UAE

ಕರ್ನಾಟಕ ಸಂಘ ಶಾರ್ಜಾದ ‘ಅನಿವಾಸಿ ಕನ್ನಡಿಗರ ಜನ ಜಾತ್ರೆ’; ಮಯೂರ ಪ್ರಶಸ್ತಿ ಪ್ರದಾನ | ರಿಷಬ್ ಶೆಟ್ಟಿಯವರಿಗೆ ‘ಕರುನಾಡ ವಿಭೂಷಣ’ ಪ್ರಶಸ್ತಿ ಪ್ರದಾನ

Pinterest LinkedIn Tumblr

ದುಬೈ: ಕರ್ನಾಟಕ ಸಂಘ ಶಾರ್ಜಾ ತನ್ನ 20ನೇ ವಾರ್ಷಿಕೋತ್ಸವ, 67ನೇ ಕರ್ನಾಟಕ ರಾಜ್ಯೋತ್ಸವ, ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ 2022 ನವೆಂಬರ್ 13ನೇ ತಾರೀಕು ಭಾನುವಾರ ಸಂಜೆ 4 ಗಂಟೆಯಿಂದ ಅಜ್ಮಾನ್ ವಿನ್ನರ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ವಿಜೃಂಬಣೆಯಿಂದ ನಡೆಯಿತು.
ಮುಖ್ಯ ಅತಿಥಿಯಾಗಿ ವಿಶ್ವ ವಿಖ್ಯಾತ ಕಾಂತಾರ ಚಿತ್ರದ ನಿರ್ದೇಶಕ ಹಾಗೂ ನಾಯಕ ರಿಷಬ್ ಶೆಟ್ಟಿಯವರು ಭಾಗವಹಿಸಿದ್ದರು.

ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಎಂ.ಇ. ಮೂಳೂರ್ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಧ್ವಜರೋಹಣ, ಜೋತಿ ಬೆಳಗುವಿಕೆ ಉಪಾಧ್ಯಕ್ಷರಾದ ನೋಯಲ್ ಅಲ್ಮೆಡಾ ರವರ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಜ್ಮಾನ್ ಸಿಂಫೊನಿ ಕಲಾಶಾಲೆಯ ವಿದ್ಯಾರ್ಥಿಗಳಿಂದ ನಮೋ ನಮೋ ಭಾರತಾಂಬೆ ಸ್ವಾಗತ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು.ಮಕ್ಕಳ ದಿನಾಚರಣೆಯ ಅಂಗವಾಗಿ ಶಾರ್ಜಾ ಕರ್ನಾಟಕ ಸಂಘ ಚಿಣ್ಣರ ಚಿಲಿಪಿಲಿ ಪುಟ್ಟ ಮಕ್ಕಳಿಂದ ಹಿರಿಯ ಮಕ್ಕಳವರೆಗೆ ಛದ್ಮವೇಶ ಸ್ಪರ್ಧೆ ಏರ್ಪಡಿಸಿದ್ದು ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಿದ್ದು ಶಮ ರಾಣಿ ಶೆಟ್ಟಿ, ದೀಪ್ತಿ ದಿನಕರ್ ಮತ್ತು ಸಚಿನ್ ಮಾಡಾ ತೀರ್ಪುಗಾರರಾಗಿದ್ದರು.

ಡೇವಿಡ್ ಫ್ರ್ಯಾಂಕ್ ಫೆರ್ನಾಂಡಿಸ್ ರವರಿಗೆ ಮಯೂರ ವಿಶ್ವ ಮಾನ್ಯ ಪ್ರಶಸ್ತಿ ಪ್ರದಾನ
2022ನೇ ಸಾಲಿನ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ”ಯನ್ನು ಶ್ರೀ ಡೇವಿಡ್ ಪ್ರ್ಯಾಂಕ್ ಫೆರ್ನಾಂಡಿಸ್ ಅವರಿಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಿಷಬ್ ಶೆಟ್ಟಿಯವರ ಸಮುಖದಲ್ಲಿ ಸನ್ಮಾನ ಪ್ರಶಸ್ತಿ ಪ್ರದಾನ ಮಾಡಿ‌ ಗೌರವಿಸಲಾಯಿತು.

ಕಾಂತಾರ ಪ್ರಖ್ಯಾತಿ ರಿಷಬ್ ಶೆಟ್ಟಿಯವರಿಗೆ “ಕರುನಾಡ ವಿಭೂಷಣ” ಬಿರುದು ಪ್ರದಾನ
ಕಾಂತಾರ ಚಿತ್ರದ ವಿಶ್ವ ಖ್ಯಾತಿ ಪಡೆದ ರಿಷಬ್ ಶೆಟ್ಟಿಯವರಿಗೆ ಕರ್ನಾಟಕ ಸಂಘ ಶಾರ್ಜಾ ಸಮಸ್ತ ಅನಿವಾಸಿ ಕನ್ನಡಿಗರು ಹಾಗೂ ಕರ್ನಾಟಕ ಪರ ಸಂಘ ಸಂಸ್ಥೆಗಳ ಪರವಾಗಿ “ಕರುನಾಡ ವಿಭೂಷಣ” ಬಿರುದು ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ಒಮಾನ್ ಕನ್ನಡ ಸಂಘದಿಂದ ಅತಿಥಿಯಾಗಿ ಆಗಮಿಸಿದ್ದ ಅಧ್ಯಕ್ಷರಾದ ಪ್ರಸಾದ್ ರವರು ರಿಷಬ್ ಶೆಟ್ಟಿಯವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಬಹರೈನ್ ಬಂಟ್ಸ್ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ದಂಪತಿಗಳು ಸಹ ಅತಿಥಿಯಾಗಿ ಆಗಮಿಸಿದ್ದರು.

ಸಾಹಿತಿ ಚಿತ್ರ ನಿರ್ಮಾಪಕರು ಬ್ಯಾರಿ ಭಾಷೆಯ ತ್ರಿಬಲ್ ತಲಾಕ್ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯಾಕುಬ್ ಖಾದರ್ ಗುಲ್ವಾಡಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಕರ್ನಾಟಕ ಸಂಘ ಶಾರ್ಜಾದ ವತಿಯಿಂದ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಮಯೂರ ಸಂಗೀತ ರಸಮಂಜರಿ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಯೂರ ಸಂಗೀತ ರಸಮಂಜರಿ ಅಯೋಜಿಸಲಾಗಿದ್ದು ಗಾಯಕರಾದ ಹರೀಶ್ ಶೇರಿಗಾರ್, ನವೀದ್ ಮಾಗುಂಡಿ, ಅಕ್ಷತಾ ಮತ್ತು ಸನ್ನಿಧಿ ತಮ್ಮ ಸುಮಧುರ ಕಂಠಸಿರಿಯಲ್ಲಿ ಪ್ರೇಕ್ಷಕರನ್ನು ರಂಜಿಸಿದರು.

ರಮಣ ಲಾಸ್ಯ ತಂಡದದ ಕನ್ನಡ ಜಾನಪದ ನೃತ್ಯ, ಸ್ಮೈಲ್ ಕ್ರಿಯೇಶನ್ಸ್ ತಂಡದ ತುಳು ಸಮೂಹ ನೃತ್ಯ, ಜಾತ್ರೆ ಜನಪದ ನೃತ್ಯ, ಕ್ಲಾಸಿಕ್ ರಿದಂಸ್ ತಂಡದ ಕಾಂತಾರ ವರಾಹಾ ನೃತ್ಯ, ಜಸ್ಟ್ ಡಾನ್ಸ್, ಗೋಲ್ಡನ್ ಟ್ಯಾಲೆಂಟ್ ಮ್ಯೂಸಿಕ್ ಶಾಲೆಯ ನೃತ್ಯ, ಬ್ಯಾರೀಸ್ ಕಲಚರಲ್ ರವರ ಕೋಲ್ ಕಳಿ ನೃತ್ಯ, ಕನ್ನಡ ಪಾಠಶಾಲೆ ದುಬಾಯಿ ಜನಪದ ನೃತ್ಯ, ಗೌತಮ ಬಂಗೇರಾ ನಿರ್ದೇಶನದ ಸೋಲ್ ಅಂಡ್ ಬೀಟ್ಸ್ ನೃತ್ಯ ಮತ್ತು ಸಿದ್ದಾರ್ಥ್ ನಿರ್ದೇಶನದ “ಗೆಜ್ಜೆ” ನಾಟಕ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮಗಳು ಸರ್ವರ ಮನ ಸೆಳೆಯಿತು. ಸಾಂಸ್ಕೃತಿಕ ವಿಭಾಗದ ಕಾರ್ಯಕ್ರಮ ನಿರೂಪಣೆಯನ್ನು ರೋಹಿಣಿ ಅನಂತ್, ಆರತಿ ಆಡಿಗ ಮತ್ತು ವಿಘ್ನೇಶ್ ಕುಂದಾಪುರ ನಡೆಸಿಕೊಟ್ಟರು.

ಸಭಾಕಾರ್ಯಕ್ರಮ ವಿಭಾಗದಲ್ಲಿ ಅಧ್ಯಕ್ಷ ಎಂ.ಇ. ಮೂಳೂರ್ ರವರಿಂದ ಪ್ರಾಸ್ತಾವಿಕ ಭಾಷಣ ದಲ್ಲಿ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿ ಮೂಡಿಸಿರುವ ಈ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸಮನ್ವಯ ಸಹಬಾಳ್ವೆ ಸಂದೇಶವನ್ನು ನೀಡಿದರು.

ಕರ್ನಾಟಕ ಸಂಘ ಶಾರ್ಜಾದ ವತಿಯಿಂದ ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ ಒರ್ವರನ್ನು ಆಯ್ಕೆ ಮಾಡಿ ಸನ್ಮಾನ ಮಾಡುವಲ್ಲಿ ಈ ಬಾರಿ ನೋಯಲ್ ಡಿ ಅಲ್ಮೇಡಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಾಟಕ ಸಂಘ ಶಾರ್ಜಾದ 20ನೇ ವರ್ಷದ ವಿಶೇಷವಾಗಿ ಯು.ಎ.ಇ.ಯಲ್ಲಿ ಕನ್ನಡ ಭಾಷೆ ಹಾಗೂ ಸಮಾಜ ಸೇವೆಯಲ್ಲಿ ಸಾಧನೆ ಮಾಡಿರುವವರನ್ನು ಗುರಿತಿಸಿ ಗಾಯಕ ಸಮಾಜ ಸೇವಕ ನವೀದ್ ಮಾಗುಂಡಿ, ಕನ್ನಡಿಗರು ದುಬಾಯಿ ಪೂರ್ವ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಹಾಗೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉನ್ನತ ದರ್ಜೆಗೆ ಏರಿಸಿ ದುಬಾಯಿಯಿಂದ ಮಂಗಳೂರಿಗೆ ಅಂತರಾಷ್ಟ್ರೀಯ ವಿಮಾನ ಯಾನ ಪ್ರಾರಂಭಿಸಲು ಶ್ರಮಿಸಿ ಯಶಸ್ಸು ಪಡೆದ ರಾಜೇಶ್ ಸಿಕ್ವೇರಾ ಮತ್ತು 2022ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜಯರಾಮ್ ರೈ ಯವರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಕಾರ್ಯಕ್ರಮದ ನಿರೂಪಣೆಯನ್ನು ಬಿ. ಕೆ. ಗಣೇಶ್ ರೈಯವರು ನಡೆಸಿಕೊಟ್ಟರು.

ಕರ್ನಾಟಕ ಸಂಘ ಶಾರ್ಜಾ ಸಮಾರಂಭದ ಸಂಪೂರ್ಣ ಕಲಾ ನಿರ್ದೇಶನದಲ್ಲಿ ಆಹ್ವಾನ ಪತ್ರಿಕೆ, ಸನ್ಮಾನ ಪತ್ರ, ಬ್ರೋಶರ್ ವಿನ್ಯಾಸ, ಸ್ಮರಣಿಕೆ ವಿನ್ಯಾಸ ಹಾಗೂ ಡಿಜಿಟಲ್ ಡಿಸ್ಪ್ಲೆಯಲ್ಲಿ ಮೂಡಿಸಿರುವ ವೀಡಿಯೋ ಮತ್ತು ಡಿಜಿಟಲ್ ಸ್ಲೈಡ್ಸ್ ಗಳನ್ನು ವಿನ್ಯಾಸಗೊಳಿಸಿದ ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ. ಕೆ. ಗಣೇಶ್ ರೈಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಪ್ರಾಯೋಜಕರುಗಳನ್ನು ಮತ್ತು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೊನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರನ್ನು ಹಾಗೂ ಮಾಧ್ಯಮ ಮಿತ್ರರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಗಾಯಕರಾದ ನವೀದ್ ಕರ್ನಾಟಕ ರಾಜ್ಯೋತ್ಸವದ ವಿಶೇಷವಾಗಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಆಹ್ವಾನಿತ ಕನ್ನಡಿಗರಿಗೆ ಕರ್ನಾಟಕ ಬಾವುಟದ ಬಣ್ಣದ ಕೆಂಪು ಮತ್ತು ಹಳದಿ ಸಿಹಿ ಲಾಡುಗಳನ್ನು ಹಂಚಿ ಶುಭಾಶಯ ಕೋರಿದರು. ಗಣೇಶ್ ರವರು ಮಾಯಿ ದುಬಾಯಿಯ ವತಿಯಿಂದ ಸರ್ವರಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರಾಯೋಜಿಸಿದ್ದರು. ಹಲವಾರು ಪ್ರಾಯೋಜಕರು ಉಡುಗೊರೆಗಳನ್ನು ನೀಡಿ ಸಹಕರಿಸಿದ್ದರು.

ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಎಂ.ಇ. ಮೂಳೂರ್ ಮತ್ತು ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾದ ನೋಯಲ್ ಡಿ ಅಲ್ಮೇಡಾ ಮತ್ತು ಸರ್ವಸದಸ್ಯರ ಹಲವು ಸಮಯಗಳ ಪೂರ್ವಭಾವಿ ತಯಾರಿಯೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

 

Comments are closed.