ಆರೋಗ್ಯ

ವಿದ್ಯುನ್ಮಾನ ಸಾಧನಗಳು ಮಕ್ಕಳ ಕೈಗಳನ್ನು ದುರ್ಬಲವಾಗಿಸಿವೆ ಎನ್ನುವುದನ್ನು ಸೂಚಿಸುವ ಕೆಲವು ಎಚ್ಚರಿಕೆಯ ಸಂಕೇತಗಳು

Pinterest LinkedIn Tumblr

ವಿದ್ಯುನ್ಮಾನ ಸಾಧನಗಳು ಮಕ್ಕಳ ಕೈಗಳ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುತ್ತವೆ ಮತ್ತು ಅವುಗಳನ್ನು ದುರ್ಬಲವಾಗಿಸುತ್ತವೆ. ಇಂದಿನ ಮಕ್ಕಳು ಪುಸ್ತಕಗಳು ಮತ್ತು ಪೆನ್ಸಿಲ್‌ಗಳಿಗಿಂತ ಹೆಚ್ಚು ವಿದ್ಯುನ್ಮಾನ ಸಾಧನಗಳಿಂದ ಆಕರ್ಷಿತರಾಗಿದ್ದಾರೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಬಳಸುವುದರಿಂದ ಭವಿಷ್ಯದಲ್ಲಿ ವಸ್ತುಗಳನ್ನು ಹಿಡಿದುಕೊಳ್ಳಲು ಅಗತ್ಯ ಬಲದ ಬೆಳವಣಿಗೆಗೆ ತಡೆಯಾಗುತ್ತದೆ ಎನ್ನುವುದು ನಿಮಗೆ ಗೊತ್ತೇ?, ನಿಮ್ಮ ಮಗುವಿಗೆ ಬೆರಳುಗಳನ್ನು ಬಳಸುವುದು ಮತ್ತು ವಸ್ತುಗಳನ್ನು ಹಿಡಿದುಕೊಳ್ಳುವುದು ಕಷ್ಟವಾಗುತ್ತಿದ್ದರೆ ಆತ/ಆಕೆ ದುರ್ಬಲ ಹಸ್ತಗಳ ಸಮಸ್ಯೆಯಿಂದ ಬಳಲುತ್ತಿರಬಹುದು. ತಮ್ಮದೇ ವಯಸ್ಸಿನ ಇತರ ಮಕ್ಕಳು ಸುಲಭವಾಗಿ ಮಾಡುವ ಕತ್ತರಿಯಿಂದ ಕತ್ತರಿಸುವ,ಕೋಟ್‌ಗಳ ಝಿಪ್ ಹಾಕಿಕೊಳ್ಳುವಂತಹ ಪ್ರಾಥಮಿಕ ಕೆಲಸಗಳನ್ನು ಮಾಡುವ ನಿಮ್ಮ ಮಕ್ಕಳ ಸಾಮರ್ಥ್ಯವನ್ನು ವಿದುನ್ಮಾನ ಸಾಧನಗಳು ಕುಂದಿಸಬಹುದು. ನಿಮ್ಮ ಮಕ್ಕಳ ಕೈಗಳು ದುರ್ಬಲವಾಗಿವೆ ಎನ್ನುವುದನ್ನು ಸೂಚಿಸುವ ಕೆಲವು ಎಚ್ಚರಿಕೆಯ ಸಂಕೇತಗಳು ಇಲ್ಲಿವೆ…

ಪೆನ್ಸಿಲ್ ಹಿಡಿತ
ದುರ್ಬಲ ಹಸ್ತಗಳನ್ನು ಹೊಂದಿರುವ ಮಗುವು ಬರೆಯುವಾಗ,ಚಿತ್ರ ಬಿಡಿಸುವಾಗ ಅಥವಾ ಬಣ್ಣ ಹಚ್ಚುವಾಗ ಆಗಾಗ್ಗೆ ಪೆನ್ಸಿಲ್‌ನ್ನು ಹಿಡಿದುಕೊಂಡ ಶೈಲಿಯನ್ನು ಬದಲಿಸುತ್ತಲೇ ಇರುತ್ತದೆ ಮತ್ತು ಅದಕ್ಕೆ ಸುಲಭವಾಗಿ ಸುಸ್ತಾಗುವುದರಿಂದ ಸಾಮಾನ್ಯವಾಗಿ ಎರಡೂ ಕೈಗಳನ್ನು ಬಳಸುತ್ತಿರುತ್ತದೆ. ಮಗುವಿನ ಹಸ್ತಗಳು ದುರ್ಬಲವಾಗಿದ್ದರೆ ನರ್ಸರಿಗೆ ಹೋಗುವ ಮಗು ಕೂಡ ಪೆನ್ಸಿಲ್‌ನ್ನು ಹೆಬ್ಬೆರಳು,ತೋರುಬೆರಳು ಮತ್ತು ಮಧ್ಯದ ಬೆರಳಿನ ಬದಲಾಗಿ ಮುಷ್ಠಿಯಲ್ಲಿ ಹಿಡಿದುಕೊಳ್ಳುತ್ತದೆ.

ಬರವಣಿಗೆ
ಬರೆಯುವಾಗ ಪೆನ್ಸಿಲ್‌ನ್ನು ನಿಯಂತ್ರಿಸುವುದು ಕಷ್ಟವಾಗುವುದು ಇನ್ನೊಂದು ಎಚ್ಚರಿಕೆಯ ಸಂಕೇತವಾಗಿದೆ. ಇದರಿಂದಾಗಿ ಮಗುವಿನ ಅಕ್ಷರಗಳು ಓರಕೋರೆಯಾಗುತ್ತವೆ ಮತ್ತು ಓದಲು ಅಸಾಧ್ಯವಾಗುತ್ತವೆ. ಅಲ್ಲದೆ ಇಂತಹ ಮಕ್ಕಳು ಬರೆಯುವಾಗ ಅತ್ಯಂತ ಕಡಿಮೆ ಒತ್ತಡವನ್ನು ಹಾಕುವುದರಿಂದ ಕಾಗದದ ಮೇಲೆ ಅಕ್ಷರಗಳು ಸ್ಪಷ್ಟವಾಗಿ ಮೂಡುವುದಿಲ್ಲ.

ಊಟದ ಸಂದರ್ಭ
ದುರ್ಬಲ ಹಸ್ತಗಳನ್ನು ಹೊಂದಿರುವ ಮಕ್ಕಳಿಗೆ ಡಬ್ಬಿಗಳ ಮುಚ್ಚಳವನ್ನು ತೆರೆಯುವುದು ಅಥವಾ ಊಟದ ಪ್ಯಾಕೆಟ್‌ನ್ನು ಹರಿಯುವುದು ಕಷ್ಟವಾಗುವುದರಿಂದ ಊಟದ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗಬಹುದು. ನೀರಿನ ಬಾಟ್ಲಿಯ ಮುಚ್ಚಳವನ್ನು ತೆರೆಯುವುದೂ ಕಷ್ಟವಾಗಬಹುದು,ಕೆಲವೊಮ್ಮೆ ಬೆರಳುಗಳಲ್ಲಿ ಎತ್ತಿಕೊಂಡ ಆಹಾರ ಕೆಳಕ್ಕೂ ಬೀಳಬಹುದು.

ಬಟ್ಟೆಗಳನ್ನು ಧರಿಸುವುದು
ಹಸ್ತಗಳು ದುರ್ಬಲವಾಗಿದ್ದರೆ ಮಕ್ಕಳಿಗೆ ಸಾಕ್ಸ್ ಮತ್ತು ಶೂಗಳನ್ನು ಧರಿಸುವುದು,ಶೂಗಳ ಲೇಸ್‌ಗಳನ್ನು ಕಟ್ಟುವುದು ಕಷ್ಟವಾಗುತ್ತದೆ. ಬೆಲ್ಟ್‌ನ್ನು ಎಳೆದು ಧರಿಸುವುದು,ಉಡುಪಿನ ಬಟನ್‌ಗಳನ್ನು ಹಾಕಿಕೊಳ್ಳುವ ಮತ್ತು ತೆರೆಯುವ ಹಾಗೂ ಝಿಪ್ ಎಳೆದುಕೊಳ್ಳುವಂತಹ ಸರಳ ಕೆಲಸಗಳೂ ಅವರಿಗೆ ಭಾರೀ ಎನಿಸುತ್ತವೆ.

ಆಟದ ಸಮಯ
ದುರ್ಬಲ ಕೈಗಳುಳ್ಳ ಮಕ್ಕಳಿಗೆ ಆಟಿಕೆಗಳು ಅಥವಾ ಆಟಗಳಲ್ಲಿ ಉತ್ಸಾಹವು ಕಡಿಮೆಯಾಗಬಹುದು. ಆಟಿಕೆಗಳು ಅಥವಾ ಸಣ್ಣಪುಟ್ಟ ವಸ್ತುಗಳನ್ನು ಅವರು ಕೆಳಕ್ಕೆ ಹಾಕುವುದು ಸಾಮಾನ್ಯವಾಗಿದೆ. ಕಲೆ ಮತ್ತು ಕರಕುಶಲ ಚಟುವಟಿಕೆಗಳೂ ಅವರಿಗೆ ದಣಿವನ್ನುಂಟು ಮಾಡುತ್ತದೆ. ಹೊರಾಂಗಣ ಕ್ರೀಡೆಗಳು,ಅವು ವಿಶೇಷವಾಗಿ ಹತ್ತುವುದು ಮತ್ತು ಆಟದ ಸಾಧನಗಳ ಬಳಕೆಯನ್ನು ಒಳಗೊಂಡಿದ್ದರೆ ಅವರಿಗೆ ಬೇಗನೇ ಬಳಲಿಕೆಯನ್ನುಂಟು ಮಾಡಬಹುದು. ಈ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಾಗಿದಿರುವುದು ಅವರಲ್ಲಿ ಹತಾಶೆಗೆ ಕಾರಣವಾಗುತ್ತದೆ.

ಸ್ವಂತದ ಕೆಲಸಗಳು ಕಷ್ಟವಾದರೆ
ಟೂಥ್‌ಪೇಸ್ಟ್ ಅಥವಾ ಇತರ ಟಾಯ್ಲೆಟರಿ ಸಾಧನಗಳನ್ನು ತೆರೆಯಲು ನಿಮ್ಮ ಮಗುವಿಗೆ ಸಾಧ್ಯವಾಗುತ್ತಿಲ್ಲವಾದರೆ, ಸೋಪ್ ಕಂಟೇನರ್‌ನ ಪಂಪ್ ಒತ್ತುವುದು ಸಮಸ್ಯೆಯಾಗುತ್ತಿದ್ದರೆ ಅಥವಾ ಕೈಗಳನ್ನು ತೊಳೆಯಲು ನಲ್ಲಿಯನ್ನು ತಿರುಗಿಸಲು ಕಷ್ಟವಾಗುತ್ತಿದ್ದರೆ ಅದು ದುರ್ಬಲ ಕೈಗಳನ್ನು ಸೂಚಿಸುತ್ತದೆ.

Comments are closed.