Saudi Arabia

‘ನನ್ನ ಮಗ ನಿರಪರಾಧಿ, ನಮಗೆ ಸಹಾಯ ಮಾಡಿ’- ಸೌಧಿಯಲ್ಲಿ ಬಂಧನಕ್ಕೊಳಗಾದ ಹರೀಶ್ ತಾಯಿ ಅಳಲು

Pinterest LinkedIn Tumblr

ಕುಂದಾಪುರ: ಕಳೆದ ವರ್ಷ ಮನೆಗೆ ಬಂದಿದ್ದ….ಆತ ನಿರಪರಾಧಿ….ಎಲ್ಲಾ ಒಟ್ಟಾಗಿ ಸಹಾಯ ಮಾಡಿ…ವಾಪಾಸ್ ಬರುವಂತೆ ಮಾಡಿ…..ಹೀಗೆ ಆ ಹಿರಿಯ ಜೀವ ಕೈಮುಗಿದು ಬೇಡಿಕೊಳ್ಳುತ್ತಿರುವುದು ಒಂದೆಡೆಯಾದರೆ ಪುಟ್ಟ ಕಂದಮ್ಮನನ್ನು ಎತ್ತುಕೊಂಡು ಕಣ್ಣಲ್ಲಿ ನೀರು ಹಾಕುತ್ತಾ ನನ್ನ ಪತಿಯದ್ದೇನು ತಪ್ಪಿಲ್ಲ ಎಂದು ಹೇಳುವ ಹೆಣ್ಮಗಳು ಮತ್ತೊಂದೆಡೆ.- ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಸೌದಿ ಪೊಲೀಸರಿಂದ ಬಂಧಿಯಾದ ಹರೀಶ್ ಬಂಗೇರ ಕುಟುಂಬ ಇದೀಗಾ ತಮ್ಮ ನಿರಪರಾಧಿ ಮಗನನ್ನು ವಾಪಾಸ್ ಕರೆದುತನ್ನಿ ನ್ಯಾಯಕೊಡಿಸಿ ಎಂದು ರೋಧಿಸುತ್ತಿದೆ.

ಬಡತನದ ಕುಟುಂಬ…
ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿ ಗೋಯಾಡಿಬೆಟ್ಟು ನಿವಾಸಿ ಸಿದ್ದು ಎನ್ನುವರ ನಾಲ್ವರು ಮಕ್ಕಳ ಪೈಕಿ ಹರೀಶ್ ಬಂಗೇರ ಒಬ್ಬರು. ದ್ವಿತೀಯ ಪಿಯು ಮುಗಿಸಿ ಐಟಿ ವಿದ್ಯಾಭ್ಯಾಸ ಪಡೆದು ಬಳಿಕ ಅಲ್ಲಿಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದು ಕಳೆದ ಆರು ವರ್ಷಗಳ ಹಿಂದೆ ಸೌದಿಯ ಕಂಪೆನಿಯೊಂದರಲ್ಲಿ ಎಸಿ ಮೆಕ್ಯಾನಿಕ್ ಕೆಲಸಕ್ಕೆ ತೆರಳಿದ್ದರು. ಒಂಬತ್ತು ವರ್ಷಗಳ ಹಿಂದೆ ಕುಂಭಾಸಿಯ ಸುಮನಾ ಎನ್ನುವರನ್ನು ವಿವಾಹವಾಗಿದ್ದ ಇವರಿಗೆ 2  ವರ್ಷ ಪ್ರಾಯದ ಹೆಣ್ಣುಮಗುವಿದೆ. ಚಿಕ್ಕದೊಂದು ಬಾಡಿಗೆ ಮನೆಯಲ್ಲಿ ಇವರ ವಾಸ. ವರ್ಷದ ಹಿಂದೆ ಅಂದರೆ ಜನವರಿ ತಿಂಗಳಿನಲ್ಲಿ ತಮ್ಮ ಮನೆ ದೇವರ ಹಬ್ಬಕ್ಕೆ ಬಂದಿದ್ದ ಹರೀಶ್ ಇದೀಗಾ ಸೌದಿ ಪೊಲೀಸರ ವಶದಲ್ಲಿದ್ದು ಇಡೀ ಕುಟುಂಬ ಕಂಗಾಲಾಗಿದೆ.

ನಡೆದಿದ್ದೇನು?
ಹರೀಶ್ ಬಂಗೇರ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹತ್ಯೆಯನ್ನು ಹರೀಶ್ ಬಂಗೇರ ಎಸ್ ಎನ್ನುವ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಕೂಡಲೇ ಅಲ್ಲಿನ ಯುವಕರು ಹರೀಶ್ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಪತ್ನಿಯ ಬಳಿ ಹೇಳಿಕೊಂಡಿದ್ದು ಪತ್ನಿ ಕ್ಷಮೆ ಕೇಳುವಂತೆ ತಿಳಿಸಿದ್ದರು. ಅದಾದ ಬಳಿಕ ಘಟನೆಯ ಬಗ್ಗೆ ಹರೀಶ್ ಕ್ಷಮೆ ಕೇಳಿ ವೀಡಿಯೊವೊಂದನ್ನು ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. ಡಿ.೧೯ ರಾತ್ರಿ ತನ್ನ ಫೇಸ್ ಬುಕ್ ಖಾತೆಯನ್ನು ಡಿ-ಆಕ್ಟಿವೇಟ್ ಮಾಡಿದ್ದರು. ಆದರೆ ಮತ್ತೆ ಹರೀಶ್ ಬಂಗೇರ ಎನ್ನುವ ಫೇಸ್ ಬುಕ್ ಖಾತೆಯಿಂದ ಮೆಕ್ಕಾ ಕುರಿತು, ಸೌದಿ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಅಪ್ಲೋಡ್ ಆಗಿದ್ದು ನಿಂದನಾತ್ಮಕ ಮತ್ತು ವಿವಾದಾತ್ಮಕ ಪೋಸ್ಟ್‌ಗಳು ಸೌದಿಯಾದ್ಯಂತ ಭಾರಿ ವೈರಲ್ ಆಗಿದ್ದು ಆತನನ್ನು ಕಂಪೆನಿ ಕೆಲಸದಿಂದ ತಕ್ಷಣವೇ ವಜಾಗೊಳಿಸಿರುವುದಾಗಿ ಪ್ರಕಟಣೆ ನೀಡಿದೆ. ಅಲ್ಲದೇ ಸೌದಿ ಪೊಲೀಸರು ಹರೀಶನನ್ನು ಬಂಧಿಸಿದ್ದರು.

ಫೇಕ್ ಐಡಿ ಮೂಲಕ ಬಂಧನಕ್ಕೆ ಹುನ್ನಾರ?
ತನ್ನ ಫೇಸ್ ಬುಕ್ ಐಡಿ ನಿಷ್ಕ್ರೀಯಗೊಳಿಸಿದಾಗಲೂ ಕೂಡ ಹರೀಶ್ ಫೋಟೋ ಉಪಯೋಗಿಸಿಕೊಂಡು ಹರೀಶ್ ಬಂಗೇರ ಎನ್ನುವ ಹೆಸರಲ್ಲಿ ಮತ್ತೊಂದು ಖಾತೆ ಮಾಡಲಾಗಿತ್ತು. ಇದರ ಬಗ್ಗೆಯೂ ಪತ್ನಿ ಸುಮನಾ ಹರೀಶ್ ಗಮನಕ್ಕೆ ತಂದಿದ್ದರು. ಮಾರನೇ ದಿನ ಆ ಖಾತೆಯಲ್ಲಿ ಸೌದಿ ದೊರೆಯ ಬಗ್ಗೆ ಮೆಕ್ಕಾದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಕಿಡಿಗೇಡಿಗಳು ಹರೀಶ್ ಬಂಗೇರ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಠಿಸಿ ಆ ಖಾತೆಯಲ್ಲಿ ಹಿಂದೂತ್ವದ ಬಗೆಗಿನ ಬರಹಗಳು ಹಾಗೂ ಸೌದಿ ದೊರೆ ಮತ್ತು ಮಕ್ಕಾದ ವಿರುದ್ದ ಅವಹೇಳನಕಾರಿ ಪೋಸ್ಟ್‌ಗಳನ್ನು ಅಪ್ಲೋಡ್ ಮಾಡಿ ಹರಿಯಬಿಟ್ಟಿದ್ದಾರೆ ಎಂದು ಹರೀಶ್ ಪತ್ನಿ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸರಿಗೂ ಸುಮನಾ ದೂರು ನೀಡಿದ್ದು ಫೇಕ್ ಐಡಿ ಬಗ್ಗೆ ಕ್ರಮಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ. ಪೊಲಿಸರು ಈಗಾಗಾಲೇ ಫೇಕ್ ಐಡಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಉಡುಪಿ ಎಸ್ಪಿ ಕಚೇರಿಯ ಪ್ರಕಟನೆ..
ಹರೀಶ ಬಂಗೇರ (32) ಎಂಬವರು ಸೌದಿ ಅರೇಬಿಯಾದಲ್ಲಿಏರ್ ಕಂಡೀಷನ್ ಟಿಕ್ನೀಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು, ಇವರ ಫೇಸ್ ಬುಕ್ ಖಾತೆಯಲ್ಲಿ ಸೌದಿ ದೊರೆಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಬಗ್ಗೆ ಆರೋಪ ಹೊರಿಸಿ ಹರೀಶ ಬಂಗೇರರವರನ್ನು ಸೌದಿ ಅರೇಬಿಯಾ ಪೊಲೀಸ್ ರವರು ಬಂಧಿಸಿದ್ದು, ಈ ಬಗ್ಗೆ ಹರೀಶ ಬಂಗೇರ ರವರ ಪತ್ನಿ ಸುಮನಾ ಎಂ. ಎಂಬವರು ಉಡುಪಿ ಸೆನ್ ಪೊಲೀಸ್ ಠಾಣೆಗೆ ಸೌದಿ ಅರೇಬಿಯಾದಲ್ಲಿರುವ ತನ್ನ ಗಂಡನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಮುಸ್ಲಿಂ ವಿರೋಧಿಯಾಗಿ ಪೋಸ್ಟ್ ಮಾಡಿದ ಬಗ್ಗೆ ತನ್ನ ಗಂಡನ ಹೆಸರಿನಲ್ಲಿರುವ ನಕಲಿ ಖಾತೆಯನ್ನು ಡಿಲೀಟ್ ಮಾಡಿಕೊಡಬೇಕಾಗಿ ದೂರು ಅರ್ಜಿಯನ್ನು ಡಿ. 21ರಂದು ನೀಡಿರುತ್ತಾರೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರುಅರ್ಜಿ ದಾಖಲಾಗಿದೆ. ಹರೀಶ್ ಬಂಗೇರರವರ ಪತ್ನಿ ತನ್ನ ದೂರಿನಲ್ಲಿ ತನ್ನ ಪತಿ ಸುಮಾರು 5 ವರ್ಷಗಳಿಂದ “Harish Bangera S” ಎಂಬ ಹೆಸರಿನಲ್ಲಿ ಫೇಸ್ ಬುಕ್ ಖಾತೆಯನ್ನು ಹೊಂದಿರುತ್ತಾರೆ ಎಂಬುದಾಗಿ ನಮೂದಿಸಿದ್ದರು. ದೂರಿಗೆ ಕ್ಷಿಪ್ರವಾಗಿ ಸ್ಪಂದಿಸಿದ ಸೆನ್ ಪೊಲೀಸರು, ದಿನಾಂಕ 22/12/2019ರಂದು ನಕಲಿ ಫೇಸ್ ಬುಕ್ ಖಾತೆ ಎಂದು ಆರೋಪಿಸಲಾದ “Harish Bangera” ಎಂಬ ಹೆಸರಿನ ಫೇಸ್ ಬುಕ್ ಖಾತೆಯ ರಿಜಿಸ್ಟ್ರೇಷನ್ ಮತ್ತು ಆಕ್ಸೆಸ್ ವಿವರಗಳನ್ನು ನೀಡುವಂತೆ ಹಾಗೂ ನಕಲಿ ಫೇಸ್ ಬುಕ್ ಖಾತೆಯನ್ನು ಡಿಲಿಟ್ ಮಾಡಲು ಫೇಸ್ಬುಕ್ ಕಂಪೆನಿಗೆ ಕೋರಿಕೆ ಪತ್ರವನ್ನು ಕಳುಹಿಸಿರುತ್ತಾರೆ. ಈ ವಿಷಯದ ಬಗ್ಗೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಛೇರಿಗೂ ಕೂಡಲೇ ಮಾಹಿತಿ ನೀಡಲಾಗುವುದು. ಮುಂದಿನ ಬೆಳವಣಿಗೆಯ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಉಡುಪಿ ಎಸ್ಪಿ ಕಚೇರಿಯ ಪತ್ರಿಕಾ ಪ್ರಕಟನೆ ತಿಳಿಸಿದೆ.

ಹರೀಶ್ ಬಂಗೇರ ಇಡೀ ಕುಟುಂಬ ಕಂಗಾಲಾಗಿದ್ದು ಸೋಮವಾರ ಬೆಳಿಗ್ಗೆ ಅವರ ನಿವಾಸಕ್ಕೆ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಗ್ರಾ.ಪಂ ಸದಸ್ಯ ಪ್ರಕಾಶ್ ಬೀಜಾಡಿ ಮೊದಲಾದವರು ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ.

ತನ್ನದಲ್ಲದ ತಪ್ಪಿಗೆ ಹರೀಶ್ ಬಂಧನ- ಶಂಕರ್ ಅಂಕದಕಟ್ಟೆ
ಹರೀಶ್ ಬಂಗೇರ ಅವರ ಫೇಕ್ ಅಕೌಂಟ್ ಮೂಲಕ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ. ತನ್ನದಲ್ಲದ ತಪ್ಪಿಗೆ ಹರೀಶ್ ಬಂಧನಕ್ಕೊಳಗಾಗಿದ್ದಾರೆ. ಈ ವಿಚಾರದಲ್ಲಿ ಹರೀಶ್ ಬಂಗೇರ ತಪ್ಪು ಮಾಡಿಲ್ಲ ಅವರನ್ನು ಶೀಘ್ರ ಬಿಡುಗಡೆ ಮಾಡಬೇಕು. ಹರೀಶ್ ಬಂಗೇರ ಬಂಧನದ ಬಗ್ಗೆ ಸಂಸದರ ಗಮನಕ್ಕೆ ತಂದಿದ್ದೇವೆ. ಸಂಸದರು ಕೆಲವು ದಾಖಲೆಗಳನ್ನು ಕಳುಹಿಸಲು ಹೇಳಿದ್ದಾರೆ. ವಿದೇಶಾಂಗ ಸಚಿವರ ಗಮನಕ್ಕೆ ತರುತ್ತೇವೆ. ಹರೀಶ್ ಬಂಧನದಲ್ಲಿ ಸ್ಥಳೀಯರ ಕೈವಾಡವಿರುವ ಶಂಕೆಯೂ ಇದೆ. ಸಮಗ್ರ ತನಿಖೆ ಬಳಿಕ ಎಲ್ಲವೂ ಬಯಲಾಗಲಿದೆ.
– ಶಂಕರ್ ಅಂಕದಕಟ್ಟೆ (ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ)

ಹರೀಶ್ ಬಂಗೇರ ಬಂಧನ ಖಂಡನೀಯ: ಅಶೋಕ್ ಪೂಜಾರಿ
ಅಮಾಯಕ ಹರೀಶ್ ಬಂಗೇರ ಬಂಧನ ನಿಜಕ್ಕೂ ಖಂಡನೀಯ. ಇವರ ಬಡ ಕುಟುಂಬ ಇದೀಗಾ ಕಂಗಾಲಾಗಿದೆ. ಸ್ಥಳೀಯ ಶಾಸಕರು, ಸಂಸದೆ, ವಿದೇಶಾಂಗ ಸಚಿವರ ಮದ್ಯ ಪ್ರವೇಶಿಸಬೇಕು. ಶೀಘ್ರವೇ ಹರೀಶ್ ಬಂಗೇರ ಬಿಡುಗಡೆಯಾಗಬೇಕು.
– ಅಶೋಕ್ ಪೂಜಾರಿ ಬೀಜಾಡಿ (ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸ್ಥಳೀಯ ನಿವಾಸಿ)

(ವರದಿ- ಯೋಗೀಶ್ ಕುಂಭಾಸಿ)

Comments are closed.