UAE

8ನೇ ವರ್ಷಕ್ಕೆ ಪಾದಾರ್ಪಣೆಗೈದಿದೆ ದುಬೈನಲ್ಲಿರುವ ಪ್ರಪಂಚದ ಅತಿ ದೊಡ್ಡ ‘ಉಚಿತ ಕನ್ನಡ ಕಲಿಕಾ ಕೇಂದ್ರ’

Pinterest LinkedIn Tumblr

ದುಬೈ: ರಾಜ್ಯದೆಲ್ಲೆಡೆ ಕರೋನ ಹಿನ್ನೆಲೆಯಲ್ಲಿ ಶಾಲಾ ತರಗತಿಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಹೊರನಾಡು ದುಬೈನಲ್ಲಿ ಕಳೆದ 7 ವರ್ಷಗಳಿಂದ ಸದ್ದಿಲ್ಲದೆ ಸುಮಾರು 300ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುತ್ತಿರುವ ಕನ್ನಡ ಪಾಠಶಾಲೆ ದುಬೈ ತನ್ನ 8ನೇ ವರ್ಷದ ಶೈಕ್ಷಣಿಕ ಚಟುವಟಿಕೆ ಗಳಿಗೆ ಚಾಲನೆ ನೀಡಿದೆ.

ದುಬೈನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಶಾಲೆಯ ಮಹಾಪೋಷಕರಾದ ಕೆ.ಎನ್.ಆರ್.ಐ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉಪಾಧ್ಯಕ್ಷ ಮೋಹನ್ ನರಸಿಂಹ ಮೂರ್ತಿ ಪ್ರಸಕ್ತ ವರ್ಷದ ಆನ್ ಲೈನ್ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಪಾಠಶಾಲೆ ದುಬೈ ಅನ್ನು ನಡೆಸಿಕೊಂಡು ಬರುತ್ತಿರುವ ಕನ್ನಡ ಮಿತ್ರರು , ಯು.ಎ. ಇ ಸಂಘಟನೆಯ ಅಧ್ಯಕ್ಷ ಶಶಿಧರ್ ನಾಗರಾಜಪ್ಪನವರು ಮಾತನಾಡಿ, ಗಲ್ಫ್ ನಲ್ಲಿನ ಎಲ್ಲ ಕನ್ನಡಿಗರು ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಎಂದು ಕರೆ ನೀಡಿದರು.

ಕನ್ನಡ ಮಿತ್ರರು ಸಂಘಟನೆಯ ಉಪಾಧ್ಯಕ್ಷ ಸಿದ್ದಲಿಂಗೇಶ್ ಅವರು ಶಾಲೆ ನಡೆದು ಬಂದ ದಾರಿ ಕುರಿತು ಮಾತನಾಡಿ ಎಲ್ಲ ಕನ್ನಡಿಗರು ಈ ಬಾರಿಯ ಆನ್ ಲೈನ್ ತರಗತಿಯ ಸದುಪಯೋಗ ಪಡೆದುಕೊಳ್ಳುವಂತೆ ಕರೆಕೊಟ್ಟರು. ಸಂಘಟನೆಯ ಕಾರ್ಯದರ್ಶಿ ಸುನಿಲ್ ಗವಾಸ್ಕರ್ ಅವರು ಕನ್ನಡ ಮಿತ್ರರು , ಯು.ಎ. ಇ ಸಂಘಟನೆಯ ಇತರ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಇನ್ನು ಸುಮಾರು ಇಪ್ಪತ್ತಕ್ಕೂ ಹೆಚ್ಚು ಶಿಕ್ಷಕಿಯರ ನೇತೃತ್ವ ವಹಿಸಿರುವ ರೂಪ ಶಶಿಧರ್ ಮಾತನಾಡಿ ಈ ಬಾರಿಯ ಆನ್ ಲೈನ್ ತರಗತಿಗಳಿಗೆ ನಡೆಸಿರುವ ತಯಾರಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದ ವಿವರಣೆ ನೀಡಿದರು.

ಕನ್ನಡ ಮಿತ್ರ, ಯು.ಎ. ಇ ಸಂಘಟನೆಯ ಖಜಾಂಚಿ ನಾಗರಾಜ್ ರಾವ್ ಹಾಗೂ ಮಾಧ್ಯಮ ಸಂಚಾಲಕ ಬಾನುಕುಮಾರ್ ಕಾರ್ಯಕ್ರಮದ ನಿರೂಪಿಸಿದರು.

2014 ರಲ್ಲಿ 40 ಮಕ್ಕಳಿಗೆ ಉಚಿತವಾಗಿ ವಾರಾಂತ್ಯದಲ್ಲಿ ಕನ್ನಡ ಕಲಿಸುವ ಮೂಲಕ ಆರಂಭಗೊಂಡ ಈ ಶಾಲೆ ಗೆ ಈ ಬಾರಿ ಆನ್ ಲೈನ್ ಕನ್ನಡ ತರಗತಿಗಳಿಗೆ ಪ್ರವೇಶ ಕೋರಿ ಈ ಬಾರಿ ಮೊದಲ ದಿನದಲ್ಲೇ 300ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆಸರನ್ನು ದಾಖಲಿಸಿರುವುದು ವಿಶೇಷ.

ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ತರಗತಿಗಳು ಆನ್ ಲೈನ್ ಮೂಲಕವೇ ನಡೆಯಲಿದ್ದು ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಶಾಲೆ ಮಾಡಿಕೊಂಡಿದೆ.

Comments are closed.