ಆರೋಗ್ಯ

ಈ ಹುಳಿ ಹಣ್ಣಿನ ವಿಶೇಷ ಔಷಧೀಯ ಗುಣಗಳು, ಬಲ್ಲಿರಾ..!

Pinterest LinkedIn Tumblr

carambola_starfruit_2

ಕಮರಾಕ್ಷಿ ಒಂದು ರಸವತ್ತಾದ ಮೃದು ಹಣ್ಣು. ನಮ್ಮಲ್ಲಿ ಇದನ್ನು ಇತರ ದೇಶಗಳಲ್ಲಿದ್ದಂತೆ ವಾಣಿಜ್ಯವಾಗಿ ಯಾರೂ ಬೆಳೆಯುತ್ತಿಲ್ಲ. ಕ್ಯಾಲಿಫೋರ್ನಿಯಾ, ಹವಾಯ್, ಚೀನಾ ತೈವಾನ್, ಕ್ವೀನ್ಸ್ಲ್ಯಾಂಡ್ ಮುಂತಾದೆಡೆ ಕಮರಾಕ್ಷಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.

ನಮ್ಮ ದೇಶದಲ್ಲಿ ಹಣ್ಣಿನ ತೋಟಗಳು, ಕೈತೋಟಗಳು, ಸಸ್ಯೋದ್ಯಾನ, ದೊಡ್ಡ ಕಟ್ಟಡಗಳ ಪೌಳಿಗೋಡೆಯ ಆವರಣ, ಸಾಲುಮರವಾಗಿ, ತೋಟಗಾರಿಕೆ ಸಸಿಮಡಿಗಳು ಮುಂತಾದೆಡೆ ಈ ಹಣ್ಣಿನ ಮರವನ್ನು ಕಾಣಬಹುದು. ಕಮರಾಕ್ಷಿಯಲ್ಲಿ ಹುಳಿ ಮತ್ತು ಸಿಹಿ ಬಗೆಗಳಿವೆ. ಸಿಹಿಬಗೆಗಳ ಹಣ್ಣನ್ನು ಹಾಗೆಯೇ ತಿನ್ನುವುದು ಸಾಮಾನ್ಯ. ಅವು ಮಕ್ಕಳಿಗೆ ಬಲು ಇಷ್ಟ. ಹುಳಿ ಬಗೆಗಳ ಹಣ್ಣನ್ನು ರಸಹಿಂಡಲು, ಪೇಯ ಪಾನೀಯಗಳಲ್ಲಿ, ಪಾನಕ, ಜಾಮ್, ಜಲ್ಲಿ, ಪುಡ್ಡಿಂಗ್, ಟಾರ್ಟ್, ಪ್ರಿಸರ್ವ್, ಚಟ್ನಿ, ಉಪ್ಪಿನಕಾಯಿ ಮುಂತಾದ ಪದಾರ್ಥಗಳನ್ನು ತಯಾರಿಸಲು ಬಳಸುತ್ತಾರೆ.

ಕಮರಾಕ್ಷಿ ಹಣ್ಣು ಉದ್ದದ ಐದು ಏಣುಗಳಿಂದ ಕೂಡಿದ್ದು ಅವುಗಳ ಬಣ್ಣ ಮತ್ತು ಪರಿಮಳಗಳು ಎಂತಹವರನ್ನೂ ಸಹ ಆಕರ್ಷಿಸಬಲ್ಲವು. ಆಸ್ಟ್ರೇಲಿಯಾದಲ್ಲಿ ಹಣ್ಣುಗಳ ಮೇಲಿನ ಉದ್ದ ಏಣುಗಳನ್ನು ಚಾಕುವಿನಿಂದ ಕೆರೆದು, ನಂತರ ತಿನ್ನುತಾರೆ. ಈ ಹಣ್ಣನ್ನು ಸಂಸ್ಕರಣೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅಡುಗೆ ಭಕ್ಷ್ಯಗಳನ್ನು ಹೆಚ್ಚು ಆಕರ್ಷಕವಾಗಿರುವಂತೆ ಮಾಡಲು ಕಮರಾಕ್ಷಿ ಹಣ್ಣನ್ನು ಅಡ್ಡಲಾಗಿ ಕತ್ತರಿಸಿ ಸಿದ್ಧಗೊಳಿಸಿದ ತೆಳು ಬಿಲ್ಲೆಗಳನ್ನು ಅವುಗಳ ಮೇಲೆ ಒಪ್ಪವಾಗಿ ಇಟ್ಟು ಸಿಂಗರಿಸುವುದುಂಟು.

carambola_starfruit_1

ಈ ಹಣ್ಣುಗಳ ರಸಕ್ಕೆ ಬಟ್ಟೆಗಳ ಮೇಲಿನ ಕಲೆಗಳನ್ನು ಹೋಗಲಾಡಿಸುವ ಗುಣವಿದೆ. ಹಿತ್ತಾಳೆ ಪಾತ್ರೆ ಪರಡಿಗಳಲ್ಲಿ ಕಿಲುಬು ಇದ್ದಲ್ಲಿ ಇವುಗಳ ಹೋಳನ್ನು ಜಜ್ಜಿ ಉಜ್ಜಿ ತೊಳೆದಲ್ಲಿ ಅದು ಇಲ್ಲವಾಗುತ್ತವೆ. ಇದರ ಬಲಿತ ಮರಗಳ ಕಟ್ಟಿಗೆ ಬಾಳಿಕೆ ಬರುವಂತಾದ್ದು. ಅದು ಬೆಳ್ಳಗಿದ್ದು ಮೃದುವಾಗಿರುತ್ತದೆ. ಕಟ್ಟಡದ ಕೆಲಸಗಳಿಗೆ, ಪೀಠೋಪಕರಣಗಳನ್ನು ತಯಾರಿಸಲು ಉಪಯುಕ್ತ. ಇವುಗಳ ಹಣ್ಣನ್ನು ಸಾರು ಮಾಡಲು ಹುಣಿಸೇ ಹಣ್ಣಿನ ಬದಲಾಗಿ ಬಳಸುವುದುಂಟು. ಮನೆಗೊಂದು ಮರವಿದ್ದರೆ ಸಾಕು ವರ್ಷವಡೀ ಹಣ್ಣನ್ನು ತಿನ್ನಬಹುದು.

ಪೌಷ್ಠಿಕ ಮೌಲ್ಯ: ಕಮರಾಕ್ಷಿ ಹಣ್ಣಿನ ಬಹುಭಾಗ ನೀರು ಆಗಿರುತ್ತದೆ. ಹುಳಿ ಬಗೆಗಳ ಹಣ್ಣುಗಳಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಸಿಹಿಬಗೆಗಳಲ್ಲಿನ ಸಕ್ಕರೆ ಅಂಶ ಗ್ಲೂಕೋಸ್‌ ಆಗಿರುತ್ತದೆ. ಹುಳಿ ಬಗೆಗಳಲ್ಲಿನ ಹುಳಿಗೆ ಆಕ್ಸಾಲಿಕ್‌ ಆಮ್ಲ ಹೆಚ್ಚು ಕಾರಣವಿರುತ್ತದೆ.

ಸಿಹಿ ಬಗೆಗಳಲ್ಲಿ ಶೇ.1.16 ಆಕ್ಸಾಲಿಕ್‌ ಮತ್ತು ಶೇ. 0.06 ಮ್ಯಾಲಿಕ್‌ ಆಮ್ಲಗಳಿರುತ್ತವೆ. ಹಣ್ಣುಗಳಲ್ಲಿ ಶರ್ಕರಪಿಷ್ಟ, ಪ್ರೋಟೀನ್‌, ಜಿಡ್ಡು, ಖನಿಜಪದಾರ್ಥ, ನಾರು, ಸುಣ್ಣ, ರಂಜಕ, ಕಬ್ಬಿಣ, ಪೊಟ್ಯಾಷಿಯಂ, ಮೆಗ್ನೀಷಿಯಂ, ಕೆರೊಟಿನ್‌, ಕ್ಯಾಲೋರಿಸತ್ವ ಮುಂತಾದವು ವಿವಿಧ ಪ್ರಮಾಣಗಳಲ್ಲಿ ಇರುತ್ತವೆ. ಹುಳಿ ಬಗೆಗಳ ಕಮರಾಕ್ಷಿಯ ಅಪಕ್ವ ಹಣ್ಣುಗಳಲ್ಲಿ ಶೇ.1ರಷ್ಟು ಆಕ್ಸಾಲಿಕ್ ಅಮ್ಲವಿದ್ದು ಅವು ಪಕ್ವಗೊಂಡಾಗ ಅದರ ಪ್ರಮಾಣ ಶೇ. 0.51ಕ್ಕೆ ಕುಸಿಯುತ್ತದೆ.

ಸಕ್ಕರೆಯ ಹೆಚ್ಚು ಭಾಗ ಅಪಕರ್ಷಕ ಸಕ್ಕರೆ (ಗ್ಲೂಕೋಸ್‌ ಮತ್ತು ಪ್ರುಕ್ಟೋಸ್‌) ಯಾಗಿರುತ್ತದೆ. ಜೇವಸತ್ವಗಳ ಪೈಕಿ ಸಿ ಜೇವಸತ್ವದ ಪ್ರಮಾಣ 100 ಗ್ರಾಂಗಳಿಗೆ 50 ಮಿ.ಗ್ರಾಂಗಳಷ್ಟು ಇರುತ್ತದೆ. ಅಷ್ಟೇ ಅಲ್ಲದೆ ಸೆರೈನ್‌, ಗ್ಲುಟಾಮಿನ್‌, ಅಲನೈನ್‌ ಮುಂತಾದ ಜೆಡ್ಡಾಮ್ಲಗಳೂ ಸಹ ಇರುತ್ತವೆ. ಹಣ್ಣುಗಳ ತೀಕ್ಷ್ಣರುಚಿಗೆ ಆಸ್ಕಾರ್ಬಿಕ್‌ ಆಮ್ಲ ಮತ್ತು ಟ್ಯಾನಿಕ್‌ ಅಂಶಗಳು ಕಾರಣವಿರುತ್ತವೆ. ಕಮರಾಕ್ಷಿ ಹಣ್ಣಿನಲ್ಲಿರುವ ಪೋಷಕಾಂಶಗಳನ್ನು ಕೋಷ್ಟಕ 2.1ರಲ್ಲಿ ಕೊಡಲಾಗಿದೆ.

ಔಷಧೀಯ ಗುಣಗಳು: ಹಣ್ಣು ಸ್ವಲ್ಪ ಒಗರು. ಅವುಗಳನ್ನು ತಿನ್ನುತ್ತಿದ್ದಲ್ಲಿ ಹಸಿವು ಹೆಚ್ಚಾಗುತ್ತದೆ. ಈ ಹಣ್ಣುಗಳಿಂದ ತಯಾರಿಸಿದ ಪಾನಕ ಮತ್ತು ಶರಬತ್ತುಗಳನ್ನು ಕುಡಿಯುತ್ತಿದ್ದಲ್ಲಿ ದಣಿವು ದೂರಗೊಂಡು ಶರೀರದಲ್ಲಿನ ಊತ, ಜ್ವರದ ತಾಪಗಳು ಉಪಶಮನಗೊಳ್ಳುತ್ತವೆ. ಈ ಪಾನೀಯಗಳು ಶೈತ್ಯಕಾರಕವಿರುತ್ತವೆ. ಮೂಲವ್ಯಾಧಿ, ಸ್ಕರ್ವಿ, ಅತಿಸಾರ, ಪಿತ್ತರಸದ ತೊಂದರೆಗಳಿಗೆ ಈ ಹಣ್ಣುಗಳ ಸೇವನೆ ಲಾಭದಾಯಕ.ಫಿಲಿಪ್ಪೈನ್ಸ್‌ನಲ್ಲಿ
ಇವುಗಳ ಎಲೆ ಮತ್ತು ಚಿಗುರು ಕುಡಿಗಳನ್ನು ಅರೆದು ಸಿಡುಬು ರೋಗಿಗಳೆಗೆ ಕೊಡುವುದುಂಟು. ಅವುಗಳ ಸೇವನೆ ಹೊಟ್ಟೆಯಲ್ಲಿನ ಹುಳುಗಳಿಗೆ ಒಳ್ಳೆಯ ಔಷಧಿ, ತಲೆನೋವು ಇದ್ದಲ್ಲಿ ಎಲೆ ಮತ್ತು ಚಿಗುರುಗಳನ್ನು ತಿನ್ನುವುದು ಒಳ್ಳೆಯದು.

ಹಣ್ಣುಗಳಿಗೆ ಆ‌್ಔಷಸ್ಕಾರ್ಬಿಕ್‌ ಆಮ್ಲದ ಆಮ್ಲಜನೀಕರಣವನ್ನು ತಡೆಹಿಡಿಯುವ ಗುಣವಿದೆ ಎನ್ನಲಾಗಿದೆ. ಇತರ ಉಪಯೋಗಗಳು: ಈ ಹಣ್ಣು ಸಾರು ಮಾಡುವಲ್ಲಿ ಹುಣಿಸೇಹಣ್ಣಿನ ಬದಲಾಗಿ ಬಳಸುವುದುಂಟು. ಹಣ್ಣುಗಳಿಂದ ರುಚಿಕರ ಜಾಮ್‌, ಜೆಲ್ಲಿ, ಚಟ್ನಿ, ಉಪ್ಪಿನ ಕಾಯಿ ಮುಂತಾಗಿ ತಯಾರಿಸುತ್ತಾರೆ. ಈ ಹಣ್ಣುಗಳ ರಸಹಿಂಡಿ ಬಟ್ಟೆಗಳ ಲಿನನ್ ಬಟ್ಟೆಗಳ ಮೇಲಿನ ಕರೆಗಳನ್ನು ಹೋಗಲಾಡಿಸುವುದುಂಟು. ಹಿತ್ತಾಳೆ ಪಾತ್ರೆ ಪರಡಿಗಳನ್ನು ಬೆಳಗಿ ಅವುಗಳ ಮೇಲಿನ ಕಲೆ, ತುಕ್ಕು ಮುಂತಾಗಿ ಹೋಗಲಾಡಿಸಲು ಇವು ಬಲು ಉಪಯುಕ್ತ. ಮರದ ಒಳಕಟ್ಟಿಗೆಯನ್ನು ಪೀಠೋಪಕರಣಗಳನ್ನು ತಯಾರಿಸಲು ಬಳಸುತ್ತಾರೆ. ಮರಗಳಿಂದ ಉದುರಿಬಿದ್ದ ಎಲೆ, ಹೂವು ಮಣ್ಣಿಗೆ ಒಳ್ಳೆಯ ಹೊದಿಕೆಯಾಗುತ್ತವೆ. ಅವು ದಿನಕಳೆದಂತೆ ಕೊಳೆತು ಗೊಬ್ಬರವಾಗಬಲ್ಲವು. ಈ ಮರಗಳು ಒಳ್ಳೆಯ ನೆರಳು ಹಾಗೂ ಅಲಂಕಾರಕ ಸಸ್ಯಗಳಾಗಿವೆ. ಬೀಜದಿಂದ ಪಡೆದ ಸಸಿಗಳನ್ನು ತೋಟದ ಸುತ್ತಂಚಿನಲ್ಲಿ ಉದ್ದಕ್ಕೆ ನೆಟ್ಟು ಬೆಳೆಸಿದರೆ ಅವು ಒಳ್ಳೆಯ ಗಾಳಿ ತಡೆಯಾಗಬಲ್ಲವು ಮತ್ತು ಮಣ್ಣು ಕೊಚ್ಚಿಹೋಗುವುದನ್ನು ತಡೆಯಬಲ್ಲವು. ಒಣಕಟ್ಟಿಗೆ ಒಳ್ಳೆಯ ಉರುವಲೂ ಹೌದು.

Comments are closed.