ಆರೋಗ್ಯ

(Unconsciousness) ಪ್ರಜ್ಞಾಹೀನತೆಗೊಳಗಾದ ವ್ಯಕ್ತಿಯ ಕಂಡರೆ ಈ ರೀತಿ ಆರೈಕೆ ಮಾಡಿ….

Pinterest LinkedIn Tumblr

unconcesous_persn

 ಪ್ರಜ್ಞಾಹೀನತೆ ಒಂದು ಗಂಭೀರ ಸ್ವರೂಪದ ಚಿಹ್ನೆ. ಅಲ್ಲಾಡಿಸುವುದು, ಕೂಗುವುದು ಅಥವಾ ಚೂಟುವುದು ಮುಂತಾದ ಯಾವುದೇ ಬಗೆಯ ಚಟುವಟಿಕೆಗಳಿಗೆ ಪ್ರತಿಕ್ರಿಯಿಸದೆ ಇರುವ ಸ್ಥಿತಿಗೆ ’ಪ್ರಜ್ಞಾಹೀನ ಸ್ಥಿತಿ’ ಎನ್ನುತ್ತಾರೆ.

ಪ್ರಜ್ಞಾಹೀನನಂತೆ ಕಂಡು ಬರುವ ಒಬ್ಬ ವ್ಯಕ್ತಿಯು ದೊಡ್ಡ ದನಿಯ ಕೂಗಿಗೆ, ಗಟ್ಟಿಯಾಗಿ ಅಲ್ಲಾಡಿಸಿದಾಗ ಮತ್ತು ಚೂಟುವುದು ಅಥವಾ ಗಿಲ್ಲಿದಾಗ ಎಚ್ಚರಗೊಂಡರೆ- ತಾನು ಎಲ್ಲಿದೇನೆ ಮತ್ತು ತಾನು ಯಾರು ಎಂಬದನ್ನು ತಿಳಿದಿದ್ದರೆ ಆತ ಮಲಗಿದ್ದನೆಂದೂ ಪ್ರಜ್ಞಾಹೀನನಾಗಿರಲಿಲ್ಲವೆಂದೂ ಅರ್ಥ. ತುರ್ತು ಸಮಯದಲ್ಲಿ ಕೇವಲ ಪ್ರಜ್ಞಾಹೀನ ವ್ಯಕ್ತಿಯ ಕಣ್ಣುಗಳು ತೆರೆದಿದ್ದು ಅತ್ತ ಇತ್ತ ಚಲಿಸುತ್ತಿದ್ದಾಗ ಕಣ್ಣಿಗೆ ಪ್ರಖರ ಬೆಳಕನ್ನು ಬಿಟ್ಟಾಗ ಕಣ್ಣುಗಳು ಸಂಕುಚಿಸುತ್ತವೆ.

ಗಾಢ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯ ಕಣ್ಣುಗಳ ನೋಟ ಒಂದೆಡೆ ನೆಟ್ಟಿದ್ದು, ಅವುಗಳ ಗಾತ್ರ ಸಾಮಾನ್ಯಕ್ಕಿಂತ ಅಗಲವಾಗಿ ತೆರೆದಿದ್ದಾಗ, ಕಣ್ಣುಗಳೆಡೆಗೆ ಪ್ರಖರ ಬೆಳಕನ್ನು ಬಿಟ್ಟಾಗಲೂ ಸಂಕುಚಿಸದೇ ಇದ್ದರೆ ರೋಗಿಯ ಸಾವು ಹತ್ತಿರದಲ್ಲಿದೆ ಎಂದರ್ಥ. ನೀವು ಯಾವುದೇ ವ್ಯಕ್ತಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡಾಗ- ಕೂಗುವ, ಅಲ್ಲಾಡಿಸುವ ಮತ್ತು ಚೂಟುವ ಸೂತ್ರವನ್ನು ಅನುಸರಿಸಿ. ಆತ ಈ ಯಾವುದಕ್ಕೂ ಪ್ರತಿಕ್ರಿಯಿಸದೇ ಇದ್ದರೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ ಎಂದರ್ಥ.

ಆರೈಕೆ :
ರೋಗಿಯನ್ನು ಆತನ ಸುಸ್ಥಿತಿಗೆ ಬರುವ ಭಂಗಿ , ಅಂದರೆ ಬೆನ್ನ ಮೇಲೆ ಮಲಗಿಸಿ
ಆತನ ಎಡಗೈಯನ್ನು ಎಡ ಪೃಷ್ಠದ ಕೆಳಗೆ ತೂರಿಸಿ
ಬಲಗೈಯನ್ನು ತಲೆಯ ಮೇಲ್ಭಾಗದಲ್ಲಿರಿಸಿ
ದೇಹವನ್ನು ಎಡಗಡೆಯ ಮೇಲ್ಭಾಗಕ್ಕೆ ಎಳೆಯಿರಿ
ಬಾಗಿರುವ ಭಂಗಿಗೆ ಸರಿಯಾಗಿ ಬಲಗಾಲನ್ನು ಬಾಗಿಸಿ
ಬಾಗಿರುವ ಭಂಗಿಗೆ ಸರಿಯಾಗಿ ಬಲಗೈಯನ್ನು ಮಡಚಿ
ಬಾಯಿ, ಗಂಟಲು ಮತ್ತು ಹಲ್ಲುಗಳಿಂದ ಜೊಲ್ಲು ಸುರಿಯುತ್ತಿರುವುದನ್ನು ತೆಗೆದು ಹಾಕಿ. ರೋಗಿಯ ಸರಾಗ ಉಸಿರಾಟಕ್ಕೆ ಅನುವು ಮಾಡಿಕೊಡಿ.
ದೇಹದ ಹಿಂಭಾಗದಲ್ಲಿರುವ ಎಡಗೈಯನ್ನು ಬಿಡಿಸಿ
ಯಾವುದೇ ಅಡೆತಡೆಯಿಲ್ಲದೆ ಉಸಿರಾಟ ಸರಾಗವಾಗುವಂತೆ ತಲೆಯನ್ನು ಮೇಲೆ ಕೆಳಗೆ ಆಡಿಸಿ.

ಇದು ಎಡಭಾಗದಲ್ಲಿರುವ ಸ್ವಸ್ಥಸ್ಥಿತಿಗೆ ಬರುವ ಭಂಗಿ, ಆದರೆ ರೋಗಿಯನ್ನು ಬಲಭಾಗದ ಸ್ವಸ್ಥಸ್ಥಿತಿಗೆ ಬರುವ ಭಂಗಿಗೆ ತರುವುದು ಸುಲಭ, ಹಾಗೆ ಮಾಡುವಾಗ ಮೇಲಿನ ಕ್ರಮದಲ್ಲಿ ಎಡ ಎಂದಿರುವ ಕಡೆಯಲ್ಲೆಲ್ಲಾ ಬಲ ಎಂದು ಅನ್ವಯಿಸಿಕೊಂಡು ಮಾಡಿ. ಗಾಯಗಳಾಗಿದ್ದಾಗ, ಆತ ಎಲ್ಲೋ ಸಿಕ್ಕಿಕೊಂಡಿದ್ದಾಗ ಅಥವಾ ರೋಗಿಯ ಭಂಗಿಯನ್ನು ಬದಲಿಸಲು ಸಾಧ್ಯವಿಲ್ಲದೇ ಇದ್ದಾಗ ದವಡೆಯ ಮೂಲದಲ್ಲಿ ಬೆರಳಿರಿಸಿ ದವಡೆಯು ಮೂಗಿನ ಬಳಿಗೆ ಚಲಿಸುವಂತೆ ಮಾಡಿ ನಾಲಗೆಯು ಗಂಟಲಿಗೆ ಅಡ್ಡಬರದಂತೆ, ಹೊರ ಚಾಚುವಂತೆ ಮಾಡಿ, ಉಸಿರಾಟದ ಹಾದಿ ಸುಗಮಗೊಳಿಸಬೇಕು. ಈ ಸರಳ ಉಪಾಯದಿಂದ ಉಸಿರಾಟದ ಹಾದಿ ಸುಗಮವಾಗದೇ ಇದ್ದರೆ, ಬಾಯಿಯನ್ನು ತೆರೆದು ಅದರಲ್ಲಿ ಯಾವುದೇ ಉಳಿಕೆ ಪದಾರ್ಥಗಳಿದ್ದರೆ ತೆಗೆದು ಬಿಡಿ. ಕರ್ಚೀಫಿನ ಮೂಲಕ ನಾಲಿಗೆಯನ್ನು ಹಿಡಿದು ಅದು ಹೊರಚಾಚುವವರೆಗೆ ಎಳೆಯಿರಿ. ಹೀಗೆ ಮಾಡುವುದರಿಂದ ಉಸಿರಾಟ ಆರಾಮವಾಗಿ ಆಡುತ್ತಿರುತ್ತದೆ.

ವೈದ್ಯರು ಅಥವಾ ತರಬೇತಿ ಪಡೆಯ ವ್ಯಕ್ತಿಯು ವಿಶೇಷ ಉಸಿರಾಟದ ನಾಳವನ್ನು ಅಳವಡಿಸುವವರೆಗೆ ರೋಗಿಯನ್ನು ಸ್ವಸ್ಥ ಸ್ಥಿತಿ ಭಂಗಿಯಲ್ಲಿ ಉಸಿರಾಡುವ ಹಾಗೆ ಇಟ್ಟಿರಬೇಕು. ತರಬೇತಿ ಪಡೆಯದ ವ್ಯಕ್ತಿಯು ಟ್ಯೂಬ್‌ ಹಾಕಲು ಹೋದಾಗ ರೋಗಿಗೆ ಅದು ಸಹಾಯಕವಾಗುವುದಕ್ಕಿಂತ ಅಪಾಯಕಾರಿಯಾಗುವುದೇ ಹೆಚ್ಚು.

ಬಾಯಿಯ ಮೂಲಕ ಯಾವುದೇ ಆಹಾರವನ್ನು ನೀಡಬೇಡಿ, ಇದರಿಂದ ರೋಗಿಯು ಆಹಾರವನ್ನು ನುಂಗಿ, ಅದು ಉಸಿರಾಟಕ್ಕೆ ತೊಂದರೆಯೊಡ್ಡುತ್ತದೆ. ತಕ್ಷಣ ವೈದ್ಯರನ್ನು ಕರೆಯಿಸಿ ಅಥವಾ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್‌ ಗೆ ಕರೆಕಳುಹಿಸಿ. ಉಸಿರಾಟದ ಹಾದಿಯನ್ನು ಸುಗಮಗೊಳಿಸುವುದಲ್ಲದೆ ವೈದ್ಯರು ಅಥವಾ ಆಂಬುಲೆನ್ಸ್‌ ಬರುವವರೆಗೆ ರೋಗಿಯ ಇತರೆ ಗಾಯಗಳಿಗೆ ಪ್ರಥಮ ಚಿಕಿತ್ಸೆ ನೀಡಿ
ರೋಗಿಯು ಮೃತಪಟ್ಟಂತೆ ಕಂಡು ಬಂದರೆ, ಅಂದರೆ ಆಗತಾನೆ ಉಸಿರಾಟ ಮತ್ತು ಹೃದಯ ನಿಂತಂತೆ ಅನಿಸಿದರೆ, ತಕ್ಷಣ ಎದೆಯ ಮಸಾಜ್‌ ಮತ್ತು ‘ಜೀವದಾನದ ಮುತ್ತು’ (ಬಾಯಿಯ ಮೂಲಕ ಪುಪ್ಪುಸಗಳಿಗೆ ಉಸಿರು ತುಂಬುವ ಕೃತಕ ಉಸಿರಾಟದ ವಿಧಾನ) ಕೊಡಬೇಕು.

ದೇಹವು ಬಿಗಿದು ಕೊಂಡಿದ್ದು ರೋಗಿಯು ಮೃತನಾಗಿ ಸ್ವಲ್ಪ ಹೊತ್ತಾಗಿದೆ ಎಂದು ನಿಮಗೆನಿಸಿದರೆ ದೇಹವನ್ನು ಅದೇ ಭಂಗಿಯಲ್ಲಿ ಬಿಟ್ಟು ವೈದ್ಯರಿಗೆ ಕರೆ ಮಾಡಿ, ಸೂಕ್ತ ಪ್ರಕರಣಗಳಲ್ಲಿ ಪೊಲೀಸರಿಗೆ ಕರೆ ಮಾಡಿ.

ಪ್ರಜ್ಞಾಹೀನತೆಗೆ ಕಾರಣಗಳು:
ಮೂರ್ಛೆ, ತಲೆಗೆ ಬಲವಾದ ಪೆಟ್ಟು, ಪಾರ್ಶ್ವವಾಯು, ಅಪಸ್ಮಾರ- ಪ್ರಬಲ ಸನ್ನಿ ಅಥವಾ ಸೆಳೆತ, ಸಣ್ಣ ಪ್ರಮಾಣದ ಸನ್ನಿ, ಹೃದಯಾಘಾತ, ಮಧುಮೇಹ, ಮಾದಕ ವಸ್ತುಗಳ ಬಳಕೆ, ಕುಡಿತ, ತೀವ್ರ ರಕ್ತಸ್ರಾವ, ತೀವ್ರ ಅಲರ್ಜಿ, ವಿದ್ಯೂತ್ (ಇಲೆಕ್ಟ್ರಿಕ್‌) ಶಾಕ್‌, ಮುಳುಗುವಿಕೆ, ವಿಷಾನಿಲ ಸೇವನೆಗಳು ಪ್ರಜ್ಞಾಹೀನತೆಗೆ ಕಾರಣವಾಗಬಹುದು.

Comments are closed.