ಕರಾವಳಿ

ಫವರ್ ಲಿಫ್ಟರ್ ವಿಶ್ವನಾಥ್ ಗಾಣಿಗರಿಗೆ ಕೆ. ಜಯಪ್ರಕಾಶ್ ಹೆಗ್ಡೆ ಕೊಟ್ಟ ಭರವಸೆಯೇನು?(Video)

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನನ್ನು ಪಡೆದು ಸಾಧನೆ ಮಾಡಿದ ಕುಂದಾಪುರದ ದೇವಲ್ಕುಂದ ಗ್ರಾಮದ ವಿಶ್ವನಾಥ ಭಾಸ್ಕರ ಗಾಣಿಗ ಬಾಳಿಕೆರೆ ಅವರ ನಿವಾಸಕ್ಕೆ ಬುಧವಾರ ಬೆಳಿಗ್ಗೆ ಮಾಜಿ ಸಚಿವ, ಬಿಜೆಪಿ ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ ಶುಭ ಹಾರೈಸಿದರು.

ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಕೆ. ಜಯಪ್ರಕಾಶ್ ಹೆಗ್ಡೆ, ವಿಶ್ವನಾಥ್ ಭಾಸ್ಕರ್ ಗಾಣಿಗ ಅವರ ಸಾಧನೆ ಯುವಕರೆಲ್ಲರಿಗೆ ಸ್ಪೂರ್ತಿ. ಶಿಕ್ಷಣದ ಜೊತೆ ಕ್ರೀಡೆ ಕಲೆಗೂ ಸಹಕಾರ ನೀಡಬೇಕು. ಒಲಂಪಿಕ್ ಅಲ್ಲದ ಕ್ರೀಡೆಗಳಿಗೆ ಸರಕಾರ ಪ್ರೋತ್ಸಾಹ ಧನ ನೀಡುವುದು ಇತ್ತೀಚೆಗೆ ನಿಲ್ಲಿಸಿದ್ದು ಈ ಹೊಸ ಬದಲಾವಣೆ ಮೊದಲೇ ಇವರು ಸಾಧನೆಯನ್ನು ಮಾಡಿದ್ದರಿಂದ ಸರಕಾರ ನೀಡಬೇಕಾದ ಸಹಾಯಧನ ನೀಡಬೇಕು. ಈ ಬಾರಿಯ ಸಾಧನೆಗೂ ಕೂಡ ಸರಕಾರ ಸಹಕಾರ ನೀಡುವ ಮತ್ತು ಈ ಹಿಂದಿನ ನಿಯಮವನ್ನೇ ಜಾರಿಗೊಳಿಸುವ ಬಗ್ಗೆ ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪ ಬಳಿ ಮಾತನಾಡುತ್ತೇನೆ. ಈ ಹಿಂದೆಯೂ ಕ್ರೀಡಾ ಪಟುಗಳಿಗೆ ಉದ್ಯೋಗ ನೀಡುವ ವ್ಯವಸ್ಥೆಯಿದ್ದು ಅದರಬಗ್ಗೆಯೂ ಪ್ರಯತ್ನ ಮಾಡಲಾಗುತ್ತದೆ. ಇನ್ನು ಜಿಲ್ಲಾಡಳಿತ ಪ್ರತಿಭೆಯನ್ನು ಗುರುತಿಸಿಲ್ಲ ಎನ್ನುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾಧಿಕಾರಿಗಳ ಬಳಿ ಈ ಬಗ್ಗೆ ಮಾತನಾಡಲಿದ್ದು ರಾಜ್ಯೋತ್ಸವ ಪ್ರಶಸ್ತಿಗಳು ನೀಡುವಾಗ ಕ್ರೀಡಾ ಸಾಧಕರನ್ನು ಗುರುತಿಸಲು ತಿಳಿಸಲಾಗುತ್ತದೆ ಎಂದರು.

ಒಲಂಪಿಕ್ ಅಲ್ಲದ ಕ್ರೀಡೆಗಳಿಗೂ ಸರಕಾರ ಸಹಾಯಧನ ನೀಡಬೇಕೆಂದು ಮತ್ತು ಉದ್ಯೋಗಾವಕಾಶ ಕಲ್ಪಿಸುವ ಕುರಿತು ಇದೇ ಸಂದರ್ಭ ಮಾಜಿ ಸಚಿವರ ಬಳಿ ವಿಶ್ವನಾಥ ಗಾಣಿಗ ಮನವಿ ಸಲ್ಲಿಸಿದರು.

ಗುಲ್ವಾಡಿ ಗ್ರಾಮಪಂಚಾಯತ್ ಸದಸ್ಯ ಸುದೇಶ್ ಶೆಟ್ಟಿ, ಪ್ರಮುಖರಾದ ನಾಗರಾಜ್ ಗಾಣಿಗ, ರವಿ ಗಾಣಿಗ ಇದ್ದರು.

(ವರದಿ-ಯೋಗೀಶ್ ಕುಂಭಾಸಿ)

Comments are closed.