ಆರೋಗ್ಯ

ಒತ್ತಡದ ಜೀವನಶೈಲಿ, ಕ್ರಮಬದ್ಧವಲ್ಲದ ಆಹಾರಕ್ರಮದಿಂದ ತಾಯಂದಿರು ಖಿನ್ನತೆ!

Pinterest LinkedIn Tumblr


ಬೆಂಗಳೂರು: ಒತ್ತಡದ ಜೀವನಶೈಲಿ, ಕ್ರಮಬದ್ಧವಲ್ಲದ ಆಹಾರಕ್ರಮದಿಂದಾಗಿ ತಾಯಂದಿರು ಖಿನ್ನತೆಯಿಂದ ಬಳಲುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ.

‘ಎಡೆಬಿಡದೆ ಅಳುವ ಮಕ್ಕಳು, ಆಗಾಗ್ಗೆ ಮಲಮೂತ್ರ ವಿಸರ್ಜನೆ, ಊಟ, ತಿಂಡಿಗೆ ಕಾಡಿಸುವುದು, ಜೊತೆಗೆ ಕುಟುಂಬದ ನಿರ್ವಹಣೆ, ಹಿರಿಯರ ಬುದ್ಧಿಮಾತುಗಳು. ಈ ಎಲ್ಲ ಕಾರಣಗಳಿಂದಾಗಿ ಮನಸ್ಸನ್ನು ಒಂದು ಕಡೆಗೆ ಕೇಂದ್ರೀಕರಿಸಲು ಆಗುತ್ತಿಲ್ಲ. ನಿದ್ರೆ ಪೂರ್ಣವಾಗುತ್ತಿಲ್ಲ. ಈ ರೀತಿ ಹೇಳಿಕೊಂಡು ಬರುವ ತಾಯಂದಿರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ’ ಎನ್ನುತ್ತಾರೆ ಅಪೋಲೊ ಆಸ್ಪತ್ರೆಯ ಮನೋವೈದ್ಯೆ ಶೋಭಾ.

ಈ ರೀತಿಯ ಸಮಸ್ಯೆಗಳನ್ನು ಬಹಳಷ್ಟು ಮಂದಿ ವೈದ್ಯಕೀಯ ದೃಷ್ಟಿಯಿಂದ ನೋಡುತ್ತಿಲ್ಲ. ಆಕೆಗೆ ಅತಿಯಾದ ಸೊಕ್ಕು ಎಂದು ಕೆಲವರು ನಿರ್ಲಕ್ಷಿಸಿದರೆ, ಇನ್ನು ಕೆಲವರು, ‘ಮಗುವಾಗಿದ್ದರಿಂದ ಅವಳ ಸ್ವಾತಂತ್ರ್ಯಹರಣ ಆಗಿದೆ. ಇದಕ್ಕಾಗಿಯೇ ಹೀಗೆ ಮಾಡುತ್ತಿದ್ದಾಳೆ’ ಎಂದು ಹೇಳಿ ಸುಮ್ಮನಾಗಿಬಿಡುತ್ತಾರೆ.

ಮನಸ್ಸಿನ ದ್ವಂದ್ವಗಳನ್ನು ವೈದ್ಯರ ಬಳಿ ಹೇಳಿಕೊಳ್ಳುವವರು ಭಾರತದಲ್ಲಿ ಶೇ 2ರಷ್ಟು ಮಹಿಳೆಯರು ಮಾತ್ರ. ಉಳಿದವರು ಯಾರ ಹತ್ತಿರವೂ ಹೇಳದೇ ಸುಮ್ಮನಾಗಿ ಬಿಡುತ್ತಾರೆ. ಕೆಲವು ಪ್ರಕರಣಗಳು ಮಾತ್ರ ಗಂಭೀರ ಸ್ವರೂಪ ಪಡೆದುಕೊಂಡ ಉದಾಹರಣೆಗಳೂ ಇವೆ.

ಭಾರತದಲ್ಲಿ ಒಟ್ಟಾರೆ ಶೇ 10ರಿಂದ 15ರಷ್ಟು ಮಹಿಳೆಯರು ಪ್ರಸವಾನಂತರದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಶೇ 1ರಷ್ಟು ತಾಯಂದಿರು ಆತಂಕದಲ್ಲಿ ಕಾಲದೂಡುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವರ್ಷಕ್ಕೆ 9.5 ಲಕ್ಷ ಮಹಿಳೆಯರು ಖಿನ್ನತೆಯನ್ನು ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಈ ಪ್ರಮಾಣ ಶೇ 9 ರಷ್ಟಿದೆ.

ಮೊದಲ ಮಗುವಿಗೆ ತಾಯಿಯಾದವರಲ್ಲಿ ಖಿನ್ನತೆಗೆ ಒಳಗಾಗುವ ಸಂಖ್ಯೆ ಹೆಚ್ಚಿದೆ. ಅದರಲ್ಲೂ 25ರಿಂದ 32 ವರ್ಷದೊಳಗಿನ ತಾಯಂದಿರಲ್ಲಿ ಈ ಸಮಸ್ಯೆ ಹೆಚ್ಚು.

ಸಮಸ್ಯೆ ಏಕೆ: ಮಗು ಹುಟ್ಟಿದ ಮೊದಲ ದಿನದಿಂದ ಮೂರು ವಾರಗಳಲ್ಲಿ ತಾಯಂದಿರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಬದಲಾಗುವ ಹಾರ್ಮೋನ್‌ಗಳು ಕೂಡ ಇದಕ್ಕೆ ಕಾರಣವಾಗುತ್ತದೆ. ಮಗು ಹುಟ್ಟಿದ ಬಳಿಕ ತಾಯಿ ಪುಳಕಿತಳಾಗುತ್ತಾಳೆ. ಸಂತೋಷ ಪಡುತ್ತಾಳೆ. ಅದರ ಜೊತೆಗೆ ಪ್ರಸವದ ನಂತರದ ದೈಹಿಕ ಬದಲಾವಣೆಗಳು ಆಕೆಯನ್ನು ಆತಂಕಕ್ಕೆ ಒಡ್ಡುತ್ತವೆ. ಈ ಸಂದರ್ಭಗಳಲ್ಲಿ ಸುಮ್ಮ ಸುಮ್ಮನೇ ಅಳುತ್ತಾರೆ. ಕಿರಿಕಿರಿ ಮಾಡಿಕೊಂಡು ಎಲ್ಲರ ಮೇಲೂ ಕೂಗಾಡುತ್ತಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ನಾವು ‘ಬೇಬಿ ಬ್ಲೂಸ್‌’ ಎಂದು ಕರೆಯುತ್ತೇವೆ ಎಂದು ಮನೋವೈದ್ಯೆ ಶೋಭಾ ಹೇಳುತ್ತಾರೆ.

ಬಹುತೇಕ ಪ್ರಕರಣಗಳಲ್ಲಿ ಈ ರೀತಿಯ ಸಮಸ್ಯೆಗಳು ಒಂದೆರಡು ವಾರಗಳಲ್ಲಿ ಕಡಿಮೆಯಾಗಿಬಿಡುತ್ತದೆ. ಆದರೆ, ಕೆಲವರು ಮಾತ್ರ ಅದರಿಂದ ಹೊರಬರಲು ಸಾಕಷ್ಟು ಕಷ್ಟಪಡುತ್ತಾರೆ. ದೀರ್ಘ ಕಾಲದ ಖಿನ್ನತೆ ನಮ್ಮ ದೈನಂದಿನ ಕೆಲಸ ಕಾರ್ಯದ ಮೇಲೆ ಕೂಡ ಪ್ರಭಾವ ಬೀರಬಹುದು. ಮಾನಸಿಕ ಒತ್ತಡ ಹೆಚ್ಚಬಹುದು. ಇದು ಉದ್ಯೋಗಸ್ಥ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತಿದೆ. ಸರಿಯಾದ ಸಮಯಕ್ಕೆ ಆರೈಕೆ ಸಿಗದಿರುವುದು, ಗರ್ಭಾವಸ್ಥೆಯ ಸಂದರ್ಭಗಳಲ್ಲಿ ರಜೆ ಸಿಗದೆ ಕೆಲಸ ಮಾಡುವುದು, ತಾಯಿಯಾದ ಬಳಿಕ ಒತ್ತಡದ ಕೆಲಸಗಳನ್ನು ಮಾಡುವುದು ಇವು.. ತಾಯಂದಿರನ್ನು ಗಂಭೀರ ಸಮಸ್ಯೆಗಳಿಗೆ ದೂಡುತ್ತವೆ ಎಂದು ಹೇಳಿದರು.

ಇದಕ್ಕೆ ನಾವು ಕೆಲವು ಪರಿಹಾರಗಳನ್ನು ಅವರಿಗೆ ಸೂಚಿಸುತ್ತೇವೆ. ಇದರಲ್ಲಿ ಮುಖ್ಯವಾದವು ಎಂದರೆ ಪತಿಯೊಂದಿಗೆ ಆಪ್ತಸಮಾಲೋಚನೆ ಮಾಡಬಹುದು ಜೊತೆಗೆ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುವಂತೆ ಸಲಹೆ ನೀಡಿದ್ದೇವೆ ಎಂದರು.

ಲಕ್ಷಣಗಳೇನು..

* ಯಾರೊಂದಿಗೂ ಮಾತನಾಡದೇ ಇರುವುದು

* ಕುಟುಂಬ ಹಾಗೂ ಸ್ನೇಹಿತರಿಂದ ದೂರ ಉಳಿಯುವ ಭಯ

* ಊಟ, ನಿದ್ರೆಯಲ್ಲಿ ಸಾಕಷ್ಟು ಬದಲಾವಣೆ

* ಅತಿಯಾದ ಸಿಟ್ಟು, ಕಿರಿಕಿರಿ ಮಾಡುವುದು

* ಆತಂಕ, ಹತಾಶೆಯಲ್ಲಿ ಕಾಲ ಕಳೆಯುವುದು

* ಭಾವನಾತ್ಮಕ ಒತ್ತಡ ಅನುಭವಿಸುವುದು

ಕಾರಣಗಳೇನು..

* ಹಾರ್ಮೋನ್‌ಗಳಲ್ಲಿ ಬದಲಾವಣೆ

* ಕೌಟುಂಬಿಕ ಸಮಸ್ಯೆ, ಅಭದ್ರತೆ, ಉದ್ಯೋಗ ಹಾಗೂ ಭವಿಷ್ಯದ ಚಿಂತೆ

* ಕುಟುಂಬದ ಬೆಂಬಲದ ಕೊರತೆ

* ಪ್ರವಸದ ವೇಳೆ ಅನುಭವಿಸಿದ ಹಿಂಸೆ ಹಾಗೂ ನೋವು

* ಒತ್ತಡದ ಜೀವನಶೈಲಿ, ಆಹಾರಕ್ರಮ

* ಸ್ನೇಹಿತರ ಬೆಂಬಲ ಕಳೆದುಕೊಳ್ಳುವುದು

ಪರಿಹಾರಗಳು

* ಅವಿಭಕ್ತ ಕುಟುಂಬ ಹಾಗೂ ಬೆಂಬಲ

* ಪತಿ ಹಾಗೂ ಕುಟುಂಬಸ್ಥರ ಪ್ರೀತಿ, ವಿಶ್ವಾಸ

* ಸರಿಯಾದ ಸಮಯಕ್ಕೆ ನಿದ್ದೆ, ಪೌಷ್ಟಿಕ ಆಹಾರ ಸೇವನೆ

* ವ್ಯಾಯಾಮ, ಯೋಗ, ಧ್ಯಾನ ಹಾಗೂ ಸಂಗೀತ ಕೇಳುವುದು

‘ನಾನು ಖಿನ್ನತೆಯಂತಹ ಸಮಸ್ಯೆಗಳನ್ನು ಎದುರಿಸಿಲ್ಲ. ಯಾಕೆಂದರೆ ಅಮ್ಮ, ಅಕ್ಕ, ಅತ್ತೆ, ಎಲ್ಲರೂ ನನಗೆ ಬೆಂಬಲವಾಗಿ ಇದ್ದರು. ಬೇಕು ಅಂದಾಗ ನನ್ನ ಸಹಾಯಕ್ಕೆ ಬರುತ್ತಿದ್ದರು. ಮಗು ಆಗುವುದಕ್ಕಿಂತ ಮೊದಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು’

– ಶ್ರುತಿ ರಾಘವೇಂದ್ರ, ಬೆಂಗಳೂರು

ನಮ್ಮ ಆಸ್ಪತ್ರೆಗೆ ತಿಂಗಳಿಗೆ 20ರಿಂದ 30 ತಾಯಂದಿರು ಖಿನ್ನತೆಯ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಿದ್ದಾರೆ

– ಶೋಭಾ, ಅಪೋಲೊ ಆಸ್ಪತ್ರೆಯ ಮನೋವೈದ್ಯೆ

‘ಮಗುವಾದ ಕೆಲವು ದಿನಗಳಲ್ಲಿಯೇ ನನಗೂ ಖಿನ್ನತೆಯ ಅನುಭವ ಆಗಿದೆ. ಅನತ್ಯವಾಗಿ ಕೋಪ ಬರುತ್ತಿತ್ತು. ತಾಳ್ಮೆ ಕಡಿಮೆ ಆಗಿತ್ತು. ಮಕ್ಕಳನ್ನು ನೋಡಿಕೊಳ್ಳುವಾಗ ಕಿರಿಕಿರಿ ಆಗುತ್ತಿತ್ತು. ಮಗುವಿಗೆ 5 ವರ್ಷ ಆಗುವ ವರೆಗೆ ಹಾಗೆ ಆಗುತ್ತದೆ’

– ಸುನಿತಾ, ಮಲ್ಲೇಶ್ವರ ವಾಸಿ

Comments are closed.