ರಾಷ್ಟ್ರೀಯ

ದೆಹಲಿಯಲ್ಲಿ ಕಟ್ಟಡದಲ್ಲಿ ಬೆಂಕಿ; ಮೂವರು ಮಕ್ಕಳು ಸೇರಿದಂತೆ 9 ಮಂದಿ ಸಾವು

Pinterest LinkedIn Tumblr

ನವದೆಹಲಿ: ದೆಹಲಿಯ ಹೊರವಲಯ ಕಿರಾರಿ ಎಂಬಲ್ಲಿ ಮೂರು ಮಹಡಿಯ ವಸತಿ ಮತ್ತು ವಾಣಿಜ್ಯ ಕಟ್ಟಡದಲ್ಲಿ ಬೃಹತ್ ಪ್ರಮಾಣದಲ್ಲಿ ಬೆಂಕಿ ಹತ್ತಿ ಉರಿದು ಮೂವರು ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.

ಕಳೆದ ಡಿಸೆಂಬರ್ 8ರಂದು ಉತ್ತರ ದೆಹಲಿಯ ಅನಜ್ ಮಂಡಿ ಪ್ರದೇಶದಲ್ಲಿ ಬ್ಯಾಗ್ ಮತ್ತು ಇತರ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದಲ್ಲಿ ಬೆಂಕಿ ಹತ್ತಿ ಉರಿದು 43 ಮಂದಿ ಮೃತಪಟ್ಟ ಘಟನೆ ನಂತರ ಕಳೆದ ಮಧ್ಯರಾತ್ರಿ ಮತ್ತೆ ದೆಹಲಿಯಲ್ಲಿ ಈ ಘಟನೆ ನಡೆದಿದೆ.

ಮಧ್ಯರಾತ್ರಿ 12.30ಕ್ಕೆ ಅಗ್ನಿಶಾಮಕ ಇಲಾಖೆಗೆ ಫೋನ್ ಕರೆ ಬಂದು 8 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ನಸುಕಿನ ಜಾವ 3.50ರ ಹೊತ್ತಿಗೆ ಬೆಂಕಿಯನ್ನು ಆರಿಸಿದವು, ಈ ಹೊತ್ತಿನಲ್ಲಿ ಕಾರ್ಮಿಕರು ನಿದ್ದೆ ಮಾಡುತ್ತಿದ್ದರು ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ಕಟ್ಟಡದ ಕೆಳ ಮಹಡಿಯಲ್ಲಿ ಬಟ್ಟೆ ಗೋದಾಮು ಇದ್ದು ಇನ್ನುಳಿದ ಮೂರು ಮಹಡಿಗಳು ವಸತಿ ಸ್ಥಳಗಳಾಗಿವೆ.

ಮೃತರನ್ನು ರಾಮ್ ಚಂದ್ರ ಝಾ(65ವ) ಸುಂದರಿಯಾ ದೇವಿ(58ವ), ಸುಂಜು ಜಾ(36ವ), ಉದಯ್ ಚೌಧರಿ(33ವ) ಮತ್ತು ಅವರ ಪತ್ನಿ ಮುಕ್ಸಾನ್(26ವ) ಮತ್ತು ಅವರ ಮಕ್ಕಳಾದ ಅಂಜಲಿ(10ವ), ಆದರ್ಶ್(7) ಮತ್ತು ತುಳಸಿ(6ತಿಂಗಳು) ಎಂದು ಗುರುತಿಸಲಾಗಿದೆ.

ಪೂಜಾ ಮತ್ತು ಅವರ ಮಕ್ಕಳಾದ ಆರಾಧ್ಯ ಮತ್ತು ಸೌಮ್ಯ ಎಂಬುವವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಎರಡನೇ ಮಹಡಿಯಲ್ಲಿ ಸಿಲಿಂಡರ್ ಸ್ಫೋಟವುಂಟಾಗಿ ಕಟ್ಟಡದ ಒಂದು ಭಾಗ ಹಾನಿಗೀಡಾಗಿದೆ ಎಂದು ಪೊಲೀಸರು ತಿಳಿಸಿದ್ದು ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಪೂಜಾ ಅವರ ಪತಿ ಕಟ್ಟಡ ಮಾಲೀಕ ಅಮರನಾಥ್ ಜಾ ಈ ಘಟನೆ ನಡೆಯುವ ಹೊತ್ತಿನಲ್ಲಿ ಹರಿದ್ವಾರದಲ್ಲಿದ್ದರು.

Comments are closed.