ಆರೋಗ್ಯ

ಬಾಯಿಯ ದುರ್ವಾಸನೆ ತಡೆಗಟ್ಟಲು ಇಲ್ಲಿದೆ ಟಿಪ್ಸ್ ….

Pinterest LinkedIn Tumblr

mouth-odor

ಕೆಲವೊಮ್ಮೆ ನಮಗರಿವಿಲ್ಲದಂತೆಯೇ ನಮ್ಮ ಬಾಯಿಯಿಂದ ದುರ್ವಾಸನೆ ಸೂಸುತ್ತಿದ್ದು ಎದುರಿನವರಿಗೆ ವಾಕರಿಕೆ ಹಾಗೂ ನಮಗೆ ಬಹಳಷ್ಟು ಮುಜುಗರ ಉಂಟಾಗಬಹುದು. ಬಾಯಿಯ ದುರ್ಗಂಧಕ್ಕೆ ಹಲವಾರು ಕಾರಣಗಳಿವೆ. ಊಟದ ನಡುವೆ ಅಥವಾ ಬಳಿಕ ಸೇವಿಸಿದ್ದ ಈರುಳ್ಳಿ, ಸರಿಯಾಗಿ ಹಲ್ಲುಜ್ಜಿಕೊಳ್ಳದೇ ಇದ್ದದ್ದು, ಊಟದ ಬಳಿಕ ಮುಕ್ಕಳಿಸದೇ ಇದ್ದದ್ದು (ಸಿದ್ಧ ಆಹಾರ ತಿನ್ನುವವರದ್ದೆಲ್ಲಾ ಇದೇ ಅವಸ್ಥೆ), ಹಲ್ಲುಗಳ ಸಂದುಗಳಲ್ಲಿ ಉಳಿದಿರುವ ಆಹಾರದ ತುಣುಕುಗಳು, ಹಲ್ಲುಗಳಲ್ಲಿ ಕುಳಿ, ನೀರು ಕುಡಿಯದೇ ನಿರ್ಜಲೀಕರಣವಾಗಿರುವುದು ಮೊದಲಾದವು ಇದರ ಸಾಮಾನ್ಯ ಕಾರಣಗಳು.

ಕಾಲಕಾಲಕ್ಕೆ ದಂತವೈದ್ಯರನ್ನು ಭೇಟಿಯಾಗಿ
ಕೆಲವೊಮ್ಮೆ ಒಸಡುಗಳ ಒಳಗೆ ಸೋಂಕು ಉಂಟಾಗಿ ಕೀವಾಗಿರುವ ಪರಿಣಾಮವಾಗಿಯೂ ಬಾಯಿಯ ದುರ್ಗಂಧ ಬರುತ್ತಿರುತ್ತದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯದೇ ಇದ್ದರೆ ಹಲ್ಲು ಕಳೆದುಕೊಳ್ಳುವ ಸಂಭವವಿದೆ. ಆದರೆ ಒಸಡಿನ ಒಳಗಿರುವ ಕೀವು ನೋವು ನೀಡದಿರುವುದರಿಂದ ಇದು ಗೊತ್ತೇ ಆಗುವುದಿಲ್ಲ, ಆದರೆ ದಂತವೈದ್ಯರು ಇದನ್ನು ಗುರುತಿಸಬಲ್ಲರು. ಆದ್ದರಿಂದ ನಿಯಮಿತವಾಗಿ ಅಂದರೆ ಕನಿಷ್ಟ ವರ್ಷಕ್ಕೊಂದು ಬಾರಿ, ಸಾಧ್ಯವಾದರೆ ಎರಡು ಬಾರಿ ಭೇಟಿ ನೀಡಿ ಎಲ್ಲವೂ ಸರಿ ಇದೆ ಎಂದು ವೈದ್ಯರು ಹೇಳಿದರೆ ಸಾಕು.

ಹಲ್ಲನ್ನು ಬ್ರಶ್ ನಿಂದ ಉಜ್ಜಿ
ಪ್ರತಿದಿನ ಎರಡು ಬಾರಿ ಬ್ರಶ್ ಬಳಸಿ ಹಲ್ಲುಜ್ಜುವುದು ಅನಿವಾರ್ಯವಾದ ನಿತ್ಯಕ್ರಮವಾಗಬೇಕು. ಏಕೆಂದರೆ ಬ್ರಶ್ ನಿಂದ ಹಲ್ಲುಗಳ ಸಂದುಗಳಲ್ಲಿ ಹುದುಗಿರುವ ಆಹಾರದ ಕಣಗಳು ನಿವಾರಿಸಲ್ಪಡುತ್ತವೆ.

ಬರೇ ಬೆರಳಲ್ಲಿ ಅಥವಾ ಬೇವಿನ ಕಡ್ಡಿಯಲ್ಲಿ ಉಜ್ಜುವುದರಿಂದ ಮುಂಭಾಗ ಸ್ವಚ್ಛವಾಗಬಲ್ಲದಾದರೂ ಹಲ್ಲುಗಳ ಹಿಂಭಾಗದ ಸಂದು ಮತ್ತು ದವಡೆ ಹಲ್ಲುಗಳು, ವಿಶೇಷವಾಗಿ ಕೊನೆಯ ದವಡೆ ಹಲ್ಲಿನ ಹಿಂಭಾಗ (ಇಲ್ಲಿ ತಲುಪಲು ಬ್ರಶ್ ಕೂಡಾ ಕೊಂಚ ಕಷ್ಟಪಡಬೇಕಾಗುತ್ತದೆ) ದಲ್ಲಿ ಸಹಾ ಉಜ್ಜಿ ಸ್ವಚ್ಛಗೊಳಿಸಬೇಕು.

ಇಲ್ಲದಿದ್ದರೆ ಸಂದುಗಳಲ್ಲಿ ಉಳಿದ ಆಹಾರಕಣಗಳು ಕೊಳೆತು ಗಾಳಿಯಲ್ಲಿದ್ದ ಬ್ಯಾಕ್ಟೀರಿಯಾಗಳಿಗೆ ಬನ್ನಿ ಬನ್ನಿ ಎಂದು ಕರೆನೀಡುತ್ತದೆ. ಈ ಆಹ್ವಾನವನ್ನು ಮನ್ನಿಸಿ ಆಗಮಿಸಿದ ಬ್ಯಾಕ್ಟೀರಿಯಾಗಳು ಈ ಆಹಾರವನ್ನು ಕೊಳೆಸಿ ಆಸ್ವಾದಿಸುವ ಆ ಸುವಾಸನೆ ಮನುಷ್ಯರಿಗೆ ದುರ್ವಾಸನೆಯಾಗಿರುತ್ತದೆ.

ನಿತ್ಯವೂ ಸಾಕಷ್ಟು ನೀರು ಕುಡಿಯಿರಿ

ನೀರಿನ ಕೊರತೆಯಿಂದ ಸದಾ ತೇವವಿರಬೇಕಾದ ಬಾಯಿ ಸಹಾ ಒಣಗುತ್ತದೆ. ಅಂದರೆ ಇಲ್ಲಿ ನೀರಿನ ಕೊರತೆಯಿಂದ ಜೊಲ್ಲು ಉತ್ಪಾದನೆಯಾಗದೇ ಬಾಯಿಯಲ್ಲಿ ಅಂಟಿಕೊಂಡಿದ್ದ ಬ್ಯಾಕ್ಟೀರಿಯಾಗಳಿಗೆ ಹೆಚ್ಚಿನ ಆಹಾರ ದಕ್ಕುವಂತಾಗುತ್ತದೆ. ಆಗಾಗ, ಅಂದರೆ ಸುಮಾರು ಎರಡು ಗಂಟೆಗಳಿಗೊಂದು ಲೋಟವಾದರೂ ನೀರು ಕುಡಿಯುತ್ತಿರಬೇಕು. ಅಂದರೆ ದಿನಕ್ಕೆ ಕನಿಷ್ಟ ಎಂಟು ಲೋಟಗಳಷ್ಟು ನೀರು. ಇದರಿಂದ ದೇಹಕ್ಕೆ ಅಗತ್ಯವಾದ ನೀರು ಲಭ್ಯವಾಗುತ್ತದೆ, ಜೊಲ್ಲಿನ ಉತ್ಪಾದನೆ ಸಹಾ ಉತ್ತಮ ಪ್ರಮಾಣದಲ್ಲಾಗುತ್ತದೆ.

ನಾಲಗೆಯನ್ನೂ ಸ್ವಚ್ಛಗೊಳಿಸಿ
ಹಲ್ಲುಗಳನ್ನು ಸ್ವಚ್ಛಗೊಳಿಸುವಾಗ ನಾಲಿಗೆಯನ್ನೂ ಸ್ವಚ್ಛಗೊಳಿಸುವುದು ಅಗತ್ಯ. ಇದಕ್ಕಾಗಿ ಟಂಗ್ ಕ್ಲೀನರ್ ಎಂಬ ತೆಳುವಾದ ಲೋಹದ ಅಥವಾ ಪ್ಲಾಸ್ಟಿಕ್ಕಿನ ಪಟ್ಟಿಯೇ ಸಾಕು. ಸಾಮಾನ್ಯವಾಗಿ ನಾಲಿಗೆಯ ಹಿಂಭಾಗದಲ್ಲಿ ಆಹಾರ ಕಣಗಳು ಒಂದು ಪದರದಂತೆ ಕುಳಿತಿರುತ್ತದೆ.

ಈ ಸ್ಥಳವೂ ಬ್ಯಾಕ್ಟೀರಿಯಾಗಳಿಗೆ ವಂಶಾಭಿವೃದ್ಧಿಗೊಳಿಸಲು ಪ್ರಶಸ್ತ ಸ್ಥಳವಾಗಿದೆ. ಇವುಗಳ ಪ್ರಸ್ತಕ್ಕೆ ಅವಕಾಶ ನೀಡದೇ ಈ ಪದರವನ್ನು ಕೆರೆದು ತೆಗೆದು ನಾಲಿಗೆಯನ್ನು ಸ್ವಚ್ಛವಾಗಿರಿಸಿಕೊಳ್ಳುವ ಮೂಲಕ ಬಾಯಿಯ ದುರ್ವಾಸನೆಯಿಂದ ಮುಕ್ತಿ ಪಡೆಯಬಹುದು.

ಚ್ಯೂಯಿಂಗ್ ಗಮ್ ಅಗಿಯಿರಿ
ಕೆಲವು ಸಕ್ಕರೆರಹಿತ ಅಗಿಯುವ ಗಮ್ ಒಂದನ್ನು ಕೊಂಚಕಾಲ ಜಗಿಯುತ್ತಾ ಇರುವ ಮೂಲಕ ಹೆಚ್ಚಿನ ಜೊಲ್ಲಿನ ಉತ್ಪಾದನೆಗೆ ನೆರವಾಗುತ್ತದೆ. ಹೆಚ್ಚುವರಿ ಜೊಲ್ಲು ಹಲ್ಲುಸಂದುಗಳಲ್ಲಿ ಕುಳಿತಿದ್ದ ಆಹಾರ ಕಣಗಳನ್ನು ಸಡಿಲಗೊಳಿಸಲು ಮತ್ತು ತನ್ಮೂಲಕ ಅದರಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ.

ಪಾರ್ಸ್ಲೆ ಎಲೆಗಳನ್ನು ಅಗಿಯಿರಿ
ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಕಾಣುವ ಪಾಸ್ಲೆ ಎಲೆಗಳಲ್ಲಿ ಬಾಯಿಯ ದುರ್ವಾಸನೆಯನ್ನು ನಿವಾರಿಸುವ ಹರಿತ್ತು ಅಥವಾ ಕ್ಲೋರೋಫಿಲ್ ಇದೆ. ಊಟದ ಬಳಿಕ ಕೆಲವು ಪಾರ್ಸ್ಲೆ ಸೊಪ್ಪಿನ್ನ ಎಲೆಗಳನ್ನು ಜಗಿದು ನೀರಿನೊಂದಿಗೆ ನುಂಗುವ ಮೂಲಕ ಮುಂದಿನ ಊಟದವರೆಗೂ ಬಾಯಿಯ ದುರ್ವಾಸನೆಯಿಂದ ದೂರವಿರಬಹುದು.

ಟೀ ಕುಡಿಯಿರಿ
ಟೀಯಲ್ಲಿ ಉತ್ತಮ ಪೋಷಕಾಂಗಳಿದ್ದು ಒಂದು ಉತ್ತಮ ಬ್ಯಾಕ್ಟೀರಿಯಾನಿವಾರಕವೂ ಆಗಿದೆ. ಈ ಪೋಷಕಾಂಶಗಳು ಬಾಯಿಯ ದುರ್ವಾಸನೆಯನ್ನು ಸೂಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಮರ್ಥವಾಗಿವೆ. ಟೀಯಲ್ಲಿರುವ ಕೆಲವು ಫಾಲಿಫಿನಾಲ್ ಕಣಗಳು ಆಹಾರ ಕೊಳೆತು ಉತ್ಪತ್ತಿಯಾದ ಗಂಧಕದೊಂದಿಗೆ ಬೆರೆತು ಅದರ ಪ್ರಭಾವವನ್ನು ನಗಣ್ಯವಾಗಿಸುವ ಮೂಲಕ ಬಾಯಿಯಿಂದ ದುರ್ವಾಸನೆ ಬರದಂತೆ ತಡೆಯುತ್ತದೆ.

ಫ್ಲಾಸ್ ವಿಧಾನ ಅನುಸರಿಸಿ

ಹಲ್ಲುಗಳ ನಡುವೆ ದಾರ ಹಾಕಿ ಸ್ವಚ್ಛಗೊಳಿಸುವ ಈ ವಿಧಾನದಲ್ಲಿ ಅತ್ಯಂತ ನಯವಾದ ನೈಲಾನ್ ದಾರವನ್ನು ಹಲ್ಲುಗಳ ನಡುವೆ ತೂರಿಸಲು ಸಾಧ್ಯವಿದೆ. ಇದು ಅತಿ ಸಪೂರವಾಗಿದ್ದು ಬಲವಾಗಿಯೂ ಇರುವ ಕಾರಣ ಹಲ್ಲುಗಳ ನಡುವೆ ಇರುವ ಅತಿಸೂಕ್ಷ್ಮ ಸಂದಿಯಲ್ಲಿ ನುಸುಳಿ ಅಲ್ಲಿ ಹುದುದಿದ್ದ ಆಹಾರಕಣಗಳನ್ನು ನಿವಾರಿಸುತ್ತದೆ.

ಈ ಸ್ಥಳದಲ್ಲಿ ಬ್ರಶ್ ನ ಕೂದಲುಗಳು ನುಗ್ಗಲು ಸಾಧ್ಯವಿಲ್ಲದ ಕಾರಣ ಫ್ಲಾಸ್ ವಿಧಾನ ಹೆಚ್ಚು ಫಲಪ್ರದವಾಗಿದೆ. ಇದರಿಂದ ಬಾಯಿಯ ದುರ್ವಾಸನೆಯಿಂದ ಮುಕ್ತಿ ಪಡೆಯುವುದ ಜೊತೆಗೇ ಹಲ್ಲುಗಳ ಮತ್ತು ಒಸಡುಗಳ ಆರೋಗ್ಯವೂ ಉತ್ತಮವಾಗಿರುತ್ತವೆ.

Comments are closed.