UAE

ದ್ವೀಪದ ಯಕ್ಷಗಾನ ಪ್ರೇಮಿಗಳನ್ನು ರಂಜಿಸಿದ “ಯಕ್ಷ ಸಂಭ್ರಮ”; ದ್ವೀಪ ರಾಷ್ಟ್ರದಲ್ಲಿ ತೆರೆದುಕೊಂಡ ಅದ್ಭುತ ಯಕ್ಷಲೋಕ

Pinterest LinkedIn Tumblr

ಬಹರೈನ್ : ಇತ್ತೀಚಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಬಹರೈನ್ -ಸೌದಿ ಅರೇಬಿಯಾ ಘಟಕ ಆಯೋಜಿಸಿರುವ “ಯಕ್ಷ ಸಂಭ್ರಮ ” ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿ ದ್ವೀಪದ ಯಕ್ಷ ಪ್ರೇಮಿಗಳ ಮನಸೂರೆಗೊಂಡಿತು . ನಾಡಿನ ಯಕ್ಷಲೋಕದ ದಿಗ್ಗಜ ಕಲಾವಿದರುಗಳ ಅಪೂರ್ವ ಸಂಗಮದೊಂದಿಗೆ ದ್ವೀಪದ ಹಾಗು ಸೌದಿ ಅರೇಬಿಯಾದ ಹವ್ಯಾಸಿ ಯಕ್ಷಗಾನ ಕಲಾವಿದರು “ಶ್ರೀಕೃಷ್ಣ ಲೀಲೆ-ಕಂಸವಧೆ ” ಹಾಗು “ಸತ್ಯ ಹರಿಶ್ಚಂದ್ರ ” ಎಂಬ ಎರಡು ಎರಡು ಅಮೋಘ ಕನ್ನಡ ಪೌರಾಣಿಕ ಪ್ರಸಂಗಗಳನ್ನು ಇಲ್ಲಿನ ‘ಮನಾಮ ‘ ಪರಿಸರದಲ್ಲಿರುವ ಇಂಡಿಯನ್ ಕ್ಲಬ್ಬಿನ ನ ಭವ್ಯ ಸಭಾಂಗಣದಲ್ಲಿ ಆಡಿತೋರಿಸಿ ಅಪಾರ ಸಂಖ್ಯೆಯಲ್ಲಿ ನೆರೆದಿರುವ ಯಕ್ಷ ಪ್ರೇಮಿಗಳಿಗೆ ನಾಡಿನ ಗಂಡು ಕಲೆಯ ಶ್ರೀಮಂತಿಕೆಯನ್ನು ಎತ್ತಿ ತೋರಿಸಿದರು .

ಅಪರಾಹ್ನ 2 ಘಂಟೆಗೆ ತೆರೆದುಕೊಂಡ ಅದ್ಭುತ ಯಕ್ಷಲೋಕವು ರಾತ್ರಿ 10 ರ ತನಕವೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು ಮಾತ್ರವಲ್ಲದೆ ಕಿಕ್ಕಿರಿದು ನೆರೆದ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯಿತು. ಮಧ್ಯಾಹ್ನ 2 ಘಂಟೆಗೆ ಸರಿಯಾಗಿ ಚಾಲನೆಗೊಂಡ ಈ ಕಾರ್ಯಕ್ರಮದಲ್ಲಿ ಸೌದಿ ಅರೇಬಿಯಾದ ಹವ್ಯಾಸಿ ಕಲಾವಿದರುಗಳು ಹಾಗು ನಾಡಿನ ಹೆಸರಾಂತ ಯಕ್ಷ ದಿಗ್ಗಜರುಗಳ ಕಲಾವಿದರುಗಳ ಸಮಾಗಮದೊಂದಿಗೆ ಶ್ರೀಮತಿ ಸೌಜನ್ಯಾ ಮೈರ್ಪಾಡಿ ಹಾಗು ಶ್ರೀ ರೋಷನ್ ಕೋಟ್ಯಾನ್ ರವರ ನಿರ್ದೇಶನದಲ್ಲಿ “ಶ್ರೀಕೃಷ್ಣ ಲೀಲೆ-ಕಂಸವಧೆ ” ಎಂಬ ಪ್ರಸಂಗವು ಪ್ರದರ್ಶನಗೊಂಡರೆ ಸಭಾಕಾರ್ಯಕ್ರಮದ ನಂತರ ಬಹರೈನಿನ ಹವ್ಯಾಸಿ ಕಲಾವಿದರುಗಳು ಹಾಗು ನಾಡಿನ ಹೆಸರಾಂತ ಯಕ್ಷಗಾನ ಕಲಾವಿದರುಗಳ ಕೂಡುವಿಕೆಯೊಂದಿಗೆ ಶ್ರೀ ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ “ಸತ್ಯ ಹರಿಶ್ಚಂದ್ರ ” ಎಂಬ ಪ್ರಸಂಗವು ಪ್ರದರ್ಶನ ಕಂಡಿತು.

ಈ ಎರಡೂ ಯಕ್ಷಗಾನ ಪ್ರದರ್ಶನಗಳಲ್ಲಿ ದ್ವೀಪದ ಹಾಗು ಸೌದಿ ಅರೇಬಿಯಾದ ಹವ್ಯಾಸಿ ಕಲಾವಿದರುಗಲಳು ಯಾವುದೇ ವೃತ್ತಿಪರ ಕಲಾವಿದರುಗಳಿಗೆ ಕಡಿಮೆಯಿಲ್ಲದಂತೆ ಪೈಪೋಟಿಯ ಪ್ರದರ್ಶನ ನೀಡಿ ಎಲ್ಲರಿಂದರಲೂ ಸೈ ಎನಿಸಿಕೊಂಡರೆ , ನಾಡಿನ ಖ್ಯಾತ ಹಿಮ್ಮೇಳ ವಾದಕರು , ಮುಮ್ಮೇಳದವರು ಅತ್ಯಂತ ಉತ್ಕ್ರಷ್ಟ ಪ್ರದರ್ಶನ ನೀಡಿ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿದರು.

ನಾಡಿನ ಜನಪ್ರಿಯ ಯುವ ಭಾಗವತ ಯಕ್ಷ ಧ್ರುವ ಸತೀಶ್ ಪಟ್ಲಾ ರವರು ತಮ್ಮ ಕಂಠಾಧಾರೆಯಿಂದ ತಮ್ಮ ಅಪಾರ ಅಭಿಮಾನ ಬಳಗ ಸಂತಸದಿಂದ ಮೈಮರೆಯುವಂತೆ ಮಾಡಿದರು . ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ನಾಡಿನ ಪ್ರಖ್ಯಾತ ಯುವ ಭಾಗವತ ಯಕ್ಷಧ್ರುವ ಪಟ್ಲಾ ಸತೀಶ್ ಶೆಟ್ಟಿ , ಹಿಮ್ಮೇಳ ವಾದಕರಾದ ಚಂದ್ರಶೇಖರ್ ಕೊಂಕಣಾಜೆ ,ಗುರುಪ್ರಸಾದ್ ಬೊಳಿಂಜಡ್ಕ ,ಮುಮ್ಮೇಳದಲ್ಲಿ ಹಳ್ಳಾಡಿ ಜಯರಾಮ ಶೆಟ್ಟಿ ,ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ,ಸುಷ್ಮಾ ಮೈರ್ಪಾಡಿ ಅತಿಥಿ ಕಲಾವಿದರುಗಳಾಗಿ ಪಾಲ್ಗೊಂಡಿದ್ದರೆ, ಈ ಕಾರ್ಯಕ್ರಮ ದ ಮುಖ್ಯ ಅತಿಥಿಯಾಗಿ ಕುಂದಾಪುರದ ಯುವ ಉದ್ಯಮಿ ,ಸಮಾಜ ಸೇವಕ ಶ್ರೀ ಅಭಿನಂದನ್ ಶೆಟ್ಟಿ ಯವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ನೂರಾರು ಯಕ್ಷ ಪ್ರೇಮಿಗಳೆದುರು ಸಾಧಕರಿಗೆ ಸನ್ಮಾನ:

ಇದೆ ಸಂಧರ್ಭದಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ನೆರೆದ ನೂರಾರು ಯಕ್ಷ ಪ್ರೇಮಿಗಳೆದುರು ಸಾಧಕರನ್ನು ಸಾಮಾನಿಸುವ ಅಪೂರ್ವ ಕಾರ್ಯಕ್ರಮ ಜರುಗಿತು.

ವೇದಿಕೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಬಹರೈನ್ -ಸೌದಿ ಅರೇಬಿಯಾ ಘಟಕ ಇದರ ಅಧ್ಯಕ್ಷರಾದ ಶ್ರೀ ರಾಜೇಶ್ .ಬಿ. ಶೆಟ್ಟಿ, ಗೌರಾಧ್ಯಕ್ಷರಾದ ಶ್ರೀ ಸುಭಾಷ್ಚಂದ್ರ , ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ನಾಡಿನ ಪ್ರಖ್ಯಾತ ಯುವ ಭಾಗವತ ಯಕ್ಷಧ್ರುವ ಪಟ್ಲಾ ಸತೀಶ್ ಶೆಟ್ಟಿ, ಮುಖ್ಯ ಅತಿಥಿ ಕುಂದಾಪುರದ ಯುವ ಉದ್ಯಮಿ ,ಸಮಾಜ ಸೇವಕ ಶ್ರೀ ಅಭಿನಂದನ್ ಶೆಟ್ಟಿ,ರವಿ ಕರ್ಕೇರ ಮುಂತಾದವರು ಉಪಸ್ಥಿತರಿದ್ದು ಇವರೆಲ್ಲ ಒಂದಾಗಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಇದೆ ಸಂಧರ್ಭದಲ್ಲಿ ನಾಡಿನ ಹಿರಿಯ ಕಲಾವಿದ ಹಳ್ಳಾಡಿ ಜಯರಾಮ್ ಶೆಟ್ಟಿ, ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ನಾಡಿನ ಪ್ರಖ್ಯಾತ ಯುವ ಭಾಗವತ ಯಕ್ಷಧ್ರುವ ಪಟ್ಲಾ ಸತೀಶ್ ಶೆಟ್ಟಿ, ಯುವ ಉದ್ಯಮಿ ,ಸಮಾಜ ಸೇವಕ ಶ್ರೀ ಅಭಿನಂದನ್ ಶೆಟ್ಟಿ,ರಮೇಶ್ ಮಂಜೆಶ್ವರ್ ದಂಪತಿಗಳನ್ನು ಶಾಲು ಹೊದಿಸಿ ,ಫಲಪುಷ್ಪಗಳೊಂದಿಗೆ ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಲಾಯಿತು.

Photo Album

ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀ ರಾಜೇಶ್.ಬಿ .ಶೆಟ್ಟಿ ಯವರು ಮಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತಾ ಪಟ್ಲಾ ಪಟ್ಲ ಫೌಂಡೇಶನ್ ನ ದ್ಯೇಯೋದ್ದೇಶಗಳ ಬಗ್ಗೆ ಬೆಳಕು ಚೆಲ್ಲಿದರೆ ,ಸಮ್ಮಾನಕ್ಕೆ ಉತ್ತರಿಸುತ್ತಾ ಮಾತನಾಡಿದ ಯುವ ಉದ್ಯಮಿ ,ಸಮಾಜ ಸೇವಕ ಶ್ರೀ ಅಭಿನಂದನ್ ಶೆಟ್ಟಿಯವರು ನಮ್ಮ ನಾಡು ಕಲೆ ,ಸಂಸ್ಕ್ರತಿಯಲ್ಲಿ ಎಲ್ಲಕ್ಕಿಂತಲೂ ಶ್ರೇಷ್ಠವಾದುದ್ದು ,ಬದುಕಿನ ಮುಸ್ಸಂಜೆಯಲ್ಲಿ ಭಾವನೆಯಲ್ಲಿರುವ ಯಕ್ಷಗಾನ ಕಲಾವಿದರಿಗೆ ಪಟ್ಲ ಫೌಂಡೇಶನ್ ಮಾಡುತ್ತಿರುವ ಸಹಾಯ ನಿಜಕ್ಕೂ ಅನನ್ಯ ಎಂದರು.

ಸಮ್ಮಾನಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ ಮಾತನಾಡಿದ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ನಾಡಿನ ಪ್ರಖ್ಯಾತ ಯುವ ಭಾಗವತ ಯಕ್ಷಧ್ರುವ ಪಟ್ಲಾ ಸತೀಶ್ ಶೆಟ್ಟಿಯವರು “ಯಕ್ಷಗಾನ ಕಲೆ ಶ್ರೀಮಂತವಾದುದು ಆದರೆ ಕಲಾವಿದರಲ್ಲ . ಹೆಚ್ಚಿನ ಕಲಾವಿದರು ಬಡತನದಲ್ಲಿ ಹುಟ್ಟಿ ಕೊನೆಗೆ ಬಡವರಾಗಿಯೇ ಉಳಿದು ಬಿಡ್ತಾರೆ. ಅಂತಹ ಕಲಾವಿದರ ಕಣ್ಣೀರೊರೆಸುವುದಕ್ಕಾಗಿಯೇ ಈ ಪಟ್ಲ ಫೌಂಡೇಶನ್ ಹುಟ್ಟಿಕೊಂಡಿದೆ ಎಂದರು.

ಇದೆ ಸಂದರ್ಭದಲ್ಲಿ ಕಲಾವಿದರುಗಳಿಗೆ,ಪ್ರಾಯೋಜಕರುಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು . ಕಾರ್ಯಕ್ರಮವನ್ನು ಶ್ರೀ ದೂಮಣ್ಣ ರಾಯ್ ಯವರು ನಿರೂಪಿಸಿದರೆ ,ಶ್ರೀ ಮೋಹನ್ ದಾಸ್ ರೈ ಯವರು ಧನ್ಯವಾದ ಸಮರ್ಪಿಸಿದರು .

ವರದಿ-ಕಮಲಾಕ್ಷ ಅಮೀನ್

Comments are closed.