ಆರೋಗ್ಯ

Anti-inflammatory (ಉರಿಯೂತ ನಿರೋಧಕ ಮಾತ್ರೆ) ಅತೀ ಬಳಕೆಯಿಂದ ಜೀವಕ್ಕೇ ಅಪತ್ತು…ಗೋತ್ತೆ ?

Pinterest LinkedIn Tumblr

medicin

ಮಂಗಳೂರು: ಮನುಷ್ಯರಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಔಷಧಗಳೆಂ‍ದರೆ ನೋವು ನಿವಾರಕಗಳು. ಹೆಚ್ಚಿನ ಸಂದರ್ಭಗಳಲ್ಲಿ, ವಿವಿಧ ಕಾರಣಗಳಿಂದ ಉಂಟಾಗಬಲ್ಲ ಉರಿಯೂತವೇ ನೋವನ್ನುಂಟು ಮಾಡುವುದರಿಂದ, ಉರಿಯೂತವನ್ನು ಶಮನಗೊಳಿಸುವ ಔಷಧಗಳನ್ನೇ ಹೆಚ್ಚಾಗಿ ನೋವು ನಿವಾರಕಗಳಾಗಿ ಬಳಸಲಾಗುತ್ತಿದೆ. ಆದರೆ ಉರಿಯೂತವಿಲ್ಲದೆ ಇತರ ಕಾರಣಗಳಿಂದ ನೋವುಂಟಾದಾಗಲೂ ಇವೇ ಔಷಧಗಳನ್ನು ಬಳಸುವುದು ತೀರಾ ಸಾಮಾನ್ಯವಾಗಿ ಬಿಟ್ಟಿದೆ.

ನಮ್ಮ ದೇಶದಲ್ಲಂತೂ ಎಲ್ಲಾ ತರಹದ ನೋವು ನಿವಾರಕಗಳು ಹಾಗೂ ಉರಿಯೂತ ನಿರೋಧಕ ಔಷಧಗಳು ಯಾವ ನಿಯಂತ್ರಣವೂ ಇಲ್ಲದೆ, ಬೇಕಾಬಿಟ್ಟಿಯಾಗಿ ಎಲ್ಲೆಡೆ ಮಾರಲ್ಪಡುತ್ತವೆ. ಯಾವ ಔಷಧಗಳ ಅಗತ್ಯವೂ ಇಲ್ಲದ ಸಣ್ಣ ಪುಟ್ಟ ನೋವುಗಳಿಂದ ಹಿಡಿದು, ಉರಿಯೂತ ನಿರೋಧಕಗಳ ಬಳಕೆಗೆ ಯಾವ ಪಾತ್ರವೂ ಇಲ್ಲದ ಜ್ವರ ಇತ್ಯಾದಿ ಕಾಹಿಲೆಗಳವರೆಗೆ ಸಿಕ್ಕಸಿಕ್ಕಲ್ಲೆಲ್ಲ ಇವು ಯಥೇಷ್ಟವಾಗಿ ಬಳಕೆಯಾಗುತ್ತಿವೆ.
ಹೊಟ್ಟೆ ಹುಣ್ಣಿನಿಂದ ಉಂಟಾದ ನೋವಿಗೆ ಹೊಟ್ಟೆ ಹುಣ್ಣನ್ನುಂಟು ಮಾಡಬಲ್ಲ ಹಾಗೂ ಅದರಲ್ಲಿ ರಕ್ತಸ್ರಾವವಾಗುವಂತೆ ಮಾಡಬಲ್ಲ ಉರಿಯೂತ ನಿರೋಧಕಗಳನ್ನೇ ಬರೆಯುವ ವೈದ್ಯರೂ, ಸ್ವಯಂ ಆಗಿ ಬಳಸುವ ರೋಗಿಗಳೂ ಅಪರೂಪವಲ್ಲ. ಯಾವುದೇ ಸಂದರ್ಭದಲ್ಲೂ ಒಂದಕ್ಕಿಂತ ಹೆಚ್ಚು ನೋವು ನಿವಾರಕಗಳನ್ನು ಸೇವಿಸುವ ಅಗತ್ಯವೇ ಇಲ್ಲದಿರುವಾಗ ಎರಡು ಯಾ ಹೆಚ್ಚು ಬಗೆಯ ನೋವು ನಿವಾರಕಗಳನ್ನೂ, ಉರಿಯೂತ ನಿರೋಧಕ ಔಷಧಗಳನ್ನೂ ಬೆರೆಸಿ ಬಳಸುವುದು ಇತ್ತೀಚಿನ ವರ್ಷಗಳಲ್ಲಿ ಅತಿ ಸಾಮಾನ್ಯವಾಗಿಬಿಟ್ಟಿದೆ, ಅಂತಹಾ ಔಷಧಗಳ ಸಾವಿರಾರು ವಿಧದ ’ಬೆರಕೆ ಮಾತ್ರೆಗಳು’ನಮ್ಮಲ್ಲಿ ಲಭ್ಯವಿವೆ.

ಉರಿಯೂತ ನಿರೋಧಕ ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿದಾಗ ಅವು ರಕ್ತನಾಳಗಳೊಳಗೆ ರಕ್ತದ ಹೆಪ್ಪುಗಟ್ಟುವುವಿಕೆಯನ್ನು ಪ್ರಚೋದಿಸಿ, ರಕ್ತನಾಳಗಳು ಮುಚ್ಚಿಕೊಳ್ಳುವುದಕ್ಕೆ ಕಾರಣವಾಗುತ್ತವೆ. ಹೀಗೆ ಹೃದಯದ ರಕ್ತನಾಳಗಳಲ್ಲಿ ಅಡ್ಡಿಯಾದಾಗ ಹೃದಯಾಘಾತವೂ, ಮಿದುಳಿನ ರಕ್ತನಾಳಗಳಲ್ಲಿ ಅಡ್ಡಿಯಾದಾಗ ಪಾರ್ಶ್ವವಾಯುವೂ ಉಂಟಾಗುತ್ತವೆ. ಇವು ತೀವ್ರ ಸ್ವರೂಪದ್ದಾಗಿದ್ದರೆ ಸಾವು ಸಂಭವಿಸುವ ಸಾಧ್ಯತೆಗಳೂ ಇವೆ. ಈ ಬಗ್ಗೆ ಮೊದಲೇ ಅರಿವಿತ್ತಾದರೂ, ಉರಿಯೂತ ನಿರೋಧಕಗಳನ್ನು ಬಳಸುವವರಲ್ಲಿ ಈ ದುಷ್ಪರಿಣಾಮಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ನಡೆಸಲಾಗಿರುವ ಸವಿವರವಾದ ಅಧ್ಯಯನಗಳು ಅದನ್ನು ಇನ್ನಷ್ಟು ಪುಷ್ಟೀಕರಿಸಿವೆ.

ಹಳೆಯ ಹಾಗೂ ಹೊಸ ಉರಿಯೂತ ನಿರೋಧಕ ಔಷಧಗಳಿಂದಲೂ ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿಗಳ ಅಪಾಯವು ಹೆಚ್ಚುತ್ತದೆಯೆನ್ನುವುದು ಇದೀಗ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ವರದಿಯಲ್ಲಿ ಸ್ಪಷ್ಟವಾಗಿ ವ್ಯಕ್ತಗೊಂಡಿದೆ. ಈ ವರದಿಯನುಸಾರ, ವಿವಿಧ ಉರಿಯೂತ ನಿರೋಧಕಗಳನ್ನು ಬಳಸಿದಾಗ ರಕ್ತನಾಳ ಸಂಬಂಧಿ ಸಮಸ್ಯೆಗಳುಂಟಾಗುವ ಸಂಭಾವ್ಯತೆಯನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದ್ದು, ಸಾಮಾನ್ಯವಾಗಿ ಬಳಸುವ ಡೈಕ್ಲೋಫೆನಾಕ್ ಹಾಗೂ ಹೊಸದಾಗಿ ಬಳಸಲ್ಪಡುತ್ತಿರುವ ಎಟೊರಿಕಾಕ್ಸಿಬ್ ನಲ್ಲಿ ಇವು ಹೆಚ್ಚಿರುವಂತೆ ಕಂಡುಬರುತ್ತದೆ.

ಸಾಮಾನ್ಯವಾಗಿ ಬಳಕೆಯಲ್ಲಿರುವ ನೋವು ಹಾಗೂ ಜ್ವರ ನಿವಾರಕವೆಂದರೆ ಪಾರಸಿಟಮಾಲ್. ಅದು ಉರಿಯೂತ ನಿರೋಧಕವಲ್ಲ. ಓಪಿಯಂ ಗುಂಪಿಗೆ ಸೇರಿದ ಕೆಲವು ಔಷಧಗಳೂ ನೋವು ನಿವಾರಕಗಳಾಗಿ ಬಳಸಲ್ಪಡುತ್ತವೆ, ಅವುಗಳಿಂದ ಜ್ವರವಾಗಲೀ, ಉರಿಯೂತವಾಗಲೀ ಶಮನವಾಗುವುದಿಲ್ಲ. ಹಲವು ಬಗೆಯ ಉರಿಯೂತ ನಿರೋಧಕಗಳು ಲಭ್ಯವಿದ್ದು ಅವುಗಳ ಸಾಮರ್ಥ್ಯ, ಕಾರ್ಯದ ಅವಧಿ, ದುಷ್ಪರಿಣಾಮಗಳ ಪ್ರಮಾಣ ಇತ್ಯಾದಿಗಳು ಭಿನ್ನವಾಗಿರುತ್ತವೆ ಉದಾಹರಣೆಗೆ : ಇಬುಪ್ರೊಫೆನ್, ಡೈಕ್ಲೋಫೆನಾಕ್, ಪಿರೊಕ್ಸಿಕಾಂ, ಮೆಲಾಕ್ಸಿಕಾಂ, ನಾಪ್ರೊಕ್ಸೆನ್, ಇಂಡೋಮೆಥಾಸಿನ್, ಸೆಲೆಕಾಕ್ಸಿಬ್, ಎಟೊರಿಕಾಕ್ಸಿಬ್ ಇತ್ಯಾದಿಗಳು.

ಭಾರತದಲ್ಲಿ ಈಗಲೂ ಮಾರಲ್ಪಡುತ್ತಿರುವ ನಿಮೆಸುಲೈಡ್ ಎಂಬ ಉರಿಯೂತ ನಿವಾರಕವು ಹಲವು ರಾಷ್ಟ್ರಗಳಲ್ಲಿ ಲಭ್ಯವಿಲ್ಲ. ಸಣ್ಣ ಪ್ರಮಾಣದ, ಸಹಿಸಲು ಸಾಧ್ಯವಿರುವ ನೋವುಗಳಿಗಾಗಿ ನೋವು ನಿವಾರಕಗಳನ್ನು ಬಳಸಬೇಡಿ; ಉರಿಯೂತ ನಿರೋಧಕಗಳನ್ನಂತೂ ಇದಕ್ಕಾಗಿ ಬಳಸಲೇ ಬಾರದು.

ಉರಿಯೂತವಿಲ್ಲದೆ ನೋವು ಅಥವಾ ಜ್ವರಗಳಷ್ಟೆ ಇದ್ದರೆ ಪಾರಸಿಟಮಾಲ್ ಬಳಸಬಹುದು. ವಿಪರೀತವಾದ ನೋವಿದ್ದರೆ ಓಪಿಯಂಯುಕ್ತ ಔಷಧಗಳನ್ನು ವೈದ್ಯರು ನೀಡಬಹುದು.
ಉರಿಯೂತವಿದ್ದರೆ, ಅದರ ಸ್ವರೂಪ ಹಾಗೂ ತೀವ್ರತೆಗಳಿಗನುಗುಣವಾಗಿ, ಸೂಕ್ತವಾದ ಉರಿಯೂತ ನಿರೋಧಕ ಔಷಧವನ್ನು ಬಳಸಬಹುದು. ಅಂತಹ ಸಂದರ್ಭಗಳಲ್ಲಿ ಕಡಿಮೆ ದುಷ್ಪರಿಣಾಮಗಳುಳ್ಳ ಔಷಧಗಳನ್ನು ಆದಷ್ಟು ಕಡಿಮೆ ಅವಧಿಯವರೆಗೆ ಬಳಸಬೇಕು, ಯಾವುದೇ ಕಾರಣಕ್ಕೂ 5-7 ದಿನಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಉರಿಯೂತ ನಿರೋಧಕ ಔಷಧಗಳನ್ನು ಸೇವಿಸಲೇ ಬಾರದು.

ಮಧುಮೇಹವುಳ್ಳವರು, ಸ್ಥೂಲಕಾಯವುಳ್ಳವರು, ರಕ್ತದ ಏರೊತ್ತಡಕ್ಕಾಗಿ ಎನಾಲಾಪ್ರಿಲ್ ಅಥವಾ ಲೊಸಾರ್ಟಾನ್ ಜಾತಿಯ ಔಷಧಗಳನ್ನು ಸೇವಿಸುತ್ತಿರುವವರು (ಇನ್ನೂ ಮುಖ್ಯವಾಗಿ ಇವುಗಳ ಜೊತೆ ಮೂತ್ರೋತ್ತೇಜಕಗಳನ್ನು ಸೇವಿಸುತ್ತಿರುವವರು), ಮೂತ್ರಪಿಂಡಗಳ ವೈಫಲ್ಯವುಳ್ಳವರು, ಅಸ್ತಮಾದಿಂದ ಬಳಲುತ್ತಿರುವವರು, ಜಠರ ಯಾ ಮುಂಗರುಳಿನ ಉರಿಯೂತ ಅಥವಾ ಹುಣ್ಣುಗಳನ್ನು ಹೊಂದಿರುವವರು ಅಥವಾ ಮೊದಲು ಹೊಂದಿದ್ದವರು, 65 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ಹೃದಯ ಯಾ ಮೆದುಳಿನ ರಕ್ತನಾಳಗಳ ಕಾಹಿಲೆಗಳಿಂದ ಬಳಲುತ್ತಿರುವವರು ಹಾಗೂ ಗರ್ಭಿಣಿಯರು ಉರಿಯೂತ ನಿರೋಧಕಗಳನ್ನು ಬಳಸುವಾಗ ಅತ್ಯಂತ ಜಾಗರೂಕರಾಗಿರಬೇಕು ಅಥವಾ ಬಳಸದಿರುವುದೇ ಒಳ್ಳೆಯದು.

ನೋವಿನಿಂದ ಸ್ವಲ್ಪ ನರಳಾಟವಿರಬಹುದಷ್ಟೆ ಹೊರತು ಹೆಚ್ಚಿನ ಸಂದರ್ಭಗಳಲ್ಲಿ ಹೆಚ್ಚಿನ ಸಮಸ್ಯೆಯೇನೂ ಆಗದು, ಆದರೆ ಉರಿಯೂತ ನಿರೋಧಕಗಳನ್ನು ಅಜಾಗ್ರತೆಯಿಂದ ಬಳಸಿದರೆ ಅವು ಜೀವಕ್ಕೇ ಎರವಾಗಬಹುದು.

Comments are closed.