ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್ ತಂಡವು ದಾಖಲೆಯ ನಾಲ್ಕನೇ ಬಾರಿಗೆ ಕಿರೀಟವನ್ನು ಎತ್ತಿ ಹಿಡಿದಿದೆ.
ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಅಂತರದ ಥ್ರಿಲ್ಲಿಂಗ್ ಗೆಲುವು ದಾಖಲಿಸಿರುವ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ಇತಿಹಾಸ ಬರೆದಿದೆ.
ಇದು ನಾಲ್ಕನೇ ಬಾರಿಗೆ ಮುಂಬೈ ಹಾಗೂ ಚೆನ್ನೈ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. 2010ರಲ್ಲಿ ಗೆಲುವು ಚೆನ್ನೈ ಪಾಲಾಗಿದ್ದರೆ 2013 ಹಾಗೂ 2015 ಮತ್ತು ಇದೀಗ 2019ರಲ್ಲಿ ಕಿರೀಟ ಎತ್ತಿ ಹಿಡಿಯುವ ಮೂಲಕ ಮುಂಬೈ 3-1ರ ಮುನ್ನಡೆ ಕಾಯ್ದುಕೊಂಡಿದೆ.
ಮುಂಬೈ ಐಪಿಎಲ್ ಪ್ರಶಸ್ತಿಗಳು: 2013, 2015, 2017, 2019
ಒಟ್ಟಾರೆಯಾಗಿ ಐದನೇ ಬಾರಿಗೆ ಫೈನಲ್ ಪ್ರವೇಸಿರುವ ಮುಂಬೈ ನಾಲ್ಕನೇ ಬಾರಿಗೆ ಕಿರೀಟಕ್ಕೆ ಮುತ್ತಿಕ್ಕಿದೆ. ಈ ಪೈಕಿ ಮೂರು ಬಾರಿ ಚೆನ್ನೈ ವಿರುದ್ಧವೇ ಗೆಲುವು ದಾಖಲಿಸಿರುವುದು ಕಾಕತಾಳೀಯವೇ ಸರಿ. ಅತ್ತ ಎಂಟು ಸಲ ಫೈನಲ್ ಪ್ರವೇಶಿಸಿರುವ ಚೆನ್ನೈ ಮೂರು ಬಾರಿ ಮಾತ್ರ ಟ್ರೋಫಿ ಗೆದ್ದಿದೆ.
ಅಷ್ಟೇ ಯಾಕೆ ಮುಂಬೈ ಎರಡನೇ ಬಾರಿಗೆ ಐಪಿಎಲ್ ಫೈನಲ್ ಅನ್ನು ಕೇವಲ ಒಂದು ರನ್ ಅಂತರದಿಂದ ಗೆದ್ದ ಸಾಧನೆ ಮಾಡಿದೆ. ಎರಡು ವರ್ಷಗಳ ಹಿಂದೆ 2017ರಲ್ಲಿ ಪುಣೆ ವಿರುದ್ಧ ಕೇವಲ 1 ರನ್ ಅಂತರದಿಂದ ಪ್ರಶಸ್ತಿ ಎತ್ತಿ ಹಿಡಿದಿತ್ತು.
ಪ್ರತಿಯೊಂದು ಕ್ಷಣದಲ್ಲೂ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಪಂದ್ಯದಲ್ಲಿ ಅನೇಕ ರೋಚಕ ಸನ್ನಿವೇಶಗಳ ಬಳಿಕ ಮುಂಬೈ ರೋಚಕ ಗೆಲುವು ದಾಖಲಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಬರ್ತ್ ಡೇ ಬಾಯ್ ಕೀರಾನ್ ಪೊಲಾರ್ಡ್ (41*) ಉಪಯುಕ್ತ ಇನ್ನಿಂಗ್ಸ್ ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 149 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.
ಬಳಿಕ ಗುರಿ ಬೆನ್ನಟ್ಟಿದ ಚೆನ್ನೈ ಶೇನ ವಾಟ್ಸನ್ (80) ಹೋರಾಟದ ಹೊರತಾಗಿಯೂ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಒಂದು ರನ್ ಅಂತರದಿಂದ ಟ್ರೋಫಿ ನಷ್ಟವಾಯಿತು.
ಮಾಲಿಂಗ ಮ್ಯಾಜಿಕ್ ಫೈನಲ್ ಡೆಲಿವರಿ…
ಅಂತಿಮ ಓವರ್‌ನಲ್ಲಿ ಚೆನ್ನೈ ಗೆಲುವಿಗೆ ಒಂಬತ್ತು ರನ್‌ಗಳ ಅವಶ್ಯಕತೆಯಿತ್ತು. ಕ್ರೀಸ್‌ನಲ್ಲಿ ಸೆಟ್ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ ಹಾಗೂ ರವೀಂದ್ರ ಜಡೇಜಾ ಇದ್ದರು.
ಆದರೆ ಪಂದ್ಯದ ನಾಲ್ಕನೇ ಎಸೆತದಲ್ಲಿ ವಾಟ್ಸನ್ ಎರಡು ರನ್ ಕದಿಯುವ ಭರದಲ್ಲಿ ರನೌಟ್‌ಗೆ ಬಲಿಯಾದರು. ಇದರಂತೆ ಅಂತಿಮ ಎಸೆತದಲ್ಲಿ ಎರಡು ರನ್‌ಗಳ ಅವಶ್ಯಕತೆಯಿತ್ತು. ಶಾರ್ದೂಲ್ ಠಾಕೂರ್ ಕ್ರೀಸಿನಲ್ಲಿದ್ದರು.
ಇಲ್ಲಿ ತಮ್ಮ ಸರ್ವಸ್ವ ಅನುಭವವನ್ನು ಧಾರೆಯೆಳೆದ ಮಾಲಿಂಗ ಕೊನೆಯ ಎಸೆತದಲ್ಲಿ ಸ್ಲೋ ಯಾರ್ಕರ್ ದಾಳಿ ಮಾಡುವ ಮೂಲಕ ಠಾಕೂರ್‌ರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಇದರೊಂದಿಗೆ ಮುಂಬೈ ರೋಚಕ ಗೆಲುವು ದಾಖಲಿಸಿತು.
ಇಲ್ಲಿ ಪಂದ್ಯದ 16ನೇ ಓವರ್‌ನಲ್ಲಿ 20 ರನ್ ಬಿ್ಟುಕೊಟ್ಟರೂ ಕೊನೆಯ ಓವರ್ ಮಾಲಿಂಗಗೆ ನೀಡಲು ನಾಯಕ ರೋಹಿತ್ ಶರ್ಮಾ ಕೈಗೊಂಡ ಕೆಚ್ಚೆದೆಯ ನಿರ್ಧಾರವು ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗಿದೆ.
ಐಪಿಎಲ್ ಫೈನಲ್‌ಗೆ ಥ್ರಿಲ್ಲಿಂಗ್ ಫಿನಿಶ್…
ಸವಾಲಿನ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಓಪನರ್‌ಗಳಾದ ಫಾಫ್ ಡು ಪ್ಲೆಸಿಸ್ ಹಾಗೂ ಶೇನ್ ವಾಟ್ಸನ್ ಬಿರುಸಿನ ಆರಂಭವೊದಗಿಸಿದರು. ವಾಟ್ಸನ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಪ್ಲೆಸಿಸ್ ಆಕ್ರಮಣಕಾರಿ ಬ್ಯಾಟ್ ಬೀಸಿದರು. ಆದರೆ ಮುಂಬೈ ತರಹನೇ ಚೆನ್ನೈ ಉತ್ತಮ ಆರಂಭ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಅಪಾಯಕಾರಿ ಮುನ್ನುಗ್ಗುತ್ತಿದ್ದ ಪ್ಲೆಸಿಸ್‌ರನ್ನು ಕೃುಣಾಲ್ ಪಾಂಡ್ಯ ಹೊರದಬ್ಬಿದರು. ಆಗಲೇ ವಾಟ್ಸನ್ ಜತೆ 4 ಓವರ್‌ಗಳಲ್ಲಿ 33 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು. ಕೇವಲ 13 ಎಸೆತಗಳನ್ನು ಎದುರಿಸಿದ ಪ್ಲೆಸಿಸ್ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು.
ಇನ್ನೊಂದೆಡೆ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ವಾಟ್ಸನ್ ನಿಧಾನವಾಗಿ ಗೇರ್ ಬದಲಾಯಿಸಿದರು. ಇದರಿಂದಾಗಿ ಪವರ್ ಪ್ಲೇನಲ್ಲಿ 53 ರನ್‌ಗಳು ಹರಿದು ಬಂದವು.
ಅತ್ತ ಅನುಭವಿ ಸುರೇಶ್ ರೈನಾಗೆ ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಏಳನೇ ಓವರ್‌ನಲ್ಲಿ ಕ್ಯಾಚ್ ಔಟ್ ನೀಡಿದರೂ ಡಿಆರ್‌ಎಸ್ ನೆರವಿನಿಂದ ಅಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾದರು. ಇದಾದ ಬೆನ್ನಲ್ಲೇ ಮಿಚೆಲ್ ಮೆಗ್ಲೆಂಕನ್ ದಾಳಿಯಲ್ಲೇ ಲಸಿತ್ ಮಾಲಿಂಗ ಕ್ಯಾಚ್ ಕೈಚೆಲ್ಲಿದ್ದರಿಂದ ಶೇನ್ ವಾಟ್ಸನ್ ಜೀವದಾನವನ್ನು ಪಡೆದರು.
ಆದರೆ ಎರಡನೇ ಬಾರಿಗೆ ರೈನಾ ಬಚಾವ್ ಆಗಲಿಲ್ಲ. ಅಲ್ಲದೆ ಐಪಿಎಲ್‌ನ ಅತ್ಯಂತ ಪ್ರಭಾವಿ ಸ್ಪಿನ್ನರ್ ರಾಹುಲ್ ಚಹಲ್ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದರು. ಆದರೆ ರೈನಾ ಮೂರನೇ ಅಂಪೈರ್‌ಗೆ ಮೇಲ್ಮನವಿ ಮಾಡುವ ಮೂಲಕ ಚೆನ್ನೈ ಅಮೂಲ್ಯ ಡಿಆರ್‌ಎಸ್ ಮನವಿಯನ್ನು ಕಳೆದುಕೊಂಡಿತು. ಬಿಗ್ ಮ್ಯಾಚ್‌ನಲ್ಲಿ ಅತ್ಯಂತ ಕಳಪೆಯ ಆಟವನ್ನಾಡಿದ ರೈನಾ 14 ಎಸೆತಗಳಲ್ಲಿ ಎಂಟು ರನ್‌ಗಳನ್ನಷ್ಟೇ ಗಳಿಸಿದರು.
ಇದರೊಂದಿಗೆ ಪಂದ್ಯ ಮತ್ತಷ್ಟು ರೋಚಕ ಹಂತವನ್ನು ತಲುಪಿತು. 10 ಓವರ್‌ಗಳಲ್ಲಿ ಚೆನ್ನೈ ಸ್ಕೋರ್ 72/2. ಅಂದರೆ ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 78 ರನ್‌ಗಳ ಅವಶ್ಯಕತೆಯಿತ್ತು.
ಅಂಬಟಿ ರಾಯುಡು (1) ಹೀಗೆ ಬಂದು ಹಾಗೆ ಹೋದರು. ಈ ಮೂಲಕ ಮುಂಬೈ ಸ್ಪಷ್ಟ ಹಿಡಿತ ಸಾಧಿಸಿತು. ಈ ಹಂತದಲ್ಲ ಕ್ರೀಸಿಗಿಳಿದ ಮಹೇಂದ್ರ ಸಿಂಗ್ ಧೋನಿ ಮೊದಲ ರನ್ನಿಗಾಗಿ ಏಳು ಎಸೆತಗಳನ್ನು ಎದುರಿಸಿದರು.
ಈ ವೇಳೆಯಲ್ಲಿ ಫಿನಿಶರ್ ಧೋನಿ ವೇಳೆ ಅತಿ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಎಂಬ ರೀತಿಯಲ್ಲೇ ಮಹೇಂದ್ರ ಸಿಂಗ್ ಧೋನಿ, ಇಶಾನ್ ಕಿಶಾನ್ ನೇರ ಥ್ರೋಗೆ ರನೌಟ್ ಬಲೆಗೆ ಸಿಲುಕಿದರು. ಧೋನಿ ಔಟ್ ಅಥವಾ ನಾಟೌಟ್ ಎಂಬುದು ಅತಿ ಹೆಚ್ಚು ವಿವಾದಕ್ಕೆ ಕಾರಣವಾಯಿತು. ಎಂಟು ಎಸೆತಗಳನ್ನು ಎದುರಿಸಿದ ಧೋನಿ ಎರಡು ರನ್ ಮಾತ್ರ ಗಳಿಸಿದರು.
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಚೆನ್ನೈ ಕೈಯಿಂದ ಬಹುತೇಕ ಪಂದ್ಯ ಕೈಜಾರಿತು ಎಂದೇ ಅನಿಸಿಕೊಳ್ಳಲಾಗಿತ್ತು. ಅಲ್ಲದೆ 15 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 88 ರನ್ ಮಾತ್ರ ಗಳಿಸಿತ್ತು. ಅಂದರೆ ಕೊನೆಯ 30 ಎಸೆತಗಳಲ್ಲಿ ಗೆಲುವಿಗೆ 62 ರನ್‌ಗಳ ಅವಶ್ಯಕತೆಯಿತ್ತು.
ಈ ಹಂತದಲ್ಲಿ ವಾಟ್ಸನ್ ಜತೆಗೂಡಿದ ಬ್ರಾವೋ ಲಸಿತ್ ಮಾಲಿಂಗ ಎಸೆದ ಪಂದ್ಯದ 16ನೇ ಓವರ್‌ನಲ್ಲಿ 20 ರನ್ ಕಬಳಿಸುವಲ್ಲಿ ನೆರವಾದರು. ಹ್ಯಾಟ್ರಿಕ್ ಬೌಂಡರಿಗಳನ್ನು ಸಿಡಿಸಿದ ವಾಟ್ಸನ್ ಸಮಯೋಚಿತ ಅರ್ಧಶತಕ ಸಾಧನೆ ಮಾಡಿದರು.
ಆದರೆ ಕಳಪೆ ಫೀಲ್ಡಿಂಗ್‌ಗೆ ಮುಂಬೈ ದೊಡ್ಡ ಬೆಲೆ ತೆರಬೇಕಾಗಿ ಬಂದಿತ್ತು. ಜಸ್ಪ್ರೀತ್ ಬುಮ್ರಾ ಎಸೆದ ಪಂದ್ಯದ 16ನೇ ಓವರ್‌ನಲ್ಲಿ ರಾಹುಲ್ ಚಹರ್ ಕ್ಯಾಚ್ ಕೈಚೆಲ್ಲಿದ್ದರಿಂದ ವಾಟ್ಸನ್ ಮಗದೊಂದು ಜೀವದಾನ ಪಡೆದರು.
ಬೆನ್ನಲ್ಲೇ ಕೃುಣಾಲ್ ಪಾಂಡ್ಯ 18ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ ವಾಟ್ಸನ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಇನ್ನೊಂದೆಡೆ ನಿಖರ ದಾಳಿಗಳ ಮೂಲಕ ಬುಮ್ರಾ ಒತ್ತಡ ಹೇರುತ್ತಲೇ ಇದ್ದರು. ಅಲ್ಲದೆ ಬುಮ್ರಾ ಪರಿಶ್ರಮಕ್ಕೆ ತಕ್ಕಂತೆ ಡ್ವೇನ್ ಬ್ರಾವೋ (15) ಎಡವಿದರು.
ಲಸಿತ್ ಮಾಲಿಂಗ ಎಸೆದ ಅಂತಿಮ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 9 ರನ್‌ಗಳ ಅವಶ್ಯಕತೆಯಿತ್ತು. ಆದರೆ ನಿರ್ಣಾಯಕ ಹಂತದಲ್ಲಿ ವಾಟ್ಸನ್ ರನೌಟ್ ಆಗುವುದರೊಂದಿಗೆ ಚೆನ್ನೈಗೆ ಕಿರೀಟ ನಷ್ಟವಾಯಿತು.
ಪಂದ್ಯದ ಕೊನೆಯ ಎಸೆತದಲ್ಲಿ ಎರಡು ರನ್ ಅವಶ್ಯಕತೆಯಿದ್ದರೂ ಶಾರ್ದೂಲ್ ಠಾಕೂರ್‌ರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸುವ ಮೂಲಕ ಮಾಲಿಂಗ, ಮುಂಬೈಗೆ ಕಿರೀಟ ಒದಗಿಸಿಕೊಟ್ಟರು.
ಅಂತಿಮವಾಗಿ ಚೆನ್ನೈ ಏಳು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. 59 ಎಸೆತಗಳನ್ನು ಎದುರಿಸಿದ ವಾಟ್ಸನ್ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳಿಂದ 80 ರನ್ ಗಳಿಸಿದರು. ಕಳೆದ ವರ್ಷ ಫೈನಲ್‌ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟಿದ್ದ ವಾಟ್ಸನ್‌ಗೆ ಮತ್ತದೇ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಇನ್ನುಳಿದಂತೆ ರವೀಂದ್ರ ಜಡೇಜಾ (5*) ಹಾಗೂ ಶಾರ್ದೂಲ್ ಠಾಕೂರ್ (2) ರನ್ ಗಳಿಸಿದರು. ಮುಂಬೈ ಪರ ಬುಮ್ರಾ ಎರಡು ಮತ್ತು ಕೃುಣಾಲ್, ಮಾಲಿಂಗ್ ಹಾಗೂ ಚಹರ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.