ಮಂಗಳೂರು, ಆ.17: ಕರ್ನಾಟಕ ರಾಜ್ಯದಿಂದ ಪ್ರಸಕ್ತ ವರ್ಷದ 134 ಹಜ್ ಯಾತ್ರಾರ್ಥಿಗಳ ಪ್ರಥಮ ತಂಡವು ರವಿವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮದೀನಾಕ್ಕೆ ಪ್ರಯಾಣಿಸುವುದರೊಂದಿಗೆ ಹಜ್ ಯಾತ್ರೆ ಆರಂಭಗೊಂಡಿತು. ನಗರದ ಬಜ್ಪೆ ಹಳೆ ವಿಮಾನ ನಿಲ್ದಾಣದಲ್ಲಿ ಹಜ್ ನಿರ್ವಹಣಾ ಸಮಿತಿ ಆಯೋಜಿಸಿದ್ದ ಹಜ್ ಯಾತ್ರೆಯ ಉದ್ಘಾಟನೆಯನ್ನು ಉಡುಪಿ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಹಜ್ ಯಾತ್ರಾರ್ಥಿಗಳು ಮನುಕುಲಕ್ಕೆ, ಸಮಾಜಕ್ಕೆ ಶಾಂತಿ ಸಿಗುವಂತೆ ಪ್ರಾರ್ಥಿಸಲಿ ಎಂದು ಯಾತ್ರಾರ್ಥಿಗಳಿಗೆ ಶುಭ ಕೋರಿದರು.
ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ದುಆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಹಜ್ ಯಾತ್ರಾರ್ಥಿಗಳಿಗೆ ಶುಭ ಹಾರೈಸಿದರು. ಆರೋಗ್ಯ ಸಚಿವ ಯು.ಟಿ.ಖಾದರ್ ಮಾತ ನಾಡಿ, ಹಜ್ ಯಾತ್ರಾರ್ಥಿಗಳ ಯೋಗಕ್ಷೇಮ ನೋಡಿಕೊಳ್ಳಲು ಸರಕಾರದ ವತಿಯಿಂದ ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿ, ಹಜ್ ನಿರ್ವಹಣಾ ಸಮಿತಿಯ ನೋಡಲ್ ಅಧಿಕಾರಿ ಅಬೂಬಕರ್‌ರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಜ್ ಕಮಿಟಿ ಇಂಡಿಯಾದ ಉಪಾಧ್ಯಕ್ಷ ಎಂ.ಎಂ.ಅಹ್ಮ್ಮದ್ ಮಾತನಾಡಿ, ಹಜ್ ಯಾತ್ರಾರ್ಥಿಗಳಿಗೆ ಅಲ್ಲಿ ಸಮಸ್ಯೆಯಾಗದಂತೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಐವರಿಗೆ ಒಂದು ರೂಮ್ ಕಾಯ್ದಿರಿಸಲಾಗಿದ್ದು, ಅಲ್ಲಿಯೇ ಅಡುಗೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಜ್‌ಗೆ ತೆರಳಲು ನೀಡಲಾ ಗುವ ಪಾಸ್‌ಪೋರ್ಟ್ ಮತ್ತು ಹಣ್ಣುಹಂಪಲನ್ನು ಸಾಂಕೇತಿಕವಾಗಿ 7 ಹಜ್ ಯಾತ್ರಾರ್ಥಿಗಳಿಗೆ ಅತಿಥಿಗಳು ವಿತರಿಸಿದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಜೆ.ಆರ್.ಲೋಬೊ, ವಸಂತ ಬಂಗೇರ, ಐವನ್ ಡಿಸೋಜ, ಮೇಯರ್ ಜೆಸಿಂತಾ ವಿಜಯ್ ಆಲ್ಫ್ರೆಡ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕರ್ನಾಟಕ ಅಲ್ಪ ಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯಹ್ಯಾ ನಕ್ವಾ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜೆ.ಟಿ.ರಾಧಾಕೃಷ್ಣ, ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು.
ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ ಸ್ವಾಗತಿಸಿದರು. ಅಬ್ದುರ್ರಝಾಕ್ ಅನಂತಾಡಿ ಮತ್ತು ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಿರಾಜ್ ಬಜ್ಪೆ ಕಿರಾಅತ್ ಪಠಿಸಿದರು.
ದೇಶದಿಂದ ಲಕ್ಷ ಯಾತ್ರಿಕರು :
ದೇಶದಿಂದ ಈ ಬಾರಿ ಒಂದು ಲಕ್ಷದ ಇಪ್ಪತ್ತು ಮಂದಿ ಮತ್ತು ಕರ್ನಾಟಕದಿಂದ ಐದು ಸಾವಿರ ಮಂದಿ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಕೇಂದ್ರ ಹಜ್ ಸಮಿತಿಯ ಉಪಾಧ್ಯಕ್ಷ ಎಂ.ಎಂ.ಅಹ್ಮದ್ ತಿಳಿಸಿದರು.
ಸೌದಿ ಅರೇಬಿಯಾ ಸರಕಾರವು ಈ ಬಾರಿ ಪ್ರಪಂಚದಾದ್ಯಂತ ಹಜ್ ಯಾತ್ರಿ ಕರ ಸಂಖ್ಯೆಯನ್ನು ಶೇ.20ರಷ್ಟು ಕಡಿತಗೊಳಿಸಿದೆೆ. ಪ್ರಸಕ್ತ ವರ್ಷ ದೇಶದಿಂದ ಸುಮಾರು 34 ಸಾವಿರ ಮಂದಿ ಖಾಸಗಿ ಟೂರ್ಸ್ ಮೂಲಕ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಮುಂದಿನ ವರ್ಷ ದೇಶದಿಂದ ಸುಮಾರು 1.5 ಲಕ್ಷ ಪ್ರಯಾಣಿಕರಿಗೆ ಅವಕಾಶ ಲಭಿಸಲಿದೆ ಎಂದರು. ಯಾತ್ರಿಕರ ಪ್ರಯಾಣ, ವಸತಿ, ಊಟ-ಉಪಹಾರದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಾ, ಮದೀನಾದಲ್ಲಿ ಸ್ವಯಂ ಸೇವಕರ ತಂಡವಿದೆ. ಭಾರತೀಯ ಊಟ ಸರಬರಾಜು ಮಾಡಲಾಗುತ್ತದೆ. ಯಾತ್ರಿಕರಿಗೆ ಯಾವುದೇ ಸಮಸ್ಯೆಯಾದರೂ ನೀಡಿರುವ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಿದರೆ ತಕ್ಷಣ ಸ್ಪಂದಿಸುತ್ತೇವೆ ಎಂದು ಅವರು ಹೇಳಿದರು.
ಹಜ್‌ಘರ್ ನಿರ್ಮಾಣಕ್ಕೆ 2 ಕೋ.ರೂ. :ಅಹ್ಮದ್
ಮಂಗಳೂರಿನ ಕೆಂಜಾರಿನಲ್ಲಿ ಹಜ್ ಘರ್ ನಿರ್ಮಾಣದ ಭೂಮಿಯನ್ನು ಜಿಲ್ಲಾಡಳಿತವು ಹಜ್ ಸಮಿತಿಗೆ ವರ್ಗಾವಣೆ ಮಾಡಿದಲ್ಲಿ ಕಟ್ಟಡ ನಿರ್ಮಾಣಕ್ಕೆ ತಕ್ಷಣ 2 ಕೋ.ರೂ. ಬಿಡುಗಡೆ ಮಾಡಲಾಗುವುದು ಎಂದು ಅಹ್ಮದ್ ಹೇಳಿದರು.
ಹಜ್ ಘರ್ ನಿರ್ಮಾಣಕ್ಕೆ ಭೂಮಿ ಗುರುತಿಸಿ, ಆವರಣ ನಿರ್ಮಿಸಿದ್ದರೂ, ಅದನ್ನು ಹಜ್ ಇಲಾಖೆಗೆ ವರ್ಗಾವಣೆ ಮಾಡಲು ಇಲ್ಲಿ ಅಧಿಕಾರಿಯೇ ಇಲ್ಲ. ಅನಗತ್ಯ ವಿಳಂಬವಾಗುತ್ತಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಮತ್ತು ಶಾಸಕ ಮೊಯ್ದಿನ್ ಬಾವ ಆಕ್ಷೇಪ ವ್ಯಕ್ತಪಡಿಸಿದರು.
ಮೊದಲ ಯಾನದಲ್ಲಿ 134 ಯಾತ್ರಾರ್ಥಿಗಳು
ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ರವಿವಾರ 134 ಯಾತ್ರಾರ್ಥಿಗಳು ತೆರಳಿದರು. ರಾತ್ರಿ 7:45ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಮದೀನಾಕ್ಕೆ ತೆರಳುವ ಸೌದಿ ಮೂಲದ ್ಲೈನಾಸ್ ಹೆಸರಿನ ವಿಮಾನದಲ್ಲಿ ಇವರು ಪ್ರಯಾಣ ಬೆಳೆಸಿದ್ದಾರೆ. 134 ಯಾತ್ರಾರ್ಥಿಗಳಲ್ಲಿ 75 ಮಂದಿ ಪುರುಷರಾಗಿದ್ದರೆ, 59 ಮಂದಿ ಮಹಿಳೆಯರಾಗಿದ್ದಾರೆ. ಇಂದಿನಿಂದ ಮಂಗಳೂರು ವಿಮಾನ ನಿಲ್ದಾಣದಿಂದ 5 ತಂಡಗಳು ಹಜ್ ಯಾತ್ರೆಗೆ ತೆರಳಲಿವೆ. ಈ ವರ್ಷದಲ್ಲಿ ಮಂಗಳೂರಿನಿಂದ ಒಟ್ಟು 666 ಯಾತ್ರಾರ್ಥಿಗಳು ಹಜ್ ಯಾತ್ರೆಗೆ ತೆರಳಲಿದ್ದಾರೆ.
ಬಾಲ್ಯದ ಆಸೆ ಇದೀಗ ಒದಗಿ ಬಂದಿದೆ :ಹಸೀನಾ
ಹಜ್ ಯಾತ್ರೆಗೆ ಮೊದಲ ಬಾರಿ ತೆರಳುತ್ತಿರುವ ಚಿಕ್ಕಮಗಳೂರಿನ ರತ್ನಗಿರಿಯ 49 ವರ್ಷದ ಮಹಿಳೆ ಹಸೀನಾ ಪತ್ರಿಕೆಯೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡರು. ಬಾಲ್ಯದಿಂದ ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಆಸೆ ಈಗ ಈಡೇರಿದೆ. ತುಂಬ ವರ್ಷದಿಂದ ಹಜ್ ಯಾತ್ರೆ ಮಾಡಬೇಕೆಂಬ ಆಸೆಯಿದ್ದರೂ ಸಾಧ್ಯವಾಗಲಿಲ್ಲ. ಇದೀಗ ಆ ಭಾಗ್ಯ ಒದಗಿ ಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಜ್ ವೇಳೆ ಪ್ರಾರ್ಥಿಸುತ್ತೇನೆ ಎಂದು ಅವರು ನುಡಿದರು.
ವರದಿ ಕೃಪೆ : ವಾಭಾ