Kuwait

ಉಡುಪಿಯಿಂದ ಪಾರ್ಸೆಲ್ ಕೊಂಡುಹೋದಾತ ತನ್ನದಲ್ಲದ ತಪ್ಪಿಗೆ ಕುವೈಟ್ ಜೈಲುಪಾಲು

Pinterest LinkedIn Tumblr

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಪರಿಸರದ ಶಂಕರ ಪೂಜಾರಿ ಎಂಬ ವ್ಯಕ್ತಿ ತನ್ನ ಹೆಂಡತಿ ಮತ್ತು ಇಬ್ಬರು ಪುಟಾಣಿ ಮಕ್ಕಳೊಂದಿಗೆ ಜೀವನವನ್ನು ನಡೆಸುತ್ತಾ ,ಕಳೆದ ನಾಲ್ಕು ವರ್ಷಗಳಿಂದ ಕುವೈಟ್ ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸತತ ನಾಲ್ಕು ವರ್ಷಗಳ ಬಳಿಕ ಅಂದರೆ 3 ತಿಂಗಳ ಹಿಂದೆ ಕೇವಲ ಹತ್ತು ದಿನಗಳ ರಜೆಯಲ್ಲಿ ತನ್ನ ಊರಿಗೆ ಬಂದು ವಾಪಾಸ್ಸಾಗಿದ್ದೆ ಅವರ ಬದುಕಿನಲ್ಲಿ ಬರಸಿಡಿಲೆರಗುತ್ತದೆ.

ಊರಿಗೆ ಬಂದ ಶಂಕರ ಪೂಜಾರಿ ವಾಪಾಸು ಕುವೈಟಿಗೆ ಹೋಗಲು ರೆಡಿಯಾದಾಗ ತನ್ನ ಸಹೋದ್ಯೋಗಿ ಸಾದಿಕ್ ಎಂಬಾತನ ವಿನಂತಿಯ ಮೇರೆಗೆ ಉಡುಪಿ ದೊಡ್ಡಣಗುಡ್ಡೆ ನಿವಾಸಿ ಯಾದ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಚಾಲಕನಾಗಿ ಕೆಲಸ ಮಾಡುತ್ತಿರುವ ಮುಬಾರಕ್ ಮತ್ತು ಅವನ ಹೆಂಡತಿ ಬಂದು ಒಂದು ಪಾರ್ಸೆಲ್ ಇದೆ ಅದನ್ನು ತೆಗೆದುಕೊಂಡು ಹೋಗಿ ಕುವೈಟ್ ನಲ್ಲಿ ಕೆಲಸ ಮಾಡುತ್ತಿರುವ ನನ್ನ ಅತ್ತೆಯಾದ ತಸ್ಲೀಮ್ ಫಾತಿಮಾ ರವರಿಗೆ ಮುಟ್ಟಿಸಬೇಕೆಂದು ಕೇಳಿಕೊಳ್ಳುತ್ತಾನೆ. ಅದು ಯಾವ ಮಾತ್ರೆ?, ಎಷ್ಟು ಪ್ರಮಾಣದಲ್ಲಿವೆ? ಎಂಬುದನ್ನು ನೋಡುವ ಗೋಜಿಗೆ ಶಂಕರ್ ಪೂಜಾರಿ ಹೋಗಿರಲಿಲ್ಲ. ಮುಬಾರಕ್ ಹೇಗೆ ಕೊಟ್ಟಿದ್ದರೂ ಹಾಗೇ ಪಾರ್ಸೆಲ್‌ಅನ್ನು ಕುವೈಟ್ ಗೆ ತೆಗೆದುಕೊಂಡು ಹೋಗಿದ್ದಾರೆ. ಕುವೈಟ್ ವಿಮಾನ ನಿಲ್ದಾಣದಲ್ಲಿ ಶಂಕರ ಪೂಜಾರಿಯವರ ವಸ್ತುಗಳನ್ನು ಪರಿಶೀಲಿಸಿದ ಅಧಿಕಾರಿಗಳು ಮಾತ್ರೆ ತಂದಿರುವುದನ್ನು ಗಮನಿಸಿದ್ದಾರೆ. ಶಂಕರ ಪೂಜಾರಿಯವರು ನೀಡಿದ ವಿವರಣೆ ಅಲ್ಲಿನ ಪೊಲೀಸರಿಗೆ ವಿಶ್ವಾಸ ಮೂಡಿಸದ ಕಾರಣ ಮತ್ತು ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿನ ಕಾನೂನಿನ ಪ್ರಕಾರ ಬಂಧಿಸಲಾಗಿದೆ. ಶಂಕರ್ ಪೂಜಾರಿಯವರು ತಂದಿದ್ದ ಮಾತ್ರೆಗಳು ಮುಬಾರಕ್ ಅತ್ತೆ ತಸ್ಲೀಂ ಫಾತಿಮಾಗೆ ಸೇರಿದ್ದು. ಆದರೆ, ಶಂಕರ್ ಪೂಜಾರಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರಿಂದ ಬೆದರಿದ ತಸ್ಲೀಂ ಫಾತಿಮಾ ಏರ್ ಪೋರ್ಟ್ ಅಧಿಕಾರಿಗಳನ್ನು ಸಂಪರ್ಕಿಸಲು ಮುಂದಾಗಿಲ್ಲ. ಇದರಿಂದ ಶಂಕರ್ ಪೂಜಾರಿ ಜೈಲುಪಾಲಾಗಬೇಕಗಿಬಂತು.

(ಶಂಕರ ಪೂಜಾರಿಯವರ ಪತ್ನಿ ಜ್ಯೋತಿ)

ತಸ್ಲೀಂ ಫಾತಿಮಾ ಪೊಲೀಸರ ಎದುರು ಹಾಜರಾಗಿ ಈ ಮಾತ್ರೆಗಳನ್ನು ತನಗೆ ನೀಡಲಿಕ್ಕೆಂದು ತಂದಿದ್ದು ಎಂಬ ಹೇಳಿಕೆ ದಾಖಲಿಸಿದರೆ ಮಾತ್ರ ಶಂಕರ ಪೂಜಾರಿಯವರನ್ನು ಜೈಲಿನಿಂದ ಬಿಡುಗೊಡೆಗೊಳಿಸುವ ಬಗ್ಗೆ ಪರಿಶೀಲಿಸಬಹುದು ಎಂದು ಕುವೈಟ್ ಪೊಲೀಸರು ಹೇಳಿದ್ದಾರೆನ್ನಲಾಗಿದೆ. ಈ ಬಗ್ಗೆ ಶಂಕರ ಪೂಜಾರಿಯವರ ಹೆಂಡತಿಯಾದ ಜ್ಯೋತಿ ರವರು ಮುಬಾರಕ್ ರವರನ್ನು ಸಂಪರ್ಕಿಸಿ ನನ್ನ ಗಂಡನನ್ನು ಜೈಲಿನಿಂದ ಬಿಡಿಸಿ ತನ್ನಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಮುಬಾರಕ್ ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ವರ್ತಿಸಿದ್ದಾರಂತೆ.

ಶಂಕರ ಪೂಜಾರಿಯವರ ಪತ್ನಿ ಜ್ಯೋತಿ ತನ್ನ ಪತಿಯನ್ನು ಕುವೈಟ್ ಜೈಲಿನಿಂದ ಬಿಡಿಸುವಂತೆ ಸಂಘಟನೆಗಳ ಮೊರೆ ಹೋಗಿದ್ದಾರೆ. ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಮೊದಲಾದವರನ್ನೂ ಸಂಪರ್ಕಿಸಿದ್ದಾರೆ. ಕುವೈಟ್ ನಲ್ಲಿರುವ ಕನ್ನಡಿಗರು ಶಂಕರ ಪೂಜಾರಿಯವರನ್ನು ಜೈಲಿನಿಂದ ಬಿಡಿಸಲು ಪ್ರಯತ್ನಿಸಿದ್ದರೂ ಈ ಪ್ರಕರಣದ ಗಂಭೀರತೆಯಿಂದ ಅವರನ್ನು ಬಿಡಿಸಲು ಸಾಧ್ಯವಾಗಿಲ್ಲ.

Comments are closed.