ಮಂಗಳೂರು: ಹೆರಿಗೆಯ ದಿನಗಳು ಹತ್ತಿರಾಗುತ್ತಿದ್ದಂತೆಯೇ ಹಲವಾರು ಬದಲಾವಣೆಗಳು ಕಂಡುಬರಲು ಪ್ರಾರಂಭಿಸುತ್ತವೆ. ಈ ಬದಲಾವಣೆಗಳನ್ನು ಸ್ವತಃ ಗರ್ಭಿಣಿ ಹಾಗೂ ಆಕೆಯ ಮನೆಯವರು ಗಮನಿಸಿ ತಕ್ಷಣವೇ ವೈದ್ಯರ ಅಥವಾ ಅನುಭವೀ ಸೂಲಗಿತ್ತಿಯರ ಸಲಹೆ ಪಡೆಯುವ ಮೂಲಕ ಮುಂದೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವುದರಿಂದ ತಪ್ಪಿಸಬಹುದು.
ಹೆಚ್ಚಿನ ಸಂದರ್ಭಗಳಲ್ಲಿ ಈ ಚಿಕ್ಕ ಪುಟ್ಟ ಬದಲಾವಣೆಗಳನ್ನು ಗಮನಿಸದೇ, ವೈದ್ಯರಿಗೆ ಹೇಳಬೇಕೆಂಬ ಅರಿವೂ ಇಲ್ಲದೇ ಪರಿಸ್ಥಿತಿ ನಿಧಾನಕ್ಕೆ ವಿಕೋಪಕ್ಕೆ ತಿರುಗಿ ಇದನ್ನು ವೈದ್ಯರು ಗಮನಿಸುವ ವೇಳೆ ತಡವಾಗಿದ್ದು ಅನಿವಾರ್ಯವಾಗಿ ವೈದ್ಯರು ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿ ಬರುತ್ತದೆ.
ಉದಾ: ಅವಧಿ ಪೂರ್ಣಗೊಳಿಸುವ ಮುನ್ನವೇ ಮಗು ಜನಿಸುವುದು. ಸಾಮಾನ್ಯ ಹೆರಿಗೆಯಾಗದೇ ಸಿಸೇರಿಯನ್ ಹೆರಿಗೆಯಾಗುವುದು. ಒಂದು ವೇಳೆ ಈ ಸೂಚನೆಗಳನ್ನು ಗರ್ಭಿಣಿ ಮೊದಲೇ ಗಮನಿಸಿ ವೈದ್ಯರಿಗೆ ತಿಳಿಸಿದ್ದರೆ ಅವರಿಗೆ ಸರಿಯಾದ ಕ್ರಮ ಮತ್ತು ಔಷಧಿಗಳಲ್ಲಿ ಬದಲಾವಣೆಯ ಮೂಲಕ ಈ ಸ್ಥಿತಿಗೆ ಬರದೇ ಇರಲು ಸಾಧ್ಯವಾಗುತ್ತದೆ.
ಹೆರಿಗೆಯ ಸಮಯ ಹತ್ತಿರಾಗುತ್ತಿದ್ದಂತೆಯೇ ಮೂತ್ರಕ್ಕೆ ಪದೇ ಪದೇ ಅವಸರವಾಗತೊಡಗುತ್ತದೆ. ಏಕೆಂದರೆ ಹೆರಿಗೆಯ ಸಮಯ ಹತ್ತಿರಾಗುತ್ತಿದ್ದಂತೆಯೇ ಮಗುವಿನ ಭಂಗಿ ಕೊಂಚ ಬದಲಾಗುತ್ತದೆ. ಇದು ಗರ್ಭಕೋಶದ ಗೋಡೆಯನ್ನು ಕೊಂಚವೇ ಒತ್ತುತ್ತದೆ. ಈ ಒತ್ತಡ ಮೂತ್ರಕೋಶದ ಮೇಲೆ ಬಿದ್ದು ಒಳಗಿನ ದ್ರವವನ್ನು ಹೊರಹಾಕಲು ಮೆದುಳಿಗೆ ಸೂಚನೆ ಹೋಗುತ್ತದೆ.
ಹೆರಿಗೆಯ ಸಮಯ ಹತ್ತಿರಾಗುತ್ತಿದ್ದಂತೆಯೇ ಗರ್ಭಕೋಶದ ಕಂಠ ಕೊಂಚ ಹಿಗ್ಗತೊಡಗುತ್ತದೆ. ಹಿಗ್ಗಲೇಬೇಕು, ಏಕೆಂದರೆ ಮಗುವಿನ ಜನನಕ್ಕೆ ಈ ವಿಸ್ತರಣೆ ಅಗತ್ಯವಾಗಿದೆ. ಈ ವಿಸ್ತರಣೆಯ ಪ್ರಾರಂಭವನ್ನು ವೈದ್ಯರು ಮತ್ತು ನುರಿತ ದಾದಿಯರು ಕ್ಷಣಮಾತ್ರದಲ್ಲಿ ಗುರುತಿಸುತ್ತಾರೆ. ಆದರೆ ಹೆರಿಗೆಯ ನಿಗದಿತ ದಿನಕ್ಕೂ ಮುನ್ನ ಗರ್ಭಿಣಿ ಅಥವಾ ಆಕೆಯ ತಾಯಿ ಈ ವಿಸ್ತರಣೆಯಾಗಿರುವುದನ್ನು ಗಮನಿಸಿದರೆ ಅವಧಿಗೂ ಮುನ್ನ ಶಿಶುವಿನ ಜನನವಾಗಲೂ ಸಾಕು ಎಂದು ತಿಳಿದುಕೊಳ್ಳಬೇಕು. ತಕ್ಷಣವೇ ವೈದ್ಯರಿಗೆ ಮಾಹಿತಿ ನೀಡಿ ಮುಂದಿನ ಸೂಚನೆಗಳನ್ನು ಅನುಸರಿಸಬೇಕು.
ಹೆರಿಗೆಯ ಹೊತ್ತಿನಲ್ಲಿ ಗರ್ಭಕೋಶದ ಸ್ನಾಯುಗಳು ಸಂಕುಚಿಸಿ ಮಗುವನ್ನು ಕೆಳಮುಖವಾಗಿ ದೂಡಲು ಆರಂಭಿಸುತ್ತವೆ. ಒಂದು ವೇಳೆ ಈ ನೋವು ನಿಧಾನವಾಗಿ ಪ್ರಾರಂಭವಾಗಿ ಇದಕ್ಕೆ ಸ್ನಾಯುಗಳು ದೂಡುವಂತಹ ಅನುಭವ ಗರ್ಭಿಣಿ ಅನುಭವಿಸಿದರೆ ತಕ್ಷಣವೇ ವೈದ್ಯರಿಗೆ ಮಾಹಿತಿ ರವಾನಿಸಬೇಕು.
ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ಭಂಗಿ ಕೊಂಚ ಹಿಂದಕ್ಕೆ ವಾಲಿದಂತಿರುತ್ತದೆ. ಏಕೆಂದರೆ ಮಗುವಿನ ಭಾರವನ್ನು ಹೊತ್ತ ದೇಹ ಸಮತೋಲನ ಪಡೆದುಕೊಳ್ಳಲು ಇದು ಅವಶ್ಯಕ. ಆದರೆ ಈ ಭಾರ ನಿಧಾನವಾಗಿ ಬಂದಿರುವ ಕಾರಣ ಈ ಭಂಗಿಗೆ ಬೆನ್ನುಮೂಳೆಯೂ ಕೊಂಚ ಹಿಂದಕ್ಕೆ ಬಾಗಿರುತ್ತದೆ. ಆದರೆ ಹೆರಿಗೆಯ ಸಮಯದಲ್ಲಿ ಮಗುವಿನ ಭಾರ ಕೊಂಚ ಕೆಳಕ್ಕೆ ಜರುಗುವ ಕಾರಣ ಭಾರ ಈಗ ಬೆನ್ನುಮೂಳೆಯನ್ನು ಜಗ್ಗುತ್ತದೆ. ಈ ಜಗ್ಗುವಿಕೆ ಕೆಳಬೆನ್ನಿನಲ್ಲಿ ಚಿಕ್ಕದಾದ ಸೆಳೆತ ಅಥವಾ ನೋವನ್ನು ಉಂಟುಮಾಡುತ್ತದೆ. ಬೇರಾವ ನೋವು ಇಲ್ಲದೇ ಕೇವಲ ಕೆಳಬೆನ್ನಿನಲ್ಲಿ ಚಿಕ್ಕದಾದರೂ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರಿಗೆ ತಿಳಿಸಬೇಕು.
ಹೆರಿಗೆಯ ಸಮಯದಲ್ಲಿ ಗರ್ಭಿಣಿಯ ದೇಹದಲ್ಲಿ relaxin ಎಂಬ ಹಾರ್ಮೋನು ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ಬಳಿಕ ಶರೀರದ ಮೂಳೆಸಂದುಗಳೆಲ್ಲಾ ಸಡಿಲಗೊಂಡು ಸುಲಭವಾಗಿ ಮಡಚಲು ಮತ್ತು ಅಗಲಿಸಲು ಸಾಧ್ಯವಾಗುತ್ತದೆ. ಶಿಶುವಿನ ಜನನಕ್ಕೆ ಈ ಸಡಿಲಿಕೆ ಅತ್ಯಗತ್ಯ. ವಿಶೇಷವಾಗಿ ಸೊಂಟದ ಮೂಳೆಗಳು ಇತರ ಸಮಯಕ್ಕಿಂತಲೂ ಹೆಚ್ಚು ವಿಸ್ತಾರಗೊಳ್ಳಲು ಈ ಹಾರ್ಮೋನು ಬಿಡುಗಡೆಯಾಗುವುದು ಅತ್ಯಗತ್ಯ.
ಹೆರಿಗೆಯ ಸಮಯ ಹತ್ತಿರಾಗುತ್ತಿದ್ದಂತೆಯೇ ಆಮಶಂಕೆಯೂ ಆವರಿಸಿಕೊಳ್ಳುತ್ತದೆ. ಇದು ಸಹಾ ರಿಲಾಕ್ಸಿನ್ ಹಾರ್ಮೋನಿನ ಪರಿಣಾಮವೇ ಆಗಿದ್ದು ಹೆರಿಗೆಯ ಸಮಯದಲ್ಲಿ ಮಲಬದ್ಧತೆಯಾಗದಂತೆ ನೋಡಿಕೊಳ್ಳುತ್ತದೆ. ದೇಹದ ಮಲಿನಗಳು ಹೆಚ್ಚು ಹೊತ್ತು ಕರುಳುಗಳಲ್ಲಿ ಇರದೇ ತಕ್ಷಣವೇ ವಿಸರ್ಜಿಸಿ ಹೆರಿಗೆಯ ಸಮಯದಲ್ಲಿ ಹೆಚ್ಚಿನ ಸ್ಥಳಾವಕಾಶ ನೀಡಲು ನೆರವಾಗುತ್ತದೆ. ಇದೇ ಕಾರಣಕ್ಕೆ ಹೆರಿಗೆಗೂ ಕೆಲವು ಗಂಟೆಗಳ ಮುನ್ನ ಗರ್ಭಿಣಿಗೆ ಯಾವುದೇ ಘನ ಆಹಾರವನ್ನು ದಾದಿಯರು ನೀಡುವುದಿಲ್ಲ.
ಗರ್ಭಾವಸ್ಥೆಯ ದಿನದಿಂದ ದಿನೇ ದಿನೇ ಏರಿಕೆಯ ಕ್ರಮದಲ್ಲಿ ಏರಿದ್ದ ತೂಕ ಹಠಾತ್ತನೇ ಕೊಂಚ ಕಡಿಮೆಯಾಗುತ್ತದೆ. ಇದಕ್ಕೆ ಆಮಶಂಕೆಯೂ ತನ್ನ ಸಹಾಕಾರ ನೀಡುತ್ತದೆ. ಆದರೆ ತೂಕ ಇನ್ನಷ್ಟು ಕಡಿಮೆಯಾದರೆ ದೇಹದಲ್ಲಿ ಆಮ್ನಿಯಾಟಿಕ್ ದ್ರವ ಅಥವಾ ಮಗುವನ್ನು ಸುತ್ತವರೆದಿರುವ ದ್ರವದ ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ತುಂಬಾ ಕಡಿಮೆಯಾದರೆ ಇದು ಅಪಾಯಕಾರಿಯಾಗಿದ್ದು ತಕ್ಷಣವೇ ವೈದ್ಯರಿಗೆ ತಿಳಿಸುವುದು ಅಗತ್ಯವಾಗಿದೆ.
ಹೆರಿಗೆಗೂ ಮುನ್ನ ಗರ್ಭಕೋಶದ ಸ್ನಾಯುಗಳು ಸಂಕುಚಿಸಿ ಮತ್ತು ವಿಕಚಿಸಿ ಶಿಶುವನ್ನು ಸರಿಯಾದ ದಾರಿಯಲ್ಲಿ ಮುಂದೂಡಲು ತಯಾರಿ ನಡೆಸುತ್ತದೆ. ಈ ಸಂಕುಚನೆ ಮತ್ತು ವಿಕಚನೆ ಹೊಟ್ಟೆ ಬಿಗಿದಂತಾಗಿಸುತ್ತದೆ. ಗರ್ಭಿಣಿಗೆ ಇದು ಹೆರಿಗೆಯ ಸೂಚನೆ ಎಂದು ಅನ್ನಿಸದಿದ್ದರೂ ವೈದ್ಯರಿಗೆ ಮತ್ತು ನುರಿತ ದಾದಿಯರಿಗೆ ಇದು ಹೆರಿಗೆಯ ಸಮಯವನ್ನು ಅಂದಾಜಿಸಲು ಅತಿ ಅಗತ್ಯವಾದ ಮಾಹಿತಿಯನ್ನು ನೀಡುತ್ತದೆ.