ತರಕಾರಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಅನುಕೂಲಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಅನೇಕರಿಗೆ ಹಾಗಲಕಾಯಿ ಹಾಗೂ ಬೀಟ್ ರೂಟ್ ಅಂದ್ರೆ ಅದೇನೊ ಅಲರ್ಜಿ. ಆದರೆ ಈ ಎರಡು ತರಕಾರಿಗಳಿಂದ ಸಿಗುವ ಪ್ರಯೋಜನಗಳು ಅಷ್ಟಿಷ್ಟಲ್ಲ. ಬೀಟ್ ರೂಟ್ ಅನ್ನು ದಿನನಿತ್ಯ ತಿನ್ನುವುದರಿಂದ ನಮ್ಮ ದೇಹದಲ್ಲಿನ ರಕ್ತ ಸ್ವಚ್ಛವಾಗುತ್ತದೆ ಎನ್ನುತ್ತಾರೆ ವೈದ್ಯರು. ರಕ್ತಹೀನತೆಯ ಸಮಸ್ಯೆಯಿದ್ದರೂ ಬೀಟ್ ರೂಟ್ಗಳನ್ನು ಸೇವಿಸುವುದರಿಂದ ಪರಿಹಾರ ಕಾಣಬಹುದು. ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದಾದ ಈ ತರಕಾರಿಯ ಜ್ಯೂಸ್ನಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಬೀಟ್ ರೂಟ್ನಲ್ಲಿ ಆ್ಯಂಟಿ-ಆ್ಯಕ್ಸಿಡೆಂಟ್ಸ್ ಅಂಶಗಳು ಹೇರಳವಾಗಿದೆ. ಇದರೊಂದಿಗೆ ಕ್ಯಾಲ್ಸಿಯಂ, ಮೆಗ್ನಿಷಿಯಂ, ಐರನ್, ಸೋಡಿಯಂ, ಪೊಟ್ಯಾಷಿಯಂ, ಫಾಸ್ಪರಸ್, ಕ್ಲೋರಿನ್ ಮತ್ತು ಐಯೋಡಿನ್ ಸೇರಿದಂತೆ ಅನೇಕ ಪ್ರಮುಖ ಜೀವ ಸತ್ವಗಳನ್ನು ಹೊಂದಿರುವ ತರಕಾರಿ ಬೀಟ್ ರೂಟ್. ಇಷ್ಟೆಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಇದರ ರಸವನ್ನು ಕುಡಿದರೆ ಒಂದೇ ಬಾರಿ ಅನೇಕ ಆರೋಗ್ಯಕಾರಿ ಪ್ರಯೋಜನಗಳು ಲಭಿಸುತ್ತದೆ. ಬೀಟ್ ರೂಟ್ ಜ್ಯೂಸ್ ಹಸಿವನ್ನು ತಕ್ಷಣ ನೀಗಿಸುವುದಲ್ಲದೆ, ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ.
ಹಣ್ಣುಗಳ ಅಥವಾ ತರಕಾರಿ ಜ್ಯೂಸ್ ಕುಡಿಯ ಬಯಸಿದರೆ ನಿಮ್ಮ ಮೊದಲ ಆಯ್ಕೆ ಬೀಟ್ ರೂಟ್ ಆಗಿರಲಿ. ಇದಕ್ಕೆ ನಿಂಬೆ ಮತ್ತು ಶುಂಠಿ ರಸವನ್ನು ಮಿಶ್ರಣ ಮಾಡಿ ಕುಡಿಯುವುದು ಕೂಡ ಒಳ್ಳೆಯದು. ಪ್ರತಿನಿತ್ಯ ಬೀಟ್ ರೂಟ್ ಜ್ಯೂಸ್ ಸೇವಿಸಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಲ್ಲದೆ ನೈಟ್ರೇಟ್ ರಕ್ತನಾಳ ಬೆಳವಣಿಗೆಗೆ ಸಹಕರಿಸುತ್ತದೆ.
ಇದಲ್ಲದೆ ಬೀಟ್ ರೂಟ್ ರಸದಿಂದ ನಿಮ್ಮ ಮೆದುಳಿಗೆ ರಕ್ತ ಪರಿಚಲನೆ ಸಹ ಹೆಚ್ಚಾಗುತ್ತದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯು ಈ ಜ್ಯೂಸ್ ಸೇವನೆಯಿಂದ ದೂರವಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಆ್ಯಂಟಿ ಅಕ್ಸಿಡೆಂಟ್ಸ್ ಮತ್ತು ನ್ಯೂಟ್ರಿಯೆಂಟ್ಸ್ ಇಮ್ಯುನ್ ಸಿಸ್ಟಂ ಅನ್ನು ಬಲಪಡಿಸುತ್ತದೆ. ಇದರಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗಗಳು ದೂರವಾಗುತ್ತದೆ. ಒಟ್ಟಿನಲ್ಲಿ ಬೀಟ್ ರೂಟ್ ಸೇವನೆಯಿಂದ ಆರೋಗ್ಯ ವೃದ್ಧಿಸುವುದಲ್ಲದೆ, ರೋಗಾಣುಗಳಿಂದ ದೇಹವನ್ನು ರಕ್ಷಿಸುತ್ತದೆ.
Comments are closed.