UAE

ದುಬೈಯಲ್ಲಿ ‘ಯಕ್ಷಮಿತ್ರರು’ 22ನೇ ವರ್ಷದ ಸಂಭ್ರಮ: ಭವ್ಯ ಯಕ್ಷಗಾನ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಪ್ರದರ್ಶನ

Pinterest LinkedIn Tumblr

ದುಬೈ: ಗಲ್ಫ್ ದೇಶದ ಯಕ್ಷಗಾನದ ಮಾತೃ ಸಂಘಟನೆಯಾದ ಯಕ್ಷಮಿತ್ರರು ದುಬೈ ತನ್ನ 22ನೇ ವಾರ್ಷಿಕೋತ್ಸವವನ್ನು ಸೆಪ್ಟೆಂಬರ್ 14ರಂದು ದುಬೈ ಎಮಿರೇಟ್ಸ್ ಥಿಯೇಟರ್‌ನಲ್ಲಿ ಭವ್ಯವಾಗಿ ಆಚರಿಸಿತು. ಈ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಯಕ್ಷಗಾನ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಕಥಾ ಭಾಗವನ್ನು ಅದ್ದೂರಿಯಾಗಿ ವೇದಿಕೆಗೆ ತಂದರು. ಕಳೆದ ಎರಡು ದಶಕಗಳಿಂದ ಯಕ್ಷಮಿತ್ರರು ದುಬೈ, ಕರಾವಳಿ ನಾಡಿನ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವನ್ನು ಗಲ್ಫ್‌ನಲ್ಲಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ಶ್ರಮಿಸುತ್ತಿದೆ.

ಕಾರ್ಯಕ್ರಮವು ಸಂಪ್ರದಾಯಬದ್ಧ ಪೂಜೆ ಮತ್ತು ಚೌಕಿ ಪೂಜೆಯಿಂದ ಆರಂಭಗೊಂಡಿತು. ಸಂತೋಷ ಅವರ ನೇತೃತ್ವದಲ್ಲಿ, ಪುತ್ತಿಗೆ ವಾಸುದೇವ ಭಟ್ ಅವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ, ವೆಂಕಟೇಶ್ ಶಾಸ್ತ್ರಿ ಮತ್ತು ಭವಾನೀ ಶಂಕರ್ ಶರ್ಮಾ ಸಹಕಾರದಲ್ಲಿ ಪೂಜೆಯು ನೆರವೇರಿತು.

ನಂತರ ದೀಪಪ್ರಜ್ವಲನೆಯ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ವೇದಿಕೆಯ ಮೇಲೆ ಪುತ್ತಿಗೆ ವಾಸುದೇವ ಭಟ್, ಹರೀಶ್ ಬಂಗೇರ, ಪ್ರವೀಣ್ ಕುಮಾರ್ ಶೆಟ್ಟಿ , ಹರೀಶ್ ಶೇರಿಗಾರ್, ದಿವಾಕರ ಶೆಟ್ಟಿ, ಪದ್ಮರಾಜ್ ಎಕ್ಕರ್, ಸತೀಶ್ ಪೂಜಾರಿ ಮೊದಲಾದ ಗಣ್ಯರು ಹಾಗೂ ಹಿರಿಯ ಸದಸ್ಯರು ಚಿದಾನಂದ ಪೂಜಾರಿ, ರವಿ ಕೋಟ್ಯಾನ್, ಸತೀಶ್ ಶೆಟ್ಟಿ, ದಯಾ ಕಿರೋಡಿಯಾನ್, ಜಯಂತ ಶೆಟ್ಟಿ, ಅಶೋಕ್ ತೋನ್ಸೆ , ದಿನರಾಜ್ ಶೆಟ್ಟಿ, ದಿನೇಶ್ ಪೂಜಾರಿ ಉಪಸ್ಥಿತರಿದ್ದರು.

ಬಾಲಗೋಪಾಲ ರೂಪದಲ್ಲಿ ಮಕ್ಕಳ  ಪೂರ್ವರಂಗ, ಪೌರಾಣಿಕ ಪಾತ್ರಗಳ ಅಲಂಕೃತ ಪ್ರವೇಶದಿಂದ ಕಾರ್ಯಕ್ರಮ ಚೈತನ್ಯಭರಿತವಾಯಿತು.

ಯಕ್ಷಗಾನ ಪ್ರದರ್ಶನ: ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಯಕ್ಷಗಾನವನ್ನು ಯಕ್ಷಮಿತ್ರರು ದುಬೈ ವಿದ್ಯಾರ್ಥಿಗಳು ಗುರು ಕಿಶೋರ್ ಗಟ್ಟಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ಗಲ್ಫ್‌ನ  ಯಕ್ಷಗುರು ಆಗಿರುವ ಕಿಶೋರ್ ಗಟ್ಟಿ ಅವರ ಮಾರ್ಗದರ್ಶನವು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.

ಅತಿಥಿ ಕಲಾವಿದರಾದ ಭಾಗವತ ಬಲಿಪ ಶಿವಶಂಕರ ಭಟ್ ಅವರ ಶ್ರದ್ಧಾ ಭರಿತ ಗಾಯನ, ಭರತ್ ರಾಜ್ ಶೆಟ್ಟಿ ಸಿದ್ದಕಟ್ಟೆ, ದೇಲಂತ ಮಜಲು ಸುಬ್ರಹ್ಮಣ್ಯ ಭಟ್ (ಚಂಡೆ) ಹಾಗೂ ಸಮರ್ಥ ಉದೂಪ (ಮದ್ದಲೆ) ಕಾರ್ಯಕ್ರಮಕ್ಕೆ ಮೆರಗು ನೀಡಿತು.

ವೈವಿಧ್ಯಮಯ ವೇಷಭೂಷಣವನ್ನು ಜಯಂತ ಪೈವಳಿಕೆ ಮತ್ತು ಪ್ರಸಾದ್ ಕಾಯಕಟ್ಟೆ ವಿನ್ಯಾಸಗೊಳಿಸಿದ್ದರು. ಗಣೇಶ್ ಚಂದ್ರಮಂಡಲ, ರಕ್ಷಿತ್ ಶೆಟ್ಟಿ ಪಡ್ರೆ, ಅಕ್ಷಯ್ ಭಟ್ ಶಿರ್ತಾಡಿ ಮೊದಲಾದ ಕಲಾವಿದರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಅತಿಥಿ ಸನ್ಮಾನ: ಮುಖ್ಯ ಅತಿಥಿಯಾಗಿ ಹಾಜರಿದ್ದ ಡಾ. ಬಿ.ಆರ್. ಶೆಟ್ಟಿ, “ಯಕ್ಷಮಿತ್ರರು ದುಬೈ ಅವರ 22ನೇ ವರ್ಷದ ಸಂಭ್ರಮದಲ್ಲಿ ಭಾಗವಹಿಸಿರುವುದಕ್ಕೆ ಹರ್ಷವಾಗುತ್ತಿದೆ. ಅವರ ಮೊದಲ ಕಾರ್ಯಕ್ರಮದಿಂದಲೂ ಸಾಕ್ಷಿಯಾಗಿರುವ ನಾನು, ಇವರ ನಿಷ್ಠೆ ಹಾಗೂ ಸಂಸ್ಕೃತಿ ಉಳಿಸುವ ಭಾವನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು.

ಅದೇ ವೇಳೆ ಸಂಘದ ಸ್ಥಾಪಕ ಸದಸ್ಯರಾದ ಗಿರಿಧರ ನಾಯಕ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ರಾಜನೀಶ್ ಅಮೀನ್ ಮತ್ತು ಅಕ್ಷಯಾ ಕುಲ್ಲಾಲ್ ಕಾರ್ಯಕ್ರಮ ನಿರೂಪಣೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು.

ಕಾರ್ಯಕ್ರಮದ ಅಂತಿಮವಾಗಿ ಸಂಸ್ಥಾಪಕ ಹಾಗೂ ಸಂಚಾಲಕರಾದ ಚಿದಾನಂದ ಪೂಜಾರಿ,ಪ್ರಾಯೋಜಕರು, ಸ್ವಯಂಸೇವಕರು, ಮಾಧ್ಯಮ ಹಾಗೂ ಕಲೆಯ ಬೆಂಬಲ ನೀಡಿದ ಸರ್ವರಿಗೂ  ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಯಕ್ಷಗಾನವನ್ನು ಗಲ್ಫ್‌ನಲ್ಲಿ ಉಳಿಸಿ ಬೆಳೆಸುತ್ತಿರುವುದು ಎಲ್ಲರ ಒಟ್ಟೂ ಪ್ರಯತ್ನದ ಫಲವೆಂದು ಅವರು ಅಭಿಪ್ರಾಯಪಟ್ಟರು.

ಈ ಭವ್ಯ ಸಮಾರಂಭವು ಕೇವಲ ಸಾಂಸ್ಕೃತಿಕ ಸಂಭ್ರಮವಲ್ಲದೆ, ಗಡಿಗಳನ್ನು ಮೀರಿ ಪಾರಂಪರಿಕ ಕಲೆಗಳು ಹೇಗೆ ಉಳಿದು ಬೆಳೆಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಯಿತು.

Comments are closed.