ಅಂತರಾಷ್ಟ್ರೀಯ

ಪ್ಯಾರಿಸ್​ನ ಐತಿಹಾಸಿಕ ಕಟ್ಟಡ ನೊಟ್ರೆ ಡೇಮ್ ಕ್ಯಾಥೆಡ್ರಲ್​ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ; ಕುಸಿದು ಬಿದ್ದ ಕಟ್ಟಡದ ಭಾಗಗಳು!

Pinterest LinkedIn Tumblr

ಪ್ಯಾರಿಸ್​: ಪ್ಯಾರಿಸ್​ನ ಐತಿಹಾಸಿಕ ಕಟ್ಟಡ ನೊಟ್ರೆ ಡೇಮ್ ಕ್ಯಾಥೆಡ್ರಲ್​ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಕಟ್ಟಡದ ಕೆಲ ಪ್ರಮುಖ ಭಾಗಗಳು​ ಕುಸಿದು ಬಿದ್ದಿವೆ.

https://twitter.com/patrickgaley/status/1117848909877895171

ಮೂಲಗಳ ಪ್ರಕಾರ ಈ ಐತಿಹಾಸಿಕ ಕಟ್ಟಡದ ನವೀಕರಣ ಕೆಲಸಗಳು ನಡೆಯುತ್ತಿದ್ದವು. ಈ ವೇಳೆ ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಎಲ್ಲಕಡೆ ಹಬ್ಬಿದೆ. ಬೆಂಕಿ ನಂದಿಸಲು ಅಗ್ನಿಶಾಮಕದ ದಳದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಬೆಂಕಿಯನ್ನು ನಿಯಂತ್ರಣ ಮಾಡುವುದು ಕಷ್ಟದ ಕೆಲಸ. ಆದರೂ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.

ಅಧಿಕಾರಿಗಳು ತಿಳಿಸಿರುವಂತೆ ಈ ಐತಿಹಾಸಿಕ ಕಟ್ಟಡದ ಪ್ರಮುಖ ಭಾಗವನ್ನು ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಲಾಗಿದ್ದು, ಉಳಿದ ಭಾಗಗಳಿಗೆ ಬೆಂಕಿ ಹರಡದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

850 ವರ್ಷಗಳ ಹಿಂದೆ ನೊಟ್ರೆ ಡೇಮ್ ಕ್ಯಾಥೆಡ್ರಲ್ ಕಟ್ಟಡ ನಿರ್ಮಾಣಗೊಂಡಿತ್ತು. ಈ ಐತಿಹಾಸಿಕ ಕಟ್ಟಡ ನಿರ್ಮಾಣಕ್ಕೆ ಮರವನ್ನು ಹೆಚ್ಚು ಬಳಕೆ ಮಾಡಲಾಗಿತ್ತು. ಹಾಗಾಗಿ ಬೆಂಕಿ ಬಹುಬೇಗನೆ ಆವರಿಸಿಕೊಳ್ಳುತ್ತಿದೆ. ಈ ದುರಂತಕ್ಕೆ ಇಡೀ ವಿಶ್ವವೇ ಮರುಕ ವ್ಯಕ್ತಪಡಿಸಿದೆ. ನಾವು ಈ ಕಟ್ಟಡವನ್ನು ಮತ್ತೆ ಮರು ನಿರ್ಮಾಣ ಮಾಡುತ್ತೇವೆ ಎಂದು ಫ್ರಾನ್ಸ್​ ಅಧ್ಯಕ್ಷ ಎಮ್ಯಾನ್ಯುವೆಲ್​ ಮ್ಯಾಕ್ರೋನ್​ ಹೇಳಿದ್ದಾರೆ.

ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾಡಿರುವ ಟ್ವೀಟ್ ​ಗೆ ಫ್ರಾನ್ಸ್​​ ಅಧಿಕಾರಿಗಳು ಅಸಮಾಧಾನ ಹೊರ ಹಾಕಿದ್ದಾರೆ. “ನೊಟ್ರೆ ಡೇಮ್ ಕ್ಯಾಥೆಡ್ರಲ್ ಅಗ್ನಿ ದುರಂತ ನೋಡಿ ಬೇಸರಗೊಂಡೆ. ಬೆಂಕಿ ಆರಿಸಲು ಮೇಲಿನಿಂದ ನೀರನ್ನು ಸುರಿಯಬೇಕು,” ಎಂದು ಟ್ರಂಪ್​ ಸಲಹೆ ನೀಡಿದ್ದರು. ಈ ಬಗ್ಗೆ ಫ್ರಾನ್ಸ್​ ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ‘ಡೊನಾಲ್ಡ್​ ಟ್ರಂಪ್​ ಹೇಳಿದಂತೆ ಮಾಡಿದರೆ ಕಟ್ಟಡಕ್ಕೆ ಹೆಚ್ಚು ಹಾನಿ ಉಂಟಾಗಲಿದೆ. ಹಾಗಾಗಿ ಇದು ಸಾಧ್ಯವಿಲ್ಲ,’ ಎಂದು ಪ್ರತಿಕ್ರಿಯಿಸಿದ್ದಾರೆ.

Comments are closed.