆ ಸಾಧ್ಯವಾದಷ್ಟೂ ನಿಯಂತ್ರಿಸಿ. ಮೆದುಳು ಸೋಮಾರಿಯಂತೆ ಮಾಡಬಲ್ಲ ಕೊಬ್ಬುಗಳನ್ನು ಕೂಡ ನಿಯಂತ್ರಿಸಿದರೆ ಒಳಿತು.

ಸುಲಿದ ಬಾಳೆಹಣ್ಣಿನಂದದಿ ಪರೀಕ್ಷೆ-ಶಿಕ್ಷಣ ಹೇಗೆ:
ಪರೀಕ್ಷೆ ಎಂದರೆ: ‘ಪರೀಕ್ಷೆಯೆಂದರೆ ಹೂವಿನ ಚಂಡೆ ಚಿಂತಿಸಬಾರದು ದುರ್ಗತಿಗೆ’ ಕೆ.ಎಸ್.ನ ಕವನದಂತೆ ಪೆಡಂಬೂತವಾಗಿ ಮನದೊಳಗೆ ನಿಂತ ಪರೀಕ್ಷಾಭೂತವನ್ನು ಹೂವಿನ ಚಂಡೊ, ಕಾಲ್ಚೆಂಡೊ, ಆಗಿ ಭಾವಿಸುವುದು ಮಾನಸಿಕ ಪ್ರಾಬಲ್ಯದ ಮೊದಲ ಪಾಠ ಇದು ದೈಹಿಕ ಹಾಗೂ ಮಾನಸಿಕ ಸ್ಥಿರತೆ ತರುತ್ತದೆ ಪರೀಕ್ಷೆ ನನ್ನ ಮುಂದೆ ಏನೂ ಇಲ್ಲ ಎನ್ನುವ ಅಹಂಭಾವ ಈ ಸಂದರ್ಬದಲ್ಲಿ ಬರಲೇಬೇಕು ಆಗ 50ಶೇಕಡ ಜಯಿಸಿದಂತೆ.

ಪರೀಕ್ಷೆ ಬರೆಯುವುದು ಹೇಗೆ?
1. ಧೃಢತೆ: ಪ್ರಶ್ನೆ ಪತ್ರಿಕೆಯ ಬರಹಗಳು ನೀನು ಕಲಿತದ್ದು(ಪಠ್ಯಕ್ರಮದ್ದು) ಬಿಟ್ಟು ಬೇರೆ ಬರಲು ಸಾಧ್ಯವೇ ಇಲ್ಲ ಇದು ನೆನಪಿನಲ್ಲಿರಲಿ. ಬಂದರೂ ಅದು ನಿನ್ನ ಪುಕ್ಕಟ್ಟೆ ಅಂಕವೇ ಎಂಬುದು ಇನ್ನು ಪಕ್ಕವಾಗಿರಲಿ ಗಾಬರಿಗೊಳ್ಳುವುದು ಬೇಡ.
2.ಏಕಾಗ್ರತೆ: ಪ್ರಶ್ನೆಗಳ ಕುರಿತು ವಿಚಲಿತನಾಗಬೇಕಾಗಿಲ್ಲ ಎಲ್ಲಾ ಪ್ರಶ್ನೆಗಳನ್ನು ಮೊದಲು ಓದಿಕೊಂಡು. ನಿಖರ ಪ್ರಶ್ನೆಯನ್ನು ಸರಿಯಾಗಿ ಓದಬೇಕು ಪ್ರಶ್ನೆಯನ್ನು ಸರಿಯಾಗಿ ಅರ್ಥೈಸಿಕೊಂdರೆ ಅರ್ಧ ಉತ್ತರ ಪಡೆದಂತೆಯೇ ಎಂಬ ನಾಣ್ಣುಡಿ ಕೇಳಿಲ್ಲವೆ(if question properly understood, half answer will get)
3.ಪ್ರಶಾಂತತೆ: ಹೆಚ್ಚು ನಿಖರ ಉತ್ತರ ಬಲ್ಲ ಪ್ರಶ್ನೆಗಳಿಗೆ ಮೊದಲ ಉತ್ತರ ನಡು ನಡುವೆ ಲೆಕ್ಕಾಚಾರ ಗಾಬರಿಯಾಗುವ ಅಗತ್ಯ ಇಲ್ಲ.
ಪ್ರಶ್ನೆ ಸಂಖ್ಯೆ, ಉಪ ಸಂಖ್ಯೆ ಇತ್ಯಾದಿ ಉತ್ತರ ಬರೆಯುವ ಮೊದಲೇ ಬರೆಯುವುದು ಉತ್ತಮ.
4.ಸಮಯ ನಿಗಧಿ: ಇದು ಬಹಳ ಮುಖ್ಯ ಪ್ರತಿ ಪ್ರಶ್ನೆಗೂ ಪರೀಕ್ಷೆ ಬರೆಯುವಾತನೇ ಸಮಯ ನಿಗಧಿ ಪಡಿಸಿಕೊಳ್ಳಬೇಕು ಹಾಗೂ ಪ್ರಶ್ನೆ ಪತ್ರಿಕೆ ಮೇಲೆ ಬರೆದ ನಂತರ ಗುರುತು ಹಾಕಬೇಕು ಇಲ್ಲದೇ ಹೋದರೆ ಪುನರಾವರ್ತನೆ ಆಗುವ ಸಂಭವ ಇರುತ್ತದೆ.
5.ಎಲ್ಲ ಮುಗಿದಬಳಿಕೆ ಬರೆದ ಉತ್ತರಗಳನ್ನು ಲೆಕ್ಕಿಸುವ, ವಿಮರ್ಷಿಸುವ ಚಟುವಟಿಕೆಗೆ ಕಡೆಯ 15ನಿಮಿಷ ಮೀಸಲಿಟ್ಟು ಉತ್ತರ ಪೂರ್ಣಗೊಳಿಸಿ.
6. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕೆಂಬ ನಿಯವಿರುವುದಿಲ್ಲ, ಹೆಚ್ಚು ಕಾನ್ಫಿಡೆನ್ಸ್ ಇರುವ ಪ್ರಶ್ನೆಗಳಿಗೆ ಮೊದಲಾಧ್ಯತೆ ನೀಡಿದ ನಂತರ ಉಳಿದ ಪ್ರಶ್ನೆಗಳಿಗೆ ಕೊನೆಯ 15ನಿಮಿಷ ಮೀಸಲಿಟ್ಟು ನಡುವಲ್ಲಿ ಉಳಿದರೆ ಬರೆಯಿರಿ ಅಭ್ಯಂತರವಿಲ್ಲ.

ಇವೆಲ್ಲದರ ನಡುವೆ ನನ್ನ ಮಿತಿ ಏನು ಎನ್ನುವ ಅರಿವು ನಮ್ಮ ಮಕ್ಕಳಲ್ಲಿ ಮೂಡಿಸಿ ಅದರಲ್ಲೇ ಸಂತೃಪ್ತಿ ಪಡುವ ಮನೋಭೂಮಿಕೆ ಸೃಷ್ಠಿಸಿಕೊಳ್ಳುವುದು ಆರೋಗ್ಯಕರ ಬೆಳವಣಿಗೆಯ ಲಕ್ಷಣ ನನ್ನ ಓದು ನನ್ನ ಮನತೃಪ್ತಿಗೆ ಮಾತ್ರ. ವಿದ್ಯೆ(ಜ್ಞಾನಾರ್ಜನೆ) ಅಂಕಗಳಿಗಿಂತ ದೊಡ್ಡದು, ಬದುಕು ಜ್ಞಾನಕ್ಕಿಂತ ದೊಡ್ಡದು ಹಾಗಾಗಿ ಫಲಿತಾಂಶ ಕ್ಷಣಿಕವಷ್ಟೆ ಬದುಕಲು ಮನಸ್ಸು ಮತ್ತು ಸಂತೃಪ್ತಿ ಬೇಕು ಇದು ಬೆಳೆದರೆ ಪರೀಕ್ಷಾ ಫಲಿತಾಂಶ ಹೊರೆಯಾಗದು. ಹೊರೆಯಾಗದ ಕಲಿಕೆ ನಮ್ಮನಿಮ್ಮದಾಗಲಿ.

Comments are closed.