UAE

ಸಾಧಕ ದೇವಾಡಿಗ ಯುವ ಪ್ರತಿಭೆಗಳಿಗೆ ‘ಪ್ರಶಸ್ತಿ ಪ್ರದಾನ’ | ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ನೇತೃತ್ವ ಕಾರ್ಯಕ್ರಮ

Pinterest LinkedIn Tumblr

ಕಠಿಣ ಪರಿಶ್ರಮದಿಂದ ಬೆಳೆದು ಜೀವನದಲ್ಲಿ ಯಶಸ್ಸು ಗಳಿಸಬೇಕು: ಉದ್ಯಮಿ ಹರೀಶ್ ಶೇರಿಗಾರ್

ಮಂಗಳೂರು: ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಸಾಧ್ಯ. ಸುಲಭದಲ್ಲಿ ಯಾವುದನ್ನೂ ಪಡೆಯುವ ನಿರೀಕ್ಷೆ ಮಾಡಬಾರದು. ತಂದೆ-ತಾಯಿ, ಗುರು ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಕಲಿಯಬೇಕು. ಡಾ.ಕೆ.ವಿ ದೇವಾಡಿಗರು ಶ್ರೇಷ್ಠತೆಗೆ ಮತ್ತೊಂದು ಹೆಸರಾಗಿದ್ದು ಅವರಿಗಿರುವ ಸಮಾಜದ ಮೇಲಿನ ಕಾಳಜಿ, ಬದ್ದತೆ ಮಾದರಿಯಾಗಿದೆ. ಡಾ. ಕೆ.ವಿ ದೇವಾಡಿಗ ಅವರ ಸಾಧನೆ ನಮ್ಮೆಲ್ಲರಿಗೂ ಮಾದರಿಯಾಗಬೇಕಿದೆ ಎಂದು ಯುಎಇ ದುಬೈ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್ ಲಿಮಿಟೆಡ್ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್ ಹೇಳಿದರು.

ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇವರ ಆಶ್ರಯದಲ್ಲಿ ಸೆ.7 ಭಾನುವಾರ ಮಂಗಳೂರು ಮಣ್ಣಗುಡ್ಡದಲ್ಲಿರುವ ದೇವಾಡಿಗ ಸಮಾಜಭವನದಲ್ಲಿ ಹಮ್ಮಿಕೊಂಡ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ ದೇವಾಡಿಗ ಯುವ ಪ್ರತಿಭೆಗಳಿಗೆ ‘ಪ್ರಶಸ್ತಿ ಪ್ರದಾನ ಸಮಾರಂಭ’ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಅಭಿವೃದ್ಧಿಗೊಳ್ಳಲು ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ವ್ಯವಸ್ಥೆಯನ್ನು ಹೊಂದಬೇಕು ಎಂದು ದೇವಾಡಿಗ ಸಂಘಟನೆ‌ ಚಿಂತನೆ ಹೊಂದಿದೆ. ಇಂದು ಸಾಧಕ ಪ್ರಶಸ್ತಿಯನ್ನು ಪಡೆಯುತ್ತಿರುವ ಎಲ್ಲರೂ ಬೇರೆಬೇರೆ ಕ್ಷೇತ್ರದಲ್ಲಿ ತಮ್ಮದೆ ಆದ ಸಾಧನೆ ಮಾಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಯುವ ಸಮುದಾಯ ಸಮಾಜ ಕಟ್ಟುವಲ್ಲಿ ಕ್ರಿಯಾಶೀಲರಾಗಬೇಕು ಎಂದರು.

ಖ್ಯಾತ ನ್ಯೂರೋ ಸರ್ಜನ್ ಹಾಗೂ ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಕೆ.ವಿ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ದೇವಾಡಿಗ ಮಹಾಮಂಡಲ ಮುಂಬೈ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ  ಮಾತನಾಡಿ, ದಾನ ನೀಡುವುದರಲ್ಲಿ ಸಂತಸ ಕಾಣಬಹುದು. ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಯುವಕರು ಜೀವನದಲ್ಲಿ ಮುಂದಕ್ಕೆ ಬರಲು ಪ್ರೋತ್ಸಾಹಿಸುತ್ತಿರುವ ಕೆ.ವಿ. ದೇವಾಡಿಗರ ಕಾರ್ಯ ಶ್ಲಾಘನೀಯ ಎಂದರು.

ಮಂಗಳೂರು ಪಂಜಿಮೊಗರು ತ್ರಿಶಾ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಕಾಮತ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಗುರು ಮತ್ತು ಗುರಿ ಇದ್ದಾಗ ಯಶಸ್ಸು ಸಾಧ್ಯ. ಮನುಷ್ಯನನ್ನು ಪುಸ್ತಕವಾಗಿ ಓದಿದಾಗ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬಹುದು ಎಂದರು.

ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷೆ ಡಾ. ಭಾವನ ಶೇರಿಗಾರ್, ಟ್ರಸ್ಟಿಗಳಾದ ಡಾ. ದಿವಾಕರ ರಾವ್, ಕೆ.ಜೆ ದೇವಾಡಿಗ, ಖಜಾಂಚಿ ಅಶೋಕ್ , ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಅಧ್ಯಕ್ಷ ಅಶೋಕ್ ಮೊಯ್ಲಿ, ಉಪಾಧ್ಯಕ್ಷ ಕರುಣಾಕರ್ ಎಮ್.ಎಚ್., ಕೋಶಾಧಿಕಾರಿ ಗೀತಾ ವಿ. ಕಲ್ಯಾಣಪುರ್, ಪ್ರಧಾನ ‌ಕಾರ್ಯದರ್ಶಿ ಡಾ. ಸುಂದರ್ ಮೊಯ್ಲಿ, ಮಾಜಿ ಪ್ರಧಾನಕಾರ್ಯದರ್ಶಿ ಶಿವಾನಂದ ಮೊಯಿಲಿ, ಕರ್ನಾಟಕ ರಾಜ್ಯ ದೇವಾಡಿಗ್ ಸಂಘದ ಪ್ರ. ಕಾರ್ಯದರ್ಶಿ ವೀಣಾ ಗಣೇಶ್ ಮೊದಲಾದವರು ಇದ್ದರು.

ಟ್ರಸ್ಟ್‌ನ ಕಾರ್ಯದರ್ಶಿ ಡಾ. ದೇವರಾಜ್ ಕೆ. ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ರೇಣುತಾಕ್ಷಿ, ತಿಲಕ್ ರಾಜ್ ಜಿ. ಕಾರ್ಯಕ್ರಮ ನಿರೂಪಿಸಿ, ಸನ್ಮಾನಿತರನ್ನು ಪರಿಚಯಿಸಿದರು. ಅಶೋಕ್ ವಂದಿಸಿದರು. ಯಶಿಕಾ ಅಡ್ಯಾರ್ ತಂಡದವರು ಪ್ರಾರ್ಥಿಸಿದರು.

ಪ್ರಶಸ್ತಿ ಪ್ರದಾನ:

• ಡಾ. ಕೆ.ವಿ ದೇವಾಡಿಗ ಶ್ರೇಷ್ಠ ವೈದ್ಯಕೀಯ ಪದವಿ ವಿದ್ಯಾರ್ಥಿ-2025- ದೀಪಕ್ ಎಂ.ಸಿ. ಉಡುಪಿ.

• ಡಾ. ಕೆ.ವಿ ದೇವಾಡಿಗ ಶ್ರೇಷ್ಠ ಸ್ನಾತಕೋತ್ತರ ವಿದ್ಯಾರ್ಥಿಗಳು-2025- ಸುಶ್ಮಿತಾ ದೇವಾಡಿಗ, ಕಾರ್ಕಳ.

• ಶ್ರೀ ಹರೀಶ್ ಶೇರಿಗಾರ್ ಅತ್ಯುತ್ತಮ ಯುವ ಉದ್ಯಮಿ ಪ್ರಶಸ್ತಿ 2025- ಚರಣ್ ಬೈಂದೂರು, ಬೆಂಗಳೂರು

• ಶ್ರೀ ಹರೀಶ್ ಶೇರಿಗಾರ್ ಅತ್ಯುತ್ತಮ ಯುವ ಸಂಗೀತಗಾರ ಪ್ರಶಸ್ತಿ 2025- ಎಮ್. ವೇಣುಗೋಪಾಲ್ ಪುತ್ತೂರು

• ಡಾ. ಭಾವನಾ ಶೇರಿಗಾರ್ ಶ್ರೇಷ್ಠ ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿ ಪ್ರಶಸ್ತಿ 2025- ಗುರುರಾಜ್ ಶಿವರಾಮ್ ಸುರತ್ಕಲ್

• ಡಾ. ಭಾವನಾ ಶೇರಿಗಾರ್ ಶ್ರೇಷ್ಠ ಕಾಲೇಜು ಉಪನ್ಯಾಸಕರು 2025- ಡಾ. ಪ್ರವೀಣ್ ಕುಮಾರ್ ಉಡುಪಿ

• ಡಾ. ದಿವಾಕರ್ ರಾವ್ ಶ್ರೇಷ್ಠ ಯುವ ಪರಿಣಿತ ವ್ಯಕ್ತಿ/ಕೌಶಲ್ಯ ವ್ಯಕ್ತಿ ಪ್ರಶಸ್ತಿ 2025- ಶ್ರಾವ್ಯ ಹಿರಿಯಡ್ಕ, ಆದಿಶ್ರೀ ಆರ್. ಮೊಯಿಲಿ ಮಂಗಳೂರು

• ಡಾ. ಕೆ. ಜೆ. ದೇವಾಡಿಗ ಶ್ರೇಷ್ಠ ಯುವ ಕ್ರೀಡಾಪಟು ಪ್ರಶಸ್ತಿ 2025- ಶೋಭಿತ್ ಎಸ್. ದೇವಾಡಿಗ ಹಳೆಯಂಗಡಿ

• ಶ್ರೀ ಅಶೋಕ್ ಶ್ರೇಷ್ಠ ಸಮಾಜ ಸೇವಕಿ ಪ್ರಶಸ್ತಿ 2025- ವಿಜೇಶ್ ದೇವಾಡಿಗ, ಮಂಗಳೂರು

• ಡಾ. ದೇವರಾಜ್ ಕೆ. ಶ್ರೇಷ್ಠ ಶಿಕ್ಷಕ ಪ್ರಶಸ್ತಿ 2025 (ಪ್ರೌಢ ಶಾಲೆ)- ವಿದ್ಯಾಶ್ರೀ ಸಿ. ಹಿರಿಯಡ್ಕ

• ದಿ| ಕೆ. ಲಕ್ಷ್ಮಣ್ ಸ್ಮರಣಾರ್ಥ ಮಂಗಳ ಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿನಿ ಪ್ರಜ್ಞಾ ಅವರನ್ನು ಗೌರವಿಸಲಾಯಿತು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.