ನಿಮ್ಮ ಮನೆಯಲ್ಲಿ ಯಾವಾಗಲಾದರೂ ಕಾಫಿ ಪುಡಿಯನ್ನ ಬಹಳ ದಿನಗಳ ಕಾಲ ಹಾಗೆಯೇ ಬಿಟ್ಟು, ಅದರ ಗಡುವು ದಿನಾಂಕ ಮುಗಿದ ಮೇಲೆ ಅದನ್ನ ಹಾಗೆಯೇ ಬಿಸಾಡಿದ್ದಿರಾ? ಅಥವಾ ಬಹಳ ದಿನಗಳ ಕಾಲ ಕಾಫಿಪುಡಿಯನ್ನ ಹಾಗೆ ಇಟ್ಟದ್ದಕ್ಕೆ, ಅದರ ಮೇಲೆ ಒಂದು ವಿಚಿತ್ರವಾದ ಬಿಳಿ ಪದರು ಹರಡಿರುವುದನ್ನ ನೋಡಿ ಅದನ್ನ ಹೊರಹಾಕಿದೀರಾ? ಹಾಗಿದ್ದರೆ ನಿಮಗಿಲ್ಲಿದೆ ನೋಡಿ ಒಂದು ಒಳ್ಳೆಯ ಸುದ್ದಿ. ಉಳಿದ ಕಾಫೀಪುಡಿಯನ್ನ ಬಳಸಿಕೊಂಡು ಏನೆಲ್ಲಾ ಮಾಡಬಹುದು ಎಂದು ನಾವು ಇಲ್ಲಿ ತೋರಿಸಿಕೊಟ್ಟಿರುವುದನ್ನು ಓದಿದರೆ, ಇನ್ನು ಮುಂದೆ ನೀವು ಯಾವತ್ತಿಗೂ ಕಾಫಿಪುಡಿಯನ್ನ ಹೊರಗೆಸೆಯುವುದಿಲ್ಲ.
೧. ಮನೆಯಂಗಳದಲ್ಲಿನ ಗಿಡಗಳಿಗೆ ಗೊಬ್ಬರವಾಗಿ
ಕಾಫಿಪುಡಿಯು ನಿಮ್ಮ ಗಿಡಗಳಿಗೆ ಒಳ್ಳೆ ಮಿಶ್ರಗೊಬ್ಬರ ಆಗುತ್ತದೆ. ರೋಜಾ ಹೂವಿನ ಗಿಡದಂತಹ ಗಿಡಗಳಿಗೆ ಚೆನ್ನಾಗಿ ಬೆಳೆಯಲು ಆಮ್ಲಿಯ (ಅಸಿಡಿಕ್) ವಾತಾವರಣ ಬೇಕಿರುತ್ತದೆ. ಹೀಗಾಗಿ ಕಾಫಿಯು ಆ ಗಿಡಕ್ಕೆ ಅಸಿಡಿಟಿ ನೀಡಿ, ಅದು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ. ನೀವು ಸ್ವಲ್ಪ ಕಾಫಿಪುಡಿಯನ್ನು ಸುಣ್ಣದೊಂದಿಗೆ ಮಣ್ಣಿನಲ್ಲಿ ಬೆರೆಸಿದರೆ, ರೋಜಾ ಹೂವಿನ ಗಿಡದಂತಹ ಅನೇಕ ಗಿಡಗಳಿಗೆ ನೆರವಾಗುತ್ತದೆ.
೨. ನಿಮ್ಮ ಫ್ರಿಡ್ಜ್ ಡಿಯೋಡರೆಂಟ್ ಆಗಿ
ನಿಮ್ಮ ಫ್ರಿಡ್ಜ್ ಅಲ್ಲಿ ನೆನ್ನೆಯ ಕತ್ತರಿಸಿದ ಈರುಳ್ಳಿ ಇಟ್ಟಿ, ಈಗ ಅದರ ತುಂಬಾ ವಾಸನೆ ತುಂಬಿದೆಯೇ? ಹಾಗಿದ್ದರೆ ಒಂದು ಬೌಲ್ ಅಲ್ಲಿ ನೀರಿಗೆ ಕಾಫಿ ಪುಡಿಯನ್ನ ಬೆರೆಸಿ ಫ್ರಿಡ್ಜ್ ಅಲ್ಲಿಡಿ. ಸ್ವಲ್ಪ ಹೊತ್ತು ಬಿಟ್ಟು ನೀವು ಮುಂದಿನ ಬಾರಿ ಫ್ರಿಡ್ಜ್ ಬಾಗಿಲು ತೆರೆದಾಗ, ವಾಸನೆ ಹೋಗಿ, ತಾಜಾತನ ಫ್ರಿಡ್ಜ್ ಅಲ್ಲಿ ಮನೆ ಮಾಡಿರುತ್ತ್ತದೆ.
೩. ಕೂದಲಿಗೆ ಡೈ ಆಗಿ
ಕಾಫಿಯು ಒಂದು ಅದ್ಭುತವಾದ ನೈಸರ್ಗಿಕ ಕೂದಲ ಡೈ ಆಗಿ ಕೆಲಸ ಮಾಡುತ್ತದೆ. ನಿಮ್ಮ ಕಪ್ಪು ಕೂದಲು ನೈಸರ್ಗಿಕವಾದ ಮತ್ತು ಆರೋಗ್ಯಕರವಾದ ಹೊಳಪನ್ನು ಪಡೆದುಕೊಳ್ಳುತ್ತದೆ ಮತ್ತು ಇದು ಅಂಗಡಿಯಿಂದ ತರುವ ರಾಸಾಯನಿಕ ಡೈ ಗಿಂತ ಬಹಳ ಉತ್ತಮ.
೪. ನಿಮ್ಮ ಮುಖಕ್ಕೆ ಕಾಂತಿ ತಂದುಕೊಡಲು
ಕಾಫಿಯು ಒಂದು ಅಬ್ರಾಸಿವ್ (ಅಪಘರ್ಷಕ) ಪದಾರ್ಥವಾಗಿದ್ದು, ನಿಮ್ಮ ಚರ್ಮದ ಮೇಲಿನ ಕೊಳೆಯನ್ನ ತೆಗೆಯಲು ಒಂದು ಉತ್ತಮ ಸಾಧನ. ಆಲಿವ್ ಆಯಿಲ್ ಅಲ್ಲಿ ಸ್ವಲ್ಪ ಕಾಫಿ ಪುಡಿ ಬೆರೆಸಿ, ಅದನ್ನ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಕಾಫಿಯು ನಿಮ್ಮ ಮುಖದಿಂದ ಕೊಳೆ ಮತ್ತು ಎಣ್ಣೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಮುಖವು ಕಾಂತಿಯನ್ನ ಹೊಂದುತ್ತದೆ.
೫. ನಿಮ್ಮ ಪೀಠೋಪಕರಣಗಳ ಮೇಲಿನ ಕೆರೆದ ಗೆರೆಗಳನ್ನ ಅಳಿಸಿ ಹಾಕಲು
ನಿಮ್ಮ ಮನೆಯಲ್ಲಿನ ಪೀಠೋಪಕರಣಗಳ ಮೇಲೆ ಬಹುವರ್ಷಗಳ ಬಳಕೆಯಿಂದ ಗೆರೆಗಳು ಮೂಡಿದ್ದರೆ, ಅವುಗಳನ್ನ ಹೊರಗೆಸೆಯಬೇಡಿ. ನೀವು ಈ ಗೆರೆಗಳ ಮೇಲೆ ಕಾಫಿ ಪುಡಿಯಿಂದ ಡೈ ಮಾಡಬಹುದು. ಕಾಫಿಪುಡಿಯ ಮೇಲೆ ಕೇವಲ ಒಂದೆರೆಡು ಹನಿಗಳಷ್ಟು ನೀರು ಚುಮುಕಿಸಿ, ಅದನ್ನ ಹತ್ತಿಯ ಉಂಡೆಯಿಂದ ಅದ್ದು, ಗೆರೆಗಳ ಮೇಲೆ ಹಚ್ಚಿರಿ. ಇದು ನಿಮ್ಮ ಪೀಠೋಪಕರಣಗಳ ಗೆರೆಗಳಿಗೆ ಗಾಢ ಬಣ್ಣ ತುಂಬಿ, ಅವುಗಳು ಕಾಣದಂತೆ ಮಾಡುತ್ತದೆ.

Comments are closed.