ಆರೋಗ್ಯ

ಗೋಮೂತ್ರ ಸೇವನೆ ಔಷದಿಯೋ ಅಥವಾ ಮೂಡನಂಬಿಕೆಯೋ….?

Pinterest LinkedIn Tumblr

gomutra_medicin_1

ಮಂಗಳೂರು: ಮನುಷ್ಯ ಕೃಷಿಕಾರ್ಯಗಳಲ್ಲಿ ತೊಡಗಿದಾಗ ತನಗೆ ನೆರವಾಗಲೆಂದು ಆಕಳನ್ನು ಸಾಕಲಾರಂಭಿಸಿದ. ಇಂದು ಕೃಷಿಕೆಲಸಗಳು ಸಾಕಷ್ಟು ಯಾಂತ್ರೀಕೃತಗೊಂಡಿರುವುದರಿಂದ ಸಾಕಲ್ಪಟ್ಟ ಮೂಲ ಉದ್ದೇಶಕ್ಕೆ ಈ ಪ್ರಾಣಿಗಳು ಅಪ್ರಸ್ತುತವೆನಿಸಿಬಿಟ್ಟಿವೆಯಾದರೂ, ಕೃಷಿ ಪ್ರಧಾನವಾದ ನಮ್ಮ ಸಮಾಜದಲ್ಲಿ ಅವುಗಳಿಗಿದ್ದ ಪ್ರಾಮುಖ್ಯತೆಯನ್ನು ಇನ್ನಷ್ಟು ಎತ್ತರಕ್ಕೇರಿಸಿ, ‘ಎರಡನೇ ತಾಯಿ, ‘ವಿಶ್ವದ ಮಾತೆ’ ಎಂಬಿತ್ಯಾದಿಯಾಗಿ ಬಿಂಬಿಸುವ ಪ್ರಯತ್ನಗಳೀಗ ವ್ಯವಸ್ಥಿತವಾಗಿ ನಡೆಯುತ್ತಿವೆ. ‘

ಗೋ ಮಾತೆಯ’ ರಕ್ಷಣೆಗಾಗಿ ನಡೆಯುತ್ತಿರುವ ‘ಹೋರಾಟಗಳು ದನದ ಗೌರವ ರಕ್ಷಣೆಗಾಗಿ ನಡೆದ ದಲಿತರ ಕೊಲೆಗಳು ಮತ್ತು ಹಲವಾರು ದೊಂಬಿಗಳನ್ನು ನೋಡಿದಾಗ, ನಮ್ಮ ದೇಶದಲ್ಲಿ ಮನುಷ್ಯನ ಜೀವಕ್ಕಿಂತ ಸತ್ತಿರುವ ದನದ ಸ್ಥಾನಮಾನವೇ ಹೆಚ್ಚೆಂದು ಅನಿಸದಿರಲಾರದು. ಹೀಗಿರುವಾಗ, ದನಗಳು ಸ್ರವಿಸುವ ಹಾಲು ಮತ್ತು ವಿಸರ್ಜಿಸುವ ಮಲ-ಮೂತ್ರಗಳನ್ನು ಬಳಸಿ ಹಲವು ‘ಉತ್ಪನ್ನಗಳನ್ನು’ ತಯಾರಿಸಿ ಮಾರಾಟ ಮಾಡುವುದಕ್ಕೂ, ಈ ‘ಉತ್ಪನ್ನಗಳು’ ಹೈನುಗಾರಿಕೆಗಿಂತಲೂ ಹೆಚ್ಚಿನ ಲಾಭವನ್ನು ತರಬಹುದೆಂದು ಪ್ರಚಾರ ಮಾಡುವುದಕ್ಕೂ ದನಗಳ ಮೇಲಿನ ವಿಶೇಷವಾದ ಮಮತೆ ಹಾಗೂ ಭಕ್ತಿಗಳಷ್ಟೇ ಕಾರಣವೇ ಅಥವಾ ಇದರ ಹಿಂದೆ ಬೇರೇನಾದರೂ ಉದ್ದೇಶವಿದೆಯೇ ಎಂಬ ಪ್ರಶ್ನೆಗಳೇಳುತ್ತವೆ.

gomutra_medicin_3

‘ಗೋ ಉತ್ಪನ್ನಗಳು’:
ದನದ ಹಾಲು ಹಾಗೂ ಮಲ-ಮೂತ್ರಗಳಿಂದ ತಯಾರಿಸಲಾದ ‘ಉತ್ಪನ್ನಗಳ’ ಪಟ್ಟಿಯು ಸಾಕಷ್ಟು ದೊಡ್ಡದಿದೆ. ಇವುಗಳ ಪೈಕಿ, ಪಂಚಗವ್ಯ ಹಾಗೂ ಗೋ ಅರ್ಕಗಳ ಬಗ್ಗೆ ಹೆಚ್ಚಾಗಿ ಹೇಳಲಾಗಿದೆ.ಗೋವಿನ ಐದು ಉತ್ಪನ್ನಗಳ – ಸೆಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪ – ಮಿಶ್ರಣವೇ ಪಂಚಗವ್ಯ. ಗೋಮೂತ್ರವನ್ನು ಹುಳಿಬರಿಸಿ ತಯಾರಿಸಿದ ಗೋ ಮೂತ್ರಾಸವ, ಭಟ್ಟಿ ಇಳಿಸಿ ತಯಾರಿಸಿದ ಗೋ ಅರ್ಕ ಮತ್ತು ಗನವತಿ ಮಾತ್ರೆಗಳನ್ನೂ ಔಷಧಗಳಾಗಿ ಬಳಸಬಹುದಂತೆ. ಗೋ ಅರ್ಕಕ್ಕೆ ಅಮೆರಿಕದ ಎರಡು ಪೇಟೆಂಟ್ ಗಳನ್ನೂ ಪಡೆಯಲಾಗಿದ್ದು, ಈ ವಿಚಾರವನ್ನು ಬಹು ದೊಡ್ಡ ಸಾಧನೆಯೆಂಬಂತೆ ತೋರಿಸಲಾಗುತ್ತಿದೆ.

gomutra_medicin_4

ವಿವಿಧ ಗೋ ಉತ್ಪನ್ನಗಳು ಜ್ವರದಿಂದ ಹಿಡಿದು ಕ್ಯಾನ್ಸರ್ ವರೆಗೆ ನೂರಾರು ರೋಗಗಳನ್ನು ವಾಸಿ ಮಾಡಬಹುದೆಂದು ಹೇಳಲಾಗುತ್ತಿದೆ. ಕುಟುಂಬದಲ್ಲಿ ಜನನ ಮರಣಗಳಾದಾಗ ‘ಮೈಶುದ್ಧಿ’ ಮಾಡಿಸಿಕೊಳ್ಳಲು ಬಳಸಲಾಗುವ ಪಂಚಗವ್ಯವನ್ನು ಹಲವು ರೋಗಗಳ ಚಿಕಿತ್ಸೆಯಲ್ಲಿಯೂ, ಗಿಡಗಳಲ್ಲಿ ಕೀಟನಾಶಕವಾಗಿಯೂ, ಮಣ್ಣಿನ ಸಾರವನ್ನು ಹೆಚ್ಚಿಸುವುದಕ್ಕೂ ಬಳಸಬಹುದೆಂದು ಹೇಳಲಾಗುತ್ತಿದೆ.(ಇಷ್ಟೊಂದು ವೈವಿಧ್ಯಮಯವಾದ ಉಪಯೋಗಗಳುಳ್ಳ ವಸ್ತು ಬಹುಷಃ ಇನ್ನೊಂದಿರಲಾರದು!) ಇತ್ತೀಚೆಗೆ, ಚಿಕುಂಗುನ್ಯಾ ರೋಗದ ಚಿಕಿತ್ಸೆಯಲ್ಲೂ ಪಂಚಗವ್ಯವು ಪರಿಣಾಮಕಾರಿಯಾಗಿದೆಯೆಂದು ಘೋಷಿಸಿ ಅದನ್ನು ವಿತರಿಸುವ ಶಿಬಿರಗಳನ್ನೂ ಕೆಲವೆಡೆಗಳಲ್ಲಿ ನಡೆಸಲಾಯಿತು. ಕೇಶತೈಲ, ಶಾಂಪೂ, ಚರ್ಮದ ಮುಲಾಮುಗಳು ಇತ್ಯಾದಿಗಳಲ್ಲೂ ಗೋಮೂತ್ರವನ್ನು ಬಳಸಬಹುದಂತೆ.

ಸಾಬೂನು, ಮೂಗಿಗೆ ಏರಿಸುವ ಪುಡಿ, ಮೈಗೆ ಹಾಕುವ ಪುಡಿ, ಮುಲಾಮು, ಅಗರಬತ್ತಿ, ಹಲ್ಲಿನ ಪುಡಿ ಇತ್ಯಾದಿಗಳನ್ನು ದನದ ಸೆಗಣಿಯಿಂದ ತಯಾರಿಸಬಹುದೆಂದೂ, ಇವಕ್ಕೆ ಔಷಧೀಯ ಗುಣಗಳಿವೆಯೆಂದೂ ಹೇಳಲಾಗುತ್ತಿದೆ.

ಯಾವ್ಯಾವುದೋ ದನಗಳ ಮಲ ಮೂತ್ರಗಳನ್ನು ಬಳಸಿದರೇನೂ ಪ್ರಯೋಜನವಾಗದಂತೆ! ಭಾರತೀಯ ಶುದ್ಧ ಗೋತಳಿಗಳ ಉತ್ಪನ್ನಗಳ ‘ರೋಗ ಪ್ರತಿರೋಧ ಶಕ್ತಿಯು’ ಶೇ. 90ರಿಂದ 98ರಷ್ಟಿದ್ದರೆ, ಮಿಶ್ರ ತಳಿಗಳ ಶಕ್ತಿಯು ಶೇ. 40ಕ್ಕೂ ಕಡಿಮೆಯಿದೆಯೆಂದು ‘ಗುರುತಿಸಿದ’ ಸಂಶೋಧನೆಗಳೂ ನಡೆದಿವೆ

‘ಆಧಾರ’ಗಳೇನು?
ಗೋ ಮಯ, ಗೋ ಮೂತ್ರ ಹಾಗೂ ಪಂಚಗವ್ಯಗಳ ಸತ್ಪ್ರಯೋಜನಗಳ ಬಗ್ಗೆ ಚರಕ ಸಂಹಿತೆ ಇದೆ. ಆದರೆ ಇಪ್ಪತ್ತೊಂದನೇ ಶತಮಾನದಲ್ಲಿರುವ ನಾವು ಆದಿ ಕಾಲದ ಅಂತಹಾ ಬರಹಗಳ ಆಧಾರದಲ್ಲಿ ದನದ ಮಲ-ಮೂತ್ರಗಳನ್ನು ಸೇವಿಸಬೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಚರಕನ ಕಾಲದಲ್ಲೇ ಈ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ . ಆದರೆ ಜೈವಿಕ ಸಂಯುಕ್ತಗಳ ಬಗೆಗಾಗಲೀ, ಸೂಕ್ಷ್ಮಾಣು ಜೀವಿಗಳ ಬಗೆಗಾಗಲೀ ಆಗ ತಿಳಿದಿರಲಿಲ್ಲವಲ್ಲ? ಆದರೇನಂತೆ, ದನದ ಮೂತ್ರವೇನೂ ಬದಲಾಗಿಲ್ಲವಲ್ಲ.

ಗೋವುಗಳು ವಿಸರ್ಜಿಸುವ ಕಶ್ಮಲಗಳ ಸತ್ಪ್ರಯೋಜನಗಳ ಬಗ್ಗೆ ಬರೆದಿರುವ ಹೆಚ್ಚಿನ ಲೇಖನಗಳಲ್ಲಿ ಆದಿಕಾಲದ ಬರಹಗಳನ್ನೂ, ಚರಕ ಸಂಹಿತೆಯನ್ನೂ ಬಹಳಷ್ಟು ಸಲ ಉದ್ಧರಿಸಲಾಗಿದ್ದು, ಕೆಲವೊಂದು ವಾದಗಳು ಇಂತಿವೆ:

ಗೋವು ನಮ್ಮ ಮಾತೆ, ನಾವು ಅದರ ಮಕ್ಕಳು; ಆದ್ದರಿಂದ ಗೋಮೂತ್ರವು ಪ್ರಯೋಜನಕರ.
ಪಿತ್ತ, ಕಫ ಮತ್ತು ವಾಯುಗಳ ಅಸಮತೋಲನದಿಂದಲೇ ಕಾಯಿಲೆಗಳು ಉಂಟಾಗುವುದಿದ್ದು, ಗೋಮೂತ್ರವು ಇವುಗಳ ನಡುವೆ ಸಮತೋಲನವನ್ನು ಸಾಧಿಸುತ್ತದೆ.ಮೂತ್ರಗಳಲ್ಲೆಲ್ಲ ಗೋಮೂತ್ರವೇ ಶ್ರೇಷ್ಠವಾದುದು.

ಗೋಮೂತ್ರದಲ್ಲಿ ಗಂಗಾಜಲವಿದೆ, ಅಮೃತವೆನಿಸುವ ತಾಮ್ರ ಹಾಗೂ ಚಿನ್ನದ ಧಾತುಗಳಿವೆ. ಗೋಮೂತ್ರವು ಕ್ಷಯಿಸುವುದಿಲ್ಲ, ಅದು ಹಳೆಯದಾದಂತೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.ಗೋಮೂತ್ರದ ಬಗ್ಗೆ ಪಡೆಯಲಾಗಿರುವ ಪೇಟೆಂಟ್ ಗಳು ಇತ್ತೀಚೆಗೆ ಬಹಳಷ್ಟು ಸುದ್ದಿಯಲ್ಲಿವೆ.

ಜೀವನಿರೋಧಕ ಔಷಧಗಳು ಹಾಗೂ ಕ್ಯಾನ್ಸರ್ ನಿರೋಧಕ ಔಷಧಗಳ ಪರಿಣಾಮಗಳನ್ನು ಗೋ ಅರ್ಕವು ಹೆಚ್ಚಿಸುತ್ತದೆಯೆಂದು ಪ್ರಯೋಗಗಳು ತೋರಿಸಿವೆಯೆಂಬ ಆಧಾರದಲ್ಲಿ ಪೇಟೆಂಟ್ ಪಡೆದಿರುವುದು ಒಂದೆಡೆಯಾದರೆ, ಗೋಮೂತ್ರ ಚಿಕಿತ್ಸೆಗಾಗಿಯೇ ಇನ್ನೊಂದು ಪೇಟೆಂಟ್ ಪಡೆಯಲಾಗಿದೆ. ಗೋ ಮೂತ್ರ ಚಿಕಿತ್ಸೆಯ ಬಗ್ಗೆ ಮ್ಯಾನ್ಮಾರ್ ನಿಂದಲೂ ಅಪಸ್ಮಾರ ಚಿಕಿತ್ಸೆಯಲ್ಲಿ ಗೋಮೂತ್ರದ ಕಷಾಯದ ಬಳಕೆಯ ಬಗ್ಗೆ ನೈಜೀರಿಯದಿಂದಲೂ ವರದಿಗಳಿವೆ

ಗೌಟ್ ಸಂಧಿವಾತ, ಬಿಳಿರಕ್ತಕಣಗಳ ಕಾರ್ಯ, ಯಕೃತ್ತಿನ ಜೀವಕೋಶಗಳ ಮೇಲೆ ಕಾರ್ಬನ್ ಟೆಟ್ರಾಕ್ಲೋರೈಡ್ ನ ಪರಿಣಾಮ ಇತ್ಯಾದಿಗಳಲ್ಲಿ ಗೋ ಅರ್ಕದ ಪ್ರಯೋಜನಗಳ ಬಗ್ಗೆ ಪ್ರಾಣಿಗಳ ಮೇಲೆ ಸಣ್ಣ ಪ್ರಮಾಣದ ಪ್ರಯೋಗಗಳು ನಡೆದಿವೆ.ಇಂತಹಾ ವರದಿಗಳನ್ನು ಉತ್ಪ್ರೇಕ್ಷಿಸಿ, ಮನುಕುಲವನ್ನು ಕಾಡುತ್ತಿರುವ ಸುಮಾರು ಎಲ್ಲಾ ಕಾಹಿಲೆಗಳಿಗೂ ಗೋಮೂತ್ರವೇ ಅತ್ಯಂತ ಪರಿಣಾಮಕಾರಿಯಾದ, ಸುರಕ್ಷಿತವಾದ ಚಮತ್ಕಾರಿಕ ಚಿಕಿತ್ಸೆಯೆಂಬಂತೆ ಡಂಗುರ ಸಾರಲಾಗುತ್ತಿದೆ. ಭಾರತ ಸರ್ಕಾರದ ಕೃಷಿ ಸಚಿವಾಲಯದಡಿಯಲ್ಲಿರುವ ಹೈನುಗಾರಿಕಾ ಇಲಾಖೆಯು ಕೂಡಾ ದನದ ಮೂತ್ರವನ್ನು ಔಷಧವನ್ನಾಗಿ ಮಾರುವುದಕ್ಕೆ ಪೂರಕವಾದ ವರದಿಗಳನ್ನು ಪ್ರಕಟಿಸಿದೆ.

ಗೋ ಮೂತ್ರ ವ್ಯಾಪಾರದ ಪ್ರವರ್ತಕರ ಸೋಗಲಾಡಿತನವನ್ನು ಕಾಣಬೇಕಾದರೆ, ಗೋಮೂತ್ರದ ಔಷಧೀಯ ಗುಣಗಳನ್ನು ತಿಳಿಸುವ ಮೂಲಾಧಾರಗಳೆನ್ನಲಾದ ಆಯುರ್ವೇದದ ಗ್ರಂಥಗಳನ್ನೇ ಪರಿಶೀಲಿಸಿದರೆ ಸಾಕಾಗುತ್ತದೆ. ಆಯುರ್ವೇದದ ಮೂರು ಗ್ರಂಥಗಳಾದ ಚರಕ ಸಂಹಿತೆ (1-2ನೇ ಶತಮಾನ), ಸುಶ್ರುತ ಸಂಹಿತೆ (3-4ನೇ ಶತಮಾನ) ಹಾಗೂ ವಾಗ್ಭಟನ ಬರಹಗಳಲ್ಲಿ (7ನೇ ಶತಮಾನ) ರೋಗ ಚಿಕಿತ್ಸೆಯಲ್ಲಿ ಗೋಮಾಂಸದ ಪ್ರಯೋಜನಗಳ ಬಗ್ಗೆಯೂ ಹೇಳಲಾಗಿದೆಯಾದರೂ, ಗೋ ಮೂತ್ರ ವ್ಯಾಪಾರದ ಪ್ರವರ್ತಕರು ಆ ಬಗ್ಗೆ ಚಕಾರವನ್ನೆತ್ತುವುದಿಲ್ಲ. ಭಾರತೀಯ ಸಂಸ್ಕೃತಿಯ ಸ್ವಯ ಘೋಷಿತ ಸಂರಕ್ಷಕರ ವಾದಗಳನ್ನು ಒಪ್ಪುವುದಾದರೆ, ಗೋಮಾಂಸ ಭಕ್ಷಣೆಯು ಪಾಪವೆನಿಸುತ್ತದೆ, ಗೋಮೂತ್ರವನ್ನು ಕುಡಿಯುವುದು ಹಾಗೂ ಗೋವಿನ ಸೆಗಣಿಯನ್ನು ತಿನ್ನುವುದು ಪುಣ್ಯದ ಕೆಲಸವಾಗುತ್ತದೆ.

ಆದರೆ ಗೋಮೂತ್ರಕ್ಕೆ ಪೇಟೆಂಟ್ ಪಡೆಯಲಾಗಿಲ್ಲವೇ? ಯಾವುದೇ ಸಂಶೋಧನೆಯನ್ನು ಇತರರು ನಕಲು ಮಾಡದಂತೆ ಯಾ ಮಾರದಂತೆ ನಿರ್ಬಂಧಿಸುವ ಏಕಸ್ವಾಮ್ಯತೆಯನ್ನಷ್ಟೇ ಪೇಟೆಂಟ್ ಒದಗಿಸುತ್ತದೆಯಲ್ಲದೆ, ಅದು ಆ ಸಂಶೋಧನೆಯ ಉಪಯುಕ್ತತೆಗೆ ಆಧಾರವೆನಿಸದು. ಇನ್ನೊಂದೆಡೆ, ಗೋಮೂತ್ರಕ್ಕೆ ವಿದೇಶಗಳಲ್ಲಷ್ಟೇ ಪೇಟೆಂಟ್ ಪಡೆಯಲಾಗಿದ್ದು, ಭಾರತ ಸರಕಾರದಿಂದ ಪೇಟೆಂಟ್ ಪಡೆದ ಬಗ್ಗೆ ವರದಿಗಳಿಲ್ಲ.
ಅಂತರರಾಷ್ಟ್ರೀಯ ಪೇಟೆಂಟ್ ಗಿರುವ ಮಾನ್ಯತೆಯಾಗಲೀ, ಸುದ್ದಿಮೌಲ್ಯವಾಗಲೀ ಭಾರತೀಯ ಪೇಟೆಂಟಿಗೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿರಬಹುದೇನೋ? ಅಲ್ಲದೆ, ವಿದೇಶೀಯರೂ ಗೋಮೂತ್ರದ ಮಹತ್ವವನ್ನು ಗುರುತಿಸಿದ್ದಾರೆಂದು ಹೇಳಿಕೊಳ್ಳಲು ಇದಕ್ಕಿಂತ ಉತ್ತಮವಾದ ಪುರಾವೆಯೇನು ಬೇಕು?

ಗೋಮೂತ್ರದ ಪ್ರಯೋಜನಗಳ ಬಗ್ಗೆ ಪ್ರಯೋಗಾಲಯಗಳಲ್ಲಿ ಕೆಲವು ಅಧ್ಯಯನಗಳನ್ನು ನಡೆಸಲಾಗಿರುವ ಬಗ್ಗೆ ವರದಿಗಳಷ್ಟೇ ಇವೆಯಲ್ಲದೆ, ಮನುಷ್ಯರಲ್ಲಿ ಯಾವುದೇ ವೈಜ್ಞಾನಿಕವಾದ ಅಧ್ಯಯನಗಳನ್ನು ನಡೆಸಲಾದ ಬಗ್ಗೆ ವರದಿಗಳಿಲ್ಲ. ಅಲ್ಲಿಲ್ಲೊಂದು ‘ಅನುಭವದ ವರದಿಗಳು’ ಹಾಗೂ ಸ್ವಯಂಘೋಷಿತ ‘ಗೋಮೂತ್ರ ಚಿಕಿತ್ಸಕರು’ ನಡೆಸಿದ್ದಾರೆನ್ನಲಾದ ಅಧ್ಯಯನಗಳ ವರದಿಗಳು ಲಭ್ಯವಿವೆಯಾದರೂ ಇವು ಯಾವುದೇ ವೈಜ್ಞಾನಿಕ ಮಾನದಂಡಗಳಿಗೂ ನಿಲುಕುವುದಿಲ್ಲ. ಒಂದಕ್ಕೊಂದು ತಾಳೆ ಹೊಂದದ ಹಲವು ವಿಚಾರಗಳು ಅಂತಹಾ ವರದಿಗಳಲ್ಲಿ ಯಥೇಷ್ಟವಾಗಿ ದೊರೆಯುತ್ತವೆ: ಉದಾಹರಣೆಗೆ, ಗೋಮೂತ್ರದಲ್ಲಿ ತಾಮ್ರ ಹಾಗೂ ಚಿನ್ನದ ಅಂಶಗಳಿವೆ ಎಂದು ಹೇಳಲಾಗಿರುವ ಲೇಖನದಲ್ಲಿಯೇ ಇದನ್ನು ನಿರಾಕರಿಸುವ ವಿವರಗಳನ್ನೂ ನೀಡಲಾಗಿದೆ!

ಮೂತ್ರ ಬರೇ ಮೂತ್ರ, ಪ್ರಾಣಿಯ ಮೂತ್ರ ಪಿಂಡಗಳು ರಕ್ತದಿಂದ ಕಶ್ಮಲಗಳನ್ನು ಬೇರ್ಪಡಿಸಿ, ಮೂತ್ರನಾಳಗಳ ಮೂಲಕ ವಿಸರ್ಜಿಸುವ ಒಂದು ದ್ರಾವಣ, ಅಷ್ಟೆ. ಪ್ರಾಣಿಯ ಶರೀರದಲ್ಲಾಗುವ ಉಪಾಪಚಯದ ಕ್ರಿಯೆಗಳಲ್ಲಿ ಹುಟ್ಟಿಕೊಳ್ಳುವ ಹಲವು ಸಂಯುಕ್ತಗಳು, ದೇಹಕ್ಕೆ ಅಗತ್ಯವಿಲ್ಲದ ಲವಣಗಳು ಹಾಗೂ ಮೂತ್ರವು ಸಲೀಸಾಗಿ ವಿಸರ್ಜನೆಗೊಳ್ಳುವುದಕ್ಕೆ ನೆರವಾಗಲು ಮೂತ್ರನಾಳಗಳು ಸ್ರವಿಸುವ ಕೆಲವೊಂದು ವಿಶೇಷವಾದ ಸಂಯುಕ್ತಗಳು ಮೂತ್ರದಲ್ಲಿರುತ್ತವೆ. ಸಹಜವಾಗಿಯೇ, ಪ್ರಾಣಿಗಳು ಹಾಗೂ ಮನುಷ್ಯರ ಮೂತ್ರಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ.

ಮೂತ್ರವು ವಿಸರ್ಜನೆಗೊಳ್ಳುವಾಗ ಹೆಪ್ಪುಗಟ್ಟದಂತೆ ತಡೆಯುವ ಯೂರೋಕೈನೇಸ್ ಎಂಬ ಕಿಣ್ವವೊಂದು ಮೂತ್ರದಲ್ಲಿದೆ. ಮಾನವ ಮೂತ್ರದಿಂದ ಯೂರೋಕೈನೇಸ್ ಅನ್ನು ಪ್ರತ್ಯೇಕಿಸಿ, ರಕ್ತವು ಹೆಪ್ಪುಗಟ್ಟಿ ಮುಚ್ಚಿಹೋಗಿರುವ ಹೃದಯದ ಅಪಧಮನಿಯನ್ನು ತೆರೆಯಲು ಹೃದಯಾಘಾತದ ಸಂದರ್ಭದಲ್ಲಿ ತುರ್ತುಚಿಕಿತ್ಸೆಗಾಗಿ ಅದನ್ನಿಂದು ನಾವು ಬಳಸುತ್ತಿದ್ದೇವೆ. ಹಾಗೆಂದು ಹೃದಯಾಘಾತವಾದಾಗ ರೋಗಿಗೆ ಮೂತ್ರವನ್ನು ಕುಡಿಸಿದರೆ ರೋಗಿಯನ್ನು ಉಳಿಸಲಿಕ್ಕಾಗುತ್ತದೆಯೇ ಅಥವಾ ಮನುಷ್ಯನ ಮೂತ್ರವು ಪೂಜನೀಯವಾಗಿಬಿಡುತ್ತದೆಯೇ?

ಗೋಮೂತ್ರವು ಮಾನವರಿಗೆ ಸುರಕ್ಷಿತವೇ? ಗೋಮೂತ್ರದ ಉತ್ಪನ್ನಗಳನ್ನು ಸೇವಿಸುವುದರಿಂದ ಗಂಭೀರವಾದ, ಕೆಲವೊಮ್ಮೆ ಪ್ರಾಣಾಂತಿಕವಾಗಬಹುದಾದ ದುಷ್ಪರಿಣಾಮಗಳು ಉಂಟಾಗಿರುವ ಬಗ್ಗೆ ವರದಿಗಳಿವೆ ಹಾಗೂ ಪ್ರಯೋಗಗಳಿಂದಲೂ ಇದು ಶ್ರುತಪಟ್ಟಿದೆ.

ಇಲಿಜ್ವರವೂ ಸೇರಿದಂತೆ ಬಾಯಿಯ ಮೂಲಕ ಹರಡುವ ಕೆಲವು ಸೋಂಕುರೋಗಗಳಿಗೂ ಗೋಮೂತ್ರವು ಕಾರಣವಾಗಬಹುದು. ಗೋಮೂತ್ರ ಹಾಗೂ ಗೋಮಯ (ಸೆಗಣಿ) ಗಳಿಗೆ ಸೂಕ್ಷ್ಮಾಣುಜೀವಿನಾಶಕ ಶಕ್ತಿಯಿದೆಯೆಂಬ ಹೇಳಿಕೆಗಳು ಆಧಾರರಹಿತವಷ್ಟೇ ಅಲ್ಲ, ತೀರಾ ಅಪಾಯಕಾರಿಯೂ ಆಗಿವೆ. ಸೆಗಣಿ (ಹಾಗೂ ಎಲ್ಲಾ ಪ್ರಾಣಿಗಳ ಮಲಗಳು) ಕರುಳಿನಿಂದ ವಿಸರ್ಜಿತಗೊಂಡ ಸೂಕ್ಷ್ಮಾಣುಜೀವಿಗಳಿಂದ ತುಂಬಿ ತುಳುಕುತ್ತಿರುವುದು ಒಂದೆಡೆಯಾದರೆ, ಪಂಚಗವ್ಯದಲ್ಲಿಯೂ ಹಲವು ತರದ ಸೂಕ್ಷ್ಮಾಣುಜೀವಿಗಳಿರುವುದನ್ನು ಗುರುತಿಸಲಾಗಿದೆ.

ಸೂಕ್ಷ್ಮಾಣುಜೀವಿಗಳಿಂದ ತುಂಬಿರುವ ಈ ಮಲ-ಮೂತ್ರಗಳನ್ನು ತೆರೆದ ಗಾಯಗಳಿಗೇನಾದರೂ ಲೇಪಿಸಿದರೆ ಮಾರಣಾಂತಿಕವಾಗಬಲ್ಲ ಸೋಂಕುಂಟಾಗಬಹುದು. ಈ ವಿಷಯಗಳ ಬಗ್ಗೆ ಸಂಪೂರ್ಣವಾಗಿ ಅಜ್ಞಾನಿಗಳಾದವರಷ್ಟೇ ದನದ ಮಲ-ಮೂತ್ರಗಳನ್ನು ಸೂಕ್ಷ್ಮಾಣುಜೀವಿನಾಶಕಗಳೆಂದು ಮಾರುವ ಸಾಹಸಕ್ಕೆ ಕೈಯಿಕ್ಕಬಹುದೆನ್ನುವುದು ನಿಜವಿದ್ದರೂ, ಆಧುನಿಕ ವೈದ್ಯವಿಜ್ಞಾನದಲ್ಲಿ ಪರಿಣತರಾದ ಕೆಲವು ವೈದ್ಯರುಗಳು, ತಮ್ಮ ‘ಆಧ್ಯಾತ್ಮಿಕ ಗುರುಗಳ’ ಅಥವಾ ಮಠಾಧಿಪತಿಗಳ ಮೇಲಿನ ಕುರುಡು ಭಕ್ತಿಯಿಂದ, ಇಂತಹುದನ್ನು ಬೆಂಬಲಿಸುತ್ತಿರುವುದು ದೊಡ್ದ ದುರಂತವೆಂದೇ ಹೇಳಬೇಕು.

ಆದ್ದರಿಂದ ಗೋಮೂತ್ರ ಹಾಗೂ ಸೆಗಣಿಗಳು, ಇತರೆಲ್ಲ ಪ್ರಾಣಿಗಳ ಮಲ-ಮೂತ್ರದಂತೆ, ದೇಹಕ್ಕೆ ಅಗತ್ಯವಿಲ್ಲದೆ ವಿಸರ್ಜಿಸಲ್ಪಟ್ಟ ಕಶ್ಮಲಗಳಷ್ಟೇ ಆಗಿವೆ ಮತ್ತು ಗೋಮೂತ್ರ ಯಾ ಸೆಗಣಿಗೆ, ಬೇರಾವುದೇ ಪ್ರಾಣಿಯ (ಮನುಷ್ಯನದೂ ಸೇರಿ) ಮಲ-ಮೂತ್ರಗಳಿಗಿಲ್ಲದ ವಿಶೇಷವಾದ, ಪೂಜನೀಯ ಸ್ಥಾನವನ್ನು ಕಲ್ಪಿಸುವುದಕ್ಕೆ ಯಾವುದೇ ಕಾರಣಗಳು ಇಲ್ಲವೇ ಇಲ್ಲ.

ದನದ ಮಲ-ಮೂತ್ರಗಳು (ಮತ್ತವುಗಳ ಉತ್ಪನ್ನಗಳು) ಎಲ್ಲಾ ರೋಗಗಳ ಚಿಕಿತ್ಸೆಯಲ್ಲಿ ಅತಿ ಪರಿಣಾಮಕಾರಿಯಾಗಿವೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ, ಮಾತ್ರವಲ್ಲ, ಮನುಷ್ಯರಲ್ಲಿ ಈ ಕುರಿತು ನೇರವಾದ ಅಧ್ಯಯನಗಳು ನಡೆದಿರುವ ಬಗ್ಗೆ ವರದಿಗಳಿಲ್ಲ. ಬದಲಾಗಿ, ಗೋಮೂತ್ರದ ಬಳಕೆಯಿಂದ ಆಗಬಹುದಾದ ಗಂಭೀರವಾದ ದುಷ್ಪರಿಣಾಮಗಳ ಬಗ್ಗೆ ವರದಿಗಳಿರುವಾಗ, ಇಂತಹಾ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೂ, ಸರ್ವ ರೋಗ ನಿವಾರಕಗಳೆಂದು ಅತಿರಂಜಿತವಾಗಿ ಪ್ರಚಾರ ಮಾಡುವುದಕ್ಕೂ ಆಸ್ಪದ ನೀಡಲಾಗಿರುವುದು ಮತ್ತು ಅದಕ್ಕೆ ಭಾರತ ಸರಕಾರದ ಇಲಾಖೆಗಳ ಸಕ್ರಿಯವಾದ ಬೆಂಬಲವೂ ಇದೆಯೆನ್ನುವುದು ಅತ್ಯಂತ ಆಘಾತಕಾರಿಯಾಗಿದೆ.

ದನದ ಮಲ-ಮೂತ್ರಗಳಿಂದ ಮನುಕುಲಕ್ಕೆ ಅತ್ಯಮೋಘವಾದ ಪ್ರಯೋಜನಗಳಿವೆಯೆಂಬ ಪ್ರಚಾರದ ಹಿಂದೆ ಧಾರ್ಮಿಕ ಅಂಧಶ್ರದ್ಧೆಯನ್ನು ಬಲಪಡಿಸಬಯಸುವ ಪ್ರತಿಗಾಮಿ ಶಕ್ತಿಗಳಿರುವುದು ಸರ್ವವಿದಿತವಾಗಿದೆ ಮಾತ್ರವಲ್ಲ, ‘ಚಿಕಿತ್ಸೆ’ ಹಾಗೂ ‘ದೀರ್ಘಾಯುಷ್ಯ’ದ ಹೆಸರಲ್ಲಿ ಜನಸಾಮಾನ್ಯರನ್ನು ದನದ ಮಲ-ಮೂತ್ರ ಸೇವನೆಗೆ ತಳ್ಳುವ ದುರುದ್ದೇಶವೂ ಇರುವಂತಿದೆ. ಇದೇ ಮೂಲಭೂತವಾದಿ ಶಕ್ತಿಗಳು ದಲಿತರಿಗೆ ಮನುಷ್ಯನ ಮಲ-ಮೂತ್ರಗಳನ್ನು ತಿನ್ನಿಸಿದ ಹಲವಾರು ಪ್ರಕರಣಗಳು ವರದಿಯಾಗಿರುವಾಗ ಇದರಲ್ಲಿ ಅಚ್ಚರಿಯೇನೂ ಇಲ್ಲ.

ಹಾಲನ್ನು ನೀಡುತ್ತದೆ ಎನ್ನುವ ಕಾರಣಕ್ಕಾಗಿ (ಮಲ-ಮೂತ್ರಗಳಿಗಾಗಿ ಅಲ್ಲವೆಂದು ನಂಬೋಣ) ದನವನ್ನು (ಅಷ್ಟೇ ‘ಉಪಯುಕ್ತವೆನಿಸುವ’ ಎಮ್ಮೆಯನ್ನಲ್ಲ) ‘ಎರಡನೇ ತಾಯಿ’, ‘ವಿಶ್ವಮಾತೆ’ ಇತ್ಯಾದಿಯಾಗಿ ವೈಭವೀಕರಿಸುವುದನ್ನು ನೋಡುವಾಗ, ಕೇವಲ ಹಾಲೂಡಿಸುವುದಷ್ಟೇ ತಾಯ್ತನವೇ ಹಾಗೂ ಕೇವಲ ಅಷ್ಟಕ್ಕಾಗಿಯೇ ನಾವು ತಾಯಂದಿರನ್ನು ಗೌರವಿಸುತ್ತೇವೆಯೇ ಎಂಬ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ.
ವಯಸ್ಸಾದ ದನಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡದಂತೆ ತಡೆಯುವ ಮತ್ತು ಆ ಮೂಲಕ ಬಡವರಿಗೂ, ದಲಿತರಿಗೂ ಅಗ್ಗದ ಮಾಂಸವು ದೊರೆಯದಂತೆ ಮಾಡುವ ಹಾಗೂ ಮಾಂಸ ವ್ಯಾಪಾರಿಗಳ ವಹಿವಾಟಿಗೆ ಧಕ್ಕೆಯುಂಟು ಮಾಡುವ ಉದ್ದೇಶದಿಂದಲೇ ಹಾಲು ಕೊಡಲಾಗದ ದನಗಳನ್ನು ಮಲ-ಮೂತ್ರಗಳಿಗಾಗಿ ಸಾಕುವುದು ಆರ್ಥಿಕವಾಗಿ ಬಹಳ ಲಾಭದಾಯಕವೆಂದು (ಇದಕ್ಕೆ ಯಾವುದೇ ಆಧಾರಗಳು ಇದ್ದಂತಿಲ್ಲ) ಪ್ರಚಾರ ಮಾಡಲಾಗುತ್ತಿದೆ. ಆದರೆ ಪ್ರಾಣಿಗಳ ಸಾಕಣೆಯಿಂದಾಗಿ ಪರಿಸರದ ಮೇಲೆ ಅಗಾಧವಾದ ಹೊರೆಯಾಗುವುದೆಂದೂ, ಜಾಗತಿಕ ತಾಪಮಾನದ ಏರಿಕೆಗೆ ಮುಖ್ಯವಾದ ಕಾರಣಗಳಲ್ಲಿ ಇದೂ ಒಂದೆಂದೂ ವಿಶ್ವ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

ಆದ್ದರಿಂದ ಪ್ರಜ್ಞಾವಂತರೆಲ್ಲರೂ ಈ ಎಲ್ಲಾ ವಿಚಾರಗಳ ಬಗ್ಗೆ ವಸ್ತುನಿಷ್ಠವಾದ, ವೈಜ್ಞಾನಿಕವಾದ ಅಭಿಪ್ರಾಯವನ್ನು ತಳೆಯುವುದು ಅತ್ಯಗತ್ಯವಾಗಿದೆ.

Comments are closed.