ಆರೋಗ್ಯ

ಹೈಪರ್ ಟನ್ಷನ್(ಅಧಿಕ ರಕ್ತದೊತ್ತಡ ) ಬಗ್ಗೆ ತಿಳಿಯಲೇಬೇಕಾದ ಕೆಲವು ಸಂಗತಿಗಳು

Pinterest LinkedIn Tumblr

ಅಧಿಕ ರಕ್ತದೊತ್ತಡ ಎಂದರೆ ಕೇವಲ ವಯೋವೃದ್ಧರಿಗೆ ಮಾತ್ರವಲ್ಲ, ಇತ್ತೀಚಿನ ದಿನಮಾನಗಳಲ್ಲಿ 45 ವರ್ಷಗಳು ದಾಟದ ಅನೇಕ ಮಧ್ಯ ವಯಸ್ಕರಿಗೂ ಶುರುವಾಗತೊಡಗಿದೆ. ಇನ್ನೂ 15-20 ವರ್ಷಗಳು ಅವರ ಸಶಕ್ತ ಜೀವನ ಸಾಗಿಸುವಷ್ಟು ಸಮಯ ಇರುವಾಗಲೇ ದೇಹಕ್ಕೆ ಖಾಯಿಲೆಗಳು ಅಂಟಿಕೊಳ್ಳುವುದು ವಿಷಾದನೀಯ ಸಂಗತಿಯೇ ಸರಿ.

ಅಧಿಕ ರಕ್ತದೊತ್ತಡ ( Hypertension ) ಎಂದರೆ ತನ್ನೊಳಗೇ ಹರಿಯುವ ರಕ್ತವು ರಕ್ತನಾಳಗಳ ಮೇಲೆ ಬೀರುವ ಸುದೀರ್ಘ ಮತ್ತು ಅಧಿಕ ಪ್ರಮಾಣದ ಒತ್ತಡ.

ಸಾಧಾರಣ ರಕ್ತದೊತ್ತಡ

ಸಿಸ್ಟೋಲಿಕ್(80-120mmHg)/ ಡಯಾಸ್ಟೋಲಿಕ್(60-80mmHg)

ಅಧಿಕ ರಕ್ತದೊತ್ತಡದ ಹಂತಗಳು:

ಆರಂಭಿಕ ಹಂತ: 120-139/80-89 mmHg
ಹಂತ-1 : 140-159/90-99 mmHg
ಹಂತ-2 : 160 ಕ್ಕಿಂತ ಹೆಚ್ಚು/100 ಕ್ಕಿಂತ ಹೆಚ್ಚು mmHg

ರೋಗಿಯ ತುರ್ತು ಸಂದರ್ಭ:
180 ಕ್ಕಿಂತ ಹೆಚ್ಚು/110 ಕ್ಕಿಂತ ಹೆಚ್ಚು mmHg
ಸಾಮಾನ್ಯವಾಗಿ ಸತತ ಮೂರು ಬಾರಿ ಬೇರೆ ಬೇರೆ ಸಮಯದಲ್ಲಿ ಪರೀಕ್ಷೆ ಮಾಡಿದ ರಕ್ತದೊತ್ತಡಗಳು ಅಧಿಕವಾಗಿಯೇ ಇದ್ದರೆ ಅದನ್ನು ಅಧಿಕ ರಕ್ತದೊತ್ತಡ ಅಂದು ಪರಿಗಣಿಸಲಾಗುತ್ತದೆ.

ಕಾರಣಗಳು
• ಶೇ.90 – 95 ರೋಗಿಗಳಲ್ಲಿ ಅದು ಕೇವಲ ಅವರ ಜೀವನಶೈಲಿ ( ಊಟದಲ್ಲಿ ಹೆಚ್ಚು ಉಪ್ಪು ಬಳಕೆ, ಅಧಿಕ ತೂಕ, ಧೂಮಪಾನ, ಮದ್ಯಪಾನ) ಅಥವಾ ಅನುವಂಶಿಕವಾಗಿ ಬಂದಿರುತ್ತದೆ.
• ಇನ್ನೂ ಉಳಿದ ಸಂದರ್ಭಗಳಲ್ಲಿ ಕಿಡ್ನಿ ತೊಂದರೆ, ವಿವಿಧ ಗ್ರಂಥಿಗಳ ಖಾಯಿಲೆಗಳಲ್ಲಿ, ಮತ್ತು ಸಂತಾನವಿರೋಧಿ ಮಾತ್ರೆಗಳನ್ನು ಸೇವಿಸುವವರಲ್ಲಿ ಹೆಚ್ಚು ಕಂಡುಬರುತ್ತದೆ

ಗುಣಲಕ್ಷಣಗಳು
• ಅತೀ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಯು ಇನ್ಯಾವುದೋ ಆರೋಗ್ಯ ಸಮಸ್ಯೆಗೆ ವೈದ್ಯರ ಬಳಿ ಹೋದಾಗ ಅಧಿಕ ರಕ್ತದೊತ್ತಡ ಕಾಣಸಿಗುವುದುಂಟು.
• ತಲೆನೋವು(ಬಹುತೇಕ ಹಿಂಬಾಗದಲ್ಲಿ)
• ತಲೆ ಹಗುರವೆನಿಸುವುದು
• ತಲೆಸುತ್ತು, ಕಿವಿಯಲ್ಲಿ ಶಬ್ಧವಾಗವುದು
• ಸುಸ್ತಾಗುವುದು, ಬೆವರುವುದು
• ಗಾಬರಿಯಾಗುವುದು

ಪರಿಣಾಮಗಳು
ಸುದೀರ್ಘ ಕಾಲದ ಬಳಿಕ ವಿವಿಧ ಅಂಗಾಂಗಗಳ ರಕ್ತನಾಳಗಳಲ್ಲಿಯೂ ಅಧಿಕ ರಕ್ತದೊತ್ತಡ ಉಂಟಾಗಿ ಅವುಗಳ ಮೇಲೆ ಪರಿಣಾಮ ಬೀರುವುದುಂಟು.

• ಹೃದಯ ರಕ್ತನಾಳಗಳ ಖಾಯಿಲೆ
• ಕಣ್ಣುಗಳ ಮೇಲೆ ಪರಿಣಮಿಸಿ, ಮುಂದೆ ಕಣ್ಣು ಕುರುಡಾಗಬಹುದು
• ಮಿದುಳಿನಲ್ಲಿ ರಕ್ತಸ್ರಾವ,
• ಸ್ಟ್ರೋಕ್ ಉಂಟಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಬಹುದು
• ಕಿಡ್ನಿ ತೊಂದರೆ
• ಶ್ವಾಸಕೋಶಗಳಲ್ಲಿ ನೀರು ತುಂಬಿಕೊಳ್ಳುವುದು

ಪರೀಕ್ಷೆಗಳು
ಸಾಮಾನ್ಯವಾಗಿ ರೋಗಿಗೆ ಯಾವ ರೀತಿಯ ಗುಣಲಕ್ಷಣಗಳು ಇವೆಯೋ ಅದಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕೆಲವೊಮ್ಮೆ ಸಂದರ್ಭಾನುಸಾರ ಈ ಕೆಳಗಿನ ಎಲ್ಲಾ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ.

• ಕಣ್ಣುಗಳ ಫಂಡಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
• ಇಸಿಜಿ
• ರಕ್ತದಲ್ಲಿ ಸೋಡಿಯಮ್ ಮತ್ತು ಇತರ ಲವಣಾಂಶಗಳ ಪರೀಕ್ಷೆ
• ಮೂತ್ರ ಪರೀಕ್ಷೆ
• ಲಿಪಿಡ್ ಪ್ರೊಫೈಲ್
• ಎದೆಯ ಎಕ್ಸ್‍ರೇ
• ರೋಗಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ತಲೆಯ ಸಿ.ಟಿ. ಇಲ್ಲವೇ ಎಮ್.ಆರ್.ಐ. ಸ್ಕ್ಯಾನ್ ಮಾಡಬೇಕಾಗುತ್ತದೆ

ಚಿಕಿತ್ಸೆ
ವ್ಯಕ್ತಿಗೆ ಅಧಿಕ ರಕ್ತದೊತ್ತಡವಿದೆಯೆಂದು ಖಾತರಿಯಾದ ಬಳಿಕ ವ್ಯಕ್ತಿಗೆ ತಕ್ಷಣವೇ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡುವುದಿಲ್ಲ. ಬದಲಾಗಿ ಸುಮಾರು ಒಂದು ತಿಂಗಳವರೆಗೂ ಆ ವ್ಯಕ್ತಿಗೆ ಜೀವನ ಶೈಲಿ ಬದಲಾವಣೆಗಳ ಸಲಹೆ ನೀಡಲಾಗುತ್ತದೆ.
ಆರಂಭಿಕ ಹಂತದ ಮತ್ತು ಮೊದಲ ಹಂತದ ವ್ಯಕ್ತಿಗಳು ಕೇವಲ ಜೀವಶೈಲಿ ಬದಲಾವಣೆಗೆಯೇ ಒಂದಿಷ್ಟು ಕಾಲದ ಬಳಿಕ ಸಾಧಾರಣ ಹಂತಕ್ಕೆ ಬರುತ್ತಾರೆ. ಅವರಿಗೆ ಬೇರೆ ಔಷಧಗಳು ಅವಶ್ಯಕತೆ ಇರುವುದಿಲ್ಲ. ಬದಲಾಗಿ ಇಷ್ಟಕ್ಕೂ ಸಾಧಾರಣ ಹಂತಕ್ಕೆ ತಲುಪದೇ ಇರುವವರಿಗೆ ಮತ್ತು ಎರಡನೇ ಹಂತ ತಲುಪಿರುವ ರೋಗಿಗಳಿಗೆ ಆಯಾ ರೋಗಿಗಳಿಗೆ ತಕ್ಕಂತೆ ಔಷಧಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಆದರೆ ಅಧಿಕ ರಕ್ತದೊತ್ತಡ ಖಾಯಿಲೆಗೆ ಜೀವನ ಶೈಲಿ ಬದಲಾವಣೆಗಳೇ ಮೊದಲ ಆದ್ಯತಾ ಚಿಕಿತ್ಸೆಯಾಗಿರುತ್ತದೆ.
ಆದರೆ ರೋಗಿಯು ತುರ್ತುಪರಿಸ್ಥಿಗೆಗೆ ಹೋಗುವಷ್ಟು ರಕ್ತದೊತ್ತಡ ಕಂಡರೆ ಆಗ ಇಂಜೆಕ್ಷನ್ ರೂಪದಲ್ಲೇ ತಕ್ಷಣ ಚಿಕಿತ್ಸೆ ನೀಡಬೇಕಾಗುತ್ತದೆ.

ಮುಂಜಾಗ್ರತಾ ಕ್ರಮಗಳು
• ದೇಹತೂಕವು ನಮ್ಮ ಎತ್ತರಕ್ಕೆ ಅನುಗುಣವಾಗಿ, ಅದಕ್ಕೂ ಹೆಚ್ಚು ಆಗದಂತೆ ಗಮನಹರಿಸಬೇಕು
• ಊಟದಲ್ಲಿ ಉಪ್ಪಿನ ಅಂಶ ಹಿಡಿತವಿರಲಿ
• ಪ್ರತಿದಿನವೂ ಕನಿಷ್ಠ ಅರ್ಧ ಗಂಟೆ ಕಾಲ ಕಾಲ್ನಡಿಗೆ
• ಧೂಮಪಾನ ಮತ್ತು ಮದ್ಯಪಾನಗಳನ್ನು ಕಡಿತಗೊಳಿಸುವದು
• ಕೆಲಸದಲ್ಲಿ ಮಾನಸಿಕ ಒತ್ತಡಗಳು ಇಲ್ಲದಿರಲಿ
ಇದಿಷ್ಟು ಮಾಹಿತಿ ಹೈಪರ್ ಟನ್ಷನ್ ಬಗೆಗೆ. ಪ್ರತಿಯೊಬ್ಬರೂ ಈ ಮಾಹಿತಿಯನ್ನ ಇತರಿಗೆ ತಿಳಿಸಿ ಅವರ ಆರೋಗ್ಯ ಸುಸ್ಥಿತಿಯಲ್ಲಿಡಲು ಸಹಕರಿಸಿ.

Comments are closed.