ಕರಾವಳಿ

ಅಕ್ರಮ ಗೋ ಸಾಗಾಟದ ವೇಳೆ ಗಂಗೊಳ್ಳಿ ಪೊಲೀಸರ ಹತ್ಯೆಗೆ ಪ್ರಯತ್ನಿಸಿದ ಆರೋಪಿಗಳನ್ನು ಬಂಧಿಸಿದ ಪಡುಬಿದ್ರಿ ಪೊಲೀಸರು!

Pinterest LinkedIn Tumblr

ಉಡುಪಿ: ಅಕ್ರಮ ಗೋ ಸಾಗಾಟದ ವೇಳೆ ಪೊಲೀಸರ ಮೇಲೆ ಕಾರು ಹತ್ತಿಸಿ ಹತ್ಯೆಗೆ ಯತ್ನಿಸಿದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಅಜಿಮ್ ಕಾಪು ಮತ್ತು ಮಹಮ್ಮದ್ ರಾಜಿಕ್ ಬಜಪೆ ಬಂಧಿತರು.

ಕಳೆದ ತಿಂಗಳು ಆ.5 ಮುಂಜಾನೆ ಹೆಜಮಾಡಿ ಟೋಲ್ ಗೇಟ್ ಬಳಿ ಪೊಲೀಸರು ಖಚಿತ ವರ್ತಮಾನದಂತೆ ವಾಹನ ತಪಾಸಣೆಯಲ್ಲಿದ್ದಾಗ ಫಾರ್ಚುನ‌ರ್ ಕಾರು ಬಂದಿದ್ದು ಅದರಲ್ಲಿ ಐದಾರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಲಾಗಿತ್ತು. ಕಾರಿನ ಚಾಲಕನ ಬಳಿ ಪೊಲೀಸರು ಈ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ನಮ್ಮನ್ನು ಹುಡುಕಿಕೊಂಡು ಇಲ್ಲಿಯವರೆಗೆ ಬರುತ್ತೀರಾ? ಎಂದು ಕೇಳಿ ಪೊಲೀಸರ ಮೇಲೆ ಕಾರನ್ನು ಚಲಾಯಿಸಿ ಕೊಲೆಗೆ ಪ್ರಯತ್ನಿಸಿದ್ದಾರೆ. ಬಳಿಕ ಪೊಲೀಸರು ಕಾರಿನಲ್ಲಿದ್ದ ಶಾರೋಜ್ ಸುರತ್ಕಲ್ ಎಂಬಾತನನ್ನು ವಶಕ್ಕೆ ಪಡೆದಿದ್ದು ಉಳಿದ ಆರೋಪಿಗಳು ಪೊಲೀಸ್‌ ಸಿಬ್ಬಂದಿಗಳ ಮೇಲೆ ಕಾರನ್ನು ಚಲಾಯಿಸಿ ಗಾಯಗೊಳಿಸಿ ಪರಾರಿಯಾಗಿದ್ದಾರೆ.

ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್‌ಐ ಹಾಗೂ ಸಿಬ್ಬಂದಿ ಅಲ್ಲಿನ ದನ ಕಳವು ಪ್ರಕರಣ ಒಂದರಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಟೋಲ್ ಗೇಟ್ ಬಳಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಪಿಎಸ್‌ಐ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರಿನಲ್ಲಿದ್ದ ಉಳಿದ ಆರೋಪಿಗಳಾದ ಸಫ್ಘಾನ್ ಕಾಪು, ಅಜೀಂ ಕಾಪು ಮತ್ತು ರಾಜಿಕ್ ಬಜಪೆ ಎಂಬವರಿಗಾಗಿ ಪೊಲೀಸರು ಬಲೆ ಬೀಸಿದ್ದು ಆರೋಪಿಗಳಾದ ಮಹಮ್ಮದ್ ಅಜಿಮ್ ಕಾಪು ಮತ್ತು ಮಹಮ್ಮದ್ ರಾಜಿಕ್ ಬಜಪೆ ಎಂಬವರನ್ನು ಇಂದು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಮೊಹಮ್ಮದ್ ರಾಜಿಕ್ ಬಜ್ಪೆ ಎಂಬಾತನ ಮೇಲೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಗೋ ಸಾಗಾಟದ ಬಗ್ಗೆ ಪ್ರಕರಣ ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿದೆ. ಇನ್ನೋರ್ವ ಆರೋಪಿ ಮೊಹಮ್ಮದ್ ಅಜಿಮ್ ಕಾಪು ಎಂಬಾತನ ವಿರುದ್ಧ ಬಜಪೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಗೋಸಾಗಾಟದ ಬಗ್ಗೆ ಪ್ರಕರಣ ದಾಖಲಾಗಿದೆ. ಅಲ್ಲದೇ ಈತ ಉತ್ತರ ಕನ್ನಡ ಜಿಲ್ಲೆಯ ಚಿತ್ತಾಕುಲ ಮತ್ತು ಅಂಕೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ.

ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ ಅವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸುಧಾಕರ ನಾಯ್ಕ್ ಮತ್ತು ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷ ಪ್ರಿಯಂವಧ ಮಾರ್ಗದರ್ಶನದಂತೆ ಕಾಪು ವೃತ್ತ ನಿರೀಕ್ಷಕ ಜಯಶ್ರೀ ಮಾನೆಯವರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕ ಸಕ್ತಿವೇಲು ಇ ( ಕಾ.ಸು) ಮತ್ತು ಅನಿಲ್ ಕುಮಾರ್(ತನಿಖೆ) ಸಿಬ್ಬಂದಿಗಳಾದ ಎಎಸ್ಐ ರಾಜೇಶ್ ಪಿ, ಹೆಡ್ ಕಾನ್ಸ್‌ಸ್ಟೇಬಲ್ ನಾಗರಾಜ  ಕಾನ್ಸ್‌ಸ್ಟೇಬಲ್ ಕೃಷ್ಣರಾಜ ಹೆಗಡೆ, ಸಂದೇಶ ಮಹಿಳಾ ಸಿಬ್ಬಂದಿ ರುಕ್ಮಿಣಿ ಮೊದಲಾದವರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪತ್ತೆಗೆ ಸಹಕರಿಸಿದ್ದರು.

Comments are closed.