ಆರೋಗ್ಯ

ಸಿಹಿ-ಹುಳಿ ರುಚಿಯಿರುವ ಈ ಹಣ್ಣಿನಲ್ಲಿದೆ ಹಲವಾರು ಆರೋಗ್ಯಲಾಭಗಳು

Pinterest LinkedIn Tumblr

ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿ ಹೊಂದಿರುವ ಈ ಹಣ್ಣು ನಾರು,ವಿಟಾಮಿನ್‌ಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ,ಜೊತೆಗೆ ಈ ಹಣ್ಣಿನಲ್ಲಿ ಕ್ಯಾಲರಿಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ಪ್ರತಿದಿನ ಪ್ಲಮ್ ಹಣ್ಣಿನ ಸೇವನೆಯು ಉರಿಯೂತದ ಪರಿಣಾಮಗಳನ್ನು ತಗ್ಗಿಸಲು ನೆರವಾಗುತ್ತದೆ ಮತ್ತು ಹಲವಾರು ಕಾಯಿಲೆಗಳನ್ನು ತಡೆಯುತ್ತದೆ. ಹಣ್ಣನ್ನು ತಾಜಾ ಆಗಿ ಅಥವಾ ಒಣಗಿಸಿಯೂ ತಿನ್ನಬಹುದು. ಹಣ್ಣನ್ನು ರಸದ ರೂಪದಲ್ಲಿಯೂ ಸೇವಿಸಬಹುದು. ಒಣಗಿಸಿದ ಪ್ಲಮ್ ಹಣ್ಣುಗಳು ವಿಶೇಷವಾಗಿ ಅಸ್ಥಿರಂಧ್ರತೆಯಿಂದ ಬಳಲುತ್ತಿರುವವರಿಗೆ ಹೆಚ್ಚು ಆರೋಗ್ಯಕರವಾಗಿವೆ. ಪ್ಲಮ್ ಹಣ್ಣಿನ ಕೆಲವು ಆರೋಗ್ಯಲಾಭಗಳ ಮಾಹಿತಿಯಿಲ್ಲಿದೆ……

ಮಧುಮೇಹ ನಿಯಂತ್ರಣಕ್ಕೆ ನೆರವಾಗುತ್ತದೆ
ಮಧುಮೇಹಿಗಳು ತಮ್ಮ ಆಹಾರದ ವಿಷಯದಲ್ಲಿ ತುಂಬ ಕಟ್ಟುನಿಟ್ಟಾಗಿರಬೇಕಾಗುತ್ತದೆ. ಆದರೆ ಪ್ಲಮ್ ಹಣ್ಣು ನೈಸರ್ಗಿಕ ಸಿಹಿಯನ್ನು ಹೊಂದಿದ್ದರೂ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಅದು ನಾರಿನ ಅತ್ಯುತ್ತಮ ಮೂಲವಾಗಿರುವ ಜೊತೆಗೆ ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸಲು ನೆರವಾಗುತ್ತವೆ. ಅದು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಅಡಿಪೊನೆಕ್ಟಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ.

ಜೀರ್ಣಕ್ರಿಯೆಗೆ ಪೂರಕ
ಪ್ಲಮ್ ಹಣ್ಣಿನಲ್ಲಿ ಹೇರಳವಾಗಿರುವ ನಾರು ಜೀರ್ಣ ಕ್ರಿಯೆಯನ್ನು ಹೆಚ್ಚಿಸಲು ಮತ್ತು ಮಲಬದ್ಧತೆ ಸಮಸ್ಯೆಯನ್ನು ಶಮನಿಸಲು ನೆರವಾಗುತ್ತದೆ. ಹಣ್ಣಿನಲ್ಲಿರುವ ಫೆನಾಲಿಕ್ ಸಂಯುಕ್ತಗಳು ಜೀರ್ಣಾಂಗವನ್ನು ಆರೋಗ್ಯಯುತವಾಗಿಸುತ್ತವೆ. ನಿಯಮಿತವಾಗಿ ಈ ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆ ಮತ್ತು ಅಜೀರ್ಣದಂತಹ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಬಹುದು. ಆಯಸಿಡಿಟಿಯಿಂದ ಬಳಲುತ್ತಿರುವವರು ಊಟಕ್ಕೆ ಒಂದು ಗಂಟೆ ಮೊದಲು ಒಂದು ಗ್ಲಾಸ್ ಪ್ಲಮ್ ರಸವನ್ನು ಸೇವಿಸಿದರೆ ಆಹಾರವು ಸರಿಯಾಗಿ ಜೀರ್ಣಗೊಳ್ಳಲು ನೆರವಾಗುತ್ತದೆ ಮತ್ತು ಊಟದ ನಂತರದ ಅಜೀರ್ಣದ ಸಮಸ್ಯೆಯನ್ನು ತಡೆಯುತ್ತದೆ.

ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ಪ್ಲಮ್ ಹಣ್ಣು ವಿಟಾಮಿನ್ ಕೆ,ರಂಜಕ,ಮ್ಯಾಗ್ನೀಷಿಯಂ ಮತ್ತು ಪೊಟ್ಯಾಷಿಯಂನಂತಹ ವಿಟಾಮಿನ್‌ಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದ್ದು,ಇವು ಮೂಳೆಗಳ ಆರೋಗ್ಯಕ್ಕೆ ಲಾಭದಾಯಕವಾಗಿವೆ. ಹಣ್ಣಿನಲ್ಲಿರುವ ಫ್ಲಾವನಾಯ್ಡಾಗಳು ಮತ್ತು ಫೆನಾಲಿಕ್ ಸಂಯುಕ್ತಗಳು ಮೂಳೆಗಳನ್ನು ಗಟ್ಟಿಯಾಗಿಸುತ್ತವೆ ಮತ್ತು ಅಸ್ಥಿರಂಧ್ರತೆಯ ಅಪಾಯವನ್ನು ಕಡಿಮೆ ಮಾಡುತ್ತವೆ.

ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಪ್ಲಮ್ ಹಣ್ಣು ವಿಟಾಮಿನ್ ಸಿ ಮತ್ತು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಯುಕ್ತಗಳ ಸಮೃದ್ಧ ಮೂಲವಾಗಿದೆ. ಶೀತ ಮತ್ತು ಜ್ವರದಿಂದ ಬಳಲುತ್ತಿರುವವರು ಉರಿಯೂತ ನಿರೋಧಕ ಗುಣಗಳನ್ನು ಹೊಂದಿರುವ ಪ್ಲಮ್ ಹಣ್ಣನ್ನು ಸೇವಿಸಬಹುದಾಗಿದೆ. ಶರೀರದ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ,ನೀರಿನಿಂದ ಉಂಟಾಗುವ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ.

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
ಪ್ಲಮ್ ಹಣ್ಣಿನಲ್ಲಿರುವ ಸಂಯುಕ್ತಗಳು ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡವನ್ನು ತಗ್ಗಿಸುವ ಮೂಲಕ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಪ್ಲಮ್‌ನಲ್ಲಿರುವ ಪಾಲಿಫಿನಾಲ್‌ಗಳು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು,ಇವು ಹೃದ್ರೋಗಗಳು ಮತ್ತು ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ಅದರಲ್ಲಿಯ ಕರಗಬಲ್ಲ ನಾರು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.

Comments are closed.