ಕರ್ನಾಟಕ

ಚಿನ್ನಾಭರಣ ಕಳವು ಪ್ರಕರಣ: ಮೊಬೈಲ್‌ ‘ಸೆಲ್ಫಿ’ಯಿಂದ ಸಿಕ್ಕಿಬಿದ್ದ ಒಡವೆ ಕಳ್ಳಿ!

Pinterest LinkedIn Tumblr

nandini

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ 250 ಗ್ರಾಂ ಚಿನ್ನಾಭರಣ ದೋಚಿದ್ದ ನಂದಿನಿ ಅಲಿಯಾಸ್ ರಂಜಿತಾ (22), ಆ ಒಡವೆ ಧರಿಸಿ ಮೊಬೈಲ್‌ನಲ್ಲಿ ತೆಗೆದುಕೊಂಡ ‘ಸೆಲ್ಫಿ’ಯಿಂದ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

‘ರಾಮನಗರ ಜಿಲ್ಲೆ ಅಕ್ಕೂರು ಗ್ರಾಮದ ನಂದಿನಿ, ತೂಬರಹಳ್ಳಿಯ ಯುಕೆಎನ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಮುಕುಂದ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಬಂಧಿತಳಿಂದ ರೂ.6 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಮತ್ತು 300 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ಮುಕುಂದ ಹಾಗೂ ಅವರ ಪತ್ನಿ ಸಾಫ್ಟ್‌ವೇರ್‌ ಉದ್ಯೋಗಿಗಳು. ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಹೋದರೆ, ಸಂಜೆ ಆರು ಗಂಟೆಗೆ ಮರಳುತ್ತಾರೆ. ಹೀಗಾಗಿ ಸ್ವಚ್ಛತಾ ಕೆಲಸದ ಜತೆಗೆ, ಮನೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ನಂದಿನಿಯದಾಗಿತ್ತು.

‘ಹಬ್ಬ–ಹರಿದಿನ ಹಾಗೂ ಸಮಾರಂಭಗಳಿಗೆ ಧರಿಸಲೆಂದು 400 ಗ್ರಾಂ ಒಡವೆಗಳನ್ನು ಮಾತ್ರ ಮನೆಯಲ್ಲಿಟ್ಟದ್ದ ದಂಪತಿ, ಉಳಿದ ಒಡವೆಗಳನ್ನು ಬ್ಯಾಂಕ್‌ ಲಾಕರ್‌ನಲ್ಲಿ ಇರಿಸಿದ್ದರು.

ಮನೆಯೊಡತಿ ಅಲ್ಮೇರಾದ ಮೇಲೆಯೇ ಕೀ ಇಡುವುದನ್ನು ಗಮನಿಸಿದ್ದ ನಂದಿನಿ, ಮಾಲೀಕರು ಕೆಲಸಕ್ಕೆ ಹೋದ ನಂತರ ಆ ಕೀ ಬಳಸಿ ಒಂದೊಂದೇ ಒಡವೆ ಕಳವು ಮಾಡುತ್ತಿದ್ದಳು. ನಂತರ ವಾರಾಂತ್ಯದಲ್ಲಿ ಊರಿಗೆ ಹೋಗಿ ಅವುಗಳನ್ನು ಮನೆಯಲ್ಲಿ ಇಟ್ಟು ಬರುತ್ತಿದ್ದಳು.

‘ಗಣೇಶ ಹಬ್ಬದ ದಿನ ಆಭರಣ ಧರಿಸಲು ಮುಕುಂದ ಅವರ ಪತ್ನಿ ಅಲ್ಮೆರಾ ತೆಗೆದಾಗ ಕೆಲ ಒಡವೆಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಅವರು ನಂದಿನಿಯನ್ನು ವಿಚಾರಿಸಿದಾಗ ತನಗೇನೂ ಗೊತ್ತಿಲ್ಲ ಎಂದಿದ್ದಳು. ನಂತರ ದಂಪತಿ ವರ್ತೂರು ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದರು.

‘ಗುರುತಿನ ಚೀಟಿ ಇದ್ದವರಿಗೆ ಮಾತ್ರ ಅಪಾರ್ಟ್‌ಮೆಂಟ್‌ ಪ್ರವೇಶಕ್ಕೆ ಅವಕಾಶ ಇದ್ದುದರಿಂದ, ಮನೆಗೆಲಸದಾಕೆ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಅನುಮಾನವಿತ್ತು. ಒಬ್ಬೊಬ್ಬರನ್ನೇ ವಿಚಾರಣೆಗೆ ಒಳಪಡಿಸಿದಾಗ ನಂದಿನಿಯ ವರ್ತನೆ ಅನುಮಾನಕ್ಕೆ ಕಾರಣವಾಯಿತು. ಮೊಬೈಲ್ ಕಿತ್ತುಕೊಳ್ಳುತ್ತಿದ್ದಂತೆಯೇ ಆಕೆ ಕೂಗಾಡಲು ಆರಂಭಿಸಿದಳು. ಆಗ ಅದರಲ್ಲಿ ಏನೋ ಸುಳಿವು ಇದೆ ಎಂಬುದು ಖಚಿತವಾಯಿತು’ ಎಂದು ಮಾಹಿತಿ ನೀಡಿದರು.

ಫೋಟೊ ತಂದ ಯಡವಟ್ಟು
ಪ್ರತಿ ಸಲ ಆಭರಣ ಕದ್ದಾಗಲೂ ನಂದಿನಿ ಅವುಗಳನ್ನು ಧರಿಸಿ ಮೊಬೈಲ್‌ನಲ್ಲಿ ‘ಸೆಲ್ಫಿ’ ತೆಗೆದುಕೊಂಡಿದ್ದಳು. ಮೊಬೈಲನ್ನು ಜಪ್ತಿ ಮಾಡಿ ಫೋಟೊಗಳನ್ನು ನೋಡಿದಾಗ ಆಕೆಯ ಕದ್ದ ಒಡವೆಗಳು ಪತ್ತೆಯಾದವು. ಅವುಗಳನ್ನು ಫಿರ್ಯಾದಿ ದಂಪತಿ ಗುರುತಿಸಿದರು. ನಂತರ ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಳು ಎಂದು ವರ್ತೂರು ಪೊಲೀಸರು ತಿಳಿಸಿದರು.

ಮಣಪ್ಪುರಂನಲ್ಲಿ ಅಡಮಾನ
‘ಕದ್ದ ಒಡವೆಗಳನ್ನು ಮಣಪ್ಪುರಂನ ಕೆಂಗೇರಿ ಉಪನಗರ, ಕಾಮಾಕ್ಷಿಪಾಳ್ಯ ಮತ್ತು ಮಹಾಲಕ್ಷ್ಮೀ ಲೇಔಟ್‌ ಶಾಖೆಗಳಲ್ಲಿ ಅಡವಿಟ್ಟಿದ್ದಳು. ಒಡವೆ ತನ್ನದೆಂಬಂತೆ ನಟಿಸುತ್ತಿದ್ದ ನಂದಿನಿ, ತುರ್ತು ಹಣದ ಅಗತ್ಯವಿದೆ ಎಂದು ಹೇಳಿ ಪರಿಚಿತರು ಹಾಗೂ ಸ್ನೇಹಿತರ ಮೂಲಕ ಗಿರವಿ ಇಡಿಸಿದ್ದಳು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪತಿ ಕೆಲಸ ಬಿಟ್ಟಿದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿತ್ತು. ಅಷ್ಟೂ ಒಡವೆಗಳನ್ನು ಒಟ್ಟಿಗೇ ದೋಚಿದರೆ ಅನುಮಾನ ಬರಬಹುದೆಂದು ಒಂದೊಂದೇ ತೆಗೆದುಕೊಳ್ಳುತ್ತಿದ್ದೆ.
ನಂದಿನಿ

Write A Comment