ಅಬುಧಾಬಿ, ಆ.16: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಎರಡು ದಿನಗಳ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ರವಿವಾರ ಅಬುಧಾಬಿಗೆ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿರುವಂತೆಯೇ ಮೋದಿಯವರನ್ನು ಅಬುಧಾಬಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ಸ್ವಾಗತಿಸಿದರು. 34 ವರ್ಷಗಳ ಬಳಿಕ ಭಾರತದ ಪ್ರಧಾನಿಯೋರ್ವರು ಇದೇ ಮೊದಲ ಬಾರಿಗೆ ಯುಎಇಗೆ ಭೇಟಿ ನೀಡುತ್ತಿರುವುದು ಹೆಚ್ಚಿನ ಮಹತ್ವ ಪಡೆದಿದೆ.
ಇಂಧನ, ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರ ಹಾಗೂ ಬಂಡವಾಳ ಹೂಡಿಕೆದಾರರನ್ನು ಭಾರತದತ್ತ ಸೆಳೆಯುವುದು ಮೋದಿಯವರ ಭೇಟಿಯ ಪ್ರಮುಖ ಉದ್ದೇಶಗಳಲ್ಲಿ ಸೇರಿವೆ. ವಾಣಿಜ್ಯ ಹಾಗೂ ಭಯೋತ್ಪಾದನೆ ನಿಗ್ರಹ ವಿಚಾರಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಭಾರತದ ಉನ್ನತ ಪಾಲುದಾರನಾಗಬೇಕೆನ್ನುವುದು ಭಾರತದ ಬಯಕೆಯಾಗಿದೆ ಎಂದು ಮೋದಿಯವರನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ತಿಳಿಸಿದೆ.
ಭಾರತದ ಆರ್ಥಿಕ, ಇಂಧನ ಹಾಗೂ ಭದ್ರತಾ ಹಿತಾಸಕ್ತಿಗಳ ದೃಷ್ಟಿಯಿಂದ ಕೊಲ್ಲಿ ಪ್ರದೇಶವು ಅತ್ಯಂತ ಮಹತ್ವದ್ದಾಗಿದೆ ಎಂದು ಮೋದಿ ಅಭಿಪ್ರಾಯಿಸಿದ್ದಾರೆ.
‘‘ಭಯೋತ್ಪಾದನೆ ಹಾಗೂ ಉಗ್ರವಾದ ಸೇರಿದಂತೆ ಸಾಮಾನ್ಯ ಭದ್ರತೆ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಭಾರತ ಹಾಗೂ ಯುಎಇ ನಡುವೆ ಹಲವು ಸಾಮ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಯುಎಇ ಜೊತೆಗೆ ಮಹತ್ವದ ಪಾಲುದಾರಿಕೆ ಹೊಂದಲು ನಾನು ಆಸಕ್ತನಾಗಿರುವೆ’’ ಎಂದು ಪ್ರಧಾನಿ ಮೋದಿ ರವಿವಾರ ಅಬುಧಾಬಿಗೆ ನಿರ್ಗಮಿಸುವ ಮುನ್ನ ಖಲೀಜ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘‘ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಾಗೂ ಪ್ರಾದೇಶಿಕ ಸವಾಲುಗಳನ್ನು ಎದುರಿಸುವಲ್ಲಿ ನಾವು ಜೊತೆಗೂಡಿ ಶ್ರಮಿಸಲಿದ್ದೇವೆ. ನಮ್ಮ ಸಂಬಂಧಗಳಿಗೆ ಯಾವುದೇ ಮಿತಿಗಳಿಲ್ಲ’’ ಎಂದವರು ಹೇಳಿದ್ದಾರೆ.
‘‘ಭಯೋತ್ಪಾದನೆಯು ಮಾನವೀಯತೆಗೆ ಭಾರೀ ಅಪಾಯವನ್ನು ತಂದೊಡ್ಡಿದೆ. ಮಾನವೀಯತೆಯನ್ನು ನಂಬುವ ಎಲ್ಲ ರಾಷ್ಟ್ರಗಳೂ ಭಯೋತ್ಪಾದಕ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲುವುದು ಅತ್ಯಗತ್ಯ’’ ಎಂದವರು ಅಭಿಪ್ರಾಯಿಸಿದರು.
ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಯುಎಇ ಪ್ರವಾಸವು ಬಾಂಧವ್ಯವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲು ಒಂದು ಸುಸಂದರ್ಭವಾಗಿದೆ ಎಂದು ಯುಎಇನ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯಿದ್ ಅಲ್ ನಹ್ಯಾನ್ ಬಣ್ಣಿಸಿದ್ದಾರೆ. ಅಂತಾರಾಷ್ಟ್ರೀಯ ಪಾಲುದಾರಿಕೆಯಲ್ಲಿ ಯುಎಇಯು ಭಾರತವನ್ನು ಮುಂಚೂಣಿಯಲ್ಲಿರಿಸಿದೆ ಹಾಗೂ ಭಾರತದ ಜೊತೆ ಸಮಗ್ರ ಮಾತುಕತೆಯನ್ನು ನಡೆಸುವ ಮಹತ್ವವನ್ನು ಅದು ಅರಿತುಕೊಂಡಿದೆಯೆಂದು ಅವರು ಖಲೀಜ್ ಟೈಮ್ಸ್ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಟಕ್ಕಾಗಿ ಭದ್ರತಾ ಸಹಕಾರವನ್ನು ಏರ್ಪಡಿಸಿಕೊಳ್ಳಲು ಯುಎಇ ಹಾಗೂ ಭಾರತಕ್ಕೆ ಈಗ ಬಲವಾದ ಅವಕಾಶಗಳು ಒದಗಿಬಂದಿರುವುದಾಗಿ ಅವರು ಹೇಳಿದ್ದಾರೆ. ಮೋದಿ ತನ್ನ ಯುಎಇ ಭೇಟಿ ಸಂದರ್ಭದಲ್ಲಿ ಶೇಖ್ ಅಬ್ದುಲ್ಲಾ ಬಿನ್ ಝಾಯಿದ್ ಹಾಗೂ ಯುಎಇನ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಜೊತೆ ಮಾತುಕತೆ ನಡೆಸಲಿದ್ದಾರೆ.ಅಬುಧಾಬಿ ಹೂಡಿಕೆ ಪ್ರಾಧಿಕಾರದ ಆಡಳಿತ ನಿರ್ದೇಶಕ ಹಮೀದ್ ಬಿನ್ ಝಾಯಿದ್ ನಹ್ಯಾನ್ ಅವರ ಆತಿಥ್ಯದಲ್ಲಿ ಇಂದು ರಾತ್ರಿ ನಡೆದ ಔತಣಕೂಟದಲ್ಲಿ ಮೋದಿ ಪಾಲ್ಗೊಂಡರು. ಜಗತ್ತಿನ ಅತಿ ಬೃಹತ್ ಮಸೀದಿಗಳಲ್ಲೊಂದಾದ ಶೇಖ್ ಝಾಯಿದ್ ಗ್ರಾಂಡ್ ಮಸೀದಿಗೂ ಪ್ರಧಾನಿ ಭೇಟಿ ನೀಡಿದರು. ಸುಮಾರು 40 ಸಾವಿರ ಮಂದಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಲು ಸ್ಥಳಾವಕಾಶವಿರುವ ಈ ಮಸೀದಿಯು ಇಸ್ಲಾಂ ಸಂಸ್ಕೃತಿಯ ಪ್ರಮುಖ ಕೇಂದ್ರಗಳಲ್ಲೊಂದಾಗಿದೆ.
ಸೋಮವಾರ ಮೋದಿ ಅಬುದಾಭಿ ಸಮೀಪದ ಹೈಟೆಕ್ ನಗರ ಸದರ್‌ಗೂ ಭೇಟಿ ನೀಡಲಿದ್ದಾರೆ. ಆನಂತರ ಮೋದಿ ದುಬೆೈಗೆ ಪ್ರಯಾಣಿಸಲಿದ್ದು ಅಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾರತ ತೆೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೆೈಕಿ ಯುಎಇ ಆರನೆ ಸ್ಥಾನದಲ್ಲಿದೆ. 2014-15ನೆ ಸಾಲಿನಲ್ಲಿ ಅಮೆರಿಕ ಹಾಗೂ ಚೀನದ ಆನಂತರ ಯುಎಇ ಭಾರತದ ಮೂರನೆ ಅತಿ ದೊಡ್ಡ ಉದ್ಯಮ ಪಾಲುದಾರನಾಗಿದೆ.
ಕಾರ್ಮಿಕರ ಶಿಬಿರದಲ್ಲಿ ಭಾರತೀಯರ ಭೇಟಿ
ಅಬುಧಾಬಿಯಲ್ಲಿ ಪ್ರಸಿದ್ಧ ಶೇಖ್ ಝಾಯಿದ್ ಮಸೀದಿಗೆ ಭೇಟಿ ನೀಡಿದ ಬಳಿಕ ಮೋದಿಯವರು ಅಬುಧಾಬಿಯ ಹೊರವಲಯದಲ್ಲಿರುವ ಕಾರ್ಮಿಕ ಶಿಬಿರದಲ್ಲಿ ನೆಲೆಸಿರುವ ಭಾರತೀಯರನ್ನು ಭೇಟಿ ಮಾಡಿ ವಿಚಾರವಿನಿಮಯ ನಡೆಸಿದರು. ಈ ಕಾರ್ಮಿಕ ಶಿಬಿರ(ಐಸಿಎಡಿ)ದಲ್ಲಿ 90 ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದಾರೆ.
ದೇವಾಲಯಕ್ಕೆ ನಿರ್ಮಾಣಕ್ಕೆ ಜಾಗ
ಮೋದಿ ಅವರ ಭೇಟಿ ಸಂದರ್ಭದಲ್ಲಿ ಯುಎಇನಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರಿಗೆ ದೇವಾಲಯ ನಿರ್ಮಾಣಕ್ಕೆ ಭೂಮಿ ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಯುಎಇನಲ್ಲಿ 26 ಲಕ್ಷ ಭಾರತೀಯರಿದ್ದು, ಅಲ್ಲಿನ ಜನಸಂಖ್ಯೆಯ ಶೇ 30ರಷ್ಟಿದ್ದಾರೆ. ಭಾರತೀಯರ ಪೈಕಿ ಶೇ 20ರಷ್ಟು ಜನ ಉನ್ನತ ಹುದ್ದೆಗಳಲ್ಲಿದ್ದಾರೆ.