Entertainment

ಅಪ್ಪು ಅಭಿನಯದ ‘ಜೇಮ್ಸ್‌’ ಸಿನಿಮಾ ಟೀಸರ್‌ ಬಿಡುಗಡೆ: ಮಾ.17ಕ್ಕೆ ಸಿನಿಮಾ ತೆರೆಗೆ | ಅಭಿಮಾನಿಗಳಲ್ಲಿ ಸಡಗರ

Pinterest LinkedIn Tumblr

ಬೆಂಗಳೂರು: ಕೆಲ ತಿಂಗಳ ಹಿಂದೆ ವಿಧಿವಶರಾದ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ ‘ಜೇಮ್ಸ್‌’ನ ಟೀಸರ್‌ ಬಿಡುಗಡೆಯಾಗಿದ್ದು ಅಪ್ಪು ಆ್ಯಕ್ಷನ್ ದೃಶ್ಯಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚೇತನ್‌ ಕುಮಾರ್‌ ನಿರ್ದೇಶನದ ಬಹುನಿರೀಕ್ಷಿತ ಜೇಮ್ಸ್ ಸಿನಿಮಾ ಪುನೀತ್‌ ರಾಜಕುಮಾರ್‌ ಜನ್ಮದಿನದಂದೇ (ಮಾ.17) ತೆರೆಕಾಣಲಿದೆ. ಈ ಕುರಿತು ಅಧಿಕೃತವಾಗಿ ಟೀಸರ್‌ನಲ್ಲೇ ಚಿತ್ರತಂಡವು ಘೋಷಿಸಿದೆ.

‘ಉದ್ಯಮಕ್ಕಿಂತ ಭಾವನೆಗಳಿಗೇ ಹೆಚ್ಚಿನ ಪ್ರಾಶಸ್ತ್ಯ–ಜೇಮ್ಸ್‌’ ಎನ್ನುವ ಬರಹದೊಂದಿಗೆ ಟೀಸರ್‌ ಆರಂಭವಾಗಿದೆ. ಮಾಫಿಯಾ ಕಥೆಯನ್ನು ಚಿತ್ರವು ಹೊಂದಿರುವುದು ಟೀಸರ್ ಮೂಲಕ ಕಂಡುಬರುತ್ತಿದೆ. ಜೆ–ವಿಂಗ್‌ ಎಂಬ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾತ್ರದಲ್ಲಿ ಪವರ್‌ಸ್ಟಾರ್‌ ಪುನೀತ್‌ ಅವರು ಪವರ್‌ಫುಲ್‌ ಆಗಿ ಕಾಣಿಸಿಕೊಂಡಿದ್ದು, ಟೀಸರ್‌ನಲ್ಲಿ ಆ್ಯಕ್ಷನ್‌ ದೃಶ್ಯಗಳೇ ತುಂಬಿವೆ. ಚಿತ್ರದ ಡಬ್ಬಿಂಗ್‌ ಪೂರ್ಣಗೊಳ್ಳುವ ಮೊದಲೇ ಪುನೀತ್‌ ಅವರು ನಿಧನರಾದ ಕಾರಣ, ಪುನೀತ್‌ ಅವರ ಪಾತ್ರಕ್ಕೆ ನಟ ಶಿವರಾಜ್‌ಕುಮಾರ್‌ ಅವರು ಧ್ವನಿ ನೀಡಿದ್ದಾರೆ. ಟೀಸರ್‌ ಕೊನೆಯಲ್ಲಿ ‘ನನಗೆ ಮೊದಲಿನಿಂದಲೂ ರೆಕಾರ್ಡ್‌ ಬ್ರೇಕ್‌ ಮಾಡಿ ಅಭ್ಯಾಸ’ ಎನ್ನುವ ಧ್ವನಿಯು ಶಿವರಾಜ್‌ಕುಮಾರ್‌ ಅವರದ್ದಾಗಿದೆ.

ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿ ಚಿತ್ರವು ತೆರೆಕಾಣಲಿದೆ. ಜೇಮ್ಸ್‌ ಚಿತ್ರದ ಬಿಡುಗಡೆಗಾಗಿ ಪ್ರೇಕ್ಷಕರು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರನ್ನು ‘ಜೇಮ್ಸ್‌’ ಸಿನೆಮಾದಲ್ಲಿ ಅಭಿಮಾನಿಗಳು ಕಾಣಬಹುದು.

 

Comments are closed.