ಇಂಟರ್ನೆಟ್ನಿಂದ ನಾನಾ ರೀತಿಯಲ್ಲಿ ಲಾಭಗಳಿವೆ. ಅದು ಈ ಪ್ರಪಂಚವನ್ನೇ ಬದಲಾಯಿಸಿದ ಶಕ್ತಿ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಇಂಟರ್ನೆಟ್ ಇಲ್ಲದೇ ನಾವು, ನಮ್ಮ ದೇಶ ಬೆಳೆಯಲು ಸಾಧ್ಯವಿಲ್ಲ. ಆದರೆ, ತರಕಾರಿ ಹೆಚ್ಚಲು ಕಂಡು ಹಿಡಿದ ಚಾಕು ಕೊಲೆ ಮಾಡಲು ಬಳಕೆಯಾಗುತ್ತಿದೆ. ಇದು ಚಾಕುವನ್ನು ಕಂಡು ಹಿಡಿದವರ ತಪ್ಪಲ್ಲ. ಅದನ್ನು ಯಾವ ರೀತಿ ಬಳಸಿಕೊಳ್ಳಬೇಕೆಂದು ಅರಿಯದೇ ಅನಾಚಾರವೆಸಗುತ್ತಿರುವವರ ತಪ್ಪು. ಹೀಗೆ ಇಂಟರ್ನೆಟ್ ಕೂಡ. ಮಾಹಿತಿಗಳೊಂದಿಗೆ ಅಪಾಯಗಳನ್ನೂ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ.
ಇಂಟರ್ನೆಟ್ ಮೂಲಕ ಪರಿಚಯವಾಗುವ ಸೋಗುಧಾರಿಗಳು, ಮಕ್ಕಳು ಹಾಗೂ ಯುವತಿಯರನ್ನು ಅಪಹರಣ ಮಾಡಿ ಹಣಕ್ಕಾಗಿ ತಂದೆ ತಾಯಿಯರನ್ನು ಪೀಡಿಸಿದ ಅನೇಕ ಉದಾಹರಣೆಗಳಿವೆ. ಮನೆಯ ವಿಳಾಸ, ಮನೆಯಲ್ಲಿ ಇರುವ ವ್ಯಕ್ತಿಗಳ ಸಂಖ್ಯೆ, ಯಾವಾಗ ಮನೆಯಲ್ಲಿ ವ್ಯಕ್ತಿಗಳಿರುವುದಿಲ್ಲ ಎಂಬುದನ್ನೆಲ್ಲಾ ತಿಳಿದು ಮನೆಯನ್ನು ಕಳವು ಮಾಡಿರುವ ಘಟನೆಗಳೂ ನಡೆದಿವೆ. ನೆಟ್ ಮೂಲಕ ಪರಿಚಯವಾದ ಸ್ನೇಹದೊಂದಿಗೆ ಮನೆ ಪ್ರವೇಶಿಸುವ ಕ್ರಿಮಿನಲ್ಗಳು ಕೊಲೆ ಮಾಡಿರುವ ಘಟನೆಗಳೂ ಜರುಗಿವೆ.
ಇನ್ನೊಂದು ದೊಡ್ಡ ಸಮಸ್ಯೆ ಏನೆಂದರೆ ಸೋಷಿಯಲ್ ನೆಟ್ವರ್ಕ್ಲ್ಲಿ ನಿಮ್ಮ ಸ್ನೇಹ ಬೆಳೆಸಿ, ನಿಮ್ಮ ಕೆಲವು ವೈಯಕ್ತಿಕ ಮಾಹಿತಿ ಪಡೆದು ದುರುಪಯೋಗ ಮಾಡಿಕೊಳ್ಳಬಹುದು. ಅಥವಾ, ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಆದ್ದರಿಂದ, ಇಂಟರ್ನೆಟ್ ನಲ್ಲಿ, ಸೋಷಿಯಲ್ ಸೈಟಿನಲ್ಲಿ ಸೂಕ್ಷ್ಮವೆನಿಸುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದೂ ಬಹಿರಂಗ ಪಡಿಸಬೇಡಿ. ಸೋಷಿ ಯಲ್ ನೆಟ್ವರ್ಕ್ ಅಂದರೆ. ಸುಖದ ಹೊಳೆ, ಸಂತೋಷದ ಮಳೆ ಅಂದುಕೊಳ್ಳುವ ಹಾಗಿಲ್ಲ. ಇಲ್ಲಿನ ಅಪಾಯಗಳಿಂದ ಜಾಗರೂಕರಾಗಿರಿ. ಕೆಲವು ದೂರ್ತರು ನಿಮ್ಮ ಮಾನ ಹರಾಜು ಹಾಕಲು ಅಥವಾ ನಿಮಗೆ ಅವಮಾನ ಮಾಡಲು ಸೋಷಿಯಲ್ ನೆಟ್ವರ್ಕ್ಗಳನ್ನು ಬಳಸಿಕೊಳ್ಳಬಹುದು.
ನಿಮ್ಮ ಹೆಸರಿನಲ್ಲಿ ಸುಳ್ಳು ಖಾತೆ ತೆರೆದು, ಕೃತಕವಾಗಿ ಸೃಷ್ಟಿಸಿದ ನಿಮ್ಮ ನಗ್ನ ಚಿತ್ರಗಳನ್ನು ಅಥವಾ ಲೈಂಗಿಕ ಕ್ರಿಯೆಯ ಚಿತ್ರಗಳನ್ನು ನೆಟ್ವರ್ಕಿನಲ್ಲಿ ಪ್ರದರ್ಶಿಸಬಹುದು. ನಿಮ್ಮ ಬಗ್ಗೆ ಅವಾಚ್ಯ ಬೈಗುಳಗಳನ್ನೋ ಅಥವಾ ಅವಮಾನ ಮಾಡುವ ಬರಹಗಳನ್ನೋ ಹಾಕಬಹುದು. ಕೆಲವೊಮ್ಮೆ ಈ ವಿಷಯದಲ್ಲಿ ಬ್ಲಾಕ್ಮೇಲ್ ಮಾಡುವ ಸಂಭವವೂ ಇದೆ. ನಿಮ್ಮ ಮೊಬೈಲ್ ಫೋನ್ ನಂಬರ್ ಬಹಿರಂಗಪಡಿಸುವುದು, ಫೋನು ಮಾಡುವಂತೆ ಇತರರನ್ನು ಆಹ್ವಾನಿಸುವುದು? ಮುಂತಾದ ಕಿಡಿಗೇಡಿ ಕೆಲಸಗಳನ್ನು ಮಾಡಬಹುದು. ಮಾಹಿತಿಗಳ ಸಮುದ್ರವಾಗಿರುವ ಇನ್ಟರ್ನೆಟ್ನ್ನು ಉಪಯುಕ್ತ ಮಾಹಿತಿಗಾಗಿ ಮಾತ್ರ ಉಪಯೋಗಿಸಿ, ಅದರಲ್ಲಿ ಮಾದಕತೆ ಹುಡುಕುತ ಹೊರಟರೆ. ಒಂದಲ್ಲ ಒಂದು ದಿನ ನೀವೇ ಮಾಯವಾಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ನಿಮ್ಮನ್ನು ಎಚ್ಚರಿಸಲು ಇದಕ್ಕಿಂತ ಹೆಚ್ಚು ಏನನ್ನೂ ಹೇಳಲಾಗುವುದಿಲ್ಲ. ಈ ಇಂಟರ್ನೆಟ್ ಎನ್ನುವ ಬಲೆಯೊಳಗೆ ಸಿಲುಕಿಕೊಳ್ಳುವ ಮುನ್ನ Be carefull