ಮುಂಬೈ: ಆಸ್ಟ್ರೇಲಿಯಾ ವಿರುದ್ದದ ವಿಶ್ವ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿರುದ್ದ ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗಳ ಸುರಿಮಳೆಯಾಗುತ್ತಿದ್ದರೆ ಬಾಲಿವುಡ್ ಮಂದಿ ಮಾತ್ರ ಅನುಷ್ಕಾ ಬೆಂಬಲಕ್ಕೆ ಒಂದಾಗಿ ನಿಂತಿದ್ದಾರೆ.
ಪ್ರಿಯಾಂಕಾ ಛೋಪ್ರಾ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್, ರಿಷಿ ಕಪೂರ್, ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ಖ್ಯಾತನಾಮರು ಅನುಷ್ಕಾ ಶರ್ಮಾ ಪರ ಟ್ವೀಟ್ ಮಾಡಿದ್ದು, ಕ್ರಿಕೆಟ್ ಅಭಿಮಾನಿಗಳ ಅತಿರೇಕದ ವರ್ತನೆಗೆ ಕೆಂಡ ಕಾರಿದ್ದಾರೆ. ಅಲ್ಲದೇ ಆಟ ನೋಡಲು ಅನುಷ್ಕಾ ಶರ್ಮಾ ಸಿಡ್ನಿಗೆ ಹೋಗಿದ್ದೇ ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಈ ಮಧ್ಯೆ ಭಾರತಕ್ಕೆ ಬಂದಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾರಿಗೂ ಪ್ರತಿಕ್ರಿಯೆ ನೀಡದೆ ಮೌನವಾಗಿ ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ಬಾಲಿವುಡ್ ಮಂದಿ ಮಾತ್ರವಲ್ಲದೇ ಕೆಲ ಅಭಿಮಾನಿಗಳೂ ಅನುಷ್ಕಾ ಪರ ನಿಂತಿದ್ದು, ವಿರಾಟ್ ಬ್ಯಾಟಿಂಗ್ ವೈಫಲ್ಯಕ್ಕೆ ಅನುಷ್ಕಾ ಕಾರಣವೆಂದು ದೂರುವುದಾದರೆ ಒಂದೊಮ್ಮೆ ಅನುಷ್ಕಾ ಚಿತ್ರ ಸೋತರೆ ಯಾರನ್ನು ಹೊಣೆಯನ್ನಾಗಿಸುತ್ತೀರಿ ಎಂದು ಕೇಳಿದ್ದಾರೆ.