ಆರೋಗ್ಯ

ವೀಳ್ಯದೆಲೆ ಮತ್ತು ಅದರ ಮಹತ್ವಗಳ ಬಗ್ಗೆ ಕೆಲವು ಮಾಹಿತಿ

Pinterest LinkedIn Tumblr

beetal_leaf_pic

ಮಂಗಳೂರು: ವೀಳ್ಯದೆಲೆ ಪಾಚಿ ಹಸುರಿನ, ತೆಳುವಿನ, ತಣ್ಣಗಿನ,ರಸಭರಿತವಾದ ಒಂದು ಎಲೆ. ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲ್ಪಡುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ. ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ. ಇದು ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ. ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.

ವೀಳ್ಯದೆಲೆಯ ಆರೋಗ್ಯಕರ ಗುಣಗಳ ವಿಶೇಷತೆ :
*ವೀಳ್ಯದೆಲೆಯಿಂದಾದ ಹೆಂಡವನ್ನು ಆಯುರ್ವೇದದಲ್ಲಿ ಕೆಲ ರೋಗಗಳಿಗೆ ಮದ್ದನ್ನಾಗಿ ಉಪಯೋಗಿಸಲು ಹೇಳಿದೆ.
* ಪುಟ್ಟ ಮಕ್ಕಳಲ್ಲಿ ಹೊಟ್ಟೆ ಉಬ್ಬರ ಉಂಟಾಗಿ ಅಳುತ್ತಿದ್ದರೆ, ವೀಳ್ಯದೆಲೆಗೆ ಹರಳೆಣ್ಣೆ ಸವರಿ ಬೆಚ್ಚಗೆ ಮಾಡಿ ಅದರಿಂದ ಮಗುವಿನ ಹೊಟ್ಟೆಗೆ ಶಾಖ ನೀಡಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ ಗುಣವಾಗುತ್ತದೆ.
* ಮಕ್ಕಳಲ್ಲಿ ನೆಗಡಿ, ಕೆಮ್ಮು , ಕಫ‌ ಉಂಟಾದಾಗ ವೀಳ್ಯದೆಲೆಯ ರಸ, ತುಳಸೀ ರಸ, ದೊಡ್ಡಪತ್ರೆಯ ರಸ ಬೆರೆಸಿ, ಜೇನು ಸೇರಿಸಿ ನೀಡಿದರೆ ಗುಣಕಾರಿ.
* ದೀರ್ಘ‌ಕಾಲೀನ ಕೆಮ್ಮು , ದಮ್ಮು , ಕಫ‌ದಿಂದ ಬಳಲುವವರು, ವೀಳ್ಯದೆಲೆಯ ರಸ, ಬಿಳಿ ಈರುಳ್ಳಿಯ ರಸ ಹಾಗೂ ಜೇನುತುಪ್ಪ ಬೆರೆಸಿ, ಅದರಲ್ಲಿ ಶುದ್ಧ ಇಂಗನ್ನು ಕದಡಿ ದಿನಕ್ಕೆ 3-4 ಬಾರಿ ಸೇವಿಸಿದರೆ ಪರಿಣಾಮಕಾರಿ.
* 2 ಕಪ್‌ ಕೊಬ್ಬರಿ ಎಣ್ಣೆಗೆ ಅರ್ಧ ಕಪ್‌ ವೀಳ್ಯದೆಲೆಯ ರಸ ಮತ್ತು ಅರ್ಧ ಕಪ್‌ ಒಂದೆಲಗದ ರಸ ಬೆರೆಸಿ ಚೆನ್ನಾಗಿ ಕುದಿಸಿ.ತೈಲಪಾಕ ಮಾಡಬೇಕು. ಈ ಎಣ್ಣೆಯನ್ನು ನಿತ್ಯ ತಲೆಯ ಕೂದಲಿಗೆ ಹಚ್ಚಿ ಮಾಲೀಶು ಮಾಡಬೇಕು. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಹೊಟ್ಟು , ಕೂದಲು ಉದುರುವುದು ನಿವಾರಣೆಯಾಗುತ್ತದೆ.
* ವೀಳ್ಯದ ಎಲೆಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ, ಬಳಿಕ ಸೋಸಿ ಈ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು, ಊತ ಗುಣವಾಗುತ್ತದೆ.
* ವೀಳ್ಯದೆಲೆಯಲ್ಲಿ ಕಾಚು, ಲವಂಗ, ಪಚ್ಚ ಕರ್ಪೂರ ಬೆರೆಸಿ ಜಗಿದು ಸೇವಿಸಿದರೆ ಹಲ್ಲುನೋವು, ಬಾವು ಪರಿಹಾರವಾಗುತ್ತದೆ.
* ವೀಳ್ಯದೆಲೆಯಲ್ಲಿ ಲವಂಗ ಮತ್ತು ಕಲ್ಲುಪ್ಪು ಇರಿಸಿ ಮಡಚಿ, ಬಾಯಲ್ಲಿಟ್ಟು ರಸ ಹೀರುವುದರಿಂದ ಗಂಟಲು ಕೆರೆತ, ಒಣಕೆಮ್ಮು ಗಂಟಲು ನೋವು ಗುಣವಾಗುತ್ತದೆ.
* 2 ವೀಳ್ಯದೆಲೆಯಲ್ಲಿ 4-6 ಲವಂಗವನ್ನಿಟ್ಟು ಜಗಿದು ತಿಂದರೆ ಅಜೀರ್ಣ, ಹೊಟ್ಟೆ ಉಬ್ಬರ, ನೋವು ಗುಣವಾಗುತ್ತದೆ.
* ತೀವ್ರವಾದ ಹಲ್ಲು ನೋವಿದ್ದಾಗ ವೀಳ್ಯದೆಲೆಯ ರಸದಲ್ಲಿ ಲವಂಗದ ಹುಡಿಯನ್ನು ಬೆರೆಸಿ, ಅದರಲ್ಲಿ ಅದ್ದಿದ ಹತ್ತಿಯನ್ನು ನೋವಿರುವ ಭಾಗದಲ್ಲಿ ಇರಿಸಬೇಕು. ಹಲ್ಲುನೋವು, ವಸಡುನೋವು, ಊತ ಕಡಿಮೆಯಾಗುತ್ತದೆ.
* 2 ವೀಳ್ಯದೆಲೆಯಲ್ಲಿ 4 ಪುದೀನಾ ಎಲೆ, 2 ಕಾಳುಮೆಣಸಿನ ಹುಡಿ, ಚಿಟಿಕೆ ಉಪ್ಪು , 4 ಏಲಕ್ಕಿ ಕಾಳುಗಳನ್ನು ಇರಿಸಿ, ಮಡಚಿ ಜಗಿದು ನುಂಗಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ, ಅಜೀರ್ಣ, ಅಪಚನ ನಿವಾರಣೆಯಾಗುತ್ತದೆ.
* ಗರ್ಭಿಣ ಸ್ತ್ರೀಯರಲ್ಲಿ ವಾಕರಿಕೆ, ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟು ಜೊತೆಗೆ 4 ಏಲಕ್ಕಿ ಕಾಳುಗಳನ್ನಿಟ್ಟು ಜಗಿದು ರಸ ಹೀರಿದರೆ ಶಮನಕಾರಿ.
* 2 ಎಳೆಯ ವೀಳ್ಯದೆಲೆಯಲ್ಲಿ ಅಡಿಕೆಯನ್ನಿಟ್ಟು , ಕಾಚಿನ ಹುಡಿ (ಖದಿರದ ಹುಡಿ) ಬೆರೆಸಿ ಜಗಿಯುತ್ತಿದ್ದರೆ ವಸಡಿನಲ್ಲಿ ಉಂಟಾಗುವ ರಕ್ತಸ್ರಾವ ನಿವಾರಣೆಯಾಗುತ್ತದೆ.
* ವೀಳ್ಯದೆಲೆಯಲ್ಲಿ ಎಳೆಯ ಅಡಿಕೆಯ ಚೂರುಗಳನ್ನು ಇರಿಸಿ ಜಗಿದು ನುಂಗಬೇಕು. ಹೀಗೆ ದಿನಕ್ಕೆ 2-3 ಬಾರಿ ಸೇವಿಸಿದರೆ ಆಮಶಂಕೆ ನಿವಾರಣೆಯಾಗುತ್ತದೆ.
* ಗಾಯ ಉಂಟಾದಾಗ, ತುರಿಕೆ ಕಜ್ಜಿಗಳಿಗೆ ವೀಳ್ಯದೆಲೆಯ ರಸದಲ್ಲಿ 4-6 ಹನಿ ನಿಂಬೆರಸ ಬೆರೆಸಿ ಹಚ್ಚಿದರೆ ಗುಣಕಾರಿ.
* ಕಾಲರಾ ರೋಗದಲ್ಲಿ ಉಂಟಾಗುವ ತೀವ್ರತಮ ಮೀನಖಂಡಗಳ ನೋವು ಗುಣಮುಖವಾಗಲು ವೀಳ್ಯದೆಲೆಗೆ ಬೇವಿನ ಎಣ್ಣೆ ಸವರಿ ಜಗಿದು ರಸ ನುಂಗಬೇಕು. ವೀಳ್ಯದೆಲೆಯ ರಸದಲ್ಲಿ ಕರ್ಪೂರ ಬೆರೆಸಿ ಕಾಲುಗಳಿಗೆ ಮಾಲೀಶು ಮಾಡಬೇಕು.
* ವೀಳ್ಯದೆಲೆಯೊಂದಿಗೆ ಕಾಳುಮೆಣಸು, ಒಣ ಶುಂಠಿ ಅರೆದು ಸೇವಿಸಿದರೆ ಕಫ‌ಯುಕ್ತ ಕೆಮ್ಮು , ದಮ್ಮು ಶಮನವಾಗುತ್ತದೆ.
* ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಪರಿಹಾರವಾಗುತ್ತದೆ.
* ವೀಳ್ಯದೆಲೆಯ ರಸದಲ್ಲಿ ದಾಲ್ಚಿನಿ ಹುಡಿ ಬೆರೆಸಿ ಸಂಧಿಗಳಿಗೆ ಲೇಪಿಸಿದರೆ ಸಂಧಿಶೂಲ, ಬಾವು ಗುಣಮುಖವಾಗುತ್ತದೆ.
* ವೀಳ್ಯದೆಲೆಯ ರಸದಲ್ಲಿ ಮಗುವಿನ ವಯಸ್ಸಿಗೆ ತಕ್ಕಂತೆ ಗೋರೋಚನವನ್ನು ಬೆರೆಸಿ ನೀಡಿದರೆ ಮಕ್ಕಳ ಜ್ವರ, ನೆಗಡಿ, ಕೆಮ್ಮು ಪರಿಹಾರವಾಗುತ್ತದೆ.ಅಥವಾ ಸೊಂಟನೋವು ಹಾಗೂ ಸೊಂಟದ ಭಾಗದಿಂದ ಹೊಟ್ಟೆಯನ್ನು ಆವರಿಸಿ ಕಾಲುಗಳಿಗೆ ಹಬ್ಬುವಂಥ ನೋವು ಉಂಟಾದರೆ ತಕ್ಷಣ ತಜ್ಞ ವೈದ್ಯರಿಂದ ತಪಾಸಿಸುವುದು ಅಗತ್ಯ. ಇದರಿಂದ ಅವಧಿಪೂರ್ವ ರಕ್ತಸ್ರಾವವನ್ನು ನಿಲ್ಲಿಸಿ, ಗರ್ಭಸ್ರಾವ ಅಥವಾ ಗರ್ಭಪಾತವನ್ನು ತಪ್ಪಿಸಬಹುದು.

ನಮಗೆ ತಿಳಿಯದ ವೀಳ್ಯದೆಲೆಯ ವಿಶೇಷತೆ :
೧. ವೀಳ್ಯದೆಲೆ ತುದಿಯಲ್ಲಿ – ಲಕ್ಷ್ಮೀವಾಸ..
೨. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ..
೩. ವೀಳ್ಯದೆಲೆ ಮಧ್ಯದಲ್ಲಿ ಸರಸ್ವತೀ ದೇವಿ..
೪. ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತೀ ದೇವಿ..
೫. ವೀಳ್ಯದೆಲೆ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ..
೬. ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರದೇವತೆ ವಾಸ..
೭. ವೀಳ್ಯದೆಲೆ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ.
೮. ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸ..
(ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳುವುದು)
೯. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ..
(ಆದುದರಿಂದನೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ..,
ಅಹಂಕಾರ ಹಾಗೂ ದಾರಿದ್ರ್ಯಲಕ್ಷ್ಮೀ ಬರಬಾರದೆಂಬ ಅರ್ಥ..)
೧೦. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ..,
ಈ ಎಲ್ಲಾ ದೇವರುಗಳು ಇರೋದ್ರಿಂದಾನೆ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟು ಮಹತ್ವ..
ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು..
ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು..
ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆ ಹೊರಗೆ ಹಾಕಬಾರದು..
ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು..

ಈ ಲೇಖನ ನಿಮಗೆ ಇಷ್ಟವಾದರೆ ದಯಮಾಡಿ ಇದನ್ನು ಶೇರ್ ಮಾಡಿ ಇತರಿಗೆ ಇದರಿಂದ ಉಪಯೋಗವಾಗುವಂತೆ ಸಹಕರಸಿ

Comments are closed.