ಆರೋಗ್ಯ

ಯಕೃತ್ತಿಗೆ ಹಾನಿಯುಂಟಾದಾಗ ನಮ್ಮ ಶರೀರವು ನಿಡುವ ಕೆಲವು ಎಚ್ಚರಿಕೆಯ ಸಂಕೇತಗಳು ಇಲ್ಲಿವೆ…!

Pinterest LinkedIn Tumblr

ನಮ್ಮ ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಅದು ರಕ್ತವನ್ನು ಶುದ್ಧಗೊಳಿಸುತ್ತದೆ, ನಾವು ಸೇವಿಸಿದ ಆಹಾರವನ್ನು ಜೀರ್ಣಗೊಳಿಸಲು ನೆರವಾಗುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತದೆ. ಅದು ನಮ್ಮ ಶರೀರದಲ್ಲಿ ಒಂದು ರೀತಿಯ ಸೂಪರ್‌ ಹಿರೋ ಇದ್ದಂತೆ,ಏಕೆಂದರೆ ತನಗೆ ಹಾನಿಯಾದಾಗ ಹಳೆಯ ಅಂಗಾಂಶಗಳ ಬದಲಿಗೆ ಹೊಸ ಅಂಗಾಂಶಗಳನ್ನು ರೂಪಿಸಿಕೊಂಡು ಮರುಸೃಷ್ಟಿಗೊಳ್ಳುವ ಶಕ್ತಿಯು ಅದಕ್ಕಿದೆ.

ಅದು ಉರಿಯೂತವಾಗಿರಬಹುದು, ಗಾಯವಾಗಿರಬಹುದು, ಕ್ಯಾನ್ಸರ್ ಆಗಿರಬಹುದು ಅಥವಾ ಟೈಲೆನಾಲ್ ಅಥವಾ ಪ್ಯಾರಾಸಿಟಮಲ್‌ನ ಅತಿಯಾದ ಬಳಕೆಯಾಗಿರಬಹುದು; ಯಕೃತ್ತಿನ ಕಾರ್ಯ ನಿರ್ವಹಣೆಗೆ ಅಥವಾ ಗಾಯದ ಬಳಿಕ ಅದು ಪುನಃ ಬೆಳೆಯುವುದಕ್ಕೆ ತಡೆಯನ್ನೊಡ್ಡುವ ಯಾವುದೇ ಆದರೂ ನಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡಬಲ್ಲದು. ಯಕೃತ್ತಿಗೆ ಹಾನಿಯುಂಟಾದಾಗ ನಮ್ಮ ಶರೀರವು ನಿಡುವ ಕೆಲವು ಎಚ್ಚರಿಕೆಯ ಸಂಕೇತಗಳ ಕುರಿತು ಮಾಹಿತಿಯಿಲ್ಲಿದೆ…

ಚರ್ಮ ಮತ್ತು ಕಣ್ಣುಗಳು ಹಳದಿಯಾಗುವುದು
ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ರಕ್ತದಲ್ಲಿ ಹಳದಿ ಛಾಯೆಯ ಬಿಲಿರುಬಿನ್ ಸಂಗ್ರಹಗೊಂಡು ಚರ್ಮ ಮತ್ತು ಕಣ್ಣುಗಳ ಬಿಳಿಭಾಗಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಾಮಾಲೆಯೆಂದು ಕರೆಯಲಾಗುವ ಈ ಸ್ಥಿತಿಯು ಹಾನಿಗೀಡಾಗಿರುವ ಯಕೃತ್ತು ಬಿಲಿರುಬಿನ್ ಅನ್ನು ಸಂಸ್ಕರಿಸಲು ಅಸಮರ್ಥಗೊಂಡಾಗ ಉಂಟಾಗುತ್ತದೆ. ಹೆಪಟೈಟಿಸ್ ಅಥವಾ ಯಕೃತ್ತಿನ ಉರಿಯೂತ,ಕ್ಯಾನ್ಸರ್,ಅತಿಯಾದ ಮದ್ಯಪಾನ,ಮಾದಕ ದ್ರವ್ಯ ಸೇವನೆ, ವಿಷವಸ್ತುಗಳಿಗೆ ತೆರೆದುಕೊಳ್ಳುವುದು ಮತ್ತು ವಿವಿಧ ಸೋಂಕುಗಳು ಯಕೃತ್ತಿಗೆ ಹಾನಿಯನ್ನುಂಟು ಮಾಡುವ ಸಾಮಾನ್ಯ ಕಾರಣಗಳಾಗಿವೆ.

ವಿಸರ್ಜನೆಗಳು
ಕಾಮಾಲೆಯು ಮೂತ್ರ ಮತ್ತು ಮಲದ ಬಣ್ಣಗಳನ್ನೂ ಬದಲಿಸುತ್ತದೆ. ಮೂತ್ರವು ಗಾಢಬಣ್ಣದ್ದಾಗಿದ್ದರೆ ಮಲವು ಪೇಲವವಾಗಿರುತ್ತದೆ.

ತುರಿಕೆ
ಚರ್ಮವು ಅತಿಯಾಗಿ ತುರಿಸುತ್ತಿದ್ದರೆ ಯಕೃತ್ತಿನ ಕಾಯಿಲೆಯು ಅದಕ್ಕೆ ಒಂದು ಕಾರಣವಾಗಿರುತ್ತದೆ. ತುರಿಕೆಯು ಮೂತ್ರಪಿಂಡ ವೈಫಲ್ಯ, ಥೈರಾಯ್ಡ್ ಸಮಸ್ಯೆಗಳು ಮತ್ತು ಕ್ಯಾನ್ಸರ್‌ನ್ನೂ ಸೂಚಿಸುತ್ತದೆ. ಸಾಮಾನ್ಯವಾಗಿ ತುರಿಕೆಯು ಇಡೀ ಶರೀರವನ್ನು ಕಾಡುತ್ತದೆ. ಪದೇ ಪದೇ ತುರಿಸಿಕೊಂಡ ಭಾಗಗಳನ್ನು ಹೊರತುಪಡಿಸಿ ಚರ್ಮವು ಸಹಜವಾಗಿಯೇ ಕಾಣಬಹುದು.

ಮೂಗೇಟುಗಳು
ಹಾನಿಗೀಡಾದ ಯಕೃತ್ತು ರಕ್ತ ಹೆಪ್ಪುಗಟ್ಟಲು ಅಗತ್ಯವಾದ ಪ್ರೋಟಿನ್‌ಗಳ ಉತ್ಪಾದನೆಯನ್ನು ನಿಧಾನಿಸುವುದರಿಂದ ಅಥವಾ ಸ್ಥಗಿತಗೊಳಿಸುವುದರಿಂದ ರೋಗಿಗಳು ಮೂಗೇಟುಗಳನ್ನು ಅನುಭವಿಸುತ್ತಿರುತ್ತಾರೆ ಅಥವಾ ಸುಲಭವಾಗಿ ಹೆಚ್ಚಿನ ರಕ್ತಸ್ರಾವಕ್ಕೆ ಗುರಿಯಾಗುತ್ತಿರುತ್ತಾರೆ. ಯಕೃತ್ತು ರಕ್ತವನ್ನು ಹೆಪ್ಪುಗಟ್ಟಿಸುವ ಹಲವಾರು ರಾಸಾಯನಿಕಗಳನ್ನು ಉತ್ಪಾದಿಸುತ್ತದೆ,ಆದರೆ ಅದಕ್ಕೆ ಹಾನಿಯುಂಟಾದಾಗ ಉತ್ಪಾದನೆ ಸ್ಥಗಿತಗೊಳ್ಳುತ್ತದೆ.

ಊದಿಕೊಳ್ಳುವುದು
ಯಕೃತ್ತಿಗೆ ತನ್ನ ಕಾರ್ಯವನ್ನು ಮಾಡಲು ಸಾಧ್ಯವಾಗದಿದ್ದಾಗ ರೋಗಿಗಳ ಹೊಟ್ಟೆ ಮತ್ತು ಕಾಲುಗಳಲ್ಲಿ ನೀರು ತುಂಬಿಕೊಳ್ಳುತ್ತದೆ ಮತ್ತು ಅವು ಊದಿಕೊಳ್ಳುವಂತೆ ಮಾಡುತ್ತದೆ.

ಕೆಲವೊಮ್ಮೆ ಯಾವುದೇ ಲಕ್ಷಣಗಳಿರುವುದಿಲ್ಲ
ಕೆಲವೊಮ್ಮೆ ಯಕೃತ್ತಿಗೆ ಹಾನಿಯುಂಟಾಗಿದೆ ಎನ್ನುವುದನ್ನು ಸೂಚಿಸುವ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಯಕೃತ್ತಿನ ಕಾಯಿಲೆಯಿರುವ ಅರ್ಧದಷ್ಟು ಜನರಲ್ಲಿ ಲಕ್ಷಣಗಳು ಗೋಚರಿಸುವುದಿಲ್ಲ ಎನ್ನುವುದು ತಜ್ಞರ ಎಚ್ಚರಿಕೆ. ಕೆಲವರಲ್ಲಿ ಸೌಮ್ಯವಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು,ಆದರೆ ಇವು ಯಕೃತ್ತಿನ ಹಾನಿಯನ್ನು ನಿರ್ದಿಷ್ಟವಾಗಿ ಸೂಚಿಸುವ ಲಕ್ಷಣಗಳಲ್ಲ. ಬಳಲಿಕೆ ಅಥವಾ ಅತಿಯಾದ ದಣಿವು,ಕುಂದಿದ ಉತ್ಸಾಹ,ಕೆಲವೊಮ್ಮೆ ತುರಿಕೆ ಇವು ಇಂತಹ ಲಕ್ಷಣಗಳಲ್ಲಿ ಸೇರಿವೆ.

ರೋಗಿಯ ಸ್ಥಿತಿಯು ಈ ಲಕ್ಷಣಗಳನ್ನು ಮೀರಿದಾಗ ಯಕೃತ್ತಿಗೆ ಹಾನಿ ಮತ್ತು ಅದರ ಅಡ್ಡಪರಿಣಾಮಗಳು ಹೆಚ್ಚು ಗಂಭೀರವಾಗುತ್ತವೆ. ಯಕೃತ್ತಿಗೆ ಸಾಗುವ ರಕ್ತನಾಳಗಳು ಒಡೆಯಬಹುದು,ವಿಷವಸ್ತುಗಳು ಮಿದುಳಿನಲ್ಲಿ ಸಂಗ್ರಹಗೊಂಡು ಮಾನಸಿಕ ಕಾರ್ಯ ಕ್ಷಮತೆಗೆ ವ್ಯತ್ಯಯವನ್ನುಂಟು ಮಾಡಬಹುದು ಮತ್ತು ರೋಗಿಯಲ್ಲಿ ವಾಕರಿಕೆ ಹಾಗು ಅತಿಸಾರವನ್ನುಂಟು ಮಾಡಬಹುದು. ಯಕೃತ್ತಿನ ವೈಫಲ್ಯ ಮುಂದುವರಿದಾಗ ಲಕ್ಷಣಗಳು ಇನ್ನಷ್ಟು ತೀವ್ರಗೊಳ್ಳುತ್ತವೆ. ರೋಗಿಯು ಗೊಂದಲಕ್ಕೆ ಗುರಿಯಾಗಬಹುದು ಮತ್ತು ಏಕಾಗ್ರತೆ ಸಾಧ್ಯವಾಗದಿರಬಹುದು ಹಾಗೂ ಅತಿಯಾಗಿ ನಿದ್ರೆಯ ಮಂಪರು ಆವರಿಸಬಹುದು. ಕೋಮಾಕ್ಕೆ ಜಾರುವ ಮತ್ತು ಸಾವಿನ ಅಪಾಯಗಳನ್ನೂ ತಳ್ಳಿಹಾಕುವಂತಿಲ್ಲ ಎಂದು ಅಮೆರಿಕನ್ ಲಿವರ್ ಫೌಂಡೇಷನ್ ತನ್ನ ವರದಿಯಲ್ಲಿ ವಿವರಿಸಿದೆ.

ಈ ಹಂತದಲ್ಲಿ ಯಕೃತ್ತಿನ ಕಸಿಯೊಂದೇ ರೋಗಿಯ ಜೀವವುಳಿಸುವ ಆಯ್ಕೆಯಾಗಬಹುದು. ಹೀಗಾಗಿ ಯಕೃತ್ತಿಗೆ ಹಾನಿಯ ಲಕ್ಷಣಗಳನ್ನು ಮೊದಲೇ ಗುರುತಿಸುವುದು ಮುಖ್ಯವಾಗುತ್ತದೆ.

Comments are closed.