ಆರೋಗ್ಯ

ಮನೆಯಲ್ಲಿ ಮಾಡುವ ಸ್ತನ ಕ್ಯಾನ್ಸರ್‌ನ ಸ್ವ-ಪರೀಕ್ಷೆಯ ಒಂದು ಪ್ರಾರಂಭಿಕ ಪರೀಕ್ಷೆ ಬಗ್ಗೆ ತಿಳಿಯಿರಿ…

Pinterest LinkedIn Tumblr

breast_cancer_pic

ಮಂಗಳೂರು: ಸ್ತನ ಕ್ಯಾನ್ಸರ್ ಎಂಬುದು ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಒಂದು ಬಗೆಯ ಸಾಮಾನ್ಯ ಕ್ಯಾನ್ಸರ್ ಆಗಿದೆ. ಇದು ಪುರುಷರಲ್ಲಿ ಸಹ ಕಾಣಿಸಿಕೊಳ್ಳುತ್ತದೆ. ಆದರೆ ಅದು ತೀರಾ ಅಪರೂಪ. ಸ್ತನಗಳಲ್ಲಿ ಕಾಣಿಸಿಕೊಳ್ಳುವ ಕೋಶಗಳ ಅಸಾಮಾನ್ಯ ಬೆಳವಣಿಗೆಯಿಂದ ಸ್ತನ ಕ್ಯಾನ್ಸರ್ ಬರುತ್ತದೆ. ಈ ಕೋಶಗಳು ಟ್ಯೂಮರ್ ಅನ್ನು ಉಂಟು ಮಾಡುತ್ತವೆ. ಎಕ್ಸ್-ರೇ ಮೂಲಕ ಇವುಗಳನ್ನು ಪತ್ತೆ ಹಚ್ಚಬಹುದು. ಸ್ತನ ಕ್ಯಾನ್ಸರ್ ದೇಹದ ಇತರೆ ಭಾಗಗಳಿಗೆ ಸಹ ಹರಡಬಹುದು.

ಸ್ತನದ ಸ್ವ-ಪರೀಕ್ಷೆಯನ್ನು ಯಾವಾಗ ಮಾಡಿಕೊಳ್ಳಬೇಕು?
ಸ್ತನದ ಸ್ವ-ಪರೀಕ್ಷೆ (ಬ್ರೀಸ್ಟ್ ಸೆಲ್ಫ್ ಎಕ್ಸಾಮಿನೇಶನ್-ಬಿಎಸ್‌ಇ) ಎಂದರೆ, ನಿಮ್ಮ ಸ್ತನವನ್ನು ನೀವೇ ಮನೆಯಲ್ಲಿ ಪರೀಕ್ಷಿಸಿಕೊಂಡು, ಸ್ತನದಲ್ಲಿ ಯಾವುದೇ ಊತ ಅಥವಾ ಇನ್ನಿತರ ಸಮಸ್ಯೆಗಳು ಇಲ್ಲ ಎಂದು ಪರೀಕ್ಷಿಸಿಕೊಳ್ಳುವುದಾಗಿರುತ್ತದೆ.

ಬಿಎಸ್‌ಇ ಮಾಡಿಕೊಳ್ಳಲು ಹೇಳಿ ಮಾಡಿಸಿದ ಸಮಯ ಎಂದರೇ, ಅದು ಋತು ಚಕ್ರ ಆರಂಭವಾದ ನಂತರದ 7 ರಿಂದ 10 ನೇ ದಿನದೊಳಗೆ ಬರುತ್ತದೆ. ರಜೋನಿವೃತ್ತಿಯಾಗಿರುವ ಮಹಿಳೆಯರು ಈ ಪರೀಕ್ಷೆ ಮಾಡಿಸಿಕೊಳ್ಳಲು ತಿಂಗಳಲ್ಲಿ ಒಂದು ದಿನವನ್ನು ಗೊತ್ತುಪಡಿಸಿಕೊಳ್ಳಬೇಕಾದುದು ಒಳ್ಳೆಯದು. ಪರೀಕ್ಷೆಯನ್ನು ಸ್ವಾಭಾವಿಕವಾಗಿ ಬೆಳಕು ಹೆಚ್ಚಾಗಿರುವ ಸಮಯದಲ್ಲಿ ಅಂದರೆ, ಬೆಳಗಿನ ಜಾವದಲ್ಲಿ ಮಾಡಿಕೊಳ್ಳಿ.

ನಿಯಮಿತವಾಗಿ ನೀವು ಬಿಎಸ್‌ಇ ಮಾಡಿಕೊಳ್ಳುವಾಗ ಕಂಡುಕೊಂಡ ಬದಲಾವಣೆಗಳನ್ನು ಒಂದು ಕಡೆ ನಮೂದಿಸಿ ಇರಿಸಿ. ನಿಮ್ಮ ಸ್ತನದ ಹೇಗೆ ಇದೆ ಮತ್ತು ಅದು ಹೇಗೆ ಕಾಣುತ್ತದೆ ಎಂಬುದನ್ನು ಗಮನಿಸಿ ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಒಂದು ವೇಳೆ ಸ್ತನದಲ್ಲಿ ಊತ ಕಂಡು ಬಂದರೆ ಗಾಬರಿಗೊಳ್ಳಬೇಡಿ. ಸಾಮಾನ್ಯವಾಗಿ ಬಹುತೇಕ ಊತಗಳು ಸೌಮ್ಯವಾಗಿರುತ್ತವೆ.

ಸ್ತನದ ಸ್ವ-ಪರೀಕ್ಷೆಯ ಹಂತಗಳು :
ಕನ್ನಡಿಯ ಮುಂದೆ ನಿಂತುಕೊಳ್ಳಿ. ನಿಮ್ಮ ಕೈಗಳು ಸೊಂಟದ ಮೇಲೆ ಇರಲಿ ಹಾಗು ಭುಜಗಳು ನೇರವಾಗಿರಲಿ. ಈಗ ನಿಮ್ಮ ಸ್ತನದ ಗಾತ್ರ, ಬಣ್ಣ ಅಥವಾ ಸ್ತನದ ಆಕಾರದಲ್ಲಿ ಏನಾದರೂ ಬದಲಾವಣೆಗಳು ಕಂಡು ಬರುತ್ತಿವೆಯೇ ಎಂದು ಪರೀಕ್ಷಿಸಿ. ಅಂದರೆ ಕೆಂಪಾಗುವಿಕೆ, ಬಣ್ಣ ಗೆಡುವಿಕೆ, ಊತ, ಸ್ರವಿಸುವಿಕೆ, ಬೊಬ್ಬೆ, ಗಂಟು, ಉಬ್ಬು ಮತ್ತು ಆಕಾರದಲ್ಲಿ ಬದಲಾವಣೆ, ಮೊಲೆ ತೊಟ್ಟಿನ ಗಾತ್ರ ಅಥವಾ ಸ್ಥಾನದಲ್ಲಿ ಬದಲಾವಣೆ ಕಂಡು ಬರುತ್ತಿದೆಯೇ ಪರೀಕ್ಷಿಸಿ. ನಿಮ್ಮ ಕೈಗಳನ್ನು ನಿಮ್ಮ ತಲೆಯ ಮೇಲಕ್ಕೆ ಚಾಚಿ, ಈಗ ಹಂತ 1 ರಲ್ಲಿ ಸೂಚಿಸಿದ ಬದಲಾವಣೆಗಳು ಏನಾದರೂ ಕಾಣುತ್ತಿವೆಯೇ ಮತ್ತೆ ಪರಿಶೀಲಿಸಿ. ನಿಮ್ಮ ಮೊಲೆತೊಟ್ಟುಗಳನ್ನು ಮೃದುವಾಗಿ ಹಿಂಡಿ, ಏನಾದರೂ ರಕ್ತ, ನೀರಿನಂತಹ, ಹಾಲಿನಂತಹ, ಅಥವಾ ಹಳದಿ ಬಣ್ಣದ ಸ್ರವಿಸುವಿಕೆ ಕಾಣುತ್ತದೆಯೇ ಪರಿಶೀಲಿಸಿ. ಹೌದಾದಲ್ಲಿ ನಿಮ್ಮ ವೈದ್ಯರನ್ನು ತಕ್ಷಣ ಸಂಪರ್ಕಿಸಿ.

ಹಾಸಿಗೆಯ ಮೇಲೆ ಮಲಗಿ ಮತ್ತು ನಿಮ್ಮ ಸ್ತನಗಳಲ್ಲಿ ಏನಾದರೂ ಬದಲಾವಣೆ ಕಂಡು ಬರುತ್ತದೆಯೇ ಪರೀಕ್ಷಿಸಿ. ಎಡ ಸ್ತನವನ್ನು ಬಲಗೈಯಿಂದ ಪರೀಕ್ಷಿಸಿ ಮತ್ತು ಬಲ ಸ್ತನವನ್ನು ಎಡಗೈಯಿಂದ ಪರೀಕ್ಷಿಸಿ. ಮೃದುವಾಗಿ ಸ್ಪರ್ಶಿಸಿ ಪರೀಕ್ಷಿಸಿ ಮತ್ತು ಪರೀಕ್ಷಿಸುವಾಗ ವೃತ್ತಾಕಾರವಾಗಿ ಪರೀಕ್ಷಿಸಿ. ಹೀಗೆ ಮಾಡುವಾಗ ನಿಮ್ಮ ಬೆರಳುಗಳು ನೇರವಾಗಿ ಮತ್ತು ಒಟ್ಟಿಗೆ ಇರಲಿ. ಹೀಗೆ ನಿಮ್ಮ ಇಡೀ ಸ್ತನವನ್ನು ಪರೀಕ್ಷಿಸಿ. ಕೊನೆಯದಾಗಿ, ನಿಮ್ಮ ಸ್ತನಗಳು ನೀವು ನಿಂತುಕೊಂಡಾಗ ಅಥವಾ ಕುಳಿತಾಗ ಹೇಗೆ ಇರುತ್ತವೆ ಎಂದು ಪರಿಶೀಲಿಸಿ. ನಿಮಗೆ ಅಗತ್ಯವಾದಲ್ಲಿ ಇದನ್ನು ನೀವು ಸ್ನಾನ ಮಾಡುವಾಗ ಸಹ ಪರೀಕ್ಷಿಸಬಹುದು. ಆಗ ನಿಮ್ಮ ಸ್ತನವು ಒದ್ದೆಯಾಗಿ ಜಾರುವಂತಿರುತ್ತದೆ. ಹಂತ ನಾಲ್ಕರಲ್ಲಿ ತಿಳಿಸಿದ ಹಾಗೆ ಕೈಗಳ ಚಲನೆ ಇರಲಿ ಮತ್ತು ಇಡೀ ಸ್ತನದ ಭಾಗವನ್ನು ಪರೀಕ್ಷಿಸಿದಿರೇ ಎಂದು ಖಚಿತಪಡಿಸಿಕೊಳ್ಳಿ.

ಆದರೂ ಇದು ಸ್ತನದ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಲು ಇರುವ ಪರಿಣಾಮಕಾರಿಯಾದ ಪರೀಕ್ಷೆ ಅಲ್ಲ. ಮನೆಯಲ್ಲಿ ಮಾಡುವ ಸ್ತನದ ಸ್ವ-ಪರೀಕ್ಷೆಯು ಒಂದು ಪ್ರಾರಂಭಿಕ ಪರೀಕ್ಷೆ ಅಷ್ಟೇ, ವರ್ಷಕ್ಕೆ ಒಮ್ಮೆಯಾದರೂ ಪ್ರಸೂತಿ ತಜ್ಞರ ಸಹಾಯದಿಂದ ಸ್ತನದ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಮತ್ತು 40 ವರ್ಷ ಪ್ರಾಯದ ಮಹಿಳೆಯರು ಒಮ್ಮೆಯಾದರೂ ಮಮ್ಮೊಗ್ರಾಮ್ ಮಾಡಿಸಿಕೊಳ್ಳಬೇಕು

Comments are closed.