ದೇವರು ಹಾಗೂ ದೇವಮಾನವರ ಬಗ್ಗೆ ಜನರು ಹೊಂದಿರುವ ಅಂಧಶ್ರದ್ಧೆಯ ಕುರಿತ ‘ಒಎಂಜಿ: ಓ ಮೈ ಗಾಡ್!’ ಚಿತ್ರದ ಬಳಿಕ ಪರೇಶ್ ರಾವಲ್ ಅವರು ಅಂಥದ್ದೇ ಕಥಾವಸ್ತು ಇರುವ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಚಿತ್ರದ ಹೆಸರು ‘ಧರಮ್ ಸಂಕಟ್ ಮೇ’. ಕೇವಲ ಧರ್ಮಕ್ಕಾಗಿ ವ್ಯಕ್ತಿಯೊಬ್ಬ ತನ್ನನ್ನು ತಾನು ಗುರುತಿಸಿಕೊಳ್ಳಲು ಪಡುವ ಪಡಿಪಾಟಲು ಚಿತ್ರದ ಕಥಾಹಂದರ.
‘ನಾನು ಯಾರೊಬ್ಬರಿಗೂ ಬೋಧಿಸಲು ಇಲ್ಲಿಗೆ ಬಂದಿಲ್ಲ. ನಾವು ಅತ್ಯುತ್ತಮವಾದ ಚಿತ್ರ ಮಾಡಲು ಬಂದಿದ್ದೇವೆ. ಇತರ ಚಿತ್ರಗಳಿಗೆ ಹೋಲಿಸಿದರೆ ಈ ಚಿತ್ರ ತುಂಬಾ ಭಿನ್ನವಾಗಿದೆ. ಈ ತರಹದ ಕಥೆ ಇರುವ ಹೆಚ್ಚೆಚ್ಚು ಚಿತ್ರಗಳನ್ನು ಮಾಡುವ ಬಯಕೆ ಇದೆ’ ಎಂದು, ಈ ಚಿತ್ರದಿಂದ ಸಮಾಜದಲ್ಲಿ ಯಾವ ರೀತಿಯ ಬದಲಾವಣೆ ಕಾಣಬಹುದು ಎಂಬ ಪ್ರಶ್ನೆಗೆ ನಟ ಪರೇಶ್ ರಾವಲ್ ಉತ್ತರಿಸಿದರು. ‘ನಮ್ಮ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದಾಗಿಲ್ಲ. ನಿರ್ದಿಷ್ಟವಾದ ಚೌಕಟ್ಟಿನೊಳಗೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದೇವೆ’ ಎಂದು ಈ ಹಿರಿಯ ನಟ ತನ್ನ ಮಾತಿಗೆ ಇನ್ನಷ್ಟು ವಿವರಣೆ ಸೇರಿಸಿದರು.
‘ಧರಮ್ ಸಂಕಟ್ ಮೇ’ ಚಿತ್ರ ಧರ್ಮಪಾಲ್ (ಪರೇಶ್ ರಾವಲ್) ಎಂಬ ವ್ಯಕ್ತಿಯ ಸುತ್ತ ಗಿರಕಿ ಹೊಡೆಯುತ್ತದೆ. ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ತನ್ನನ್ನು ಹಿಂದೂ ಧರ್ಮದ ಕುಟುಂಬವೊಂದು ದತ್ತು ಪಡೆದು ಬೆಳೆಸಿದ ವಿಷಯ ಧರ್ಮಪಾಲ್‌ಗೆ ಗೊತ್ತಾಗುತ್ತದೆ. ಇದರಿಂದ ಆತನಿಗೆ ತಾನೂ ಯಾವ ಧರ್ಮೀಯನೆಂದು ಗುರುತಿಸಿಕೊಳ್ಳಬೇಕು ಎಂಬ ಧರ್ಮಸಂಕಟ ಶುರುವಾಗುತ್ತದೆ. ಈ ಪ್ರಧಾನ ಅಂಶದಿಂದ ಸಮಾಜದಲ್ಲಿನ ಹಲವು ಮುಖಗಳು ಅನಾವರಣಗೊಳ್ಳುತ್ತವೆ.
ಫುವದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಪರೇಶ್ ರಾವಲ್ ಜೊತೆಗೆ ನಾಸಿರುದ್ದೀನ್ ಷಾ, ಅನ್ನು ಕಪೂರ್ ಕೂಡ ನಟಿಸಿದ್ದಾರೆ. ಚಿತ್ರ ಏಪ್ರಿಲ್ 10ರಂದು ತೆರೆಕಾಣಲಿದೆ. ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಸದಾ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗುತ್ತಿವೆ. ಆದರೆ, ಪರೇಶ್ ಹೇಳುವುದೇ ಬೇರೆ. ‘‘ಕೆಲ ನಿರ್ದಿಷ್ಟ ಮಾಧ್ಯಮಗಳಿಗೆ ವಿವಾದ ಸೃಷ್ಟಿಸುವುದರಲ್ಲೇ ಹೆಚ್ಚಿನ ಆಸಕ್ತಿ ಇದ್ದಂತಿದೆ. ನಾವು ಯಾರೊಂದಿಗೂ ಸಂಘರ್ಷಕ್ಕಿಳಿಯುವುದಿಲ್ಲ.
ನಮ್ಮ ಉದ್ದೇಶ ಕೇವಲ ಅತ್ಯುತ್ತಮವಾದ ಚಿತ್ರ ಮಾಡುವುದು. ‘ಒಎಂಜಿ’ ಕೂಡ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಆ ಚಿತ್ರವನ್ನು ಪ್ರತಿಯೊಬ್ಬರು ನೋಡಿದ್ದರು. ಅವರು ವೀಕ್ಷಕರಲ್ಲವೇ. ನಿಜ ಹೇಳಬೇಕೆಂದರೆ ಜನ ಕೂಡ ಬದಲಾವಣೆ ಬಯಸಿದ್ದಾರೆ’’ ಎಂದು ಮಾರ್ಮಿಕವಾಗಿ ಹೇಳಿದರು.
