ಕರ್ನಾಟಕ

2000 ಮುಖ್ಯಬೆಲೆಯ ನೋಟುಗಳು ರದ್ದು – ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿ

Pinterest LinkedIn Tumblr

ಬೆಂಗಳೂರು: ಚಾಲನೆಯಲ್ಲಿರುವ 2000 ಮುಖ್ಯಬೆಲೆಯ ನೋಟುಗಳು ರದ್ದುಗೊಳ್ಳುತ್ತವೆ ಎಂಬ ವದಂತಿ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಜನಸಾಮಾನ್ಯರನ್ನು ಕಂಗಾಲಾಗಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿದ್ದು, ಇದು ವೈರಲ್ ಆಗಿದೆ.

ಅಕ್ಟೋಬರ್ 10ರ ನಂತರ 2000 ನೋಟು ಸ್ಥಗಿತಗೊಳ್ಳಲಿದೆ. ಅಲ್ಲಿಂದ 10 ದಿನಗಳವರೆಗೆ 50 ಸಾವಿರ ರೂ. ಮಾತ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. 2020ರ ಜನವರಿ 1ರ ನಂತರ ಈ ನೋಟುಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ. 1000 ನೋಟು ಚಾಲನೆಗೆ ಬರಲಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇದಕ್ಕೆ ತುಪ್ಪ ಸುರಿಯುವಂತೆ ಕೇಂದ್ರ ಸರ್ಕಾರ 2018ರ ನವೆಂಬರ್‍ನಿಂದ 2000 ರೂ.ಗಳ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದೆ. ನೋಟು ಮುದ್ರಿಸುವ ನಾಸಿಕ್ ಘಟಕಕ್ಕೆ ಯಾವುದೇ ಹೊಸ ಆದೇಶ ನೀಡದೇ ಇರುವುದು ಕುತೂಹಲವನ್ನು ಹೆಚ್ಚಿಸಿದೆ. 2016ರ ನವೆಂಬರ್‍ನಲ್ಲಿ ನೋಟ್ ಬ್ಯಾನ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ಮುಖಬೆಲೆಯ ನೋಟ್‍ಗಳನ್ನು ಏಕಾಏಕಿ ಹಿಂಪಡೆದಿದ್ದರು. ನಂತರ 2000 ರೂ. ನೋಟುಗಳನ್ನು ಚಾಲನೆ ನೀಡಲಾಗಿತ್ತು.

ಆರ್ಥಿಕತೆಯ ಅವಿಭಾಜ್ಯ ಅಂಗವಾಗಿ ಚಾಲನೆ ನೀಡಿರುವ 2000 ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವದಂತಿಗಳು ಜನಸಾಮಾನ್ಯರನ್ನು ಕಂಗೆಡೆಸಿದೆ. ಕಪ್ಪು ಹಣ ನಿಯಂತ್ರಣ, ಭ್ರಷ್ಟಾಚಾರಕ್ಕೆ ಕಡಿವಾಣ, ನಕಲಿ ನೋಟ್‍ಗಳ ಹಾವಳಿ ತಡೆಗೆ 500 ಹಾಗೂ 1000 ರೂ.ಗಳ ನೋಟುಗಳನ್ನು ನಿಷೇಧಿಸಲಾಗಿತ್ತು. ಈಗ 2000 ಮುಖಬೆಲೆಯ ನೋಟುಗಳನ್ನು ಸಂಗ್ರಹಿಸಿಕೊಂಡು ಕಪ್ಪು ಹಣವನ್ನು ಹೆಚ್ಚಿಸಿಕೊಳ್ಳಲಾಗಿದೆ ಎಂಬ ಆರೋಪಗಳಿವೆ.

ಹೀಗಾಗಿ ಈ ನೋಟುಗಳು ರದ್ದುಗೊಂಡರೆ ಆಶ್ಚರ್ಯವಿಲ್ಲ ಎಂಬ ಸಣ್ಣ ಅನುಮಾನ ನಾಗರಿಕರಲ್ಲಿ ಕಾಡುತ್ತಿದೆ.ಆರ್‍ಬಿಐ ಹೊಸದಾಗಿ 2, 3, 500 ನೋಟುಗಳನ್ನು 100, 125 ಮತ್ತು 1000 ಮುಖಬೆಲೆಯ ಕಾಯಿನ್‍ಗಳನ್ನು ಮಾರುಕಟ್ಟೆಗೆ ನೀಡಲಿದೆ. 2000 ನೋಟುಗಳನ್ನು ಹಿಂಪಡೆಯಲಿದ್ದು, ಮುದ್ರಣವನ್ನು ನಿಲ್ಲಿಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇದನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಆರ್‍ಬಿಐನ ಸಂಪರ್ಕ ಘಟಕದ ಮುಖ್ಯ ಪ್ರಧಾನ ವ್ಯವಸ್ಥಾಪಕ ಯೋಗೇಶ್ ದಯಾಳ್ ಅವರು, ಇಂಥ ವದಂತಿಗಳನ್ನು ನಂಬಬಾರದು. ಆರ್‍ಬಿಐನ ಮುಂದೆ ಅಂತಹ ಯಾವುದೇ ಪ್ರಸ್ತಾವಗಳಿಲ್ಲ. ಒಂದು ವೇಳೆ ಯಾವುದೇ ನಿರ್ಧಾರವನ್ನು ಕೈಗೊಂಡರೆ ಅದನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸುತ್ತೇವೆ. ಗಾಳಿ ಸುದ್ದಿಗಳನ್ನು ನಂಬಿ ಗೊಂದಲಕ್ಕೊಳಗಾಗಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

Comments are closed.